ಸೌಹಾರ್ದ ಸಂಸ್ಕೃತಿ: ವಿವಿಧ ನೆಲೆಯಲ್ಲಿರಲಿ
ರಾಜ್ಯದ ಶಾಲಾ ಕಾಲೇಜು ವಿದ್ಯಾರ್ಥಿಗಳ ನಡುವೆ ಸೌಹಾರ್ದ ಮೂಡಿಸಲು ಪುಸ್ತಕ ಪ್ರಕಟಣೆ ಜೊತೆಗೆ ಸೌಹಾರ್ದ ಸಮಾವೇಶಗಳನ್ನು ಆಯೋಜಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿರುವುದು
(ಪ್ರ.ವಾ., ಆ. 13) ಉತ್ತಮ ನಡೆ ಮತ್ತು ಪುಸ್ತಕಗಳು ಪ್ರಕಟವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರಸ್ತುತ ಪೀಳಿಗೆಯು 50 ಪುಟಗಳಿಗಿಂತ ಹೆಚ್ಚಾಗಿರುವ ಕನ್ನಡ ಭಾಷೆಯ ಪುಸ್ತಕಗಳನ್ನು ಓದಲು ಆಸಕ್ತಿ ತೋರುತ್ತಿಲ್ಲ ಎಂಬ ಮಾತಿದೆ. ಬರೀ ಪುಸ್ತಕ ಪ್ರಕಟಣೆಗಿಂತ ಸೌಹಾರ್ದ ಸಂಸ್ಕೃತಿಯನ್ನು ಬಿಂಬಿಸುವಂತಹ ವಿಚಾರಗೋಷ್ಠಿಗಳು, ಸಮ್ಮೇಳನಗಳು, ಗುಂಪು ಚರ್ಚೆಗಳು, ಸಂವಾದ ಕಾರ್ಯಕ್ರಮಗಳನ್ನು ನಡೆಸುವುದು ಬಹಳ ಅವಶ್ಯ. ನಮ್ಮ ಪ್ರಮುಖ ಬರಹಗಾರರ ಚಿಂತನೆಗಳ ಅವಲೋಕನ ಮತ್ತು ಅಂತರ್ ಶಾಲಾ–ಕಾಲೇಜು ಕಾರ್ಯಾಗಾರಗಳನ್ನು ನಡೆಸುವುದು ಖಂಡಿತವಾಗಿಯೂ ಸೌಹಾರ್ದ ಸಂಸ್ಕೃತಿಯನ್ನು ಹೆಚ್ಚಿಸುತ್ತದೆ.
⇒ಕಡೂರು ಫಣಿಶಂಕರ್, ಬೆಂಗಳೂರು
ಸೌಲಭ್ಯವಂಚಿತರಿಗೆ ಮೀಸಲಾಗಲಿ
ಒಳಮೀಸಲಾತಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಬೇಕಾದ ಅಗತ್ಯವನ್ನು ವಾದಿರಾಜ್ ತಮ್ಮ ಲೇಖನದಲ್ಲಿ (ಸಂಗತ, ಆ. 13) ಪ್ರತಿಪಾದಿಸಿದ್ದಾರೆ. ಮೀಸಲಾತಿಯ ಅವಕಾಶವನ್ನು ಈಗಾಗಲೇ ಪಡೆದುಕೊಂಡು ಕೋಟ್ಯಧೀಶರಾಗಿರುವ ರಾಜಕಾರಣಿಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅಂತೆಯೇ ಉನ್ನತ ಅಧಿಕಾರಿಗಳಿದ್ದಾರೆ. ಅವರೆಲ್ಲರಿಗೂ ಮತ್ತೆ ಮೀಸಲಾತಿ ಕೊಟ್ಟರೆ ಅವಕಾಶವಂಚಿತ ಬಡವರ ಗತಿ ಏನು? ಹಾಗಾಗಿಯೇ ಕೆನೆಪದರದ ಕುರಿತು ಸುಪ್ರೀಂ ಕೋರ್ಟ್ ಸೂಚ್ಯವಾಗಿ ತೀರ್ಪಿನಲ್ಲಿ ಪ್ರಸ್ತಾಪಿಸಿರುವುದು. ಇದನ್ನು ಲೇಖನವು ಪ್ರಸ್ತಾಪಿಸದಿರುವುದು ಗಮನ ಸೆಳೆಯಿತು. ತೀರ್ಪಿನ ಮೂಲ ಉದ್ದೇಶವೇ ಪರಿಶಿಷ್ಟರ ಒಳಪಂಗಡಗಳಲ್ಲಿರುವ ಕಡುಬಡವರಿಗೆ ಮೀಸಲು ಸೌಲಭ್ಯ ಸಿಗಬೇಕು ಎನ್ನುವುದಾಗಿದೆ.
ಮೀಸಲಾತಿಯು ನ್ಯಾಯಸಮ್ಮತ ರೀತಿಯಲ್ಲಿ ಅದರಲ್ಲೂ ಪರಿಶಿಷ್ಟರಲ್ಲಿರುವ ಸೌಲಭ್ಯವಂಚಿತರಿಗೆ ಸಿಗುವಂತಾದರೆ ಅಂತಹವರು ಮೇಲೆ ಬರಲು ಅನುವಾಗುತ್ತದೆ. ಇಲ್ಲದೇಹೋದರೆ ದೊಡ್ಡ ಮೀನು ಸಣ್ಣ ಮೀನನ್ನು ನುಂಗಿದಂತಾಗಿ, ಮುಂದೊಂದು ದಿನ ಒಳಮೀಸಲಾತಿಯಲ್ಲೇ ಶ್ರೀಮಂತರು ಮತ್ತು ಬಡವರು ಎಂಬ ಬಣಗಳು ಹುಟ್ಟಿಕೊಳ್ಳಲು ಕಾರಣವಾಗಬಹುದು. ಈ ಬಗ್ಗೆ ಸರ್ಕಾರ ಅಧ್ಯಯನ ನಡೆಸಿ, ಅವಶ್ಯಕತೆ ಇರುವವರಿಗೆ ಮಾತ್ರ ಸೌಲಭ್ಯ ನೀಡಿದಲ್ಲಿ ಈ ಕುರಿತ ಮೂರು ದಶಕಗಳ ಹೋರಾಟಕ್ಕೆ ಅರ್ಥ ಬರುತ್ತದೆ.
ಡಿ.ಪ್ರಸನ್ನಕುಮಾರ್, ಬೆಂಗಳೂರು
ಊರ ಹೊರಗೆ ಏರ್ಪಡಿಸಲೂ ಲಾಯಕ್ಕಲ್ಲ
ರಾಜಕೀಯ ಪಕ್ಷಗಳು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ನಡೆಸಿದ ಸಮಾವೇಶಗಳಿಂದ ಸ್ಥಳೀಯರು ತೊಂದರೆ ಅನುಭವಿಸಿದ್ದನ್ನು ವಿವರಿಸಿರುವ ಬೂಕನಕೆರೆ ವಿಜೇಂದ್ರ (ಪ್ರ.ವಾ., ಆ. 13), ‘ರಾಜಕೀಯ ಸಮಾವೇಶ ಊರ ಹೊರಗಿರಲಿ’ ಎಂದಿದ್ದಾರೆ. ರಾಜಕೀಯ ಪಕ್ಷಗಳು ಪಾತಾಳಕ್ಕಿಳಿದಿರುವ ವಾಸ್ತವ ಚಿತ್ರಣವು ಮೈಸೂರಿನಲ್ಲಿ ನಡೆದ ಸಮಾವೇಶಗಳಲ್ಲಿ ಕಾಣಸಿಗುತ್ತದೆ. ಈ ಚಿತ್ರಪ್ರದರ್ಶನದಲ್ಲಿ ಎದ್ದು ಕಾಣಿಸಿದ್ದು ಆಯಾ ಪಕ್ಷದ ನಾಯಕಮಣಿಗಳೇ. ಆದರೆ ದುರಂತ ಸಂಗತಿ ಬೇರೆ ಇದೆ. ಇಂತಹ ರಾಜಕೀಯ ಪ್ರದರ್ಶನವನ್ನು ಯಾವುದೇ ವಿದ್ಯಾಸಂಸ್ಥೆಯ ಪರಿಸರದಲ್ಲಿ ಏರ್ಪಡಿಸುವುದು ಬೇಡವೆಂಬ ತಿಳಿವಳಿಕೆಯೂ ಇಲ್ಲದೇ ಹೋಯಿತು. ಮಹಾರಾಜ ಕಾಲೇಜು ಈ ಸಮಾವೇಶಗಳಿಗೆ ಅವಕಾಶ ಮಾಡಿಕೊಟ್ಟಿದ್ದಾದರೂ ಯಾಕೆ? ಇಂಥ ಸಮಾವೇಶಗಳು ಊರ ಹೊರಗೆ ಏರ್ಪಡಿಸಲೂ ಲಾಯಕ್ಕಲ್ಲ. ಏಕೆಂದರೆ ಪಕ್ಷಕ್ಕೆ ಅಪಕೀರ್ತಿ, ಸಾಮಾನ್ಯ ಜನರಿಗೆ ವಿನಾಕಾರಣ ತೊಂದರೆ.
⇒ಸಾಮಗ ದತ್ತಾತ್ರಿ, ಬೆಂಗಳೂರು
ಮಾತೃಭಾಷಾ ಮಾಧ್ಯಮ: ವಿಷಯಗ್ರಹಿಕೆ ತೊಡಕಾಗದು
‘ಭಾರತದಲ್ಲಿ ಹಿಂದಿಯೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿಯೇ ಶಿಕ್ಷಣ ನೀಡಬೇಕು ಎಂಬ ಆಗ್ರಹವಿದೆ. ಆದರೆ ಎಂಜಿನಿಯರ್, ಡಾಕ್ಟರ್ ಆಗಬೇಕು ಎಂದುಕೊಳ್ಳುವವರು ಮಾತೃಭಾಷೆಯಲ್ಲೇ ಓದಿದರೆ ಆಗುವುದಿಲ್ಲ’ ಎಂದು ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ಹೇಳಿರುವುದು (ಪ್ರ.ವಾ., ಆ. 12) ಆಶ್ಚರ್ಯವನ್ನು ಉಂಟುಮಾಡುತ್ತದೆ. ಏಕೆಂದರೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕರು ಎಂಜಿನಿಯರುಗಳು, ಡಾಕ್ಟರುಗಳು ಆಗಿದ್ದಾರೆ. 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ, ಅದರಲ್ಲೂ ವೈದ್ಯಕೀಯ ಅಥವಾ ತಾಂತ್ರಿಕ ಶಿಕ್ಷಣವನ್ನು ಆರಿಸಿಕೊಳ್ಳಬೇಕೆಂಬ ಗುರಿಯುಳ್ಳ ವಿದ್ಯಾರ್ಥಿಗಳಿಗೆ ವಿಷಯ ಜ್ಞಾನವು ಚೆನ್ನಾಗಿ ಕರಗತವಾಗಿರುತ್ತದೆ. ಹೀಗಾಗಿ, ನಂತರ ಅವರು ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕಾದ ಸಂದರ್ಭ ಬಂದರೂ ವಿಷಯಗ್ರಹಿಕೆ ಅಷ್ಟು ತೊಡಕಾಗದು. ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಮಾತೃಭಾಷಾ ಮಾಧ್ಯಮದಲ್ಲಿಯೇ ನೀಡಬೇಕು ಎಂಬುದು ಜಗತ್ತಿನ ಶಿಕ್ಷಣ ತಜ್ಞರ ಒಮ್ಮತಾಭಿಪ್ರಾಯ ಎಂಬುದನ್ನು ಗಂಭೀರವಾಗಿ ಪರಿಗಣಿಸದಿರುವುದು ನಮ್ಮ ದೇಶದ ದುರಂತ. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಿರುವವರು ಮತ್ತು ಮಾಡಬೇಕೆಂದಿರುವವರು ಯಾವುದೇ ಕಾರಣಕ್ಕೂ
ಅಧೀರರಾಗಬೇಕಿಲ್ಲ.
⇒ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.