ಹಿಂದುಳಿದ ವರ್ಗದ ಬಗ್ಗೆ ಮೊಸಳೆ ಕಣ್ಣೀರು

ರಾಜ್ಯ ರಾಜಕೀಯದಲ್ಲಿನ ಅನಿರೀಕ್ಷಿತ ಬದಲಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಹಿಂದುಳಿದ ವರ್ಗಗಳ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. (ಪ್ರ.ವಾ., ಮೇ 28). ಈ ರೀತಿ ಬಿಂಬಿಸಲು ಬಿಜೆಪಿಗೆ ಇರುವ ನೈತಿಕತೆಯಾದರೂ ಎಂಥದು? ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಹಿಂದುಳಿದ ವರ್ಗದ ಮೀಸಲಾತಿಯನ್ನು ಕಡಿಮೆ ಮಾಡಿ ಮುಂದುವರಿದ ವರ್ಗಕ್ಕೆ ನೀಡಲು ಯತ್ನಿಸಿತು. ಆದರೆ, ಕಾಂಗ್ರೆಸ್ ಪಕ್ಷ ಅಹಿಂದ ಹಿನ್ನೆಲೆಯ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿ ಹಿಂದುಳಿದ ವರ್ಗದ ಪರವಾದ ತನ್ನ ಕಾಳಜಿಗೆ ಬದ್ಧವಾಗಿರುವುದನ್ನು ಸಾಬೀತುಪಡಿಸಿದೆ. ಬಿಜೆಪಿ ತನ್ನನ್ನು ಹಿಂದುಳಿದ ವರ್ಗದ ಪರ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವುದು ಹಾಸ್ಯಾಸ್ಪದ.

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಸಾಮಾನ್ಯರಿಗೆ ಆತ್ಮವಿಶ್ವಾಸ ಕೊಟ್ಟ ನಾಯಕ

ನನ್ನ ತಂದೆಯವರಿಗೆ ಜನನಾಯಕ ಸಿದ್ದರಾಮಯ್ಯ ಅವರ ಕುರಿತು ಅಪಾರ ಗೌರವ. ಆ ಗೌರವದಿಂದ, ನಾನು ಶಾಲೆಗೆ ಸೇರುವ ಸಮಯದಲ್ಲಿ (2004ರಲ್ಲಿ) ನನ್ನ ಹೆಸರನ್ನೇ ಸಿದ್ದರಾಮಯ್ಯ ಎಂದು ಬದಲಿಸಿದರು. ಚಿಕ್ಕವಯಸ್ಸಿನಲ್ಲೇ ಸಮಾಜದಲ್ಲಿನ ಭೇದಭಾವ, ತಾತ್ಸಾರ ಎಲ್ಲವನ್ನೂ ನೋಡಿದ್ದೇನೆ. ಈಗ ಕಾಲ ಬದಲಾಗಿದೆ. ನಮ್ಮ ಸಮುದಾಯದವರೂ ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ಸಮಾಜದಲ್ಲಿ ತಮ್ಮದೇ ಆದ ಸ್ಥಾನ ರೂಪಿಸಿಕೊಂಡಿದ್ದಾರೆ. ‘ಕುರಿ ಕಾಯುವವರ ಮಗ’ ಎನ್ನುವ ಹಾದಿಯಿಂದ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದವರೆಗೆ ಬಂದ ಸಿದ್ದರಾಮಯ್ಯ ಅವರ ಜೀವನ ನಮ್ಮಂತಹ ಸಾವಿರಾರು ಕುಟುಂಬಗಳಿಗೆ ಆತ್ಮವಿಶ್ವಾಸ ಮತ್ತು ಸ್ಫೂರ್ತಿ ಕೊಟ್ಟಿದೆ. ಇವರ ಆಡಳಿತದಲ್ಲಿ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಉದ್ಯೋಗ ದೊರೆತಿಲ್ಲ ಎನ್ನುವ ಬೇಸರ ಇದ್ದರೂ, ಸಾಮಾನ್ಯ ಜನರ ಪರ ನಿಂತ ಅವರ ಆಡಳಿತವನ್ನು ನಾನು ಯಾವತ್ತೂ ಗೌರವಿಸುತ್ತೇನೆ.

–ಸಿದ್ದರಾಮಯ್ಯ ಚಂದ್ರಪ್ಪ ಮೈದೊಳಲು, ಶಿವಮೊಗ್ಗ

‘ಸಿದ್ದರಾಮಯ್ಯ ಮಾದರಿ’ ಅನುಕರಣೀಯ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯದ ಜನರಲ್ಲಿ ತೀವ್ರ ಬೇಸರ ಮತ್ತು ಶೂನ್ಯಭಾವವನ್ನು ಮೂಡಿಸಿದೆ. ಅವರು ಒಬ್ಬ ರಾಜಕಾರಣಿ ಮಾತ್ರವಾಗಿರದೆ ಶೋಷಿತರ, ಬಡವರ ಮತ್ತು ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದರು. ಅವರ ನಿರ್ಗಮನದಿಂದಾಗಿ ಮುಂಬರುವ ದಿನಗಳಲ್ಲಿ ರಾಜ್ಯದ ಸಾಮಾನ್ಯ ಜನರಿಗೆ ಸರ್ಕಾರದ ಸೌಲಭ್ಯಗಳು ತಲಪುವಲ್ಲಿ ತೊಂದರೆಯಾಗಬಹುದು ಎಂಬ ಆತಂಕ ಮೂಡಿದೆ. ಸಿದ್ದರಾಮಯ್ಯ ಅವರ ದೂರದೃಷ್ಟಿಯ ಯೋಜನೆಗಳ ಫಲವಾಗಿ ರಾಜ್ಯ ದೇಶದ ಗಮನಸೆಳೆದಿದೆ ಹಾಗೂ ಇಲ್ಲಿನ ಕಲ್ಯಾಣ ಕಾರ್ಯಕ್ರಮಗಳನ್ನು ಬೇರೆ ಬೇರೆ ರಾಜ್ಯಗಳು ಅನುಕರಿಸುತ್ತಿವೆ. ಸಿದ್ದರಾಮಯ್ಯ ಅವರ ರಾಜೀನಾಮೆಯಿಂದಾಗಿ ಕಡುಬಡವರು, ಕಾರ್ಮಿಕರು ಮತ್ತು ರೈತ ವರ್ಗದ ಜನರಲ್ಲಿ ಒಂದು ರೀತಿಯ ಅಸುರಕ್ಷಿತ ಭಾವನೆ ಕಾಡುತ್ತಿದೆ. ಇಷ್ಟು ದಿನ ತಮಗೆ ಆಸರೆಯಾಗಿದ್ದ ನಾಯಕನ ನಿರ್ಗಮನದಿಂದಾಗಿ ಜನಪರ ಯೋಜನೆಗಳ ವೇಗ ಕುಂಠಿತಗೊಳ್ಳಬಹುದು ಎಂಬ ಭೀತಿ ಅವರಲ್ಲಿದೆ. ಆ ಆತಂಕ ಸುಳ್ಳಾಗುವಂತೆ ಬರಲಿರುವ ಮುಖ್ಯಮಂತ್ರಿ ಕಾರ್ಯನಿರ್ವಹಿಸಲಿ.

–ಶಿವಕುಮಾರ ಎಂ. ಹೊಸಹಳ್ಳಿ, ಬೆಂಗಳೂರು

ಕ್ರಿಕೆಟ್ ನವತಾರೆ: ಅಸಾಧಾರಣ ‘ವೈಭವ’

ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಅವರು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಬ್ಯಾಟಿಂಗ್ನಲ್ಲಿ ತೋರಿದ ಪ್ರದರ್ಶನ ಅಸಾಧಾರಣವಾದುದು. ಬರೀ 27 ಎಸೆತಗಳಲ್ಲಿ 97 ರನ್ ಸೂರೆಗೊಂಡು, ಮೂರು ರನ್ಗಳ ಅಂತರದಲ್ಲಿ ಶತಕ ವಂಚಿತರಾದರು. 15ನೇ ವಯಸ್ಸಿನ ಬಾಲಕನ ಬ್ಯಾಟಿಂಗ್ ನೋಡುಗರ ಕಣ್ಣಿಗೆ ರಸದೌತಣ. ಕ್ರಿಸ್ ಗೇಲ್ ಅವರ ದಾಖಲೆ ಮುರಿದು, ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ದಾಖಲೆ ವೈಭವ್ ಅವರದ್ದಾಗಿದೆ. ಈಗವರು ಭಾರತೀಯ ಕ್ರಿಕೆಟ್ ಜಗತ್ತಿನ ತಾರೆ. ಈ ಪ್ರತಿಭೆಯನ್ನು ಬಿಸಿಸಿಐ ಹೇಗೆ ಬಳಸಿಕೊಳ್ಳುವುದೋ ನೋಡಬೇಕು.

–ಬೆಂ.ಮು. ಮಾರುತಿ, ಬೆಂಗಳೂರು

ದಲಿತ ರಾಜಕೀಯ ಶಕ್ತಿ ರೂಪುಗೊಳ್ಳಲಿ

ದೇಶಕ್ಕೆ ಸ್ವಾತಂತ್ರ್ಯ ಬಂದು ಎಂಟು ದಶಕಗಳಾಗುತ್ತಾ ಬಂದರೂ ಕರ್ನಾಟಕ ದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ದಲಿತ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ. ಜನಸಂಖ್ಯೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ದಲಿತರು ಅಧಿಕಾರದಲ್ಲಿ ಕೊನೆಯಲ್ಲಿಯೇ ಉಳಿದಿದ್ದಾರೆ.

ಚುನಾವಣೆಯಲ್ಲಿ ಎಲ್ಲರಿಗೂ ದಲಿತರ ಮತ ಬೇಕು. ಅಧಿಕಾರ ಹಂಚಿಕೆಯಲ್ಲಿ ಮಾತ್ರ ದಲಿತರಿಗೆ ನ್ಯಾಯ ಇಲ್ಲ. ದಲಿತರು ಬರೀ ಮತಬ್ಯಾಂಕ್ ಅಲ್ಲ, ರಾಜ್ಯವನ್ನು ಮುನ್ನಡೆಸುವ ಶಕ್ತಿಯೂ ಅವರಲ್ಲಿದೆ. ದಲಿತರು ಇನ್ನಾದರೂ ಎಚ್ಚರಗೊಳ್ಳಬೇಕು. ಸ್ವಾಭಿಮಾನದಿಂದ ತಮ್ಮದೇ ಆದ ರಾಜಕೀಯ ಶಕ್ತಿಯನ್ನು ರೂಪಿಸಿಕೊಳ್ಳಬೇಕು. ರಾಜಕೀಯವಾಗಿ ಸಂಘಟನೆಗೊಂಡು ತಮ್ಮದೇ ಅಸ್ತಿತ್ವವನ್ನು ಕಂಡುಕೊಳ್ಳದೆ ಹೋದರೆ ದಲಿತ ಸಮುದಾಯದ ಏಳಿಗೆ ಸಾಧ್ಯವಿಲ್ಲ.

–ಕದ್ರೇಶ್ಕುಮಾರ್ ವಿ.ಎನ್., ಮಳವಳ್ಳಿ

ಸಿದ್ದು–ಸದ್ದು–ಗುದ್ದು

ಹೈಕಮಾಂಡಿನ
ಆದೇಶಕ್ಕೆ ಬಾಗಿದರು
ಸಿಎಂ ಸಿದ್ದು;
ರಾಜ್ಯದಲ್ಲಿ ಅಡಗಿತೇ
ಸಾಮಾಜಿಕ ನ್ಯಾಯದ
ಸದ್ದು!
ದಮನಿತರು
‘ಕೈ’ಗೆ ಕೊಡುವರೆ
ಚುನಾವಣೆಯಲ್ಲಿ
ಗುದ್ದು?

–ವೈ. ಯಮುನೇಶ್, ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.