ಸ್ಪರ್ಧಾತ್ಮಕ ಪರೀಕ್ಷೆ: ಕನ್ನಡ ಸಾಹಿತ್ಯ ನಗಣ್ಯ

ರಾಜ್ಯ ಸರ್ಕಾರದ ‘ಸಿ’ ವೃಂದದ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯ ದ್ವಿತೀಯ ಪತ್ರಿಕೆಯಲ್ಲಿ ಸಂವಹನ ವಿಭಾಗವಿದೆ. ಈ ಪತ್ರಿಕೆಯಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ವಿಷಯಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಗ್ರಾಮೀಣ ಅಭ್ಯರ್ಥಿಗಳು ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನವನ್ನು ಅರ್ಥೈಸಿಕೊಂಡು ಆಂಗ್ಲ ಮಾಧ್ಯಮದ ಅಭ್ಯರ್ಥಿಗಳ ಜೊತೆಗೆ ಪರೀಕ್ಷೆ ಎದುರಿಸುವುದು ಕಷ್ಟಕರ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಕಬ್ಬಿಣದ ಕಡಲೆ. ಸರ್ಕಾರ ಈಗ 56,423 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ನೇಮಕಾತಿ ವೇಳೆ ಸಂವಹನ ಪತ್ರಿಕೆಯಲ್ಲಿ ಶೇ 60ರಷ್ಟು ಕನ್ನಡ ಸಾಹಿತ್ಯದ ಪ್ರಶ್ನೆಗಳಿರಲಿ. ಉಳಿದಂತೆ ಇಂಗ್ಲಿಷ್, ಕಂಪ್ಯೂಟರ್ ವಿಷಯಕ್ಕೆ ಸಂಬಂಧಿಸಿದಂತೆ ತಲಾ 20 ಪ್ರಶ್ನೆಗಳನ್ನು ಅಳವಡಿಸಿ ಕೊಂಡು ಪರೀಕ್ಷೆ ನಡೆಸಬೇಕಿದೆ. ಅಥವಾ ಮೊದಲಿದ್ದಂತೆ ದ್ವಿತೀಯ ಪತ್ರಿಕೆಯಾಗಿ ‘ಸಾಮಾನ್ಯ ಕನ್ನಡ’ ವಿಷಯ ಅಳವಡಿಸಿಕೊಂಡರೆ ಅನುಕೂಲವಾಗಲಿದೆ.

⇒ಲಕ್ಷ್ಮೀಕಾಂತ್ ಜೆ.ಸಿ., ತುಮಕೂರು

‘ದಳಪತಿ’ ಮಾದರಿ: ರಾಜ್ಯವೂ ಪಾಲಿಸಲಿ

ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತಮಿಳುನಾಡಿನಲ್ಲಿ ಧಾರ್ಮಿಕ ಸ್ಥಳ, ಶಿಕ್ಷಣ ಸಂಸ್ಥೆ , ಬಸ್ನಿಲ್ದಾಣದ 500 ಮೀಟರ್ ವ್ಯಾಪ್ತಿಯೊಳಗಿದ್ದ 717 ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಸಮಾಜದ ಆರೋಗ್ಯದ ದೃಷ್ಟಿಯಿಂದ ಇಂಥ ನಿರ್ಧಾರ ಅಗತ್ಯ. ಕರ್ನಾಟಕದಲ್ಲಿಯೂ ಶಾಲಾಕಾಲೇಜು, ಧಾರ್ಮಿಕ ಸ್ಥಳ ಮತ್ತು ಬಸ್ನಿಲ್ದಾಣದ ಸಮೀಪ ಮದ್ಯ ಮಾರಾಟ ಮಳಿಗೆಗಳಿವೆ. ಇವುಗಳಿಗೆ ನಿರ್ಬಂಧ ಹೇರಬೇಕಿದೆ. ಜನಸಂಚಾರ ಪ್ರದೇಶಗಳಲ್ಲಿ ಹೊಸ ಪರವಾನಗಿಗೆ ಮಿತಿ ನಿಗದಿಪಡಿಸಬೇಕು. ರಾತ್ರಿ ಸಮಯದಲ್ಲಿ ಮದ್ಯ ಮಾರಾಟವನ್ನು ನಿಯಂತ್ರಿಸಬೇಕು. ಇದರಿಂದ ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆ ಕಾಪಾಡಬಹುದು. ರಸ್ತೆ ಅಪಘಾತ ಕಡಿಮೆಯಾಗಲಿವೆ; ಜೊತೆಗೆ, ಕೌಟುಂಬಿಕ ಕಲಹಗಳೂ ತಗ್ಗಲಿವೆ.

⇒ವೀರೇಶ್ ಯಾದವ್ ಡಿ.ಎಸ್., ಶಿರಾ

ತುಮಕೂರಿನ ‘ವಿವೇಕ’ ಮುಕ್ಕಾಗದಿರಲಿ

ತುಮಕೂರು ಜಿಲ್ಲೆಯನ್ನು ‘ಬೆಂಗಳೂರು ಉತ್ತರ ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಗೃಹ ಸಚಿವ ಜಿ. ಪರಮೇಶ್ವರ ಅವರ ಪ್ರಸ್ತಾಪದ ಒಳಹೂರಣದ ಕಠೋರ ಸತ್ಯವನ್ನು ಅವರೇ ಬಯಲುಗೊಳಿಸಿದ್ದಾರೆ. ‘ತುಮಕೂರು ಬೆಂಗಳೂರಿನ ಭಾಗವೆಂದು ಅಮೆರಿಕದಲ್ಲಿ ಕುಳಿತವರಿಗೆ ಗೊತ್ತಾಗಿ ಇಲ್ಲಿಗೆ ಬಂದು, ಬಂಡವಾಳ ಹೂಡಿಕೆ ಮಾಡಬೇಕು’ ಎಂಬ ಅವರ ದೂರಾಲೋಚನೆಯು ತುಮಕೂರು ಜಿಲ್ಲೆಯ ‘ಪ್ರಾಚೀನತೆ’ಯ ಮೇಲಿನ ‘ಅರ್ವಾಚೀನ’ದ ದಾಳಿ ಎನ್ನಬಹುದು. ತುಮಕೂರಿನ ಸಾಧು–ಸಿದ್ಧ–ಸಂತರ ಮಠಗಳು, ದೇಗುಲಗಳು, ಸುಂದರ ಪರಿಸರ, ಬೆಟ್ಟಗುಡ್ಡಗಳನ್ನು ಸಮತಟ್ಟು ಮಾಡಿ ‘ಪ್ರಭುತ್ವ’ವು ಬಂಡವಾಳಶಾಹಿಗಳೊಂದಿಗೆ ‘ಶೈಕ್ಷಣಿಕ ಸ್ಥಾವರ’ಗಳು ಮತ್ತು ಬಹುರಾಷ್ಟ್ರೀಯ ಬೃಹತ್ ಸ್ಥಾವರಗಳನ್ನು ಸ್ಥಾಪಿಸಿ, ಇಳೆ ನಂಬಿದ ಶ್ರಮಿಕರನ್ನು ಒಕ್ಕಲೆಬ್ಬಿಸುವ ಹುನ್ನಾರ ಸಚಿವರ ಪ್ರಸ್ತಾಪದಲ್ಲಿದೆ.

1832ರಲ್ಲಿ ತುಮಕೂರು ಜಿಲ್ಲೆಯಾಗಿ ಮುಂಬರುವ 2032ಕ್ಕೆ ಎರಡು ಶತಮಾನಗಳ ಸಂಭ್ರಮ ಆಚರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ತುಮಕೂರಿಗೆ ಈ ಪ್ರಸ್ತಾಪ, ಜಿಲ್ಲೆಯ ಚಾರಿತ್ರಿಕ ನಾಡಿಮಿಡಿತದೊಂದಿಗೆ ಮೈಗೂಡಿಸಿಕೊಂಡ ಇಲ್ಲಿನ ಜನಪದರ ಬದುಕಿನ ಅಸ್ಮಿತೆಯನ್ನೇ ಸರ್ವನಾಶಗೊಳಿಸುವುದರಲ್ಲಿ ಸಂಶಯ ವಿಲ್ಲ. ಥಳಕುಬಳುಕಿನ ನಗರೀಕರಣ ಆರಂಭದಲ್ಲಿ ಚೆಂದವೇ; ಕಾಲಗತಿಸಿದಂತೆ ಅದು ಬರ್ಬರಗೊಳ್ಳುತ್ತದೆ. ಜಿಲ್ಲೆಯನ್ನು ಬೌದ್ಧಿಕವಾಗಿ, ಔದ್ಯಮಿಕವಾಗಿ, ವೈಜ್ಞಾನಿಕ ವಾಗಿ ಬೆಳೆಸುವ ಭರದಲ್ಲಿ ಸಚಿವರಿಗೆ ತುಮಕೂರಿನ ಹೆಸರಿನ ಮೇಲೆ ವಕ್ರದೃಷ್ಟಿ ಬಿದ್ದಿರುವುದು ಚಿದಂಬರ ರಹಸ್ಯವೇನಲ್ಲ. ನೆಮ್ಮದಿಯಿಂದ ಬದುಕುತ್ತಿರುವ ಚಂದದ ತುಮಕೂರನ್ನು ಅಂದಗೆಡಿಸುವ ನಿರ್ಧಾರವನ್ನು ಹಿಂಪಡೆದುಕೊಳ್ಳುವಲ್ಲಿ ಸರ್ಕಾರ ಕಿಂಚಿತ್ತಾದರೂ ವಿವೇಕದಿಂದ ವರ್ತಿಸಬೇಕು.

⇒ತುಂಬಾಡಿ ರಾಮಯ್ಯ, ಪ್ರೊ. ಸಿದ್ಧಗಂಗಯ್ಯ ಹೊಲತಾಳು, ಸಿದ್ಧಲಿಂಗಸ್ವಾಮಿ ಹಿರೇಮಠ, ತುಮಕೂರು

ನೀಟ್: ಕೇಂದ್ರದ ಉತ್ತರದಾಯಿತ್ವ ಇಲ್ಲವೆ?

ಪ್ರಧಾನಿ ನರೇಂದ್ರ ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ಮಕ್ಕಳಲ್ಲಿ, ಯುವಜನರಲ್ಲಿ ಜನಪ್ರಿಯ. ಆದರೆ, ಇಪ್ಪತ್ತಮೂರು ಲಕ್ಷ ಪರೀಕ್ಷಾರ್ಥಿ ಗಳು ಬರೆದ ‘ನೀಟ್’ ರದ್ದಾಗಿದ್ದಕ್ಕೆ ಮತ್ತು ಹಲವು ವಿದ್ಯಾರ್ಥಿಗಳ ಆತ್ಮಹತ್ಯೆ ಬಗ್ಗೆ ಮೋದಿ ಅವರ ಮೌನ ಅಸಹನೀಯವಾಗಿದೆ. 2017, 2019, 2024ರಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಕೇಂದ್ರ ಶಿಕ್ಷಣ ಸಚಿವರ ಹೊಣೆಗೇಡಿತನಕ್ಕೆ ಕನ್ನಡಿ ಹಿಡಿದಿದೆ. ಆದರೂ, ಎಚ್ಚತ್ತು ಕೊಳ್ಳದೆ ಯಾವುದೇ ತಪ್ಪು ಮಾಡದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಎಂಬ ಕಠಿಣ ಶಿಕ್ಷೆ ವಿಧಿಸಿರುವುದು ಸರಿಯಲ್ಲ. ಇಷ್ಟೆಲ್ಲಾ ಅನಾಹುತವಾಗಿದ್ದರೂ ಸಂಬಂಧಪಟ್ಟ ಸಚಿವರಾಗಲೀ ಪ್ರಧಾನಿಯಾಗಲೀ ಸಾರ್ವಜನಿಕವಾಗಿ ವಿಷಾದವ್ಯಕ್ತಪಡಿಸಿಲ್ಲ. ಈ ಲೋಪದೋಷಕ್ಕೆ ಸರ್ಕಾರ ಉತ್ತರದಾಯಿಯಲ್ಲವೆ?

⇒ಶಾಂತಕುಮಾರ್, ಸರ್ಜಾಪುರ

ಸಿಬಿಎಸ್ಇ ಪುಸ್ತಕ: ಸಮಸ್ಯೆ ಬಗೆಹರಿಸಿ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಏಕಾಏಕಿಯಾಗಿ ಸಿಬಿಎಸ್ಇ ಒಂಬತ್ತನೇ ತರಗತಿಯ ಪಠ್ಯಪುಸ್ತಕಗಳ ಬದಲಾವಣೆಯಾಗಿದೆ. ಶಾಲೆ ಪ್ರಾರಂಭವಾಗಿ ಎರಡು ತಿಂಗಳಾಗುತ್ತಾ ಬಂದರೂ ಇನ್ನೂ ಎನ್ಸಿಇಆರ್ಟಿಯಿಂದ ಸಮಾಜ ವಿಜ್ಞಾನ ಪಠ್ಯಪುಸ್ತಕ ಬಿಡುಗಡೆಯಾಗಿಲ್ಲ. ಇತರೆ ವಿಷಯಗಳ ಪಠ್ಯಪುಸ್ತಕಗಳೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಶಾಲೆಗಳು ಆನ್ಲೈನ್ ಪಿಡಿಎಫ್ ಆಧರಿಸಿ ಪಾಠ ಮಾಡುತ್ತಿವೆ. ಶಾಲೆ ಪ್ರಾರಂಭವಾಗುವ ಮುನ್ನವೇ ಪಠ್ಯಪುಸ್ತಕ ಒದಗಿಸಲು ಸಾಧ್ಯವಿಲ್ಲದಿದ್ದರೆ, ತುರ್ತಾಗಿ ಬದಲಾವಣೆ ಮಾಡುವ ಅಗತ್ಯವೇನಿದೆ? ಮುಂದಿನ ವರ್ಷ ಹತ್ತನೇ ತರಗತಿಗೂ ಪಠ್ಯಪುಸ್ತಕ ಬದಲಾವಣೆ ಮಾಡುವುದಾಗಿ ತಿಳಿಸಲಾಗಿದೆ. ಈ ಪಠ್ಯಪುಸ್ತಕಗಳಾದರೂ ಡಿಸೆಂಬರ್ನೊಳಗೆ ಲಭ್ಯವಾಗಲಿ.

-ಸುರೇಂದ್ರ ಪೈ, ಭಟ್ಕಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.