ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 20 ಆಗಸ್ಟ್ 2024, 0:33 IST
Last Updated 20 ಆಗಸ್ಟ್ 2024, 0:33 IST
ಅಕ್ಷರ ಗಾತ್ರ
ಪೂಜೆ ಮಾತ್ರ ಪರಿಹಾರವಲ್ಲ

ಕನ್ನಡ ಚಿತ್ರರಂಗ ಎದುರಿಸುತ್ತಿರುವ ಎಲ್ಲಾ ಸಂಕಷ್ಟಗಳಿಂದ ಮುಕ್ತಿ ಕೋರಿ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಿಂದ ವಿಶೇಷ ಪೂಜೆ, ಹೋಮ, ಹವನ ಮಾಡಲಾಗಿದೆ. ಕಷ್ಟಗಳು ಬಂದಾಗ ದೇವರ‌ ಮೊರೆ ಹೋಗುವುದು ತಪ್ಪಲ್ಲ. ಆದರೆ ಇಂದು ಕನ್ನಡ ಸಿನಿಮಾ ರಂಗದಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತದೆ. ಜೊತೆಗೆ ಹಳೆಯ ಸಿನಿಮಾಗಳಲ್ಲಿ ಚಿತ್ರಕಥೆ, ಸಂಗೀತ, ಸಾಹಿತ್ಯ ಹೆಚ್ಚು ಪ್ರಸ್ತುತವಾಗಿ, ಜನರ ಮನಸ್ಸಿಗೆ ನಾಟುವಂತೆ ಇರುತ್ತಿದ್ದವು.‌ ಹಾಗೆಯೇ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌ ಅವರಂತಹ ಅನೇಕ ನಾಯಕನಟರು ಹಣ ಸಂಪಾದನೆಗೆ ಮಾತ್ರ ಸಿನಿಮಾ ಮಾಡುತ್ತಿರಲಿಲ್ಲ. ಸಮಾಜದ ಕೆಲವು ಸಮಸ್ಯೆಗಳ ಬಗ್ಗೆ ಜನಜಾಗೃತಿ‌ಯನ್ನೂ ಉಂಟು ಮಾಡುತ್ತಿದ್ದರು. ಕವಿಗಳು, ಲೇಖಕರು, ಸಾಹಿತಿಗಳ ಪ್ರತಿಭೆಯನ್ನೂ ಚಿತ್ರಗಳು ಒಳಗೊಳ್ಳುತ್ತಿದ್ದವು. ಆದರೆ ಇಂದು ಅವೆಲ್ಲವೂ ಕಾಣೆಯಾಗಿವೆ.

ಒಂದು ಚಿತ್ರಕ್ಕೆ ಬೇಕಾದ ಕಥೆ, ನಟರು ಜನರೊಂದಿಗೆ ನಡೆದುಕೊಳ್ಳುವ ರೀತಿ, ಚಿತ್ರವು ಜನರಿಗೆ ನೀಡುವ ಉತ್ತಮ ಸಂದೇಶ ಎಲ್ಲವೂ ಮುಖ್ಯ. ಆಗಮಾತ್ರ ಚಿತ್ರ ಗೆಲ್ಲುತ್ತದೆ, ಚಿತ್ರರಂಗ ಬೆಳೆಯುತ್ತದೆ.

- ಸುರೇಂದ್ರ ಪೈ, ಭಟ್ಕಳ 

ದುಡಿಮೆಯ ಜೊತೆಗೆ ಸುಂದರ ಬದುಕಿದೆ

ನೌಕರರು ದಿನದ 14 ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ನಿಯಮವನ್ನು ಜಾರಿಗೆ ತರುವಂತೆ ಐ.ಟಿ. ಕಂಪನಿಯೊಂದು ನಮ್ಮ ಕಾರ್ಮಿಕ ಸಚಿವರು ಮತ್ತು ಸರ್ಕಾರವನ್ನು ವಿನಂತಿಸಿದೆ. ಅಂತಹ ನಿಯಮದಿಂದ ಸಮಾಜದ ಮೇಲೆ ಆಗುವ ಸಂಭಾವ್ಯ ನಕಾರಾತ್ಮಕ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿದೆಯೇ? ದಿನದ 24 ಗಂಟೆಗಳಲ್ಲಿ 14 ಗಂಟೆಗಳ ಕಾಲ ವೃತ್ತಿ ಬದುಕಿನಲ್ಲೇ ಕಳೆದುಹೋದರೆ, ಇನ್ನುಳಿದ 10 ಗಂಟೆಯನ್ನು ನಿದ್ರೆ, ಕುಟುಂಬ, ಸ್ನೇಹಿತರು ಮತ್ತು ಸಾಮಾಜಿಕ ಜೀವನಕ್ಕೆ ಮೀಸಲಿಡಬೇಕಾಗುತ್ತದೆ. ಹಾಗಾದಾಗ ಈ ಎಲ್ಲಾ ಜವಾಬ್ದಾರಿಗಳನ್ನು ಸಮತೋಲನಗೊಳಿಸಲು ಹೇಗೆ ಸಾಧ್ಯ? ಈ ರೀತಿ ತೀವ್ರವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ನೌಕರ ತನ್ನ ವಯಸ್ಸಾದ ಪೋಷಕರಿಗೆ ಆರೈಕೆ ಮಾಡಲು ಸಾಧ್ಯವಾಗುವುದಿಲ್ಲ. ವಿಚ್ಛೇದನ ಮತ್ತು ಏಕಾಂಗಿ ಜೀವನ ಪ್ರವೃತ್ತಿ ಹೆಚ್ಚಾಗಿ ಬೆಳೆಯುತ್ತದೆ. ನಿದ್ರೆಯು ಆಹಾರದಂತೆಯೇ ಮಾನವರಿಗೆ ಮೂಲಭೂತ ಅವಶ್ಯಕತೆಯಾಗಿದೆ. ದಿನಕ್ಕೆ 6-7 ಗಂಟೆಗಳಷ್ಟೂ ನಿದ್ದೆಯಿಲ್ಲದೆ ಆರೋಗ್ಯ ಹದಗೆಡುತ್ತದೆ.

ಪೋಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗದ ಕಾರಣ ಮಕ್ಕಳು ಮೊಬೈಲ್, ಟಿ.ವಿ.ಗಳ ದಾಸರಾಗಿ, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಮಾನಸಿಕ ಶಾಂತಿಯನ್ನು ಅರಸುತ್ತಾ ಅನೇಕರು ವಾರಾಂತ್ಯದಲ್ಲಿ ಅತಿಯಾದ ಮೋಜು ಮಸ್ತಿಯ ಮೊರೆ ಹೋಗುತ್ತಾರೆ. ನಿಜವಾದ ಜೀವನದ ಅನುಭವಕ್ಕಿಂತ ಭೌತಿಕ ಆಸ್ತಿಯನ್ನು ಮೌಲ್ಯೀಕರಿಸುವ ಸಮಾಜದಲ್ಲಿ, ನಾನು ಗಳಿಸಿದ್ದು ಇಷ್ಟು, ಅವನು ಗಳಿಸಿದ್ದು ಇಷ್ಟು ಅನ್ನುವ ಲೆಕ್ಕಾಚಾರವೇ ಪ್ರಮುಖವಾಗುತ್ತದೆ. ಇದರಿಂದ ಬದುಕಿನ ನಿಜವಾದ ಅನುಭವವನ್ನೇ ಕಳೆದುಕೊಂಡು, ಈ ಚಿಕ್ಕ ಜೀವನ ಪ್ರಯಾಣದ ಅಂತ್ಯವನ್ನು ತಲುಪಬೇಕಾಗುತ್ತದೆ.

-ನಂದೀಶ್ ಎಂ.ಗೌಡ, ಮಂಡ್ಯಕೊಪ್ಪಲು

ಭಾಷೆ ಕಲಿಕೆ: ಅಂಧ ವ್ಯಾಮೋಹ ಸಲ್ಲ

ಸಂಸ್ಕೃತ ಭಾಷಾ ಪರಂಪರೆಯ ಇತಿಹಾಸವನ್ನು ಬಿ.ಎಸ್‌.ಭಗವಾನ್ ತಮ್ಮ ಲೇಖನದಲ್ಲಿ (ಸಂಗತ, ಆ. 19) ವಿವರಿಸಿದ್ದಾರೆ. ಸರಿಯೇ. ಆದರೆ ಸಂಸ್ಕೃತ ಇಂದು ಜನತಾ ಭಾಷೆಯಾಗಿ ಉಳಿದಿಲ್ಲ. ಆದರೂ ಒಂದು ಭಾಷೆಯನ್ನಾಗಿ ಸಂಸ್ಕೃತ ಭಾಷೆಯನ್ನು ಕಲಿಯಲು ಯಾರ ಅಡ್ಡಿ ಆತಂಕವೂ ಇಲ್ಲ. ಆದರೆ ಅದರಿಂದಾಗಿ ನಮ್ಮ ಜೀವನ ನಿರ್ವಹಣೆ ಸಾಧ್ಯವೇ ಎಂಬುದು ಇಂದಿನ ಬಹಳ ಮುಖ್ಯ ಪ್ರಶ್ನೆ.

ಇಂದು ಜಾಗತೀಕರಣದಿಂದಾಗಿ ಜಾಗತಿಕ ಸಂಪರ್ಕ ಮತ್ತು ಸಂವಹನ ಬಹಳ ಮುಖ್ಯವಾಗುತ್ತಿವೆ. ಹೀಗಾಗಿ, ಅಲ್ಲಿ ನಮಗೆ ಸಂಸ್ಕೃತಕ್ಕಿಂತ ಇಂಗ್ಲಿಷ್ ಕಲಿಕೆ ಅನಿವಾರ್ಯ. ಇಂಗ್ಲಿಷ್ ಕಲಿಕೆ ಬಗ್ಗೆಯೂ ಒಂದು ಅಂಧ ವ್ಯಾಮೋಹ ಉಂಟಾದ್ದರಿಂದ ನಮ್ಮ ಬಹುಪಾಲು ಮಾತೃಭಾಷೆಗಳೇ ಅಳಿವಿನಂಚಿಗೆ ಬಂದಿವೆ. ಇದು ನಾವೆಲ್ಲ ಅರಿಯಬೇಕಿರುವ ಸದ್ಯದ ಅಪಾಯ.⇒

- ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಅತ್ಯಾಚಾರದಂಥ ವಿಷಯದಲ್ಲೂ ರಾಜಕೀಯವೇ?

‘ಅತ್ಯಾಚಾರಿಗಳ ಅಟ್ಟಹಾಸ ಮೇರೆಮೀರಿದೆ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಹೇಳಿಕೆ (ಪ್ರ.ವಾ.,
ಆ. 19) ಓದಿ ಆಶ್ಚರ್ಯವಾಯಿತು. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಕುರಿತು ಹೇಳಿಕೆ ನೀಡುವಾಗ ಯಾರೇ ಆದರೂ ಜಾಗ್ರತೆ ವಹಿಸಿ ಸಂಯಮದಿಂದ ಗಂಭೀರ ಹೇಳಿಕೆ ನೀಡಬೇಕು. ಇಂತಹ ವಿಷಯಗಳಲ್ಲೂ ರಾಜಕೀಯ ಲೇಪಿತ ಹೇಳಿಕೆ ಸಲ್ಲದು. ಹೌದು, ಮಹಿಳೆಯರ ಮೇಲಿನ ಯಾವುದೇ ಬಗೆಯ ದೌರ್ಜನ್ಯವನ್ನು ಎಲ್ಲರೂ ಖಂಡಿಸಬೇಕು. ಅಂತಹ ಕೃತ್ಯಗಳನ್ನು ತಡೆಯಲು ಎಚ್ಚರ ವಹಿಸಬೇಕು. ಯಾವ ಪಕ್ಷದ ನೇತೃತ್ವದ ಸರ್ಕಾರದ ಅವಧಿಯಲ್ಲೂ ಇಂತಹವು ನಡೆಯದಂತೆ ನೋಡಿಕೊಳ್ಳಬೇಕಿದೆ. ಸಾರ್ವಜನಿಕರು, ಪೋಷಕರು ಹಾಗೂ ಸಂಘ–ಸಂಸ್ಥೆಗಳು ಪೊಲೀಸರ ಜೊತೆ ಸಹಕರಿಸಬೇಕು. ಜೊತೆಗೆ ಮಹಿಳೆಯರು ಹಾಗೂ ಯುವಸಮೂಹವು ಸರ್ಕಾರ ಮತ್ತು ಪೋಷಕರ ಮಾರ್ಗದರ್ಶನವನ್ನು ಪಾಲಿಸಬೇಕು. ಆಗ ಇಂತಹ ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯ.

ಸ್ವೇಚ್ಛಾಚಾರದ ಜೀವನಶೈಲಿ ಯಾವತ್ತೂ ಅಪಾಯಕಾರಿ. ಖಂಡಿತ ನಾವು ರಾಮರಾಜ್ಯದಲ್ಲಿ ವಾಸಿಸುತ್ತಿಲ್ಲ ಎಂಬ ಅರಿವು ಯುವಜನರಿಗೆ ಇರಬೇಕು. ಅಪಾಯ ಆಹ್ವಾನಿಸುವ ದುಸ್ಸಾಹಸ ಯಾರಿಂದಲೂ ಔಚಿತ್ಯವಲ್ಲ. 

- ಎಂ.ಜಿ.ರಂಗಸ್ವಾಮಿ, ಹಿರಿಯೂರು

ಮತಹಬ್ಬ

ಕಾಶ್ಮೀರ ಕಣಿವೆಯ ಮತಹಬ್ಬ

ಆಗಲಿ ಜನಮನದ ಹಬ್ಬ,

ತಂಪುನಾಡಿನ ಜನರ

ಬದುಕು ತಂಪಾಗಲಿ,

ಪ್ರಗತಿಯಲಿ ಕಾಶ್ಮೀರ

ಭಾರತಾಂಬೆಯ ಮುಕುಟವಾಗಲಿ

– ನೀ.ಗೂ.ರಮೇಶ್‌, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT