ಕನ್ನಡದಲ್ಲಿ ಮಾತಾಡಿ, ವಂಚನೆ ತಡೆಯಿರಿ!
‘ಕನ್ನಡದಲ್ಲಿ ಮಾತಾಡಿ ಸೈಬರ್ ವಂಚನೆಯಿಂದ ಪಾರಾಗಿ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಜನರಿಗೆ ಕರೆ ನೀಡಿರುವುದು ತಮಾಷೆ ಎನಿಸಿದರೂ ಸತ್ಯಕ್ಕೆ ದೂರವಿಲ್ಲದ ಹೇಳಿಕೆ ಎನ್ನಬಹುದು. ಬಹುತೇಕ ಸೈಬರ್ ವಂಚಕರ ಮೂಲ ಹಿಂದಿ ಭಾಷಿಕ ರಾಜ್ಯಗಳಾಗಿದ್ದು, ಕರೆಗಳು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇರುತ್ತವೆ. ಹಿಂದಿ ಭಾಷೆಯಲ್ಲಿನ ಅವರ ಕರೆಗಳಿಗೆ ಹಿಂದಿಯಲ್ಲಿ ಸ್ಪಂದಿಸಿದರೆ ಅವರು ಇನ್ನೂ ಉತ್ತೇಜಿತರಾಗಿ ತಮ್ಮ ಕುಕೃತ್ಯವನ್ನು ಮುಂದು ವರಿಸುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿ ಉತ್ತರಿಸಿದರೆ ಸ್ವಲ್ಪ ಮಟ್ಟಿಗೆ ತಡವರಿಸುತ್ತಾರೆ. ಕನ್ನಡದಲ್ಲಿ ಮಾತನಾಡಿದರೆ ಬೈದು ಫೋನ್ ಕಟ್ ಮಾಡುತ್ತಾರೆ. ಕೆಲವು ಕನ್ನಡಿಗರು ತಮ್ಮ ಭಾಷಾ ಪ್ರಾವೀಣ್ಯವನ್ನು ತೋರಿಸಲು ಹಿಂದಿಯಲ್ಲಿ ಉತ್ತರಿಸುತ್ತಿದ್ದು, ವಂಚಕರ ಜಾಲಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಅಪ್ಪಟ ಭಾಷಾ ಪ್ರೇಮ ಇರುವ ತಮಿಳುನಾಡಿನಲ್ಲಿ ಇಂತಹ ಪ್ರಕರಣಗಳು ಕಡಿಮೆ ಎನ್ನಲಾಗುತ್ತದೆ. ಪೊಲೀಸ್ ಆಧಿಕಾರಿ ಹೇಳಿದಂತೆ, ಕನ್ನಡಿಗರು ತಮ್ಮ ಪರಭಾಷಾ ವ್ಯಾಮೋಹವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಂಡರೆ ಇಂತಹ ಸೈಬರ್ ವಂಚನೆಗಳಿಂದ ಪಾರಾಗಬಹುದೇನೊ.
⇒ರಮಾನಂದ ಶರ್ಮಾ, ಬೆಂಗಳೂರು
ಚಟಗಳೆಂದರೇ ಹಾಗೆ...
ಜಗಿಯಲು ತಂಬಾಕು ಕೊಡಲಿಲ್ಲವೆಂದು ಕಾರವಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ಗಲಾಟೆ ನಡೆಸಿರುವುದಾಗಿ, ಒಬ್ಬನಂತೂ ಕಲ್ಲಿಗೆ ತಲೆಯನ್ನು ಜಜ್ಜಿಕೊಂಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಆ. 30). ಚಟಗಳೆಂದರೇ ಹಾಗೆ. ಬಯಸಿದಾಗ ಸಿಗದಿದ್ದರೆ ಮನುಷ್ಯ ಏನು ಮಾಡುತ್ತಾನೋ ಹೇಳಲಾಗುವುದಿಲ್ಲ. ವಿಶೇಷವಾಗಿ ಗುಟ್ಕಾ, ಸಿಗರೇಟು ಸೇವನೆ ಸಮಾಜದಲ್ಲಿ ಅತಿಯಾಗುತ್ತಿದೆ. ಒಂದು ಶಾಲೆಯ ಕಾಂಪೌಂಡ್ ಹೊರಗಿನಿಂದ ಮಕ್ಕಳಿಗೆ ಅಂಗಡಿಯವನು ಗುಟ್ಕಾ ಪ್ಯಾಕೆಟ್ ಕೊಡುವುದನ್ನು ನೋಡಿದೆ. ಕೇಳಿದರೆ ಅದು ಸೋಂಪಿನ ಪ್ಯಾಕೆಟ್ ಎಂದ. ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ತಂಬಾಕು ಚಟ ತುಂಬಾ ಹಾನಿ ಉಂಟುಮಾಡುತ್ತಿದೆ. ನಮ್ಮ ಸಾರ್ವಜನಿಕ ಸ್ಥಳಗಳು ಹೊಲಸಾಗಲು ಗುಟ್ಕಾ ತಿಂದು ಉಗುಳುವವರು ಪ್ರಮುಖ ಕಾರಣ. ನಮ್ಮ ಧರ್ಮ, ಜಾತಿಗಳು ಆಹಾರದ ವಿಷಯದಲ್ಲಿ ಭೇದಭಾವ ಹೊಂದಿವೆ. ಆದರೆ ತಂಬಾಕು ಚಟಕ್ಕೆ ಸಂಬಂಧಿಸಿದಂತೆ ಹಿಂದೂ, ಕ್ರೈಸ್ತ, ಮುಸ್ಲಿಂ ಎಲ್ಲರೂ ಸಮಾನರು. ನಮ್ಮ ಸ್ವಾಮಿಗಳು, ಮೌಲ್ವಿಗಳು, ಪಾದ್ರಿಗಳು ಎಲ್ಲರೂ ಸೇರಿ ಸಿಗರೇಟು, ಗುಟ್ಕಾ ವಿರುದ್ಧ ಧ್ವನಿ ಎತ್ತಬೇಕು.
⇒ಪ್ರೊ. ಶಶಿಧರ ಪಾಟೀಲ್, ಬಾಗಲಕೋಟೆ
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ?
ಗೋಮಾಂಸ ತಿಂದ ಶಂಕೆಯಿಂದ ಪಶ್ಚಿಮ ಬಂಗಾಳ ಮೂಲದ ಚಿಂದಿ ಆಯುವ ಒಬ್ಬ ಬಡಪಾಯಿ ವಲಸೆ ಕಾರ್ಮಿಕನನ್ನು ಚಂಡೀಗಢದಲ್ಲಿ ಥಳಿಸಿ ಕೊಂದಿರುವುದಾಗಿ ವರದಿಯಾಗಿದೆ (ಪ್ರ.ವಾ., ಸೆ. 1). ದೇಶದ ಎಲ್ಲಾ ಭಾಗಗಳಲ್ಲಿ ಗೋಮಾಂಸವನ್ನು ಅನೇಕ ಧರ್ಮದವರು ಆಹಾರವಾಗಿ ಬಳಸುತ್ತಿರುವುದು, ಕೆಲವು ಹೋಟೆಲುಗಳು ಗೋಮಾಂಸದ ಖಾದ್ಯವನ್ನು ನೀಡುತ್ತಿರುವುದು ತಿಳಿದ ವಿಷಯವೇ ಆಗಿದೆ. ಆಹಾರ ಕ್ರಮ ಅವರವರ ವೈಯಕ್ತಿಕ ವಿಷಯ. ಹೀಗಿರುವಾಗ, ಬಡಪಾಯಿ ಕಾರ್ಮಿಕನನ್ನು ಗೋಮಾಂಸ ತಿಂದಿರುವ ಶಂಕೆಯಿಂದ ಐದು ಮಂದಿ ಸೇರಿ ಕೊಂದಿರುವುದು ಯಾವ ನ್ಯಾಯ? ಇದು ಮಾನವ ಹಕ್ಕು ಉಲ್ಲಂಘನೆಗೆ ಎಡೆ ಮಾಡಿಕೊಟ್ಟಿದ್ದು ‘ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ’ ಬಿಟ್ಟಂತಾಗಿದೆ. ಇಂತಹ ಸಂವಿಧಾನ ವಿರೋಧಿ ಪ್ರಕರಣಗಳು, ಶಾಂತಿಪ್ರಿಯ ದೇಶವೆಂದು ಕರೆಸಿಕೊಳ್ಳುವ ನಮ್ಮ ಭಾರತದಲ್ಲಿ ಹೆಚ್ಚುತ್ತಿರುವುದು ತಲೆ ತಗ್ಗಿಸುವಂತಹ ವಿದ್ಯಮಾನ.
⇒ಡಿ.ಪ್ರಸನ್ನಕುಮಾರ್, ಬೆಂಗಳೂರು
ಈ ಭಾಷಾಂತರಕ್ಕೆ ಸಿಗಲಿ ರಾಜ್ಯೋತ್ಸವ ಪ್ರಶಸ್ತಿ!
‘ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದ ಮಾಡಿದ್ದು ಗೂಗಲ್ ಅಥವಾ ಎ.ಐ. ಅಲ್ಲ. ಭಾಷಾಂತರ ಇಲಾಖೆಯ ಭಾಷಾಂತರಕಾರರು’ ಎಂದು ಈ ಪ್ರಶ್ನೆಪತ್ರಿಕೆ ವಿವಾದದ ಕುರಿತು ಕೆಪಿಎಸ್‌ಸಿ ಸ್ಪಷ್ಟನೆ ನೀಡಿದೆ (ಪ್ರ.ವಾ., ಆ. 30). ಅಂತಹ ‘ಅದ್ಭುತ’ ಭಾಷಾಂತರಕ್ಕಾಗಿ ಆ ಭಾಷಾಂತರಕಾರರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು! ಮೊದಲಿಗೆ ಕನ್ನಡ ಭಾಷೆಯ ಬಗ್ಗೆ ಕನಿಷ್ಠ ಪ್ರಜ್ಞೆಯೂ ಇಲ್ಲದವರಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವಂತಹ ದೊಡ್ಡ ಜವಾಬ್ದಾರಿ ನೀಡಿದ್ದು ಅಕ್ಷಮ್ಯ. ಈ ಮೂಲಕ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಕೆಪಿಎಸ್‌ಸಿ ಭಾರಿ ಅನ್ಯಾಯ ಎಸಗಿದೆ. ಕೇಂದ್ರ ಸರ್ಕಾರದ ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕು ಎಂದು ಒತ್ತಾಯಿಸುವ ನಾವು, ಕನ್ನಡದಲ್ಲೇ ಪರೀಕ್ಷೆ ನಡೆಸುವ ಕೆಪಿಎಸ್‌ಸಿಯ ಈ ನಿರ್ಲಕ್ಷ್ಯ ಧೋರಣೆಯನ್ನು ಹೇಗೆ ಸಹಿಸುವುದು? ಇಂತಹ ನಿರ್ಲಕ್ಷ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇದು ಬರೀ ಸುದ್ದಿಯಾಗಿ ಉಳಿಯುವುದು ಖಚಿತ.
⇒ಸತೀಶಗೌಡ ಪಾಟೀಲ, ಹಾವೇರಿ
ಜನೌಷಧಿ: ಏಕರೂಪದ ಬೆಲೆ ಇರಲಿ
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜನೌಷಧಿ ಕೇಂದ್ರದಲ್ಲಿ ಒಳ್ಳೆಯ ಗುಣಮಟ್ಟದ ಜೆನರಿಕ್ ಔಷಧಿಗಳು ದೊರೆಯುತ್ತಿವೆ. ಬ್ರ್ಯಾಂಡೆಡ್ ಔಷಧಿ ಕಂಪನಿಗಳಿಗಿಂತ ಸರಿಸುಮಾರು ಶೇ 70ರಿಂದ ಶೇ 80ರಷ್ಟು ಕಡಿಮೆ ಬೆಲೆಯಲ್ಲಿ ಔಷಧಿ ಲಭ್ಯವಿರುವುದು ಕಡಿಮೆ ಆದಾಯದವರೂ ಸೇರಿದಂತೆ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಆದರೆ ನಮ್ಮ ಮಂಗಳೂರಿನ ಜನಔಷಧಿ ಕೇಂದ್ರಗಳಲ್ಲಿ ಒಂದೇ ಕಂಪನಿಯ ಅದೇ ಔಷಧಿಗೆ ಬೇರೆ ಬೇರೆ ರೀತಿಯಲ್ಲಿ ಹಣ ವಸೂಲಿ ಮಾಡುತ್ತಾರೆ. ಅದೇ ಕಂಪನಿ, ಅದೇ ಮದ್ದು, ಅದೇ ಬ್ಯಾಚ್ ನಂಬರ್ ಮತ್ತು ತಯಾರಿಸಿದ ದಿನಾಂಕ ಹಾಗೂ ಅದೇ ಗರಿಷ್ಠ ಮಾರಾಟ ಬೆಲೆ ಹೊಂದಿದ್ದರೂ ಒಂದು ಜನೌಷಧಿ ಕೇಂದ್ರಕ್ಕಿಂತ ಇನ್ನೊಂದರಲ್ಲಿ ಅದರ ಬೆಲೆಯಲ್ಲಿ ಸುಮಾರು ಶೇ 40ರಿಂದ ಶೇ 50ರಷ್ಟು ವ್ಯತ್ಯಾಸ ಇರುತ್ತದೆ. ಈ ರೀತಿ ಕೆಲ ಜನೌಷಧಿ ಕೇಂದ್ರದವರು ಜಾಸ್ತಿ ಹಣ ವಸೂಲಿ ಮಾಡಿ ಜನರನ್ನು ಸುಲಿಗೆ ಮಾಡುತ್ತಾರೆ. ಇದಕ್ಕೆ ಕಾರಣ, ಔಷಧಿ ಕಂಪನಿಯವರು ಅದರಲ್ಲಿ ಜನೌಷಧಿ ಕೇಂದ್ರದಲ್ಲಿ ಮಾರುವ ರಿಯಾಯಿತಿ ದರವನ್ನು ಮುದ್ರಿಸುವ ಬದಲು ರಿಯಾಯಿತಿ ಇಲ್ಲದೇ ಮಾರಾಟ ಮಾಡುವ ಗರಿಷ್ಠ ಮಾರಾಟ ಬೆಲೆಯನ್ನು ಮುದ್ರಿಸಿರುವುದು. ಇದನ್ನು ಕೆಲವು ಕೇಂದ್ರಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
⇒ಲಕ್ಷ್ಮೀಕಾಂತ್ ಕೊಟ್ಟಾರಚೌಕಿ, ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.