ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 4 ಸೆಪ್ಟೆಂಬರ್ 2024, 19:28 IST
Last Updated 4 ಸೆಪ್ಟೆಂಬರ್ 2024, 19:28 IST
ಅಕ್ಷರ ಗಾತ್ರ

ಸತ್ಸಂಪ್ರದಾಯ ಹುಟ್ಟುಹಾಕಿದ ಮುಖಂಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಡಿದ ಮಾತಿಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಕ್ಷಮೆ ಕೇಳಿರುವುದು ಮತ್ತು ಮುಖ್ಯಮಂತ್ರಿ ಅದನ್ನು ಒಪ್ಪಿರುವುದು ತುಂಬಾ ಅಪರೂಪದ ಬೆಳವಣಿಗೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ಮಧ್ಯೆ ಈಗ ತೀರಾ ಕೆಳಮಟ್ಟದ ಭಾಷಾ ಪ್ರಯೋಗ, ನಿಂದನೆಯಂತಹ ಬೆಳವಣಿಗೆಗಳು ಆಗುತ್ತಿರುವಾಗ ಇದೊಂದು ಅನುಕರಣೀಯ ನಡೆಯಾಗಿದೆ. ಪರಸ್ಪರ ಗೌರವ ಭಾವವನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ರಾಜಕಾರಣಿಗಳಿಗೂ ನಾಡ ಜನತೆಗೂ ತುಂಬಾ ಒಳ್ಳೆಯದು.

ಹಿಂದಿನ ತಲೆಮಾರಿನ ರಾಜಕಾರಣಿಗಳ ನಡೆ-ನುಡಿಗಳು ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಬೇಕು. ಆಳುವ ಮತ್ತು ವಿರೋಧ ಪಕ್ಷಗಳ ಮಧ್ಯೆ ಇತ್ತೀಚೆಗೆ ಪರಸ್ಪರ ಗೌರವಾದರ ಕಡಿಮೆಯಾಗುತ್ತಿದ್ದು, ರಾಜಕೀಯ ಮೌಲ್ಯಗಳು ಅಧಃಪತನಗೊಳ್ಳುತ್ತಿವೆ. ಮುತ್ಸದ್ದಿತನವಂತೂ ಮಾಯವಾಗಿಬಿಟ್ಟಿದೆ. ರಾಜಕೀಯ ನಾಯಕರ ನಡೆ-ನುಡಿ ಎಲ್ಲ ಹಂತದಲ್ಲೂ ತಮ್ಮದೇ ಆದ ಪ್ರಭಾವ ಬೀರುತ್ತವೆ. ಆದ್ದರಿಂದ ಬಾಯಿತಪ್ಪಿ ಆಡಿದ ಮಾತು, ಬಳಸಿದ ಕೆಟ್ಟ ಭಾಷೆಗಾಗಿ ಸಂಬಂಧಿಸಿದವರ ಕ್ಷಮೆ ಕೇಳುವುದರಿಂದ ಕ್ಷಮೆ ಕೇಳುವವರ ಗೌರವ ಎಳ್ಳಷ್ಟೂ ಕಡಿಮೆಯಾಗದು. ಅದೊಂದು ಸತ್ಸಂಪ್ರದಾಯ ಆಗಬಹುದು. ಬೆಲ್ಲದ ಅವರ ನಡೆ ಅನುಸರಿಸಿದರೆ ದಿನನಿತ್ಯ ಕ್ಷಮೆ ಯಾಚಿಸುವ ಹಲವಾರು ಪ್ರಸಂಗಗಳು ನಡೆಯಬಹುದು!

⇒ವೆಂಕಟೇಶ ಮಾಚಕನೂರ, ಧಾರವಾಡ 

ಹಲವು ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ

ಸಂಸ್ಕೃತ ಕಲಿತವರು ಮಾತ್ರ ಸ್ವರ್ಗಕ್ಕೆ ಹೋಗಬಲ್ಲರು ಎಂಬ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬರೆದಿರುವ ತಿಪ್ಪೂರು ಪುಟ್ಟೇಗೌಡ ಅವರ ಪತ್ರವನ್ನು
(ವಾ.ವಾ., ಸೆ. 4) ಓದಿ, ಸುಗುಣೇಂದ್ರರು ಇನ್ನೂ ಏನು ಹೇಳಿದ್ದರು ಎಂಬ ಕುತೂಹಲ ಉಂಟಾಯಿತು. ಸಂಸ್ಕೃತವನ್ನೂ ‘ಸಂಸ್ಕೃತಿ’ಯನ್ನೂ ಸಮೀಕರಿಸಬಾರದು (ನಾನು ಎಂಟನೇ ತರಗತಿಯಿಂದ ಎರಡನೇ ಪಿ.ಯು.ವರೆಗೆ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಓದಿದವನು). ಸಾಹಿತ್ಯಕ ದೃಷ್ಟಿಯಿಂದ ಸಂಸ್ಕೃತ ನಾಟಕಗಳನ್ನು ಗ್ರೀಕ್ ಎಪಿಕ್‌ಗಳ ಜತೆ ಹೋಲಿಸಲಾಗುತ್ತದೆ. ಲಂಕೇಶ್ ಅವರಂತಹವರೂ ಅವುಗಳನ್ನು ಮೆಚ್ಚಿಕೊಂಡಿದ್ದರು. ಹಲವು ಭಾರತೀಯ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಇದೆ. ಆದರೆ ತಮಿಳು ಹಾಗೂ ಕೆಲ ಮಟ್ಟಿಗೆ ಮಲಯಾಳಂ ಸ್ವಂತ ಪದಗಳನ್ನು ರೂಪಿಸಿಕೊಳ್ಳುವ ಮೂಲಕ ಸಂಸ್ಕೃತದ ಪ್ರಾಬಲ್ಯವನ್ನು ತಗ್ಗಿಸಿವೆ (ಬರಹಗಾರನಾಗಿ ನಾನು ಪ್ರಾರಂಭದಲ್ಲಿದ್ದ ಆ ‘ಮೋಡಿ’ಯಿಂದ ಬಿಡಿಸಿಕೊಳ್ಳಲು ಸಮಯ ಹಿಡಿಯಿತು).

ಸಂಸ್ಕೃತ ಕಲಿಕೆ ಎಲ್ಲಿ, ಯಾವ ರೂಪದಲ್ಲಿ ಇರಬೇಕು ಎಂಬ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಹಳ್ಳಿಯ ಸಂಸ್ಕೃತ ಪಾಠಶಾಲೆಯಲ್ಲಿ ಕೆಲ ಕಾಲ ಕಲಿತಿದ್ದ ನನ್ನ ತಂದೆಯವರು ಸಂಸ್ಕೃತಕ್ಕೆ ಒಂದು ವಿಶ್ವವಿದ್ಯಾಲಯ ಬೇಕಾಗಿಲ್ಲ ಎಂದಿದ್ದರು. ಸ್ವರ್ಗ ಎಲ್ಲಿದೆಯೋ ಗೊತ್ತಿಲ್ಲ, ನರಕ ಹಲವು ರೂಪಗಳಲ್ಲಿ ಭೂಮಿಯ ಮೇಲೆಯೇ ಇದೆ. ಸಂಸ್ಕೃತದ ಅಭಿಮಾನಿಗಳು ಅದರತ್ತ ಗಮನಹರಿಸಲಿ. ಅದರ ನಂತರ ಸಂಸ್ಕೃತದ ಮೂಲಕ ಸ್ವರ್ಗಾರೋಹಣ ಮಾಡುವುದು ಅವರಿಚ್ಛೆ.

⇒ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಅಧಿಕಾರಿಗಳ ಸಂಬಳದಿಂದ ನಷ್ಟಪಾವತಿಯಾಗಲಿ

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಮರುಪರೀಕ್ಷೆಗೆ ಸರ್ಕಾರ ಆದೇಶಿಸಿರುವುದು ಸ್ವಾಗತಾರ್ಹ. ಆದರೆ ದೂರದೂರುಗಳಿಗೆ ತೆರಳಿ ಪರೀಕ್ಷೆ ಬರೆದ ಸುಮಾರು 1.5 ಲಕ್ಷ ಅಭ್ಯರ್ಥಿಗಳಿಗೆ, ಸರ್ಕಾರಕ್ಕೆ ಆದ ನಷ್ಟಕ್ಕೆ ಹೊಣೆ ಯಾರು? ಬೇಜವಾಬ್ದಾರಿತನ ಮೆರೆದ ತಿಳಿಗೇಡಿ ಅಧಿಕಾರಿಗಳ ಸಂಬಳದಿಂದ ನಷ್ಟಪಾವತಿಯಾಗಲಿ.

ಕೆಪಿಎಸ್‌ಸಿಯ ಸಮಗ್ರ ಬದಲಾವಣೆಗೆ ಸರ್ಕಾರ ಮುಂದಾಗಬೇಕು. ಹೋಟಾ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿ ದಿಟ್ಟ ನಡೆ ಪ್ರದರ್ಶಿಸಬೇಕು. ಈ ಹುದ್ದೆಗಳಿಗೆ ಈ ಹಿಂದೆ ನಡೆದ ಮೂರು ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ 10ರಷ್ಟು ಅಭ್ಯರ್ಥಿಗಳೂ ಆಯ್ಕೆಯಾಗದಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ಕನ್ನಡ ಅನ್ನದ ಭಾಷೆಯಾಗಲಿ

.⇒ಶಿಶಿರ, ಶಿರಸಿ

ಕೆಪಿಎಸ್‌ಸಿ: ಇರಲಿ ಅನುವಾದಕರ ವಿಭಾಗ

ಕೆಪಿಎಸ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಅನುವಾದದಲ್ಲಿ ಆದ ಪ್ರಮಾದಕ್ಕಾಗಿ ಅನುವಾದಕರನ್ನು ಶಿಕ್ಷಿಸಬೇಕು ಎಂದು ಬಾಲಕೃಷ್ಣ ಆರ್. ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಸೆ. 4). ಆದರೆ ಇದು ವಿವೇಕದ ಕ್ರಮವಲ್ಲ. ಏಕೆಂದರೆ ಈ ಇಡೀ ಸರಣಿಯಲ್ಲಿ ಅನುವಾದಕರು ಕೊನೆಯ ಅಮಾಯಕ ಕೊಂಡಿಯಷ್ಟೇ. ಇವರನ್ನು ಶಿಕ್ಷಿಸಿದರೆ ಕೆಪಿಎಸ್‌ಸಿಯ ಅವ್ಯವಸ್ಥೆಯನ್ನು ಮರೆಮಾಚಿದಂತಾಗುತ್ತದೆ, ಅಷ್ಟೆ.

ಈಗಾಗಲೇ ಬಹಳ ಬಾರಿ ಸಲಹೆ ಬಂದಿರುವ ಹಾಗೆ, ಕೆಪಿಎಸ್‌ಸಿ ತನ್ನದೇ ಆದ ಒಂದು ‘ಅನುವಾದಕರ ವಿಭಾಗ’ವನ್ನು ಕಟ್ಟಿಕೊಳ್ಳಬೇಕು. ಅದಕ್ಕಾಗಿ ಒಬ್ಬಿಬ್ಬರು ಹಿರಿಯ ಇಂಗ್ಲಿಷ್-ಕನ್ನಡ ವಿಷಯ ಪರಿಣತರ ನೇಮಕಾತಿ ಸಾಕಾಗುತ್ತದೆ. ಮೊದಲು ಕೆಪಿಎಸ್‌ಸಿಯ ಅಗತ್ಯಕ್ಕೆ ತಕ್ಕ ಇಂಗ್ಲಿಷ್- ಕನ್ನಡ- ಇಂಗ್ಲಿಷ್ ಪದಕೋಶವನ್ನು ರೂಪಿಸಬೇಕು. ಇದು ಎಲ್ಲಾ ಅನುವಾದಕರಿಗೆ ಮೂಲ ಆಕರವಾಗಬೇಕು, ಭಾವಿ ಅಭ್ಯರ್ಥಿಗಳ ಪ್ರಯೋಜನಕ್ಕಾಗಿ ಇದನ್ನು ವೆಬ್‌ಸೈಟಿನಲ್ಲಿಯೂ ಪ್ರಕಟಿಸಬೇಕು. ನಂತರ ರಾಜ್ಯದಲ್ಲಿರುವ, ಈಗಾಗಲೇ ಇರುವ ನುರಿತ ತಾಂತ್ರಿಕ ಅನುವಾದಕರನ್ನು ಗುರುತಿಸಿ (ಭಾಷಾಂತರ ಇಲಾಖೆ ಇಂಥ ಒಂದು ಅನುವಾದ ಸೇವಾದಾತರ ಪಟ್ಟಿಯನ್ನು ಅಧಿಸೂಚಿಸಿದೆ), ಅವರಿಗೆ ಕೆಪಿಎಸ್‌ಸಿಯ ಅಗತ್ಯಕ್ಕೆ ತಕ್ಕ ವಿಶಿಷ್ಟವಾದ ತರಬೇತಿಯನ್ನು ನೀಡಿ, ಅವರ ಒಂದು ಪ್ಯಾನಲ್‌ ಅನ್ನು ರೂಪಿಸಬೇಕು. ಅಗತ್ಯಬಂದಾಗ ಅವರ ಸೇವೆಯನ್ನು ಪಡೆಯಬೇಕು. ಇದರಿಂದ ಕೆಪಿಎಸ್‌ಸಿಯ ಮೇಲೆ ನಿರಂತರ ಹೊರೆಯೂ ಆಗುವುದಿಲ್ಲ.

⇒ಎಂ.ಅಬ್ದುಲ್ ರೆಹಮಾನ್ ಪಾಷ, ಬೆಂಗಳೂರು

ಗುರವೇ ನಮಃ

ಸರ್ವಪಲ್ಲಿ ರಾಧಾಕೃಷ್ಣನ್‌ರ
ಜನ್ಮದಿನ ಇಂದು,
ಅರ್ಥಾತ್ ಶಿಕ್ಷಕರ ದಿನ,
ಹೇಳೋಣ
ಶ್ರೀ ಗುರವೇ ನಮಃ
ಅನಿಸದಿರಲಿ ಎಂದಿಗೂ
ಗುರು ಏನ್ ಮಹಾ!

ಮ.ಗು.ಬಸವಣ್ಣ
ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT