ಅಹಿತಕರ ಬೆಳವಣಿಗೆ ತಡೆಯಬೇಕಿದೆ
ರಾಜಕಾರಣಿಗಳ ನಡುವೆ ಆರೋಪ– ಪ್ರತ್ಯಾರೋಪ, ಭಾಷಾ ಮರ್ಯಾದೆ ಮರೆತ ಮಾತುಗಳು ಪುಂಖಾನುಪುಂಖವಾಗಿ ಉದುರುತ್ತವೆ. ಪ್ರತಿದಿನವೂ ಈ ಸುಪ್ರಭಾತವನ್ನು ಕೇಳಿ ಕೇಳಿ ಇದಕ್ಕೆ ಜನ ಹೊಂದಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ರಾಜಕೀಯದಿಂದ ದೂರವಿರುತ್ತಾರೆ. ಅಧಿಕಾರದಲ್ಲಿ ಇರುವವರ ಪರ ರಾಜಕೀಯ ಮಾಡಿದರೂ ಅದು ತೆರೆಮರೆಯಲ್ಲಿ ನಡೆಯುವಂತಹದ್ದು. ಆರೋಪಿಗಳನ್ನು ಬಂಧಿಸುವಲ್ಲಿ, ಗಲಭೆ ನಿಯಂತ್ರಿಸುವಲ್ಲಿ ಇದು ಎದ್ದು ಕಂಡರೂ ಅದು ನೇರ ರಾಜಕೀಯವಂತೂ ಅಲ್ಲವೇ ಅಲ್ಲ. ಆದರೆ ಈಗ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಒಬ್ಬ ಕೇಂದ್ರ ಸಚಿವರ ಮಧ್ಯೆ ನಡೆದಿರುವ ವಾಕ್ಸಮರ ಜನರನ್ನು ಬೆಚ್ಚಿ ಬೀಳಿಸುವಂತಿದೆ. ಇದು ಅತ್ಯಂತ ಕೆಟ್ಟ ಬೆಳವಣಿಗೆ. ಉಳಿದ ಅಧಿಕಾರಿಗಳಿಗೆ ಇದು ಪ್ರೇರಕವಾದರೆ ಆಡಳಿತ ಅಡ್ಡಾದಿಡ್ಡಿ ಆಗುವುದರಲ್ಲಿ ಸಂಶಯವಿಲ್ಲ.
ರಾಜಕಾರಣಿಗಳು ಸ್ವತಂತ್ರರು. ಆದರೆ ಅಧಿಕಾರಿಗಳಿಗೆ ಇಲಾಖೆ ಯಲ್ಲಿ ತನ್ನದೇ ಆದ ನೀತಿ ನಿಯಮಗಳಿರುತ್ತವೆ. ಅವುಗಳನ್ನು ಮಾತಲ್ಲಾಗಲಿ ನಡತೆಯಲ್ಲಾಗಲಿ ಮೀರಿ ನಡೆದರೆ ಮೇಲಧಿಕಾರಿಗಳಿಗೆ ಅವರನ್ನು ವಿಚಾರಿಸಿಕೊಳ್ಳುವ ಅಧಿಕಾರವಿದೆ. ಇಂತಹ ಪ್ರಸಂಗಗಳಲ್ಲಿ ಮೌನ ಪ್ರೇಕ್ಷಕರಾಗದೆ ಕಾಲಕಾಲಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಸಂಭವ ಇರುತ್ತದೆ. ಹೀಗಾಗಿ, ಈ ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿ ಅಹಿತಕರ ಬೆಳವಣಿಗೆ ತಡೆಯುವುದು ಅಗತ್ಯ.
⇒ಸತ್ಯಬೋಧ, ಬೆಂಗಳೂರು
ನೇಮಕಾತಿ ಪ್ರಕ್ರಿಯೆ ಸಕಾಲದಲ್ಲಿ ಪೂರ್ಣಗೊಳ್ಳಲಿ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಗಸ್ಟ್ ತಿಂಗಳಿನಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆಸಿದ ಪರೀಕ್ಷೆಗಳನ್ನು ರದ್ದುಪಡಿಸಿ ಒಂದು ತಿಂಗಳು ಕಳೆಯಿತು. ಈಗ ಈ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳ ಕನ್ನಡ ಭಾಷಾಂತರದಲ್ಲಿ ಆಗಿರುವ ತಪ್ಪುಗಳ ಬಗ್ಗೆ ತಜ್ಞರ ಸಮಿತಿಯು ಕೆಪಿಎಸ್‌ಸಿಗೆ ವರದಿ ನೀಡಿದೆ ಎಂಬ ವಿಷಯ ಹೊರಬಿದ್ದಿದೆ. ಆದರೆ ಮರುಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲು ಕೆಪಿಎಸ್‌ಸಿಗೆ ಇನ್ನೂ ಸಾಧ್ಯವಾಗಿಲ್ಲ. ಹೀಗೆ ನೇಮಕಾತಿ ಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ತಡವಾಗುತ್ತಿರುವುದು ನಮ್ಮ ವ್ಯವಸ್ಥೆಯ ಭಾಗವಾಗಿ ಹೋಗಿದೆ. ಯಾವುದೂ ನಿಶ್ಚಿತವಾಗಿ ನಡೆಯುವುದಿಲ್ಲ.
ನಮ್ಮಲ್ಲಿ ಉದ್ಯೋಗಾವಕಾಶಕ್ಕಾಗಿ ಕಾದು ನಿಂತಿರುವ ಲಕ್ಷಾಂತರ ಆಕಾಂಕ್ಷಿಗಳಿದ್ದಾರೆ. ಹಿಂದಿನ ಕೆಲವು ವರ್ಷಗಳಿಂದ ರಾಜ್ಯ ಸರ್ಕಾರದ ಹುದ್ದೆಗಳಿಗೆ ನೇಮಕಾತಿಯಿಲ್ಲದೆ, ಉನ್ನತ ಶಿಕ್ಷಣ ಪಡೆದಿರುವ ಯುವಜನ
ನಿರಾಶರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಈಗಿನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಉದ್ಯೋಗ ಆಕಾಂಕ್ಷಿಗಳಲ್ಲಿ ಭರವಸೆಯನ್ನೇನೊ ಮೂಡಿಸಿತು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಾಲಮಿತಿಯಲ್ಲಿ ನಡೆಸದಿರುವುದು ಕಂಡುಬರುತ್ತಿದೆ. ನಡೆಸಿದ ಪರೀಕ್ಷೆಗಳಲ್ಲಿ ಎಡವಟ್ಟುಗಳು! ನೇಮಕಾತಿ ಪರೀಕ್ಷೆಗಳು ಇನ್ನು ಮುಂದಾದರೂ ಲೋಪ, ತಪ್ಪುಗಳಿಗೆ ಆಸ್ಪದವಿಲ್ಲದಂತೆ ಕಾಲಮಿತಿಯಲ್ಲಿ ನಡೆದು ಸಕಾಲದಲ್ಲಿ ನೇಮಕಾತಿಗೆ ಚಾಲನೆ ಸಿಗಲಿ.
⇒ಹರೀಶ್ ಕುಮಾರ್ ಕುಡ್ತಡ್ಕ, ಮಂಗಳೂರು
ಶಾಲೆಯಲ್ಲೇ ಮೌಢ್ಯ: ಆಘಾತಕಾರಿ ಬೆಳವಣಿಗೆ
‘ಉತ್ತರಪ್ರದೇಶದ ಶಾಲೆಯೊಂದರಲ್ಲಿ ಮತ್ತಷ್ಟು ಸಮೃದ್ಧಿ ಉಂಟಾಗಲಿ ಎಂಬ ಕಾರಣಕ್ಕೆ ಶಾಲೆಯ ಮಾಲೀಕ ಮತ್ತು ಆತನ ಸಹಚರರು ಒಬ್ಬ ವಿದ್ಯಾರ್ಥಿಯನ್ನೇ ಬಲಿ ನೀಡಿ ಮೌಢ್ಯ ಮೆರೆದಿರುವುದು (ಪ್ರ.ವಾ., ಸೆ. 28) ಆಘಾತಕಾರಿ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿ, ಆ ಮೂಲಕ ಶಾಲೆಯ ಏಳ್ಗೆಯನ್ನು ಸಾಧಿಸಬೇಕಾದ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಯ ಜೀವವನ್ನೇ ಬಲಿ ಕೊಟ್ಟು ವಿಕೃತಿ ಮೆರೆದಿರುವುದು ಅಕ್ಷಮ್ಯ.
ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರಗಳನ್ನು ಶಿಕ್ಷಣದ ಮೂಲಕ ತೊಡೆದುಹಾಕಬೇಕಾದ
ಶಿಕ್ಷಣ ಸಂಸ್ಥೆಗಳಲ್ಲೇ ಈ ರೀತಿಯ ಪ್ರಕರಣಗಳು ನಡೆದರೆ ಸಮಾಜಕ್ಕೆ ಎಂತಹ ಸಂದೇಶ ತಲುಪುತ್ತದೆ?
ಸಮಾಜಕ್ಕೆ ಬೆಳಕಿನ ದಾರಿ ತೋರಿಸಬೇಕಾದ ಶಿಕ್ಷಕರು ಇಂತಹ ಮೂಢನಂಬಿಕೆಗಳ ಪೋಷಕರಾದರೆ ಮಕ್ಕಳಿಗೆ ಇವರು ಏನನ್ನು ಬೋಧಿಸುತ್ತಾರೆ? ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿ.
⇒ಆನಂದ ಎನ್.ಎಲ್., ಅಜ್ಜಂಪುರ
ಬೆಂಗಳೂರನ್ನೇ ಆಯ್ಕೆ ಮಾಡಿದ್ದೇಕೆ?
ಸರ್ಕಾರದ ಪ್ರತಿ ಮಹತ್ವಾಕಾಂಕ್ಷಿ ಯೋಜನೆಗೂ ಹೆಚ್ಚಾಗಿ ಬೆಂಗಳೂರನ್ನೇ ಆಯ್ಕೆ ಮಾಡುವುದು ಸೂಕ್ತವಲ್ಲ. ಬೆಂಗಳೂರನ್ನು ಬೆಳೆಸಿದ್ದು ಸಾಕು. ಅದು ನಮ್ಮ ಅಳತೆಗೂ ಮೀರಿ ಬೆಳೆದು ನಿಂತಿದೆ. ಈಗ ಏನಿದ್ದರೂ ಅದನ್ನು ಉಳಿಸುವ ಕಾರ್ಯಕ್ಕೆ ಯೋಜನೆ ರೂಪಿಸಬೇಕಾಗಿದೆ. ‘ಕ್ವಿನ್ ಸಿಟಿ’ ಎಂಬ ಮಹತ್ವದ ಯೋಜನೆಗೂ ಪುನಃ ಬೆಂಗಳೂರನ್ನೇ ಆಯ್ಕೆ ಮಾಡುವ ಬದಲು ರಾಜ್ಯದ ಇತರ ಜಿಲ್ಲೆಗಳನ್ನು ಪರಿಗಣಿಸಬಹುದಿತ್ತು. ಅಲ್ಲಿ ಇಂತಹ ಯೋಜನೆ ಕಾರ್ಯರೂಪಕ್ಕೆ ಬಂದರೆ ಅಲ್ಲೇ ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಜನ ಬೆಂಗಳೂರಿಗೆ ವಲಸೆ ಬರುವುದು ತಪ್ಪುತ್ತದೆ. ಹಾಗೂ ಸುತ್ತಮುತ್ತಲಿನ ಇತರ ಜಿಲ್ಲೆಗಳಿಗೂ ಅನುಕೂಲವಾಗುತ್ತದೆ. ಇಷ್ಟು ಮಾತ್ರವಲ್ಲದೆ ಆ ಜಿಲ್ಲೆಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೂ ಆದ್ಯತೆ ನೀಡಿದಂತಾಗುತ್ತದೆ.
ಬೆಂಗಳೂರಿನಲ್ಲಿ ನೀರು ಪೂರೈಕೆ ಹಾಗೂ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಹೆಚ್ಚುತ್ತಿರುವಾಗ, ಪುನಃ ಇಂತಹ ಯೋಜನೆಯಿಂದ ಪರಿಸರದ ಮೇಲೆ ಬೀಳುವ ಒತ್ತಡದ ಬಗ್ಗೆ ಯೋಚಿಸುವುದು ಒಳಿತು.
⇒ಸುರೇಂದ್ರ ಪೈ, ಭಟ್ಕಳ
ಯಾರು ಏನೇ ಹೇಳಲಿ,
ಸರ್ಕಾರಕ್ಕೆ ಬರೋಬ್ಬರಿ
ಆದಾಯ ತರುವ
ಇಲಾಖೆಯೇ ಅಬಕಾರಿ!
ಮದ್ಯದಂಗಡಿಯ ಸನ್ನದು
ನೀಡಲು, ಪಡೆಯಲು
ನಡೆದಿದೆಯಂತೆ ತಯಾರಿ...
ಯಾರಿಗೆ ಒಡೆಯುತ್ತದೆಯೋ
ಗೊತ್ತಿಲ್ಲ ಲಾಟರಿ?!
ಮ.ಗು.ಬಸವಣ್ಣ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.