ಒತ್ತುವರಿ ತೆರವು: ಆರಂಭಶೂರತ್ವ ಆಗದಿರಲಿ
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಮ್‌ಸ್ಟೇ ಅಂತಹವುಗಳ ತೆರವು ಕಾರ್ಯಾಚರಣೆಯನ್ನು ರಾಜ್ಯ ಸರ್ಕಾರ ಆರಂಭಿಸಿರುವುದು ಶ್ಲಾಘನೀಯ. ಆದರೆ ಈ ನಡೆ ಆರಂಭಶೂರತ್ವವಷ್ಟೇ ಆಗಬಾರದು.
ಒತ್ತುವರಿ ಮಾಡಿಕೊಂಡವರಲ್ಲಿ ಬಹಳಷ್ಟು ಮಂದಿ ಪ್ರಭಾವಿಗಳಾಗಿದ್ದು, ಅವರನ್ನು ಬಿಟ್ಟು ಅಮಾಯಕರ ವಿರುದ್ಧವಷ್ಟೇ ಕ್ರಮ ಜರುಗಿಸದಂತೆ ಎಚ್ಚರ ವಹಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹ ಅಕ್ರಮಗಳು ಜರುಗಲು ಸಾಧ್ಯ. ಹೀಗಾಗಿ, ಇಂತಹುದಕ್ಕೆ ಅವಕಾಶ ಕಲ್ಪಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆಗಬೇಕು.
ಸುರೇಂದ್ರ ಪೈ, ಭಟ್ಕಳ
ಚುನಾವಣಾ ವ್ಯವಸ್ಥೆ: ಬೇಕಿದೆ ಕಾಯಕಲ್ಪ
ಚುನಾವಣಾ ವ್ಯವಸ್ಥೆಗೆ ಸುಧಾರಣೆ ತರಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಆಗಿಂದಾಗ್ಗೆ ಕೇಳಿಬರುವ ಮಾತು. ಟಿ.ಎನ್.ಶೇಷನ್ ಚುನಾವಣಾ ಆಯುಕ್ತರಾಗಿದ್ದಾಗ ಕೆಲವು ಸುಧಾರಣೆಗಳಿಗೆ ಕಾರಣರಾದರು. ಚುನಾವಣಾ ಸಮಯದಲ್ಲಿ ಮೈಕಾಸುರನ ಹಾವಳಿ, ಪೋಸ್ಟರ್‌ಗಳನ್ನು ಅಂಟಿಸಿ ಗೋಡೆಗಳ ಅಂದಗೆಡಿಸುತ್ತಿದ್ದುದನ್ನು ಕಟ್ಟುನಿಟ್ಟಾಗಿ ನಿಲ್ಲಿಸಲಾಯಿತು. ಮತದಾರರಿಗೆ ಗುರುತಿನ ಚೀಟಿ ವಿತರಿಸುವ ಪ್ರಯತ್ನದಲ್ಲಿ ಶೇಷನ್ ಯಶಸ್ವಿಯಾದರು. ಆದರೆ ಅವರ ಸುಧಾರಣಾ ಕ್ರಮದಲ್ಲಿ ಸರ್ವಾಧಿಕಾರಿ ಧೋರಣೆಯನ್ನು ಕಂಡ ಆಗಿನ ಸರ್ಕಾರ, ಅವರೊಂದಿಗೆ ಮತ್ತಿಬ್ಬರು ಆಯುಕ್ತರನ್ನು ನೇಮಿಸುವ ಮೂಲಕ ಅವರ ಅಧಿಕಾರಕ್ಕೆ ಲಗಾಮು ಹಾಕಲು ಮುಂದಾಯಿತು.
ಈಗ ಚುನಾವಣೆಯಿಂದ ಚುನಾವಣೆಗೆ ಅಭ್ಯರ್ಥಿಗಳು ಮಾಡುವ ವೆಚ್ಚವು ಕೋಟಿಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದ ಶಾಂತವೇರಿ ಗೋಪಾಲಗೌಡ ಅವರ ಚುನಾವಣಾ ವೆಚ್ಚವನ್ನು ಕೇಳಿದರೆ ಈಗಿನ ಜನಪ್ರತಿನಿಧಿಗಳು ನಗಬಹುದು. ಈಗಿನ ಚುನಾವಣೆಗಳ ಅವಿವೇಕದ ಪ್ರಹಸನಕ್ಕೆ ಸ್ಪರ್ಧಾಳುಗಳನ್ನು ಮಾತ್ರ ಹೊಣೆ ಮಾಡುವಂತಿಲ್ಲ. ಮತದಾರರೂ ಅಷ್ಟೇ ಕಾರಣರಾಗಿದ್ದಾರೆ. ವಿಧಾನಪರಿಷತ್ತಿನ ಶಿಕ್ಷಕರ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸುಶಿಕ್ಷಿತ ಮತದಾರ ನಡೆದುಕೊಂಡ ರೀತಿಗೆ ಸಂವಿಧಾನ ರಚನೆಕಾರರ ಆತ್ಮಗಳು ವಿಲವಿಲ ಒದ್ದಾಡಿರಬಹುದು. ಚುನಾವಣಾ ವ್ಯವಸ್ಥೆಗೆ ನಿಜಕ್ಕೂ ಕಾಯಕಲ್ಪ ಬೇಕಿದೆ. ಅದನ್ನು ಈಗಿರುವ ರೀತಿಯಿಂದ ಹೊರತಂದು ಹೊಸ ಪ್ರಯೋಗಗಳಿಗೆ ಒಡ್ಡಬೇಕಿದೆ. ಆದರೆ ಅದನ್ನು ಜಾರಿಗೆ ತರುವವರು ಯಾರು? ಸುಧಾರಣೆ ಯಾರಿಗೆ ಬೇಕಾಗಿದೆ? ಮತವನ್ನು ‘ಖರೀದಿ’ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಅಣಕವಾಗಿಸಲು ಹೊರಟಿರುವ ನಮ್ಮ ಪ್ರತಿನಿಧಿಗಳಿಗೆ ಇದನ್ನು ತಿಳಿಯಪಡಿಸುವವರು ಯಾರು? ಮತ್ತೆ ಅದೇ ಪ್ರಶ್ನೆ ‘ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?’
ಮೋದೂರು ಮಹೇಶಾರಾಧ್ಯ, ಹುಣಸೂರು
ಗ್ರಾಮೀಣ ಬಸ್ ನಿಲ್ದಾಣ: ಮುಕ್ತಿ ಸಿಗಲಿ
ರಾಜ್ಯದಲ್ಲಿ ಸಾಮಾನ್ಯವಾಗಿ ಎಲ್ಲ ಗ್ರಾಮಗಳಲ್ಲೂ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿರುತ್ತದೆ. ಆದರೆ ಎಷ್ಟೋ ನಿಲ್ದಾಣಗಳು ಅವ್ಯವಸ್ಥೆಯ ತಾಣಗಳಾಗಿ ಗಬ್ಬೆದ್ದು ನಾರುತ್ತಿರುತ್ತವೆ. ಕುಡುಕರ ಹಾವಳಿಯ ಜೊತೆಗೆ ಕೆಲವು ನಿಲ್ದಾಣಗಳು ಆಕ್ರಮಿತ ಗೂಡಂಗಡಿಗಳಾಗಿ ಪರಿವರ್ತನೆಗೊಂಡಿವೆ. ಇನ್ನು ಕೆಲವು ನಿಲ್ದಾಣಗಳು ಕಸಕಡ್ಡಿ, ಕಲ್ಲುಮಣ್ಣು ಸಂಗ್ರಹದಿಂದ ಕೊಳಚೆ ಪ್ರದೇಶದಂತೆ ಕಾಣುತ್ತವೆ. ಸೊಳ್ಳೆಗಳ ಹಾವಳಿ ಕಂಡುಬರುತ್ತದೆ.
ರಾಜ್ಯ ಸರ್ಕಾರವು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣಗಳನ್ನು ನಿರ್ಮಿಸಿ, ನಿರ್ವಹಣೆಯ ಜವಾಬ್ದಾರಿ ಮರೆಯುತ್ತದೆ. ಇವುಗಳ ನಿರ್ವಹಣೆ ಮಾಡುವುದು ಲೋಕೋಪಯೋಗಿ ಇಲಾಖೆಯೋ ಸಾರಿಗೆ ಇಲಾಖೆಯೋ ಅಥವಾ ಆಯಾ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಯೋ ಎಂಬುದು ತಿಳಿಯುವುದಿಲ್ಲ. ಈ ನಿಲ್ದಾಣಗಳಿಗೆ ಮುಕ್ತಿ ಸಿಗಬೇಕಾದದ್ದು ಅವಶ್ಯ.
ಮಹಾಂತೇಶ ರಾಜಗೋಳಿ, ಬೈಲಹೊಂಗಲ
ದಂತ ವೈದ್ಯಕೀಯ: ನಿರುದ್ಯೋಗ ತಪ್ಪಿಸಿ
ರಾಜ್ಯದ ದಂತ ವೈದ್ಯಕೀಯ ಪದವೀಧರರನ್ನು ಅನೇಕ ವರ್ಷಗಳಿಂದ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಉಳಿದ ಇಲಾಖೆಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ರೀತಿಯಲ್ಲಿ ಸರ್ಕಾರವು ತಾತ್ಕಾಲಿಕ ಅಥವಾ ಗುತ್ತಿಗೆ ಆಧಾರದಲ್ಲಿ ದಂತ ವೈದ್ಯರ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಆರಂಭಿಸಿದ ದಂತ ಕ್ಲಿನಿಕ್‌ಗಳಲ್ಲಿ ಬಹುತೇಕರಿಗೆ ಕನಿಷ್ಠ ಆದಾಯವೂ ಸಿಗುವುದಿಲ್ಲ.
ಸರ್ಕಾರವು ನೇಮಕಾತಿಯಲ್ಲಿ ದಂತ ವೈದ್ಯಕೀಯ ಪದವೀಧರರ ಬದಲಿಗೆ ದಂತ ವೈದ್ಯಕೀಯದಲ್ಲಿ ಡಿಪ್ಲೊಮಾ ಪಡೆದಿರುವ ಅಭ್ಯರ್ಥಿಗಳನ್ನು ಪರಿಗಣಿಸುತ್ತದೆ. ಇಂತಹ ಕಾರಣಗಳಿಂದ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಸೀಟು ಪಡೆದು ದಂತ ವೈದ್ಯಕೀಯ ಪದವಿ ಓದಿದ್ದು ವ್ಯರ್ಥ ಎನಿಸುವಂತಾಗಿದೆ. ಒಬ್ಬ ದಂತ ವೈದ್ಯರ ಸಂಬಳದಲ್ಲಿ ಬಿಎಎಂಎಸ್, ಬಿಎಚ್‌ಎಂಎಸ್ ಪದವಿ ಪಡೆದ ಇಬ್ಬರನ್ನು ನೇಮಕ ಮಾಡಿಕೊಂಡು ದುಡಿಸಿಕೊಳ್ಳಲಾಗುತ್ತಿದೆ. ಕೆಎಎಸ್ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಿಗೆ ನಿಗದಿಪಡಿಸಿದ ಪಠ್ಯದಲ್ಲಿ ದಂತ ವೈದ್ಯಕೀಯಕ್ಕೆ ಸಂಬಂಧಿಸಿದ ಸಿಲೆಬಸ್ ಇರುವುದಿಲ್ಲ. ಈ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಷ್ಟರಲ್ಲಿ ವಿದ್ಯಾರ್ಥಿಗಳು ಹೈರಾಣಾಗಿರುತ್ತಾರೆ. ರಾಜ್ಯದ ದಂತ ವೈದ್ಯಕೀಯ ಕಾಲೇಜುಗಳು ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ದಂತ ವೈದ್ಯಕೀಯ ಪದವಿ ಪ್ರಮಾಣಪತ್ರ ವಿತರಿಸುವ ಕಾರ್ಖಾನೆಗಳಂತಾಗಿವೆ. ದಂತ ವೈದ್ಯರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಗೆ ಉತ್ತರ ಹುಡುಕುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ.
ಎಂ.ಆಂಜನೇಯ, ಹಾವೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.