ವಿಚಾರಣೆ ನಡೆಯಲಿ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ
ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಈಗ ನಡೆಸುತ್ತಿರುವ ಪಾದಯಾತ್ರೆ ಮತ್ತು ಜನಾಂದೋಲನ ಸಮಾವೇಶಗಳಲ್ಲಿ ಪ್ರಭಾವಿ ವ್ಯಕ್ತಿಗಳು ಪರಸ್ಪರರ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಹೀಗೆ ಬಹಿರಂಗವಾಗುತ್ತಿರುವ ಈ ಆರೋಪಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡು ಸಾರ್ವಜನಿಕ ದಾಖಲೆಗಳಾಗುತ್ತಿವೆ. ಎಲ್ಲ ಆರೋಪಗಳಿಗೂ ತಮ್ಮ ಬಳಿ ದಾಖಲೆಗಳಿವೆ ಎನ್ನುತ್ತಿದ್ದಾರೆ. ಆದರೆ ಯಾರೂ ಅಧಿಕೃತವಾಗಿ ಸೂಕ್ತ ವೇದಿಕೆಯಲ್ಲಿ ದೂರು ದಾಖಲಿಸುತ್ತಿಲ್ಲ.
ಇಂತಹವರ ಭ್ರಷ್ಟ ವ್ಯವಹಾರಗಳ ಕಾರಣದಿಂದ, ಚುನಾವಣೆಯ ಮೂಲಕ ಇವರಿಗೆ ಅಧಿಕಾರ ನೀಡಿದ ನಾಗರಿಕರ ಸಂವಿಧಾನಬದ್ಧ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ಹೊಂದುವ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತಿದೆ. ಈ ಜನಪ್ರತಿನಿಧಿಗಳು ಮತದಾರರ ಚುನಾವಣೋತ್ತರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜನರ ಈ ಸಂಕಷ್ಟದ ಸಮಯದಲ್ಲಿ ನ್ಯಾಯಾಂಗ ಮಾತ್ರ ಅವರನ್ನು ರಕ್ಷಿಸಬಹುದಾಗಿದೆ. ಅದು, ಮೂರು ಪ್ರಮುಖ ಪಕ್ಷಗಳ ನಾಯಕರು ಬಹಿರಂಗವಾಗಿ ಮಾಡುತ್ತಿರುವ ಆರೋಪಗಳನ್ನು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಸಾರ್ವಜನಿಕ ರಂಗವನ್ನು ಸ್ವಚ್ಛಗೊಳಿಸಬೇಕು.
ಎಸ್. ಜನಾರ್ದನ ಮರವಂತೆ, ಉಡುಪಿ
ಕಾಡಿಗೆ ಲಗ್ಗೆ: ಯಾವ ನೀತಿ, ಯಾವ ನಿಯಮ?
ರಾಜ್ಯದಲ್ಲಿ ಹರಡಿರುವ 20 ಸಾವಿರ ಚದರ ಕಿ.ಮೀ.ಗೂ ಹೆಚ್ಚಿನ ಪರಿಸರ ಸೂಕ್ಷ್ಮ ಅರಣ್ಯವಲಯಕ್ಕೆ ಹಿಂದಿನ ನಲವತ್ತು ವರ್ಷಗಳಲ್ಲಿ ಯಾವ ರೀತಿಯ ಆಪತ್ತು ಒದಗಿಬಂದಿದೆ ಎಂಬ ಬಗ್ಗೆ ಪತ್ರಿಕಾ ಲೇಖನಗಳು ಮತ್ತು ವರದಿಗಳು ಬೆಳಕು ಚೆಲ್ಲಿವೆ. ಕರ್ನಾಟಕವು ಹೇಗೆ ತನ್ನ ಪರಿಸರವನ್ನು ಕಾಪಾಡಿಕೊಳ್ಳಲಿದೆ ಎಂಬುದರ ಮೇಲೆ, ಬರೀ ಕರ್ನಾಟಕವಲ್ಲದೆ ದೇಶದ ಬಹುಪಾಲು ಭೂಭಾಗದ ಭವಿಷ್ಯದ ಆರೋಗ್ಯ ನಿಂತಿದೆ. ಪಶ್ಚಿಮಘಟ್ಟದ ಕಾಡುಗಳು ಪೋಷಿಸುವ ಮಳೆಗಾಳಿಯ ಬೀಸು ದಕ್ಷಿಣ ಭಾರತದ ಎಲ್ಲಾ ದೊಡ್ಡ ನದಿಗಳ ಜೀವಸೆಲೆಯಾಗಿರುವುದು ಒಂದೆಡೆಯಾದರೆ, ಕರ್ನಾಟಕದ ಪ್ರಸ್ಥಭೂಮಿಯು ಆ ಕಾಡುಗಳ ಹೊರತಾಗಿ ಬಹುತೇಕ ಮರುಭೂಮಿಗೆ ಸಮನಾದ ಬೆಂಕಿಯ ಬಾಣಲೆ ಎನ್ನುವುದು ಇನ್ನೊಂದು ಕಹಿ ಸತ್ಯ. ಕಾಡುಗಳನ್ನು ಎಗ್ಗಿಲ್ಲದೇ ಸವರುವ ಅಥವಾ ಕಬಳಿಸುವ ಜನ ಯಾರು ಎಂದರೆ ರೆಸಾರ್ಟುಗಳು, ಕೋಟ್ಯಧಿಪತಿಗಳ ಖಾಸಗಿ ಬಂಗಲೆ ಕಾಲೊನಿಗಳು, ಕಣ್ಣು ನೋಡಿದಷ್ಟೂ ದೂರಕ್ಕೆ ತೋಟ, ಎಸ್ಟೇಟುಗಳ ಹೆಸರಿನಲ್ಲಿ ನಡೆಯುತ್ತಿರುವ ಭೂ ಪರಿವರ್ತನೆಯ ಕರಾಳ ಜಾಲದ ಸಂಪರ್ಕವುಳ್ಳ ಅಧಿಕಾರವರ್ಗದವರು
ಎನ್ನುವುದು ಸರ್ವವಿಧಿತ. ಇವರೊಂದಿಗೆ ಇಂದು ಕಾಡನ್ನು ಒತ್ತುವರಿ ಮಾಡಿಕೊಂಡು, ಮುಂದೊಂದು ದಿನ ಹಕ್ಕು ಸಿಕ್ಕೇ ಸಿಗಲಿದೆ ಎಂಬ ದೂರಗಾಮಿ ರಾಜಕೀಯ ಆಟದಲ್ಲಿ ಪಾಲುದಾರರಾಗಿರುವ, ಸ್ವಂತ ನೆಲದ ಒಡೆತನ ಇರುವ ಬಲಿಷ್ಠ ರೈತರು ಮತ್ತು ಒಡೆತನ ಇರದ ಬಗರ್‌ಹುಕುಂ ಉಳುಮೆ ಮಾಡುವ ಬಡಮಂದಿಯ ಕೈವಾಡವೂ ಇದೆ. ಕಳ್ಳರ ಸಂತೆಯಲ್ಲಿ ಯಾವ ನೀತಿ, ಯಾವ ನಿಯಮ?
ರಾಜ್ಯ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ, ತನ್ನವರು ಪರರು ಎನ್ನದೆ, ರಾಜ್ಯದ ಎಲ್ಲಾ ಕಾಡುಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಮಟ್ಟಹಾಕುವ ಬದ್ಧತೆ ತೋರಬೇಕಾಗಿದೆ. ಅಧಿಕಾರಿಶಾಹಿಯ ಹಿತಾಸಕ್ತಿಯ ಮುಂದೆ ಯಾವ ಕಾಡು, ಯಾರ ಭವಿಷ್ಯ? ಕರ್ನಾಟಕದ ನಿಸರ್ಗ ಸಂಪತ್ತನ್ನು ತಾನೂ ಮುಕ್ಕುವುದಿಲ್ಲ, ಬೇರೆಯವರಿಗೂ ಮುಕ್ಕಲು ಗುತ್ತಿಗೆ ಕೊಡುವುದಿಲ್ಲ ಎಂದು ಕರ್ನಾಟಕವು ಪ್ರಪಂಚಕ್ಕೆ ವಾಗ್ದಾನ ಕೊಟ್ಟು ಉಳಿಸಿಕೊಳ್ಳುವುದೇ?
ಶ್ರೀಕಂಠ, ಬೆಂಗಳೂರು
ನೌಕರರ ಸಂಘದ ಚುನಾವಣೆ: ಮೀಸಲಾತಿ ಯಾಕಿಲ್ಲ?
ಸಮಾಜದಲ್ಲಿ ಅವಕಾಶವಂಚಿತ ಸಮುದಾಯಗಳಿಗೆ ಅವಕಾಶ ಸಿಗಬೇಕೆಂಬ ಕಾರಣಕ್ಕೆ, ಶಾಸನಸಭೆಯೂ ಸೇರಿದಂತೆ ಸರ್ಕಾರದಿಂದ ಅನುಮೋದಿಸಲಾದ ಅನೇಕ ಸಂಘ-ಸಂಸ್ಥೆಗಳಲ್ಲಿ ಸಂವಿಧಾನಬದ್ಧವಾದ ಮೀಸಲಾತಿ ನೀಡಲಾಗಿದೆ. ಆದರೆ ಇಡೀ ರಾಜ್ಯದ ನೌಕರರನ್ನು ಪ್ರತಿನಿಧಿಸುವ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದಲ್ಲಿ ನಡೆಯುವ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಮಾತ್ರ ಮೀಸಲಾತಿ ವ್ಯವಸ್ಥೆ ಇಲ್ಲ. ಹೀಗಾಗಿ, ಸಂಘದ ಚುನಾವಣೆಯಲ್ಲಿ ತಾಲ್ಲೂಕು ನಿರ್ದೇಶಕ ಸ್ಥಾನದಿಂದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದವರೆಗಿನ ಹುದ್ದೆಗಳು ಪ್ರಬಲರಿಗೆ ಮೀಸಲಾಗುತ್ತಿವೆ. ಸಂಘದ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದ್ದು, ಅದರಲ್ಲಿ ಮಹಿಳೆಯರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ತರಬೇಕಾಗಿದೆ.
ಮಲ್ಲಪ್ಪ ಫ. ಕರೇಣ್ಣನವರ, ಮೋಟೆಬೆನ್ನೂರು, ಬ್ಯಾಡಗಿ
ಲಂಗು ಲಗಾಮಿಲ್ಲದ ಕೋಚಿಂಗ್ ಕೇಂದ್ರಗಳು
ದೆಹಲಿಯು ದೇಶದಾದ್ಯಂತದ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಬಹಳ ಹಿಂದಿನಿಂದಲೂ ಒಂದು ಆಕರ್ಷಣೆಯ ಸ್ಥಳವಾಗಿದೆ. ನಗರದ ಕೋಚಿಂಗ್ ಉದ್ಯಮವು ಬಹುಕೋಟಿ ಉದ್ಯಮವಾಗಿ ಬೆಳೆದಿದೆ. ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಪರೀಕ್ಷೆಯನ್ನು ಭೇದಿಸಲು ಬಯಸುವ ಸಾವಿರಾರು ಯುವಜನರು ಮೂಲ ಸೌಕರ್ಯಗಳಿಲ್ಲದ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ನೆಲಮಹಡಿಗೆ ಮಳೆನೀರು ನುಗ್ಗಿ ಮೂವರು ಆಕಾಂಕ್ಷಿಗಳು ಮೃತಪಟ್ಟ ಪ್ರಕರಣ ಇದಕ್ಕೆ ನಿದರ್ಶನ. ನಮ್ಮ ರಾಜ್ಯದಲ್ಲೂ ಪ್ರಮುಖ ನಗರಗಳಲ್ಲಿ ನಡೆಯುವ ಅನೇಕ ಕೋಚಿಂಗ್ ಕೇಂದ್ರಗಳು ಬರುವ ಲಾಭದ ಬಗ್ಗೆ ಮಾತ್ರ ಗಮನಹರಿಸುತ್ತಾ, ಅಭ್ಯರ್ಥಿಗಳಿಗೆ ಒದಗಿಸಬೇಕಾದ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸುತ್ತಿವೆ. ಲಂಗು ಲಗಾಮು ಇಲ್ಲದ ಇಂತಹ ಕೇಂದ್ರಗಳ ಮೇಲೆ ಸೂಕ್ತ ನಿಗಾ ಇಟ್ಟು ಕ್ರಮ ಜರುಗಿಸುವ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ಬರಲಿ.
ಲಗಮಣ್ಣಾ ಪೂಜಾರಿ, ಕೂಟನೂರ್, ಜೇವರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.