ವಿದ್ಯುತ್ ಸಂಪರ್ಕಕ್ಕೆ ನೂರಾರು ಸಬೂಬು

ಗ್ರಾಮ ಪಂಚಾಯಿತಿ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಗಳಲ್ಲಿ ಇ–ಸ್ವತ್ತು ಪಡೆಯಲು ಜನರು ಪರದಾಡುತ್ತಿದ್ದಾರೆ. ಸಿಬ್ಬಂದಿ ಕೊರತೆ, ತಂತ್ರಾಂಶದ ದೋಷ, ಹೀಗೆ ಕಚೇರಿಯಲ್ಲಿ ಹಲವು ಸಬೂಬುಗಳು ಎದುರಾಗುತ್ತವೆ. ಈಗ ಜನ ಗಣತಿಯು ಹೊಸದೊಂದು ಸಬೂಬಾಗಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಸಿಗದೆ ಮನೆಗಳ ನಿರ್ಮಾಣ ಸ್ಥಗಿತಗೊಂಡಿದೆ. ಇ–ಖಾತೆ, ಒಸಿ ಹಾಗೂ ನಕ್ಷೆ ಮಂಜೂರಾತಿ ದಾಖಲೆಗಳಿಲ್ಲದೆ, ವಿದ್ಯುತ್ ಸಂಪರ್ಕ ದೊರೆಯುತ್ತಿಲ್ಲ. ಶಾಶ್ವತ ವಿದ್ಯುತ್ ಸಂಪರ್ಕ ಪಡೆಯುವಾಗ ಈ ದಾಖಲೆಗಳನ್ನು ಹಾಜರುಪಡಿಸುವಂತೆ ಲಿಖಿತ ಕರಾರುಪತ್ರ ಪಡೆದು ತಾತ್ಕಾಲಿಕ ಸಂಪರ್ಕ ನೀಡಿದರೆ, ಕಟ್ಟಡ ನಿರ್ಮಾಣದ ಕೆಲಸಗಳು ಸುಗಮವಾಗಲಿವೆ. ಕಾರ್ಮಿಕರ ತುತ್ತಿನ ಚೀಲವೂ ತುಂಬಲಿದೆ.

⇒ಉದಂತ ಶಿವಕುಮಾರ, ಬೆಂಗಳೂರು

ಮೆಚ್ಚಿಸುವ ಹಂಗು; ವಂಚನೆಯ ಸೋಂಕು

ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯದ ಹಸ್ತಕ್ಷೇಪ ಹೆಚ್ಚುತ್ತಿರುವುದು ಆತಂಕಕಾರಿ. ಪಠ್ಯಕ್ರಮ, ನೀತಿಗಳು ಮತ್ತು ನೇಮಕಾತಿಯು ರಾಜಕೀಯ ಪ್ರಭಾವಕ್ಕೆ ಒಳಗಾಗಿವೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಬಲಿಯಾಗುತ್ತದೆ. ಶಿಕ್ಷಣವು ಜ್ಞಾನ ನೀಡುವ ಕ್ಷೇತ್ರವಾಗಿರಬೇಕು. ಆದರೆ, ಈಗ ರಾಜಕೀಯ ಪ್ರಚಾರದ ವೇದಿಕೆಯಾಗಿ ಬದಲಾಗಿದೆ. ಶಿಕ್ಷಣ ನೀತಿಗಳು ವಿದ್ಯಾರ್ಥಿಗಳ ಹಿತಕ್ಕಾಗಿ ರೂಪುಗೊಳ್ಳಬೇಕೇ ಹೊರತು, ರಾಜಕೀಯ ಪಕ್ಷಗಳ ಲಾಭಕ್ಕಾಗಿ ಅಲ್ಲ. ರಾಜಕೀಯದ ನೆರಳು ಶಿಕ್ಷಣದ ಮೇಲೆ ಬಿದ್ದಾಗ ಸಮಾನತೆ ಮತ್ತು ಗುಣಮಟ್ಟ ಎರಡೂ ಹದಗೆಡುತ್ತದೆ. ಶಿಕ್ಷಣವನ್ನು ರಾಜಕೀಯದಿಂದ ದೂರ ಇಡುವುದು ಅನಿವಾರ್ಯ ಹಾಗೂ ಅವಶ್ಯಕ.

⇒ಕೆ.ಎಂ. ಪವಿತ್ರಾ, ಮುರ್ಡೇಶ್ವರ

ಹೂಗಳ ಸೌಂದರ್ಯಕ್ಕೆ ಜಿಬಿಎ ಕುರುಡು

ಜಪಾನ್ನಲ್ಲಿ ಚೆರ್ರಿ ಹೂಗಳು ಅರಳುವ ಕಾಲವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಲಾಗುತ್ತದೆ. ಆ ದೇಶದಲ್ಲಿ ಚೆರ್ರಿ ಹೂಗಳನ್ನು ನೋಡಲು ಜನರು ದೇಶವಿಡೀ ಸುತ್ತುತ್ತಾರೆ. ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಆ ಕುರಿತು ನಾಟಕಗಳು, ಕವಿತೆಗಳು ಇವೆ. ಬೆಂಗಳೂರಿನಲ್ಲೂ ಚೆರ್ರಿ ಹೂಗಳನ್ನು ಮೀರಿಸುವಂತೆ ತಬೂಬಿಯಾ ಮರಗಳು ಹೂ ಅರಳಿಸಿ ಕಣ್ಮನ ತಣಿಸುತ್ತಿವೆ. ಈ ಸಂದರ್ಭವನ್ನು ಜನರಲ್ಲಿ ಸೌಂದರ್ಯಪ್ರಜ್ಞೆ, ಪರಿಸರ ಕಾಳಜಿ ಬೆಳೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬಳಸಬಹುದು. ಆದರೆ, ಅಂತಹ ಕಾರ್ಯ ನಡೆಯುತ್ತಿಲ್ಲ. ಅಭಿವೃದ್ಧಿಯ ಹೊಡೆತಕ್ಕೆ ಬಹುಪಾಲು ಮರಗಳು ನೆಲಕ್ಕುರುಳಿವೆ. ಐವತ್ತು ವರ್ಷದ ಹಿಂದೆಯೇ ಆಗಿನ ಮುಖ್ಯಮಂತ್ರಿ ದೇವರಾಜ ಅರಸುರವರು ಮನೆ ಕಟ್ಟುವಾಗ ಗಿಡ ನೆಡುವುದನ್ನು ಕಡ್ಡಾಯಗೊಳಿಸಿದ್ದರು. ಈಗಿನ ಪರಿಸ್ಥಿತಿ ಅಯೋಮಯವಾಗಿದೆ.

⇒ಮಧುಸೂದನ್ ಬಿ.ಎಸ್., ಬೆಂಗಳೂರು

ವನ್ಯಜೀವಿಗಳಿಗೆ ಬದುಕುವ ಹಕ್ಕು ಇಲ್ಲವೆ?

‘ವನ್ಯಜೀವಿಗಳ ಸಂತಾನಶಕ್ತಿ ಹರಣಕ್ಕೆ ಚರ್ಚೆ’ ವರದಿ (ಪ್ರ.ವಾ., ಏ. 9) ಓದಿ ಆಘಾತವಾಯಿತು. ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಇದು ಪರಿಹಾರವಲ್ಲ; ಸರ್ಕಾರವು ಈ ಕುರಿತ ಚಿಂತನೆ ನಿಲ್ಲಿಸಿದರೆ ವನ್ಯಜೀವಿ ಸಂಕುಲಕ್ಕೆ ಒಳಿತು. ಅಭಿವೃದ್ಧಿ ಹೆಸರಿನಡಿ ನಡೆಯುವ ಅರಣ್ಯ ಪ್ರದೇಶದ ಒತ್ತುವರಿ ನಿಯಂತ್ರಿಸುವುದೇ ಸಂಘರ್ಷ ತಡೆಗಿರುವ ಮದ್ದು. ಆವಾಸ ನಾಶ, ಕಳ್ಳಬೇಟೆಯಿಂದಾಗಿ ವನ್ಯಜೀವಿಗಳು ನಲುಗಿವೆ.
ನಮ್ಮಂತೆ ಭೂಪರಿಸರದಲ್ಲಿ ಅವುಗಳಿಗೂ ಬದುಕುವ ಹಕ್ಕಿದೆ; ಆದರೆ, ಓಟಿನ ಹಕ್ಕಿರದ ಅವುಗಳ ಬದುಕು ಅತಂತ್ರಗೊಂಡಿದೆ. ಸರ್ಕಾರದ ಚಿಂತನೆಯು ಮೇಲ್ನೋಟಕ್ಕೆ ಸರಿಕಂಡರೂ ಇದರಿಂದ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರ ಕಷ್ಟಕರ.

⇒ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ಡಿಜಿಟಲ್ ಹೊಣೆ: ಅಪರಾಧಿಗಿರಲಿ ಶಿಕ್ಷೆ

ಐಟಿ ನಿಯಮಗಳಿಗೆ ತಿದ್ದುಪಡಿಯಿಂದ ಆಗುವ ಆತಂಕಗಳ ಬಗ್ಗೆ ಸಂಪಾದಕೀಯ ತೆರೆದಿಟ್ಟಿದೆ (ಪ್ರ.ವಾ., ಏ. 9). ಸೇಫ್ ಹಾರ್ಬರ್ ರಕ್ಷಣೆಯು ಕೇವಲ ಕಂಪನಿಗಳ ಲಾಭಕ್ಕಲ್ಲ, ಬದಲಾಗಿ ಇಂಟರ್ನೆಟ್ನ ಮುಕ್ತ ವಾತಾವರಣ ಕಾಪಾಡಲು ಇರುವ ಕವಚ. ರಸ್ತೆ ಅಪಘಾತವಾದಾಗ ನಾವು ರಸ್ತೆ ನಿರ್ಮಿಸಿದ ಎಂಜಿನಿಯರ್ ಅಥವಾ ಸರ್ಕಾರವನ್ನು ಹೊಣೆ ಮಾಡದೆ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ವ್ಯಕ್ತಿಯನ್ನು ಹೇಗೆ ಶಿಕ್ಷಿಸುತ್ತೇವೆಯೋ, ಅದೇ ತರ್ಕ ಡಿಜಿಟಲ್ ಲೋಕಕ್ಕೂ ಅನ್ವಯವಾಗಬೇಕು. ಸಾಮಾಜಿಕ ಜಾಲತಾಣಗಳ ಸೇಫ್ ಹಾರ್ಬರ್ ತತ್ತ್ವವು ಇದೇ ಸತ್ಯದ ಮೇಲೆ ನಿಂತಿದೆ. ಮಧ್ಯವರ್ತಿ ವೇದಿಕೆಗಳನ್ನೇ ಹೊಣೆಗಾರರನ್ನಾಗಿ ಮಾಡಿದರೆ, ಕಂಪನಿಗಳು ಕಾನೂನು ಸಂಘರ್ಷಕ್ಕೆ ಹೆದರಿ ಪ್ರತಿಯೊಂದು ಪೋಸ್ಟ್ ಅನ್ನು ಕಟ್ಟುನಿಟ್ಟಾಗಿ ಸೆನ್ಸಾರ್ ಮಾಡಲು ಪ್ರಾರಂಭಿಸುತ್ತವೆ. ಅವು ಪರೋಕ್ಷವಾಗಿ ಬಲಿಷ್ಠರ ಪರವಾಗಿ ಕೆಲಸ ಮಾಡುವ ‘ಸೆನ್ಸಾರ್ಶಿಪ್’ ಕೇಂದ್ರಗಳಾಗಿ ಬದಲಾಗುತ್ತವೆ. ಇದರಿಂದ ಜನರ ನೈಜ ದನಿ, ವಿಮರ್ಶಾತ್ಮಕ ಆಲೋಚನೆಗಳು ಪ್ರಕಟವಾಗುವ ಮೊದಲೇ ಹತ್ತಿಕ್ಕಲ್ಪಡುತ್ತವೆ. ಇದು ಜನತಂತ್ರದ ಆಶಯಕ್ಕೆ ವಿರುದ್ಧವಾದುದು.

⇒ಪ್ರವೀಣ ನಾಗಪ್ಪ ಯಲವಿಗಿ, ಮುಂಡಗೋಡು

ಶಬರಿಮಲೆ: ಸಮಾನತೆಗೆ ಚ್ಯುತಿ ಬೇಡ

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ಪ್ರಕರಣದ ವಿಚಾರಣೆಯ ವೇಳೆ ‘ಭಕ್ತರಲ್ಲದವರೂ ಪಿಐಎಲ್ ಸಲ್ಲಿಸಬಹುದೇ?’ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಶಬರಿಮಲೆ ದೇವಾಲಯ ಮಂಡಳಿಯ ಆಚರಣೆ ಪದ್ಧತಿಯು ಸಂವಿಧಾನದ ಸಮಾನತೆಯ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಇದನ್ನು ಪ್ರಶ್ನಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಪ್ರಶ್ನಿಸಲು ಭಕ್ತರೇ ಆಗಿರಬೇಕೆಂಬ ನಿಯಮವೇನೂ ಇಲ್ಲ. ಅಷ್ಟಕ್ಕೂ ಭಕ್ತರು ಪ್ರಶ್ನಿಸುವ ನೈತಿಕತೆ ಹೊಂದಿದ್ದರೆ ಮಹಿಳೆಯರ ಪ್ರವೇಶಕ್ಕೆ ಇಲ್ಲಿಯವರೆಗೂ ಕಾಯುವ ಪರಿಸ್ಥಿತಿ ಇರುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳ ರಕ್ಷಕನಾಗಿದೆ. ಹಾಗಾಗಿ, ಮಹಿಳೆಯರಿಗೆ ಸಂವಿಧಾನಬದ್ಧ ಹಕ್ಕನ್ನು ನೀಡಬೇಕಿದೆ.

- ಶ್ರೀಧರ್ ಕಾಳೆ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.