ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published : 6 ಸೆಪ್ಟೆಂಬರ್ 2024, 19:41 IST
Last Updated : 6 ಸೆಪ್ಟೆಂಬರ್ 2024, 19:41 IST
ಫಾಲೋ ಮಾಡಿ
Comments

ಭವಿಷ್ಯ ಅಂಧಕಾರ

‘ಜಯ ಜಿಂದಾಲು, ಜನ ಕಂಗಾಲು’ ಶೀರ್ಷಿಕೆಯ ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಆ. 30) ಸಕಾಲಿಕ. ಆದರೆ ಇಂದಿನ ರಾಜಕಾರಣಿಗಳು ಯಾವುದಕ್ಕೂ ಹೇಸುವುದಿಲ್ಲ. ವೋಟು ಕೊಡುವ ನಾವು ಒಳ್ಳೆಯವರಾಗದಿದ್ದರೆ, ವಿವೇಕಿಗಳಾಗದಿದ್ದರೆ ಇದೇ ಗತಿ. ಮುಂದಿನ ಪೀಳಿಗೆಯ ಭವಿಷ್ಯ ಅಂಧಕಾರ.

ಗೋಪಾಲರಾವ್‌, ಬೆಂಗಳೂರು

ಚಿತ್ರಮಂದಿರ: ದರ ದುಬಾರಿ

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಂತಹ ಚಿಕ್ಕ ಊರಿನಲ್ಲಿ ಚಿತ್ರಮಂದಿರದ ಟಿಕೆಟ್‌ ದರ ನೂರು ರೂಪಾಯಿ. ಇಂತಹ ಊರುಗಳಲ್ಲಿ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡಲು ಥಿಯೇಟರಿಗೆ ಬನ್ನಿ ಎಂದರೆ ಯಾರು ತಾನೆ ಬರುತ್ತಾರೆ? ಟಿಕೆಟ್‌ ದರ ಜನಸಾಮಾನ್ಯರ ಕೈಗೆ ಎಟಕುವಂತಿದ್ದರೆ ಖಂಡಿತವಾಯಿತೂ ಅವರು ಚಿತ್ರಮಂದಿರಕ್ಕೆ ಬರುತ್ತಾರೆ. ಸಂಬಂಧಪಟ್ಟವರು ಈ ದಿಸೆಯಲ್ಲಿ ಯೋಚಿಸಲಿ.

ಎಸ್‌.ಎನ್‌. ಕೃಷ್ಣಮೂರ್ತಿ, ಕಡೂರು

ತಪ್ಪನ್ನು ಪ್ರಶ್ನಿಸುವ ಕೆಚ್ಚು ಬೇಕಿದೆ 

ರಾಜ್ಯದಲ್ಲಿ ಪ್ರಭಾವಿ ರಾಜಕಾರಣಿಗಳು ಭ್ರಷ್ಟಾಚಾರದ ವಿಚಾರ
ದಲ್ಲಿ ಪರಸ್ಪರ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಲ್ಲಿ ಯಾವ ಪಕ್ಷದ ನೇತಾರನೂ ಸಾಚಾ ಅಲ್ಲ. ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ಜನ ಧ್ವನಿ ಎತ್ತಿದ್ದರೆ, ಚಳವಳಿ, ಆಂದೋಲನ ಮಾಡಿದ್ದರೆ ಈ ವಿಚಾರದಲ್ಲಿ ಅವರು ಕೊಂಚಮಟ್ಟಿಗಾದರೂ  ಭಯಪಡುತ್ತಿದ್ದರು. ಜಾತಿ ಮೋಹದಲ್ಲಿ ಸಿಲುಕಿರುವ ಮತದಾರರು ರಾಜಕಾರಣಿಗಳ ತಪ್ಪನ್ನು ಪ್ರಶ್ನಿಸುವ ಬದಲು ಭ್ರಷ್ಟರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಭ್ರಷ್ಟಾಚಾರ ಭೂತಾಕಾರ ತಳೆಯಲು ಇದೂ ಒಂದು ಪ್ರಧಾನ ಕಾರಣ.

ಟಿ. ಶಿವಮೂರ್ತಿ ಉಪ್ಪಾರ, ಕೆಸ್ತೂರು, ಯಳಂದೂರು

ಮಕ್ಕಳ ಪ್ರತಿಭೆ ಹೊರಹೊಮ್ಮಲು ವೇದಿಕೆ ಆಗಲಿ

ಕೆಲವು ವರ್ಷಗಳ ಹಿಂದೆ, ಗಣೇಶೋತ್ಸವದ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಜನಪದ ಕ್ರೀಡೆ, ಕಾವ್ಯ ಗಾಯನ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿತ್ತು. ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಮಕ್ಕಳಿಗೆ ಮತ್ತು ಯುವಕ–ಯುವತಿಯರಿಗೆ ಪ್ರೋತ್ಸಾಹ ರೂಪದಲ್ಲಿ ಬಹುಮಾನ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಬಡ್ಡಿ ಮತ್ತು ಕುಸ್ತಿ ಸ್ಪರ್ಧೆಗಳು ತಪ್ಪದೇ ನಡೆಯುತ್ತಿದ್ದವು. ಆದರೆ ಈಗ ರಸಮಂಜರಿ ಕಾರ್ಯಕ್ರಮಗಳನ್ನು ಮಾತ್ರ ಆಯೋಜಿ
ಸಲಾಗುತ್ತಿದೆ. ಮಕ್ಕಳು ಮತ್ತು ಯುವಕರಲ್ಲಿನ ಪ್ರತಿಭಾ ಪ್ರದರ್ಶನಕ್ಕೆ ಇದರಿಂದ ಯಾವ ಪ್ರಯೋಜನವೂ
ಸಿಗುತ್ತಿಲ್ಲ. ಗ್ರಾಮೀಣ ಕ್ರೀಡೆಗಳಿಗೆ ಮತ್ತು ಬೇರೆ ಬೇರೆ ಬಗೆಯ ಪ್ರತಿಭೆ ಹೊರಹೊಮ್ಮಲು ಈ ಉತ್ಸವವು
ವೇದಿಕೆ ಆಗಲಿ.

ಬಸಪ್ಪ ಯ. ಬಂಗಾರಿ, ಬೆಂಗಳೂರು

ಆಹಾರ ಉತ್ಪನ್ನ: ಜನಸಾಮಾನ್ಯರಿಗೆ ಸಿಗಲಿ 

ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‌ಐ) ನಿರಂತರವಾಗಿ ಒಂದಿಲ್ಲೊಂದು ಹೊಸ ಆಹಾರ ಉತ್ಪನ್ನವನ್ನು ಸಂಶೋಧಿಸಿ, ಬಿಡುಗಡೆ ಮಾಡುತ್ತಿದೆ. ಅಚ್ಚರಿಯೆಂದರೆ ಈ ಉತ್ಪನ್ನಗಳು ಎಲ್ಲಿ ಸಿಗುತ್ತವೆ, ಯಾರಿಗೆ ಮಾರಾಟವಾಗುತ್ತವೆ ಎನ್ನುವುದು ಜನಸಾಮಾನ್ಯರಿಗೆ ತಿಳಿಯುವುದೇ ಇಲ್ಲ. ಮಾರುಕಟ್ಟೆ ಮಾಡದೇ ಇದ್ದರೆ, ಈ ಉತ್ಪನ್ನಗಳು ಕೇವಲ ಸಂಶೋಧನಾ ಹಂತಕ್ಕೆ ಸೀಮಿತವಾಗುತ್ತವೆ. ಅಲ್ಲದೇ, ಇಲ್ಲಿ ಸಂಶೋಧಿತವಾಗುವ ಉತ್ಪನ್ನಗಳನ್ನು ಬಹುರಾಷ್ಟ್ರೀಯ ಕಂಪನಿಗಳು ಅಥವಾ ದೊಡ್ಡ ದೊಡ್ಡ ವ್ಯಾಪಾರಿ ಸಂಸ್ಥೆಗಳ
ವರಿಗೇ ನೀಡುವಂತಾದರೆ ಅದರಿಂದ ಜನಸಾಮಾನ್ಯರಿಗೆ ಅಷ್ಟೇನೂ ಪ್ರಯೋಜನವಾಗದು. ನಮ್ಮ ದೇಶದಲ್ಲಿ ಅಪೌಷ್ಟಿಕತೆ ಎನ್ನುವುದು ಬಹುದೊಡ್ಡ ಸಮಸ್ಯೆಯಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳುಳ್ಳ ಆಹಾರೋತ್ಪನ್ನಗಳನ್ನು ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಗಳಲ್ಲಿ ನೀಡುವುದರತ್ತವೂ ಗಮನಹರಿಸಿದಲ್ಲಿ ಸಂಸ್ಥೆಯ ಶ್ರಮ ಸಾರ್ಥಕವಾಗುತ್ತದೆ.
ಸದೃಢ– ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದಂತಾಗುತ್ತದೆ. 

ಚನ್ನು ಅ. ಹಿರೇಮಠ, ರಾಣೆಬೆನ್ನೂರು

ಕೇಂದ್ರವು ಒಂದೇ ತಕ್ಕಡಿಯಲ್ಲಿ ತೂಗಲಿ

ಕೇಂದ್ರ ಸರ್ಕಾರವು ಗೋವಾ– ತಮ್ನಾರ್‌ ವಿದ್ಯುತ್ ಮಾರ್ಗದ ಯೋಜನೆಗೆ ತೋರಿಸಿದ ಆಸಕ್ತಿಯನ್ನು ಕರ್ನಾಟಕದ ಮಹದಾಯಿ ಯೋಜನೆಗೂ ತೋರಿಸಲಿ. ಈ ಎರಡೂ ಯೋಜನೆಗಳು ಮಾನವನ ಜೀವನಕ್ಕೆ ಅತ್ಯುಪಯುಕ್ತವಾದ ವಿದ್ಯುತ್ ಮತ್ತು ಕುಡಿಯುವ ನೀರು ಪೂರೈಸುವ ಯೋಜನೆಗಳಾಗಿವೆ. ಇಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳು ಒಂದೇ ತಕ್ಕಡಿಯಲ್ಲಿ ತೂಗಿ, ಅವುಗಳಿಗೆ ಅನುಮತಿ ಮತ್ತು ಅನುದಾನ ಒದಗಿಸಬೇಕು.

ಅರಣ್ಯ ಮತ್ತು ಪರಿಸರದ ನೆಪದಲ್ಲಿ ಮಹದಾಯಿ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಗೋವಾ ಸರ್ಕಾರದ ನಡೆಯನ್ನು ಕೇಂದ್ರ ಸರ್ಕಾರ ಒಮ್ಮೆ ಬರಿಗಣ್ಣಿನಿಂದ ನೋಡಲಿ. ಗೋವಾದ ವಿದ್ಯುತ್ ಯೋಜನೆಗೆ ಸಹಕಾರ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿಯವರು ಗೋವಾ ಸರ್ಕಾರಕ್ಕೂ ಇದೇ ರೀತಿ ಪತ್ರ ಬರೆದು ಕರ್ನಾಟಕದ ಮಹದಾಯಿ  ಯೋಜನೆಗೆ ಸಹಕರಿಸುವಂತೆ ಸೂಚಿಸಲಿ.

ಗಣಪತಿ ನಾಯ್ಕ್, ಕಾನಗೋಡ

ಸಾಧಕರ ಮಿಂಚು!

ಪ್ಯಾರಾಲಿಂಪಿಕ್ಸ್‌ನಲ್ಲಿ 
ಭಾರತದ ಪ್ರತಿಭೆಗಳ ಸಾಧನೆ
ಸಾಬೀತು
ಪದಕಗಳು ಮೇಲಿಂದ ಮೇಲೆ
ಹೆಚ್ಚಾಯ್ತು!
ಚಿನ್ನ ಬೆಳ್ಳಿ ಕಂಚು...
ಎಲ್ಲದರಲ್ಲೂ ಭಾರತೀಯರು 
ಮಿಂಚು ಮಿಂಚು!

ಹರಳಹಳ್ಳಿ ಪುಟ್ಟರಾಜು
ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT