ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಶುಕ್ರವಾರ, 24 ಮಾರ್ಚ್‌ 2023

Last Updated 23 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಆಧಾರ್‌ ಲಿಂಕ್‌ ಮಾಡಿಸಲೇಕೆ ಶುಲ್ಕ?

ಬೇನಾಮಿ ಆಸ್ತಿ, ತೆರಿಗೆ ವಂಚನೆಯಂಥವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿಸಲು ಸೂಚಿಸಿದೆ. ಮಾರ್ಚ್ 31ರೊಳಗೆ ಲಿಂಕ್ ಮಾಡಿಸದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ, ಈ ಕಾರ್ಯಕ್ಕಾಗಿ ₹ 1,000 ಶುಲ್ಕ ನಿಗದಿ
ಪಡಿಸಿರುವುದು ಎಷ್ಟು ಸರಿ? ತೆರಿಗೆ ವಂಚನೆಗೆ ಕಡಿವಾಣ ಹಾಕಲಾಗುತ್ತಿದೆಯೋ ಅಥವಾ ಜನರಿಂದ ಸುಲಿಗೆ ಮಾಡಲಾಗುತ್ತಿದೆಯೋ ಎಂಬ ಅನುಮಾನ ಮೂಡುತ್ತದೆ.

ಸಾಮಾನ್ಯ ಜನರು ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಬೇಸತ್ತಿದ್ದಾರೆ. ಹೀಗಿರುವಾಗ ಸರ್ಕಾರ ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ ಜನರ ಸಮಸ್ಯೆಗೆ ಸ್ಪಂದಿಸಬೇಕು. ಸರ್ವರ್ ಸಮಸ್ಯೆಯನ್ನು ಸರಿಪಡಿಸಬೇಕು. ಲಿಂಕ್‌ ಮಾಡಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕು.

ರಾಜ ಮುಗಲಳ್ಳಿ, ಉಜ್ಜಯಿನ, ವಿಜಯನಗರ

***

ಹೆಣ್ಣುಮಕ್ಕಳ ಜೀವನ ಕತ್ತಲೆಗೆ ದೂಡುವ ಕೆಲಸ

ಹದಿನೆಂಟು ವರ್ಷವಾಗುವುಕ್ಕೂ ಮೊದಲೇ 15 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ತಾಯಂದಿರಾದ ಸುದ್ದಿ ತಿಳಿದು (ಪ್ರ.ವಾ., ಮಾರ್ಚ್‌ 22) ಬೇಸರವಾಯಿತು. ಕಾನೂನಿನಡಿ ನಿಗದಿಯಾಗಿರುವ ಮದುವೆಯ ವಯಸ್ಸಿಗಿಂತ ಮೊದಲೇ ಹೆಣ್ಣುಮಕ್ಕಳ ಜೀವನವನ್ನು ಕತ್ತಲೆಗೆ ದೂಡುವ ಕೆಲಸ ಈಗಲೂ ನಡೆಯುತ್ತಿರುವುದು ದುರದುಷ್ಟಕರ. ಆಟವಾಡಿಕೊಂಡು‌, ಓದಿಕೊಂಡು ಇರಬೇಕಾದ ವಯಸ್ಸಿನ ಮಕ್ಕಳನ್ನು ‌ಮದುವೆಯ ಹೆಸರಿನಲ್ಲಿ ಪಂಜರಕ್ಕೆ ದೂಡಿ, ಆ ಮೂಲಕ ಅವರ ಭವಿಷ್ಯ ಹಾಗೂ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮವನ್ನು ಸಮಾಜ ಮತ್ತು ಸರ್ಕಾರ ಕಂಡೂ ಕಾಣದಂತೆ ಇರುವುದು ವಿಷಾದಕರ. ಮಕ್ಕಳ ಮೇಲಾಗುವ ದೌರ್ಜನ್ಯ ತಡೆಯಲೆಂದೇ ನಿರ್ದಿಷ್ಟ ಇಲಾಖೆ ಹಾಗೂ ಅಧಿಕಾರಿಗಳು ಇದ್ದರೂ ಬಾಲ್ಯವಿವಾಹಗಳು ನಡೆಯುತ್ತಿವೆ. ಹಾಗಾದರೆ ಇಲಾಖೆ ಹಾಗೂ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರಮುಖ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲೇ ಬಾಲ್ಯವಿವಾಹ ನಡೆದ ಉದಾಹರಣೆಗಳು ಇವೆ. ಆದಕಾರಣ ಇಂತಹ ಪ್ರಕರಣ ನಡೆದರೆ ಸಂಬಂಧಿಸಿದ ಪ್ರದೇಶದ ಅಧಿಕಾರಿಗಳ ವಿರುದ್ಧ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕು. ಆಗಮಾತ್ರ ಬಾಲ್ಯವಿವಾಹ ಹಾಗೂ ಪುಟ್ಟ ಹೆಣ್ಣುಮಕ್ಕಳ ತಾಯ್ತನದ ಪ್ರಕರಣಗಳನ್ನು ತಡೆಯಬಹುದು.

ಹುಸೇನಬಾಷಾ ತಳೇವಾಡ, ಹುಬ್ಬಳ್ಳಿ

***

ಸತ್ಯಾಸತ್ಯತೆ ಅರಿಯುವ ಕೆಲಸವಾಗಲಿ

ಉರಿಗೌಡ, ನಂಜೇಗೌಡರ ಬಗ್ಗೆ ಹೇಳಿಕೆ ನೀಡುತ್ತಿರುವ ರಾಜಕೀಯ ಮುಖಂಡರ ಬಳಿ ಟಿಪ್ಪು ಸುಲ್ತಾನರ ಸಮಕಾಲೀನ ಇತಿಹಾಸಕಾರರ ಹೇಳಿಕೆಗಳಾಗಲಿ ಅಥವಾ ಶಾಸನದ ದಾಖಲೆಗಳಾಗಲಿ ಇದ್ದರೆ ಅವುಗಳನ್ನು ಮಠಕ್ಕೆ ತಂದುಕೊಡಲಿ. ಅವುಗಳನ್ನು ಕೂಲಂಕಷವಾಗಿ ಪರಾಮರ್ಶಿಸಿ, ನಂತರ ಸತ್ಯಾಸತ್ಯತೆಯನ್ನು ತಿಳಿಸಲಾಗುವುದು ಎಂದು ಆದಿಚುಂಚನಗಿರಿ ಮಠಾಧೀಶರು ಹೇಳಿಕೆ ನೀಡಿರುವುದು ಸರಿಯಾಗಿದೆ. ಹೀಗಿದ್ದರೂ ಅವರ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದಷ್ಟು ಪ್ರವೀಣರು ನಮ್ಮ ಸಮಾಜದಲ್ಲಿ ಇರುವುದನ್ನು ನೋಡಿ ಮರುಕವೆನಿಸುತ್ತದೆ.

ಇಷ್ಟಕ್ಕೂ ದೇ. ಜವರೇಗೌಡರು ನನಗೆ ತಿಳಿದಂತೆ ಇತಿಹಾಸಕಾರರಲ್ಲ. ಅದು ಗೊತ್ತಿದ್ದೂ ಕೆಲವು ಮುಖಂಡರು ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಅವರ ನಡತೆಗೆ ತಕ್ಕುದಲ್ಲ.

ಗೌಡಯ್ಯ, ಮೈಸೂರು

***

ಪ್ರಾಧ್ಯಾಪಕರ ನೇಮಕಕ್ಕೂ ತೋರಲಿ ಉತ್ಸಾಹ

ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಐಐಟಿ ಮತ್ತು ಎನ್‍ಐಟಿ) ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇರುವ ಬಗ್ಗೆ ಸಂಪಾದಕೀಯ ಕಳವಳ ವ್ಯಕ್ತಪಡಿಸಿದೆ (ಪ್ರ.ವಾ., ಮಾರ್ಚ್‌ 22). ಸರ್ಕಾರವೇನೋ ಗುಣಮಟ್ಟದ ಶಿಕ್ಷಣದ ಬಗ್ಗೆ, ಜಾಗತಿಕ ಗುಣಮಟ್ಟದ ಬಗ್ಗೆ ಮಾತನಾಡುತ್ತಿದೆ. ಆದರೆ ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಿದ್ದರೆ ಯಾವ ಬಗೆಯ ಗುಣಮಟ್ಟದ ಶಿಕ್ಷಣ ಸಾಧ್ಯ? ಇದೇ ರೀತಿಯಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳು ಮತ್ತು ಪ್ರಥಮದರ್ಜೆ ಕಾಲೇಜುಗಳಲ್ಲಿ ದಂಡಿಯಾಗಿ ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಿವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿನ ಕೆಲವು ವಿಭಾಗಗಳಲ್ಲಿ ಕಾಯಂ ಪ್ರಾಧ್ಯಾಪಕರೇ ಇಲ್ಲ.

ಸರ್ಕಾರಿ ಕಾಲೇಜುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರಿದ್ದಾರೆ. ಇವರು ಎರಡು– ಮೂರು ಕಾಲೇಜುಗಳಲ್ಲಿ ಅರೆಬರೆ ಸಂಭಾವನೆಗೆ ಕೆಲಸ ಮಾಡುತ್ತಿರುತ್ತಾರೆ. ಇವರು ಹೇಗೆ ಗುಣಮಟ್ಟದ ಬೋಧನೆ ನೀಡಲು ಸಾಧ್ಯ? ಸರ್ಕಾರವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸುವುದರಲ್ಲಿ ತೋರುತ್ತಿರುವ ಉತ್ಸಾಹ, ಕಾಳಜಿಯನ್ನು ಅಲ್ಲಿ ಪ್ರಾಧ್ಯಾಪಕರನ್ನು ನೇಮಿಸುವ ಬಗ್ಗೆ ತೋರುತ್ತಿಲ್ಲ. ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ
ಶೇ 52.49ರಷ್ಟು ಹುದ್ದೆಗಳು ಖಾಲಿಯಿವೆ. ಪ್ರಾಧ್ಯಾಪಕರ ಹುದ್ದೆಗಳನ್ನು ಖಾಲಿಯಿಟ್ಟುಕೊಂಡು ಉನ್ನತ ಗುಣಮಟ್ಟದ ಶಿಕ್ಷಣ ಎನ್ನುವುದು ಒಂದು ಭ್ರಮೆ.

ಟಿ.ಆರ್.ಚಂದ್ರಶೇಖರ, ಬೆಂಗಳೂರು

***

ಪಕ್ಷಾಂತರ ನಿಷೇಧ ಕಾನೂನು ಬಲಗೊಳ್ಳಲಿ

ನಮ್ಮ ಜನಪ್ರತಿನಿಧಿಗಳು ಸಾಮೂಹಿಕವಾಗಿ ಪಕ್ಷಾಂತರ ಮಾಡುವುದನ್ನು ತಡೆಯುವಲ್ಲಿ ಪಕ್ಷಾಂತರ ನಿಷೇಧ ಕಾನೂನು ಸಂಪೂರ್ಣವಾಗಿ ಸೋತಿದೆ. ಇದರಿಂದಾಗಿ, ಜನಾದೇಶ ಎಂಬುದು ಕಿಮ್ಮತ್ತು ಕಳೆದುಕೊಳ್ಳು
ತ್ತಿದೆ. ಈ ಬಗೆಯ ಪಕ್ಷಾಂತರಗಳನ್ನು ತಡೆಯಲು ಕಾನೂನಿಗೆ ತಿದ್ದುಪಡಿ ತರಬೇಕು ಎಂದು ವೆಂಕಯ್ಯ ನಾಯ್ಡು ಇತ್ತೀಚೆಗೆ ಹೇಳಿದ್ದಾರೆ. ಈ ದಿಸೆಯಲ್ಲಿ ಗಂಭೀರವಾಗಿ ಚಿಂತಿಸಲು ಇದು ಸಕಾಲ. ಪಕ್ಷಭೇದ ಮರೆತು ನಮ್ಮ ರಾಜಕಾರಣಿಗಳು ಈ ಕುರಿತು ಯೋಚಿಸಬೇಕಾಗಿದೆ. ಗೆದ್ದ ನಂತರ ನಮ್ಮ ಪ್ರತಿನಿಧಿಗಳು ಪಕ್ಷಾಂತರ ಮಾಡುವುದನ್ನು
ತಡೆಯುವುದು ಅಗತ್ಯ.

ಮಹೇಶ ಕೇವಂಟಗಿ ಕುಮಸಿ, ಕಲಬುರಗಿ

***

ಜೀವನ ಪಾಠ

ಶರ್ಮಾ, ಗಿಲ್, ಕೊಹ್ಲಿ, ರಾಹುಲ್,
ಯಾದವ್, ಪಾಂಡ್ಯ, ಜಡೇಜ, ಪಟೇಲ್,
ಅಶ್ವಿನ್, ಕುಲದೀಪ್, ಸಿರಾಜ್
ಒಬ್ಬರಿಗಿಂತ ಒಬ್ಬರು ಅಸಾಮಾನ್ಯ,
ಆಸ್ಟ್ರೇಲಿಯಾ ಎದುರು ಸೆಣಸಾಡಿ

ಸೋತು ಸಾರಿದರು
ಆಟದಲ್ಲಿ ಸೋಲು ಸಾಮಾನ್ಯ.

- ಮಲ್ಲಿಕಾರ್ಜುನ, ಸುರಧೇನುಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT