ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75- ಓದುಗರ ಅನಿಸಿಕೆಗಳು

Last Updated 18 ಅಕ್ಟೋಬರ್ 2022, 2:04 IST
ಅಕ್ಷರ ಗಾತ್ರ

ನಿತ್ಯದ ಸಂಗಾತಿ....
ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ‘ಪ್ರಜಾವಾಣಿ’ಗೆ ಹೃತ್ಪೂರ್ವಕ ಶುಭಾಶಯಗಳು. ಈ ಪತ್ರಿಕೆ ನನ್ನ ನಿತ್ಯದ ಸಂಗಾತಿ. ಮೂರು ವರ್ಷಗಳಿಂದ ನಾನು ಈ ಪತ್ರಿಕೆಯನ್ನು ಓದುತ್ತಿದ್ದೇನೆ. ಬೆಳಿಗ್ಗೆ ಎದ್ದ ಕೂಡಲೇ ಒಂದೆರಡು ಗಂಟೆ ಮೊಬೈಲ್ ನೋಡುವುದು ಕೆಲಸವಾಗಿತ್ತು. ಆದರೆ ಪತ್ರಿಕೆಯನ್ನು ಓದಲು ಶುರುಮಾಡತೊಡಗಿದ ನಂತರ ಅಭ್ಯಾಸ ಬದಲಾಯಿತು.ಒಂದು ದಿನ ಓದಿಲ್ಲವೆಂದರೆ ಏನೋ ಕಳೆದುಕೊಂಡಂತೆ ಭಾಸವಾಗುವಷ್ಟರ ಮಟ್ಟಿಗೆ ಪ್ರಜಾವಾಣಿ ಇಷ್ಟವಾಗಿದೆ.

ಮೂರು ವರ್ಷಗಳಲ್ಲಿ ನಾನು ಬರೆದ ಲೇಖನಗಳನ್ನು ಒಳನೋಟ, ಸಂಗತ ಮತ್ತು ವಾಚಕರ ವಾಣಿಯಲ್ಲಿ ಪ್ರಕಟಿಸಿದೆ. ಇದು ಇನ್ನೂ ಹೆಚ್ಚು ಲೇಖನಗಳನ್ನು ಬರೆಯಲು ಸ್ಫೂರ್ತಿ ನೀಡಿದೆ. ಪ್ರತಿದಿನವೂ 3–4 ದಿನಪತ್ರಿಕೆಗಳನ್ನು ಓದುತ್ತೇನೆ. ಆದರೆ ಮೊದಲು ಓದುವ ದಿನಪತ್ರಿಕೆ ಪ್ರಜಾವಾಣಿ.

ಜಾತಿ, ಪಕ್ಷಗಳ ಪರವಿಲ್ಲದೆ ಜಾತ್ಯತೀತ, ನಿಷ್ಪಕ್ಷವಾದ ಮಾಹಿತಿ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಮಹಿಳೆ ಮಕ್ಕಳು ವೃದ್ಧರು ಎಲ್ಲಾ ವಯಸ್ಸಿನವರು ಇಷ್ಟಪಟ್ಟು ಓದುವಂಥ ವಿಷಯಗಳನ್ನು ಪತ್ರಿಕೆ ನೀಡುತ್ತಿದೆ.

ಸ್ಪರ್ಧಾಕೇಂದ್ರಗಳಲ್ಲಿ ಶಿಕ್ಷಕರು ಕೆಎಎಸ್, ಪಿಎಸ್‌ಐ ಮುಂತಾದ ಪರೀಕ್ಷೆಗಳಿಗೆ ಪ್ರಬಂಧ ಬರೆಯಲು ಪ್ರಜಾವಾಣಿಯಲ್ಲಿ ಬರುವ ಅಭಿಮತ ಪುಟದ ಸಂಪಾದಕೀಯಗಳನ್ನು ಓದಲು ಸೂಚಿಸುತ್ತಾರೆ. ಅಷ್ಟು ಗುಣಮಟ್ಟದ ಲೇಖನಗಳನ್ನು ಪ್ರಜಾವಾಣಿ ಪ್ರಕಟಿಸುತ್ತದೆ

ಪ್ರಜಾವಾಣಿಯು ಇದೇ ರೀತಿ ಜ್ಞಾನ ನೀಡುವುದರೊಂದಿಗೆ ನೂರಾರು ವರ್ಷಗಳ ಕಾಲ ಮುಂದುವರಿಯಲಿ ಎಂದು ಆಶಿಸುತ್ತೇನೆ
–ಬಿ.ಎಸ್ .ಚೈತ್ರ, ಚಿತ್ರದುರ್ಗ

*

'ಪ್ರಜಾವಾಣಿ'ಗೆ ಅಭಿನಂದನೆಗಳು
1980ರಲ್ಲಿ ಬ್ಯಾಂಕ್ ಸೇರಿದಂದಿನಿಂದ ನನ್ನ ದೈನಂದಿನ ಬೆಳಗಿನ ಸಂಗಾತಿ- ಪ್ರಜಾವಾಣಿ. (ನಡುವೆ ಏಳು ವರ್ಷ ಮುಂಬೈಯಲ್ಲಿದ್ದಾಗ ಮಾತ್ರ ಸಂಜೆಯ ಸಂಗಾತಿ). ಒಟ್ಟಿನಲ್ಲಿ 42 ವರ್ಷಗಳಿಂದ ನನ್ನ ಪ್ರೀತಿಯ ಪತ್ರಿಕೆ ಇದೊಂದೇ.

ಪ್ರಜಾವಾಣಿ ನಿಜ ಅರ್ಥದಲ್ಲಿ ಕರ್ನಾಟಕದ, ಕನ್ನಡಿಗರ ಪ್ರಾತಿನಿಧಿಕ ಧ್ವನಿ. ವಿಶ್ವಾಸಾರ್ಹ ಸುದ್ದಿ, ವಸ್ತುನಿಷ್ಠ ವಿಶ್ಲೇಷಣೆ, ಸಾಹಿತ್ಯ ಲೋಕದ ಎಲ್ಲ ತವಕ ತಲ್ಲಣಗಳಿಗೆ ಅದು ದನಿಯಾಗುತ್ತಿದ್ದ ರೀತಿ, ಅದರಲ್ಲಿ ಪ್ರಕಟವಾಗುತ್ತಿರುವ ಮೌಲಿಕ ಕಥೆ ಕವನ ಲೇಖನಗಳ ಕಾರಣದಿಂದ ನನಗಿಷ್ಟ. ನನ್ನ ಕೆಲವು ಕತೆ, ಕವನ, ಲೇಖನಗಳೂ ಆಗೀಗ ಪ್ರಕಟವಾದ್ದುಂಟು.

ಇವತ್ತಿನವರೆಗೂ ಕನ್ನಡದ ಯಾವ ಪತ್ರಿಕೆಗೂ ಮೌಲಿಕತೆ, ಪತ್ರಿಕಾಧರ್ಮಕ್ಕೆ ತೋರುವ ಬದ್ಧತೆಯಲ್ಲಿ ಪ್ರಜಾವಾಣಿಯನ್ನು ಸರಿಗಟ್ಟಲು ಸಾಧ್ಯವಾಗಿಲ್ಲ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಕನ್ನಡದ ಎಲ್ಲ ಲೇಖಕರಿಗೆ, ಕಲಾವಿದರು, ಕವಿ, ಕತೆಗಾರರಿಗೆ ಸೂಕ್ತ ವೇದಿಕೆ ಒದಗಿಸುವಲ್ಲಿ ಕೂಡಾ ಪ್ರಜಾವಾಣಿಗೆ ಮುಂಚೂಣಿಯ ಸ್ಥಾನ!

ಪತ್ರಿಕೆಯೊಂದು ಯಶಸ್ವಿಯಾಗಿ 75 ವರ್ಷಕ್ಕೆ ಕಾಲಿಡುವುದು ಸಾಧಾರಣ ಸಂಗತಿಯಲ್ಲ. ಪ್ರಜಾವಾಣಿ ಅಂತಹ ಮಹತ್ಸಾಧನೆ ಮಾಡಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡಬಹುದಾದ ವಿದ್ಯಮಾನ.
–ಗಿರಿಧರ ಕಾರ್ಕಳ, ಬೆಂಗಳೂರು

*

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನೆರವು...
ಕನ್ನಡನಾಡಿನ ಪ್ರತಿಯೊಬ್ಬರ, ಅದರಲ್ಲಿಯೂ ಯುವ ಸಮೂಹ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು ದಿನನಿತ್ಯ ಓದಲೇಬೇಕಾದ ಪತ್ರಿಕೆ ಇದು.

ರಾಜ್ಯದಲ್ಲಿ ಅದೆಷ್ಟೋ ಪತ್ರಿಕೆಗಳಿವೆ. ಅವುಗಳಲ್ಲಿ ವಿಶ್ವಾಸಾರ್ಹತೆಯಲ್ಲಿ ಪ್ರಜಾವಾಣಿಗೆ ಮೊದಲ ಸ್ಥಾನ. ವಿಶ್ವಾಸಾರ್ಹತೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನುಪಾಲಿಸುತ್ತಿರುವಪತ್ರಿಕೆ ಇದು.

ಅಮೃತ ಮಹೋತ್ಸವದ ಸಂಭ್ರಮದಲ್ಲಿ ಹಾರ್ದಿಕ ಶುಭಾಶಯಗಳನ್ನು ಕೋರುವೆ.
–ಬೀರಪ್ಪ ಡಿ.ಡಂಬಳಿ, ಕೋಹಳ್ಳಿ, ಅಥಣಿ

*

ಜನರ ಧ್ವನಿ...
ಜನರ ದನಿ 'ಪ್ರಜಾವಾಣಿ'ಗೆ ಅಮೃತ ಮಹೋತ್ಸವದ ಶುಭಾಶಯಗಳು. ಮುದ್ರಣ ಹಾಗೂ ಇಂದಿನ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆದು ಪತ್ರಿಕಾ ತತ್ವ ಸಿದ್ಧಾಂತಕ್ಕೆ ಬದ್ದವಾಗಿ, ಇತರ ಪತ್ರಿಕೆಗಳಿಗೂ ಮಾದರಿ ಹಾಕಿಕೊಟ್ಟ ಪತ್ರಿಕಾ ಸಂಸ್ಕೃತಿ ಪ್ರಜಾವಾಣಿಯದ್ದು. ಕನ್ನಡ ಪತ್ರಿಕಾ ರಂಗದಲ್ಲಿ ಜನಮಾನಸದಲ್ಲಿ ಅಚ್ಚಳಿಯದೆ ಸ್ಥಿರಕಾಲ ಉಳಿದು ಬೆಳೆಯಲಿ.
ಮಂಜುಳ ಸಿ.ಎಸ್, ಪ್ರಾಧ್ಯಾಪಕರು, ಪತ್ರಿಕೋದ್ಯಮ ವಿಭಾಗ,ಕಾಲೇಜು ಶಿಕ್ಷಣ ಇಲಾಖೆ.

*

ವಸ್ತುನಿಷ್ಠ ಸುದ್ದಿ....
'ಪ್ರಜಾವಾಣಿ' ಪತ್ರಿಕೆ ಅಂದಿನಿಂದ ಇಂದಿನವರೆಗೂ ಯಾವುದೇ ರೀತಿಯ ಪಕ್ಷಪಾತ ವಹಿಸದೇ ವಸ್ತುನಿಷ್ಠವಾಗಿ ಸುದ್ದಿಗಳನ್ನು ಪ್ರಕಟಿಸುತ್ತಾ ಪತ್ರಿಕಾ ವೃತ್ತಿಯ ಪಾವಿತ್ರ್ಯಕ್ಕೆ ಎಳ್ಳಷ್ಟೂ ಕುಂದು ಬರದ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆ ಓದುವುದರೊಂದಿಗೆ ಪ್ರತಿದಿನ ಆರಂಭಿಸುವ ನಾನು ಅಪರೂಪಕ್ಕೆ ಒಂದೊಂದು ದಿನ ಆ ಪತ್ರಿಕೆ ಓದುವುದರಿಂದ ವಂಚಿತನಾದರೆ ಆ ದಿನವಿಡೀ ಏನೋ ಕಳೆದುಕೊಂಡ ಅನುಭವದಿಂದ ಚಡಪಡಿಸುತ್ತೇನೆ.

ಎಲ್ಲವನ್ನೂ ಹಣದಿಂದಲೇ ಅಳೆಯುತ್ತಾ ಎಲ್ಲರೂ ಹಣದ ಹಿಂದೆಯೇ ಓಡುವಂಥ ಈ ಕಾಲಘಟ್ಟದಲ್ಲಿ ಅದಾವ ಲೋಲುಪತೆಗಳಿಗೂ ಒಳಗಾಗದೇ ತನ್ನ ನಿಷ್ಪಕ್ಷಪಾತ ನಿಲುವಿನಲ್ಲಿನ ಬದ್ಧತೆಯನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಪ್ರಜಾವಾಣಿ ಬಳಗದ ಅದ್ಭುತ ಸಾಧನೆ! ಹ್ಯಾಟ್ಸಪ್ ಪ್ರಜಾವಾಣಿ!
– ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರ್ ಅಂಚೆ.,ಕೊಪ್ಪ ತಾ.

*

ಬರೆಯಲು ಪ್ರೇರೇಪಿಸಿದೆ...
ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಪ್ರಜಾವಾಣಿಗೆ ಅಭಿನಂದನೆಗಳು. ನಾನು ಈ ಪತ್ರಿಕೆಯ ಮುಖಬೆಲೆ 40 ಪೈಸೆ ಇದ್ದಾಗಿನಿಂದಲೂ ಓದುತ್ತಿದ್ದೇನೆ. ಆಗ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿ ಗ್ರಾಮ (ಈಗ ತಾಲೂಕು ಕೇಂದ್ರ)ಕ್ಕೆ ಮಧ್ಯಾಹ್ನದ ನಂತರ ಪ್ರಜಾವಾಣಿ ತಲುಪುತ್ತಿತ್ತು.

ನಾನು 1980ರ ದಶಕದಲ್ಲಿ ಪ್ರಜಾವಾಣಿ, ಸುಧಾಕ್ಕೆ ಸಣ್ಣಪುಟ್ಟ ಬರಹ,ಪ್ರತಿಕ್ರಿಯೆ ಕಳಿಸುತ್ತಿದ್ದೆ. ನನಗೆ ಬರೆಯಲು ಪ್ರೇರೇಪಿಸಿದ ಪ್ರಜಾವಾಣಿಗೆ ಧನ್ಯವಾದಗಳು.
–ವಿಜಯೇಂದ್ರ ಕುಲಕರ್ಣಿ (ಮಳ್ಳಿ) ಕಲಬುರಗಿ.

*

ಕನ್ನಡನಾಡಿನ ಧ್ವನಿಯಾಗಿರುವ ಪ್ರಜಾವಾಣಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ಕನ್ನಡ ನಾಡಿನ ಸರ್ವಜನಾಂಗದವರಿಗೆ ಇದು ಅಮೃತಗಳಿಗೆ ಎಂದರೆ ತಪ್ಪಾಗಲಾರದು! ತನ್ನ ತತ್ವ ಸಿದ್ಧಾಂತದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ನಾಡಿನ ಹೆಮ್ಮೆಯ ಪತ್ರಿಕೆ ಇದು.

ನಿಷ್ಪಕ್ಷಪಾತವಾದ ರೀತಿಯಲ್ಲಿ ವರದಿ ನೀಡುವ ನಾಡಿನ ಏಕೈಕ ಪತ್ರಿಕೆ ಪ್ರಜಾವಾಣಿ.
–ಭೀಮಾಶಂಕರ ದಾದೆಲಿ, ಹಳಿಸಗರ, ಶಹಾಪುರ

*

ವಿಶ್ವಾಸಾರ್ಹತೆಯ ಪತ್ರಿಕೆ
ಅಮೃತ ಮಹೋತ್ಸವಕ್ಕೆ ಹೆಜ್ಜೆಯಿಟ್ಟಿರುವ ಪ್ರಜಾವಾಣಿ ಬಳಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ಈ ಪತ್ರಿಕೆ ಹಿಂದಿನಿಂದಲೂ ವಿಶ್ವಾಸಾರ್ಹತೆ ಉಳಿಸಿಕೊಂಡು ಬಂದಿದೆ. ಎಲ್ಲಾ ವಿಷಯಗಳಿಗೂ ಒತ್ತು ನೀಡಿ ಓದುಗರ ಮನಸ್ಸು ಗೆದ್ದಿದೆ. 2008 ರಿಂದ ಇಂದಿನವರೆಗೂ ಪ್ರಜಾವಾಣಿ ಪತ್ರಿಕೆಯನ್ನು ಪ್ರತಿನಿತ್ಯ ಓದುತ್ತಲೇ ಇದ್ದೇನೆ.

2008 ರಲ್ಲಿ ಮಹಾರಾಜ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾಗ‌ ನಮ್ಮ ಹಿರಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಗ ಈ ಪತ್ರಿಕೆ ಓದುತ್ತಾ ಮುಖ್ಯವಾದ ಲೇಖನ, ಪ್ರಚಲಿತ ಘಟನೆಗಳನ್ನು ಪ್ರತಿನಿತ್ಯ ಪುಸ್ತಕದಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದುದನ್ನು ನೋಡಿದ್ದೆ.

ನನ್ನ ಹಲವು ಬರಹಗಳು ಈ ಪತ್ರಿಕೆಯಲ್ಲಿ ಪ್ರಕಟವಾದಾಗ ಆತ್ಮವಿಶ್ವಾಸ ಮೂಡಿತು. ನಾನೂ ಸೇರಿದಂತೆ ನೂರಾರು ಗೆಳೆಯರು ಇಂದು ಸರ್ಕಾರಿ ಹುದ್ದೆ ಗಳಿಸಿದ್ದೇವೆ. ನಮ್ಮ ಪರಿಶ್ರಮದ ಜೊತೆಗೆ ಪ್ರಜಾವಾಣಿ ಪತ್ರಿಕೆಯ ಫಲಶೃತಿ ಇದು. ಮುಂದೆಯೂ ಪತ್ರಿಕೆಗೆ ಹೆಚ್ಚಿನ ರೀತಿಯಲ್ಲಿ ಯಶಸ್ಸು ಸಿಗಲಿ. ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.
–ಚೆಲುವರಾಜು ಕೆ., ಧನಗೆರೆ‌, ಕೊಳ್ಳೇಗಾಲ

*

ನೆಚ್ಚಿನ ‍ಪತ್ರಿಕೆ
ಪ್ರಜಾವಾಣಿ ನನ್ನ ನೆಚ್ಚಿನ ಪತ್ರಿಕೆ. ಅದರೊಂದಿಗಿನ ಬಾಂಧವ್ಯ ಮಧುರವಾಗಿದೆ. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪತ್ರಿಕೆಯ ನುಡಿಸೇವೆಯು ಸದಾ ಹೀಗೇ ಇರಲಿ ಎಂದು ಕೃತಜ್ಙತೆಯಿಂದ ನೆನೆಯುತ್ತೇನೆ.
– ಮಹಮ್ಮದ್ ರಫೀಕ್, ಕೊಟ್ಟೂರು

*

ಅಚ್ಚುಮೆಚ್ಚಿನ ಪತ್ರಿಕೆ
ಸ್ವಾತಂತ್ಯ್ರದ ಹೊಸಲಿನಲ್ಲಿ ಆರಂಭವಾದ ಪತ್ರಿಕೆ, ಬರವಣಿಗೆಯಲ್ಲಿ ಇನ್ನೂ ಉಳಿಸಿಕೊಂಡು ಪೋಷಿಸಿಕೊಂಡು ಬಂದಿರುವ ಜೀವಂತಿಕೆ, ಪಾರದರ್ಶಕತೆ, ಉತ್ತರದಾಯಿತ್ವ, ಪಕ್ಷಾತೀತತೆ, ವಸ್ತು ನಿಷ್ಠತೆ, ಬದ್ಧತೆ ಎಲ್ಲ ವಿಚಾರದಲ್ಲೂ ಗಮ್ಯ ಸ್ಥಾನದ ಈ ವಾಣಿ ಕಿರಿಯರಿಂದ ಹಿರಿಯರಿಗೂ ಅಚ್ಚುಮೆಚ್ಚು.

ಕನ್ನಡ ನಾಡಿನ ಅಸ್ಮಿತೆ,ಸಾಮಾಜಿಕ ರಾಜಕೀಯ, ಬದಲಾವಣೆಗೆ, ಸರ್ಕಾರದ ಕಾರ್ಯನೀತಿ ಜನಪರ ಬದಲಾವಣೆಗೆ ತನ್ನದೇ ಕೊಡುಗೆ ನೀಡಿ, ಸಾಮಾಜಿಕ ಪ್ರಜ್ಞೆ ಎಚ್ಚರಿಸುವಲ್ಲಿ, ಜ್ಞಾನ, ವಿಜ್ಞಾನ ಮತ್ತು ಸಾಹಿತ್ಯ ಪಸರಿಸುವ, ಸಹಾಯ ಹಸ್ತಕ್ಕೆ ಮುಂದಾಗುವ ಕನ್ನಡದ ಧ್ವನಿ, ಜನಪರ ವಾಣಿ. ಮುಂದೆಯೂ ಹೊಸ ಉತ್ಸಾಹ, ಹುಮ್ಮಸಿನಿಂದ ಸಾಗಲಿ.

ವಿನಯ್ ಕುಮಾರ್ ಚಿಂಚೋಳಿ, ಬಲಶೆಟ್ಟಿಹಾಳ

*

ಮನೆಯ ಅತಿಥಿ!
'ಪ್ರಜಾವಾಣಿಯ ಅಮೃತ ಹಾದಿ...' (15,ಅಕ್ಟೋಬರ್-2022,ಪ್ರ,ವಾ) ಲೇಖನ ಸೊಗಸಾಗಿದೆ. 75ರ ಹೊಸ್ತಿಲಲ್ಲಿ ನಿಂತಿರುವ ಪ್ರಜಾವಾಣಿ ಪತ್ರಿಕೆ ಹಾಗೂ ಸಂಪಾದಕರು, ಬಳಗಕ್ಕೆ ಅಭಿನಂದನೆಗಳು!

ನಿತ್ಯ ನಮ್ಮ ಮನೆಯ ಅತಿಥಿಯಾಗಿ, ಮನೆಯ ಸದಸ್ಯನಾಗಿರುವ ಪ್ರಜಾವಾಣಿಯನ್ನು ಹಲವು ದಶಕಗಳಿಂದ ಓದುತ್ತಲೇ ಬೆಳೆದವ, ಪತ್ರಿಕೆಯಿಂದ ಸಾಕಷ್ಟು ಕಲಿತವ ನಾನು! ನಾಡು–ನುಡಿ, ನೆಲ, ಜಲ, ದೇಶ, ಭಾಷೆ ಹೀಗೆ ಹಲವು ರೀತಿ, ನೀತಿ, ಬದ್ಧತೆ, ಸೈದ್ಧಾಂತಿಕ ನಿಲುವುಗಳನ್ನು ಪ್ರತಿಪಾದಿಸುತ್ತಾ ಎಂತಹ ಕಠಿಣ ಪರಿಸ್ಥಿತಿಯಲ್ಲೂ ‌ಪರಿಸ್ಥಿತಿಗೆ ರಾಜಿಯಾಗದೇ, ಎದೆಗಾರಿಕೆಯಿಂದ ನಡೆದು ಮೌಲ್ಯವನ್ನು,ಮಾನವೀಯತೆಯನ್ನು ಬಿತ್ತುತ್ತಾ ಬಂದಿದೆ. ಪ್ರಬುದ್ದ ಓದುಗರ ಪತ್ರಿಕೆಯಾಗಿರುವ ಪ್ರಜಾವಾಣಿ ಕನ್ನಡಿಗರ ಹೆಮ್ಮೆ.
ಎಚ್.ಎನ್.ಕಿರಣ್ ಕುಮಾರ್, ಹಳೇಹಳ್ಳಿ ಅಂಚೆ, ಗೌರಿಬಿದನೂರು ತಾ.

*

ನನ್ನ ಅರಿವನ್ನು ವಿಸ್ತರಿಸಿದ ಪತ್ರಿಕೆ ಇದು. ನಾನು ಅತಿ ಹೆಚ್ಚು ಓದಿದ, ಒಂದಷ್ಟು ಭರವಸೆ ನಂಬಿಕೆಗಳನ್ನು ಕಟ್ಟಿಕೊಂಡಿರುವ ಇಟ್ಟುಕೊಂಡಿರುವ ನನ್ನ ಮನಸ್ಸಿನ ಪತ್ರಿಕೆ‌. ಆಗಾಗ ಅಡ್ಡೆಳೆದದ್ದೂ ಇದೆ. ಸಿಟ್ಟು ಬರಿಸಿದ್ದೂ ಇದೆ. ಆದರೆ ಪ್ರಜಾವಾಣಿ ಕರ್ನಾಟಕದ ಜನದನಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದೆ‌. ಇತ್ತೀಚೆಗೆ ಭರವಸೆ ಕಳೆದುಕೊಂಡಿದ್ದ ನಮಗೆಲ್ಲ ಮತ್ತೆ ನಂಬಿಕೆ ಆಶಾವಾದವನ್ನು ಉಳಿಸುವಂತಹ ಕೆಲವು ಬರೆಹಗಳು ಪ್ರಜಾವಾಣಿಯಲ್ಲಿ ಪ್ರಕಟವಾದಾಗ ಸಮಾಧಾನದ ನಿಟ್ಟುಸಿರುಬಿಟ್ಟಿದ್ದೇ‌ನೆ. ದೃಶ್ಯ ಮಾಧ್ಯಮಗಳ ಮಾರಿಜಾತ್ರೆಯ ನಡುವೆಯೂ ಪ್ರಜಾವಾಣಿ ತನ್ನ ಮೌಲ್ಯವನ್ನು ಉಳಿಸಿಕೊಂಡಿದೆ. ಅದಕ್ಕೀಗ 75. ಮುಂದೆಯೂ ಜನಪರವಾಗಿ, ವಸ್ತುನಿಷ್ಠವಾಗಿ ನಿಲ್ಲಲಿ.

ನನ್ನ ವೈಯಕ್ತಿಕ ಕಾರಣಗಳಿಗೆ ಪತ್ರಿಕೆಯ ಮೇಲೆ ಮುನಿಸಿಕೊಂಡದ್ದೂ ಇದೆ. ಆದರೆ ಎಂದಿಗೂ ಪ್ರಜಾವಾಣಿಯನ್ನು ತೊರೆಯಲು ಆಗಲೇ ಇಲ್ಲ.
–ಸುರೇಶ ಎನ್. ಶಿಕಾರಿಪುರ

*

ವೈವಿಧ್ಯಮಯ...
ಹಲವು ವರ್ಷಗಳಿಂದ ಪ್ರಜಾವಾಣಿಯ ಓದುಗನಾಗಿ ಮತ್ತು ಬರಹಗಾರನಾಗಿ ಸಂಬಂಧ ಇದೆ. ಪ್ರಜಾವಾಣಿ ನಮ್ಮ ಮನೆಯ ಸದಸ್ಯ.

ಪ್ರಜಾವಾಣಿಯ 'ಸಾಪ್ತಾಹಿಕ ಪುರವಣಿ' (ಇಂದಿನ ಭಾನುವಾರದ ಪುರವಣಿ) ಯಲ್ಲಿ, 'ಕರ್ನಾಟಕ ದರ್ಶನ', 'ಮೆಟ್ರೊ ಪುರವಣಿ' ಯಲ್ಲಿ ನನ್ನ ಅನೇಕ ಲೇಖನಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದಕ್ಕೆ ತುಂಬಾ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಪ್ರಜಾವಾಣಿಯಲ್ಲಿ, ವಿವಿಧ ಪುರವಣಿಗಳಲ್ಲಿ ಪ್ರಕಟಿತ ಅನೇಕ ಲೇಖನಗಳು ಸಂಗ್ರಹಕ್ಕೆ ಯೋಗ್ಯವಾಗಿವೆ. ಪತ್ರಿಕೆಯ ಮುದ್ರಣ. ಪುಟವಿನ್ಯಾಸ, ಗುಣಮಟ್ಟದಲ್ಲಿ ರಾಜಿ ಇಲ್ಲದೆ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿರುವ ಪ್ರಜಾವಾಣಿ ನಮ್ಮ ಹೆಮ್ಮೆ.

ಓದುಗರಿಗೆ ವಸ್ತು ವೈಶಿಷ್ಟ್ಯ, ವೈವಿಧ್ಯ ಬರಹ, ವರದಿ, ವಿಶೇಷ ಲೇಖನಗಳು ಓದುಗರಿಗೆ ಒಂದು ಕೊಡುಗೆ. ವಿದ್ಯಾರ್ಥಿಗಳಿಗೆ, ಇತರೆ ಸಂದರ್ಭಗಳಲ್ಲಿ ಇತರರಿಗೂ ಆರ್ಥಿಕ ಸಹಾಯ ಮಾಡುತ್ತದೆ ಇದು ಮೆಚ್ಚುವಂಥದ್ದು.

ನಮ್ಮ ಪ್ರಜಾವಾಣಿ ಯುಟ್ಯೂಬ್ ಚಾನೆಲ್, ಫೇಸ್ ಬುಕ್, ಇನ್ ಸ್ಸಾಟಾಗ್ರಾಂ, ಟ್ವಿಟರ್, ಟೆಲಿಗ್ರಾಂ, ಪಾಡ್ ಕ್ರಾಸ್ಟ್, ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಇದ್ದು ಮುಂದೆ ಕನ್ನಡದ 'ಕೂ' ದಲ್ಲಿಯು ನಮ್ಮ ಪ್ರಜಾವಾಣಿ ಬರಲಿ ಎಂದು ವಿನಂತಿಸುತ್ತೇನೆ.
ಪ್ರೀತಿಯ ಪ್ರಜಾವಾಣಿಯು ಮುಂದೆ ಶತಮಾನೋತ್ಸವ ಸಂಭ್ರಮವನ್ನು ಸಡಗರದಿಂದ ಆಚರಿಸುವಂತಾಗಲಿ ಎಂದು ಹಾರೈಸುತ್ತೇನೆ
–ವಿಜಯಾನಂದ ಬಿ.ಕಾಲವಾಡ, ಹುಬ್ಬಳ್ಳಿ

*

ಓದುಗರ ಜ್ಞಾನ ಹೆಚ್ಚಿಸುವ ಪತ್ರಿಕೆ
ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವ ‘ಪ್ರಜಾವಾಣಿ’ ಅಭಿನಂದನೆಗಳು. ಪತ್ರಿಕೆಯು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತ ಬಂದಿದೆ. ವಿದ್ಯಾರ್ಥಿಗಳ ಪಾಲಿಗೆ ನಿತ್ಯ ರಾಜ್ಯ, ರಾಷ್ಟ್ರ, ರಾಜಕೀಯ, ಅಂತರಾಷ್ಟ್ರೀಯ, ಕ್ರೀಡೆ, ಮತ್ತು ವಾಣಿಜ್ಯ ಎಲ್ಲವನ್ನೂ ಪ್ರಕಟಿಸುವುದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಜ್ಞಾನಭಂಡಾರವಾಗಿರುವಂತಹ ಯಾವುದಾದರೂ ಪತ್ರಿಕೆ ಇದ್ದರೆ ಅದು ಪ್ರಜಾವಾಣಿ!
–ವೆಂಕಟೇಶ ವಾಲ್ಮೀಕಿ, ಶಹಾಪುರ, ಯಾದಗಿರಿ ಜಿಲ್ಲೆ

*

ಮೌಲ್ಯ ಕಳೆದುಕೊಳ್ಳದ ಪತ್ರಿಕೆ
ವಿದ್ಯಾರ್ಥಿಗಳ ನಂಬರ್‌ ಒನ್ ಪತ್ರಿಕೆ ಎಂದರೆ ನಮ್ಮ ಪ್ರಜಾವಾಣಿ. ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ವಿಷಯಗಳನ್ನು ಉಣಬಡಿಸುತ್ತದೆ. ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಸುದ್ದಿಯನ್ನು ಅಚ್ಚುಕಟ್ಟಾಗಿ ಪ್ರಕಟಣೆ ಮಾಡುತ್ತಿದೆ.ಸಾಹಿತ್ಯ ಪುರವಣಿ ಸಂಪಾದಕೀಯ ಲೇಖನಗಳ ವಿಷಯ ತಾರ್ಕಿಕವಾಗಿ ವಿಶ್ಲೇಷಣೆ ಮಾಡಲಾಗುತ್ತದೆ. ಇದರಿಂದ ಓದುಗರಿಗೆ ವಿಷಯ ವಿಮರ್ಶೆಗೆ ನೆರವಾಗುತ್ತದೆ. ಜೊತೆಗೆ ಮೌಲ್ಯವನ್ನು ಕಳೆದುಕೊಳ್ಳದ ಪತ್ರಿಕೆ ಎಂದರೆ ಅದು ಪ್ರಜಾವಾಣಿಯಾಗಿದೆ.
–ಶರಣಯ್ಯ ಮಠ, ಧಾರವಾಡ

*

ಜನಪರ ನಿಲುವು
1961ರಲ್ಲಿ ನನ್ನ ಹೈಸ್ಕೂಲ ದಿನಗಳಿಂದ ಇಲ್ಲಿಯವರೆಗೆ ‘ಪ್ರಜಾವಾಣಿ’ ನಿತ್ಯ ಒಡನಾಡಿ. ವಸ್ತುನಿಷ್ಠ ಮಾಹಿತಿಗೆ,
ಪ್ರಜಾಪ್ರಭುತ್ವದ ನಿಲುವಿಗೆ, ಪ್ರಜಾವಾಣಿ ಕೊಡುಗೆ ಅಪಾರ.

ಸಾಪ್ತಾಹಿಕ ಪುರವಣಿ, ದೀಪಾವಳಿ ಸಂಚಿಕೆಗಳು ಸಾಹಿತ್ಯ ಸಂಸ್ಕೃತಿಯ ಸಂಗಮ. ನಿತ್ಯದ ಸಂಪಾದಕೀಯ ಪುಟ ವೈಚಾರಿಕ ಪ್ರಜ್ಞೆಯ ವೃದ್ಧಿಗೆ ಸಹಕಾರಿ. ನಾಡಿನ ಓದುಗರ ಪ್ರಜ್ಞೆಯನ್ನು ಹೆಚ್ಚಿಸುತ್ತ ಬಂದಿರುವ ಪತ್ರಿಕೆ ನೂರಾರು ವರ್ಷ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಮುನ್ನಡೆಯಲಿ ಎಂದು ಅಮೃತವರ್ಷದಲ್ಲಿ ಹಾರೈಸುವೆ.
–ಯು.ಎನ್.ಸಂಗನಾಳಮಠ. ಹೊನ್ನಾಳಿ.ದಾವಣಗೆರೆ.ಜಿ.

*

ಸತ್ವ ಉಳಿಸಿಕೊಂಡ ಪತ್ರಿಕೆ
ವಿಭಿನ್ನ ಸಿದ್ಧಾಂತ ಹೊಂದಿರುವ ಜನರನ್ನು ಹಿಡಿದಿಟ್ಟುಕೊಳ್ಳುವುದು ತುಂಬಾ ಕಷ್ಟ. ರಾಜಕೀಯ, ಜಾತಿ, ಧರ್ಮ, ಪಕ್ಷಗಳ ಪರ ಅಥವಾ ವಿರೋಧ ಎನ್ನುವಂತೆ ಬಿಂಬಿತವಾದರೆ ಪತ್ರಿಕೆಯನ್ನೇ ತಿರಸ್ಕರಿಸುತ್ತಾರೆ. ಇಂತಹ ದಿನಗಳಲ್ಲಿ ಪತ್ರಿಕೆ ಸತ್ಯ, ವಸ್ತು ನಿಷ್ಠತೆ, ಎಲ್ಲಾ ಸುದ್ದಿಗಳಿಗೆ ಸಮಾನ ಆದ್ಯತೆ ನೀಡಿದೆ. ಇದು ಪ್ರಜಾವಾಣಿ ಪತ್ರಿಕೆ ತನ್ನ ಸತ್ವವನ್ನು ಉಳಿಸಿಕೊಂಡು ಎಲ್ಲಾ ರೀತಿಯ ಓದುಗರನ್ನು ಸೆಳೆಯಲು ಕಾರಣವಾಗಿದೆ ಎನ್ನಬಹುದು. ಪತ್ರಿಕೆ ಅಮೃತ ಮಹೋತ್ಸವ ಅಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ.
– ಸಣ್ಣಮಾರಪ್ಪ

*

ಜನಸಾಮಾನ್ಯರ ಧ್ವನಿ
ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಪ್ರಜಾವಾಣಿಯು ಪತ್ರಿಕಾ ಮಾಧ್ಯಮದಲ್ಲಿ ಎಂದೂ ಹೆಸರು ಕೆಡಿಸಿಕೊಳ್ಳದೆ ತನ್ನದೇ ಆದ ಮೌಲ್ಯಗಳನ್ನು ರೂಢಿಸಿಕೊಂಡು ಬರುತ್ತಾ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ.

ನಾನು ಸುಮಾರು 20 ವರ್ಷಗಳಿಂದ ನಿರಂತರವಾಗಿ ಪ್ರಜಾವಾಣಿ ಪತ್ರಿಕೆಯ ಓದುಗ. ನನ್ನ ತಂದೆಗೆ 85 ವರ್ಷ. ಒಂದು ದಿನ ಮನೆಗೆ ಬರುವ ಪತ್ರಿಕೆ ಬದಲಾದರೆ ಅಸಮಾಧಾನಗೊಳ್ಳುತ್ತಾರೆ. ವಾಚಕರವಾಣಿಯಲ್ಲಿ ನೂರಕ್ಕೂ ಹೆಚ್ಚು ನನ್ನ ಅಭಿಪ್ರಾಯಗಳು ಪ್ರಕಟಗೊಂಡಿವೆ. ಪತ್ರಿಕೆಗೆ ಶುಭಹಾರೈಕೆಗಳು
– ಎಂ.ಆರ್‌.ಶಿವಕುಮಾರ್‌

*

ವಸ್ತುನಿಷ್ಠ, ವೃತ್ತಿಪರ...
ಪ್ರಜಾವಾಣಿ ಅಮೃತ ಮಹೋತ್ಸವ ಆಚರಿಸುತ್ತಿದೆ, ಈ ಸಂದರ್ಭದಲ್ಲಿ ಶುಭಾಶಯ ಕೋರುತ್ತೇನೆ.

1998 ರಿಂದ ಪ್ರಜಾವಾಣಿಯ ಓದುಗನಾಗಿದ್ದೇನೆ, ಪ್ರಜಾವಾಣಿ ಓದುಗನಾಗಿ ನನಗೆ ಬೆಳ್ಳಿ ಹಬ್ಬದ ಸಂಭ್ರಮ. ನಾನು ಸರ್ಕಾರಿ ಹುದ್ದೆ ಪಡೆದು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ನೆರವಾದ ಪ್ರಜಾವಾಣಿಯ ಪಾತ್ರವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಇದು ನನ್ನ ಜೀವನದಲ್ಲಿ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.

ಹಿರಿಯರಿಂದ ಹಿಡಿದು ಕಿರಿಯರವರೆಗೆ ಎಲ್ಲರಿಂದಲೂ ಓದಿಸಿಕೊಳ್ಳುವ ಗುಣವಿರುವ ಪ್ರಜಾವಾಣಿ, ಕೃಷಿ, ಆರೋಗ್ಯ, ಪರಿಸರ, ಶಿಕ್ಷಣ, ಕ್ರೀಡೆ, ವಾಣಿಜ್ಯ, ರಾಜಕೀಯ, ಸಾರ್ವಜನಿಕ ವಲಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ಬಗ್ಗೆ ಸುದ್ದಿ ಜೊತೆಗೆ ಆಳವಾದ ವಿಶ್ಲೇಷಣೆಯಿಂದ ಕೂಡಿರುವ ವರದಿ ನೀಡುವ ಈ ಪತ್ರಿಕೆ ವಸ್ತುನಿಷ್ಠತೆ ಹಾಗೂ ವೃತ್ತಿಪರತೆಯ ವಿಷಯವಾಗಿ ರಾಜಿ ಮಾಡಿಕೊಳ್ಳದೆ ಇರುವುದು ಇದರ ಹೆಗ್ಗಳಿಕೆ.ಪ್ರಜಾವಾಣಿ ಜನಸಾಮಾನ್ಯರಿಗೆ ಅಮೃತವಾಣಿಯೇ ಸರಿ.
–ಎನ್‌.ಬಿ.ಮಧು

*

ಭಾವನಾತ್ಮಕ ನಂಟು...
ನನಗೆ ತಿಳಿದ ಹಾಗೆ ಪ್ರಜಾವಾಣಿ ಪತ್ರಿಕೆಗೆ 50 ಪೈಸೆ ದರ ಇದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಇದನ್ನು ತರಿಸುತ್ತಿದ್ದರು, ಈಗಲೂ ಅದು ಮುಂದುವರೆದಿದೆ. ನಮ್ಮ ಮನೆ ಮಂದಿಯ ಆತ್ಮೀಯ ಸದಸ್ಯರಂತೆ ಭಾವನಾತ್ಮಕ ನಂಟೊಂದು ಪ್ರಜಾವಾಣಿಯೊಂದಿಗೆ ಬೆರೆತಿದೆ. ಬರೀ 75 ಅಲ್ಲ ನೂರು ಕಾಲ ಮುಂದುವರೆಯಲಿ ಎಂಬುದೇ ನನ್ನ ಶುಭ ಹಾರೈಕೆಗಳು.
–ಟಿ.ಎಸ್. ಪ್ರತಿಭಾ, ಚಿತ್ರದುರ್ಗ.

*

ಜಾತ್ಯತೀತ ನಿಲುವು
ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಓದಲು ಬಯಸುವ ಅಚ್ಚುಮೆಚ್ಚಿನ ಪತ್ರಿಕೆ ಪ್ರಜಾವಾಣಿ. ಬಡ ವಿದ್ಯಾರ್ಥಿಗಳು ಪರೀಕ್ಷೆ ಎಂಬ ಯುದ್ಧವನ್ನು ಎದುರಿಸಬೇಕಾದರೆ ಅವರಿಗೆ ಧೈರ್ಯ ತುಂಬುವ ಪತ್ರಿಕೆ. ಪರೀಕ್ಷೆ ಸಮಯದಲ್ಲಿ ಹಲವಾರು ವಿಭಿನ್ನ ಶೈಲಿಯಲ್ಲಿ ಸರಳವಾಗಿ ಪರೀಕ್ಷೆ ಮಾರ್ಗವನ್ನು ತೋರಿಸು ಪತ್ರಿಕೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಡ ವಿದ್ಯಾರ್ಥಿಗಳಿಗೆ ಆಸ್ತಿ ಪ್ರಜಾವಾಣಿ.

ಜಾತ್ಯತೀತ ನಿಲುವು, ಯಾವ ವರ್ಗಕ್ಕೂ ಓಲೈಕೆ ತೋರದೇ, ಸಮಾನ ಮನ್ನಣೆ ನೀಡುತ್ತ ಬಂದಿರುವ ಪತ್ರಿಕೆ ಈಗ ಅಮೃತ ಮಹೋತ್ಸವ ಅಚರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ. ಅಭಿನಂದನಗಳು.
–ದೇವರಾಜ್ ಗುಡದಳ್ಳಿ, ಚಾಮಲಾಪೂರ.

*

ಅಕ್ಷರಪ್ರೀತಿ ಬೆಳೆಸಿದ ಪತ್ರಿಕೆ
ಅಮೃತ ಮಹೋತ್ಸವ ಸಂಭ್ರಮದ ನನ್ನ ಪತ್ರಿಕೆಗೆ ಶುಭಕಾಮನೆಗಳು. ನನ್ನ ಬಾಲ್ಯದ ದಿನಗಳಿಂದಲೂ ಪ್ರಜಾವಾಣಿ ಪತ್ರಿಕೆಯನ್ನು ಓದುತ್ತ ಬೆಳೆದವನು. ಅಕ್ಕರೆಯ ಅಕ್ಷರ ಪ್ರೀತಿಯನ್ನು ಬೆಳೆಸಿದ ಪತ್ರಿಕೆಯಿದು.
–ರಾಂಚಂದ್ರಕೊಪ್ಪಲು, ತೀರ್ಥಹಳ್ಳಿ

*

ದೀರ್ಘಕಾಲದ ಓದುಗ....
ಸುಮಾರು ಮುವತ್ತೈದು ವಷ೯ಗಳಿಂದ ನಾನು ಪ್ರಜಾವಾಣಿ ಓದುಗ. ಅದು ನನಗೆ ತುಂಬಾ ಅಚ್ಚುಮೆಚ್ಚಿನ ಪತ್ರಿಕೆ. ಕಾರಣ, ಇದರಲ್ಲಿ ದೋಷವಿಲ್ಲದ ಮುದ್ರಣ, ಉತ್ತಮ ಬರವಣಿಗೆ ಶೈಲಿ, ವಿಷಯದ ಸ್ಪಷ್ಟತೆ, ನಿಖರತೆ, ಆಕಷ೯ಕಚಿತ್ರಗಳು, ಇಷ್ಟವಾಗುವ ಅಂಕಣಗಳು, ಸಾಮಾಜಿಕ ಕಳಕಳಿ...... ಹೀಗೆ ಇದರ ಉತ್ತಮ ಗುಣಗಳನ್ನು ಪಟ್ಟಿ ಮಾಡುತ್ತಾ ಹೋದರೆಇದು ದೊಡ್ಡದಾಗುವುದರಲ್ಲಿ ಸಂಶಯವಿಲ್ಲ.

ಈಗ ಇದಕ್ಕೆ ಎಪ್ಪತ್ತೈದರ ಅಮೃತ ಸಂಭ್ರಮ. ಇದರ ಯಶಸ್ಸು ಹೀಗೆಯೇ ಮುಂದುವರಿಯಲಿ.
–ಸಂತೇಬೆನ್ನೂರು ಮಂಜಪ್ಪ, ಭದ್ರಾವತಿ.

*

ಅಂಟಿದ ಓದಿನ ನಂಟು
ಪ್ರಜಾವಾಣಿ ಅಮ್ಮತ ಮಹೋತ್ಸದ ಸಂಭ್ರಮಕ್ಕೆ ಶುಭಾಶಯಗಳು. ನಾನು 45 ವರ್ಷಗಳಿಂದ ನಿತ್ಯ ಪ್ರಜಾವಾಣಿ ಪತ್ರಿಕೆ ಓದುತ್ತಿರುವೆ. ಇದು ನನಗೆ ಅಂಟಿದ ನಂಟು. ಜ್ಞಾನದ ಗಂಟು. ಎಲ್ಲಾ ವರ್ಗದ ಜನರ ದನಿಯಾಗಿ ದುಡಿಯುತ್ತಿರುವ ನೆಚ್ಚಿನ ಪ್ರಜಾವಾಣಿ ಪ್ರಜಾಪ್ರಭುತ್ವವಕ್ಕಾಗಿ ಹೀಗೆ ದುಡಿಯುತ್ತಿರಲಿ.
–ನಂಜನಹಳ್ಳಿ ನಾರಾಯಣ

*

ಘನತೆ ಉಳಿಸಿಕೊಂಡ ಪತ್ರಿಕೆ
ಪತ್ರಿಕೆ ಅಂದರೆ ಥಟ್ಟನೆ ನೆನಪಿಗೆ ಬರುವುದೇ ಹೆಮ್ಮೆಯ ಪ್ರಜಾವಾಣಿ. ನಾನು ಪ್ರಜಾವಾಣಿ ಪತ್ರಿಕೆಯನ್ನು ಅದರ ಬೆಲೆ ಎರಡು ರೂಪಾಯಿ ಇದ್ದಾಗಿನಿಂದಲೂ ಓದುತ್ತಿದ್ದೇನೆ. ಈ ಓದಿನಿಂದಲೇ ನಾನು 2009ರ ಶಿಕ್ಷಕರ ಸಿಇಟಿ ಪರೀಕ್ಷೆಯ ಸಾಮಾನ್ಯ ಪತ್ರಿಕೆಯಲ್ಲಿ ಶೇಕಡ 75 ಅಂಕ ಪಡೆದು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾಗಿ ಶಿಕ್ಷಕನಾಗಿದ್ದೇನೆ. ಅಂದಿನಿಂದ ಇಂದಿನವರೆಗೂ ನನ್ನ ವಿದ್ಯಾರ್ಥಿಗಳಿಗೆ, ಮಿತ್ರರಿಗೆ ಸಾಮಾನ್ಯ ಜ್ಞಾನಕ್ಕೆ ದಿನಬಿಡದೇ ಪ್ರಜಾವಾಣಿ ಓದಿ ಎಂದು ತಿಳಿಸುತ್ತಿದ್ದೇನೆ. ಪ್ರಜಾವಾಣಿ ಪತ್ರಿಕಾ ಬಳಗಕ್ಕೆ ಎಪ್ಪತ್ತೈದು ವರ್ಷದ ಅಭಿನಂದನೆಗಳು. ಸಾಮಾಜಿಕ ಜಾಲತಾಣಗಳ ನಡುವೆಯೂ ಪ್ರಜಾವಾಣಿ ತನ್ನ ಹಿಂದಿನ ಘನತೆಯೊಂದಿಗೆ ಸಾಗುತ್ತಿದೆ.

ನನ್ನ ಮಿತ್ರನೊಬ್ಬ ‘ಪ್ರಜಾವಾಣೀನೆ ಯಾಕ್ ಓದ್ತೀರಿ’ ಎಂದು ಪ್ರಶ್ನಿಸಿದ. ಅದಕ್ಕೆ ನಾನು ಕೊಟ್ಟ ಉತ್ತರ 'ಪೇಸ್ಟ್ ಅಂದ್ರೆ ಕೋಲ್ಗೇಟ್, ಕವಿ ಅಂದ್ರೆ ಕುವೆಂಪು, ನಟ ಅಂದ್ರೆ ಡಾಕ್ಟರ್ ರಾಜ್ ಕುಮಾರ್ ಹಾಗೇನೆ ಪೇಪರ್ ಅಂದ್ರೆ ಪ್ರಜಾವಾಣಿ 'ಅಂತ ಹೇಳಿದೆ. ಅನಿವಾರ್ಯ ಕಾರಣಗಳಿಂದ ಪ್ರಜಾವಾಣಿ ಓದದೆ ಇರೋ ದಿನ ಏನೋ ಮಿಸ್ ಮಾಡಿಕೊಂಡ ಅನುಭವ ಕಾಡದೇ ಇರದು.
– ಮಲ್ಲಿಕಾರ್ಜುನ ಸುರಧೇನುಪುರ.

*

ಗಟ್ಟಿತನ...
1965ಕ್ಕೆ ನೊಣವಿನಕೆರೆಯಿಂದ ಬೆಂಗಳೂರಿಗೆ ಪ್ರೌಡಶಾಲೆಗೆ ಸೇರಲು ಬಂದೆ. ಲಾಲ್‌ಬಾಗ್ ಹತ್ತಿರ ಅಣ್ಣಂದಿರ ನಡುವೆ ಜೀವನ ಮುಂದುವರಿಯಿತು..ಅಂದಿನಿಂದ ಇಂದಿನವರೆಗೂ ಪ್ರಜಾವಾಣಿ ಬೆಳಿಗ್ಗೆ ನೋಡಿದ ಮೇಲೆ ಮುಂದಿನ ದಿನಚರಿ, ಸೂರ್ಯೊದಯದಂತೆ...ಹೊಗಳಿಕೆ ಬೇಕಿಲ್ಲ.. 75 ಕಾಣಲು ಗಟ್ಟಿತನ, ಸತ್ಯ, ನೇರ, ಅಂದವೇ ಕಾರಣ. 60 ತುಂಬಿದ ದಿನ ನನ್ನ ಮಿಡ್ ಕಾಲಂ . ‘ಮಿಸ್ಡ್ ಕಾಲ್’ ಪ್ರಕಟಗೊಂಡಿದ್ದು ನನ್ನ ಸಂತಸದ ಕ್ಷಣ... ಪ್ರಜಾವಾಣಿ ನೂರರ ಮೆಟ್ಟಿಲು ಮುಟ್ಟಲಿ.. ಮುಂದೆ ನಿರಂತರ ಕರ್ನಾಟಕದ ಓದುಗರ ಮನೆ..ಮನ..ತಲುಪಿ ಬಾಂಧವ್ಯ ಮತ್ತಸ್ಟು ಗಟ್ಟಿಯಾಗಲಿ...
–ನೊಣವಿನಕೆರೆ ರಾಮಕೃಷ್ಣಯ್ಯ

*

ಬದ್ಧತೆ ಕಾಪಾಡಿಕೊಂಡ ಪತ್ರಿಕೆ
‘ಪ್ರಜಾವಾಣಿ’ ಕನ್ನಡಿಗರ ಹೆಮ್ಮೆ. ವಿದ್ಯಾರ್ಥಿದೆಸೆಯಿಂದ ಪ್ರಜಾವಾಣಿ ಓದುತ್ತಿರುವೆ. ಗುಣಮಟ್ಟ, ವೈವಿಧ್ಯತೆ ಮತ್ತು ಬದ್ಧತೆಯಲ್ಲಿ ರಾಜಿ ಮಾಡಿಕೊಳ್ಳದೇ ಸ್ವಂತಿಕೆ ಕಾಪಾಡಿಕೊಂಡಿರುವ ಕನ್ನಡದ ಹೆಮ್ಮೆಯ ಪತ್ರಿಕೆಯಿದು.

ನಿತ್ಯದ ಸುದ್ಧಿಯ ಜೊತೆಗೆ ಲೇಖನ, ಕತೆ, ಕವನಗಳನ್ನು ಪ್ರಕಟಿಸಿ, ಕನ್ನಡಿಗರ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸಿದೆ. ಪತ್ರಿಕೆಯ ಯಾವ ಅಂಕಣದ ಲೇಖನಗಳನ್ನು ಅಭಿಮಾನದಿಂದ ಓದುತ್ತಿದ್ದೇನೋ ಅದೇ ಅಂಕಣಕ್ಕೆ ಲೇಖನಗಳನ್ನು ಬರೆಯುವ ಲೇಖಕನಾಗಿ ನನ್ನನ್ನು ಪ್ರಜಾವಾಣಿ ರೂಪಿಸಿದೆ. ಅಮೃತಮಹೋತ್ಸವದ ಸಂಭ್ರಮದ ಈ ಸಂದರ್ಭದಲ್ಲಿ ದಮನಿತರ ಧ್ವನಿಯಾಗಿ, ಮಾರ್ಗತೋರುವ ಗುರುವಾಗಿ ಪತ್ರಿಕೆಯ ಪಯಣ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸುತ್ತೇನೆ.
–ರಾಜಕುಮಾರ ಕುಲಕರ್ಣಿ, ಬಾಗಲಕೋಟೆ

*

ನೊಂದವರ ಧ್ವನಿ
ಯಾವುದೇ ಜಾತಿ, ಭೇದಭಾವ ಮಾಡದೇ, ಯಾವುದೇ ಪ್ರಭಾವಕ್ಕೆ ಒಳಗಾಗದೆ ನೊಂದವರ ಧ್ವನಿಯಾಗಿ, ನ್ಯಾಯ ದೊರಕಿಸುವ ಪತ್ರಿಕೆ ಪ್ರಜಾವಾಣಿ. ಸಂಪಾದಕೀಯ ಲೇಖನವು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತದೆ. ಒಟ್ಟಿನಲ್ಲಿ ಸಮಾಜದ ಕನ್ನಡಿಯಾಗಿ ಪತ್ರಿಕೆ ಕಾರ್ಯನಿರ್ವಹಿಸುತ್ತಿದೆ. ಶೋಷಿತರ, ದಲಿತರ ಪರ ನ್ಯಾಯಕ್ಕೆ ದುಡಿಯುತ್ತಿದೆ.
–ಸಂತೋಷ ಜಾಬೀನ್ ಸುಲೇಪೇಟ, ಕಲಬುರಗಿ

*

ಜನರ ನಾಡಿಮಿಡಿತ...
ಮಾಧ್ಯಮ ಕ್ಷೇತ್ರ ದೊಡ್ಡ ಉದ್ಯಮವಾಗಿ ಬೆಳೆದುನಿಂತಿರುವ ಈ ಸಂದರ್ಭದಲ್ಲಿ ಪತ್ರಿಕೆಗಳ ಧ್ಯೇಯ ಧೋರಣೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಂದರೆ ಪ್ರಜಾವಾಣಿ ಪತ್ರಿಕೆ ವಸ್ತುನಿಷ್ಠತೆ, ಸತ್ಯ, ಸಾಮಾಜಿಕ ನ್ಯಾಯದ ಪರ ನಿಲುವು ಇಟ್ಟುಕೊಂಡಿದೆ. ಈ ಪತ್ರಿಕೆ ಜನಪರ ಚಳುವಳಿ, ಚರ್ಚೆ, ಸಂವಾದಕ್ಕೆ, ಬೆಂಬಲ ‌ನೀಡುತ್ತಾ ಬಂದಿದೆ. ಜನರ ಜಾಗೃತಿಗೆ ಸಂಪಾದಕೀಯ, ಕನ್ನಡ ಸಾಹಿತ್ಯ ಮಾಹಿತಿ, ನೀರು ಸಂರಕ್ಷಣೆ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದೆ.

ಅಮೃತೋತ್ಸವದ ಹಾದಿ ದೀರ್ಘ ಕಾಲ ಸಾಗಲಿ. ವಿಶ್ವಾಸಾರ್ಹ ಮುಂದುವರಿಯಲಿ.
–ನಬಿಸಾಬ.ಆರ್.ಬಿ.ದೋಟಿಹಾಳ, ಕುಷ್ಟಗಿ

*

ವಿಚಾರ ಪ್ರಚೋದಕ
ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ಬರಹಗಳು, ಪ್ರಜಾಪ್ರಭುತ್ವದ ಆಡಳಿತದಲ್ಲಿ ವಿರೋಧ ಪಕ್ಷಗಳು ಎತ್ತಬೇಕಾದ ನೂರಾರು ಪ್ರಶ್ನೆಗಳನ್ನು ಓದುಗರ ಮುಂದಿಡುತ್ತ, ಮೂಡಿಸುತ್ತಿರುವ ಸಾಮಾಜಿಕ ಅರಿವು ಮತ್ತು ಎಚ್ಚರದ ವಿಚಾರಗಳು ನನ್ನಂತಹ ಸಾವಿರಾರು ಮಂದಿಯನ್ನು ಜೀವಂತವಾಗಿರಿಸಿವೆ.
–ಸಿ.ಪಿ. ನಾಗರಾಜ, ಬೆಂಗಳೂರು

*

ನಾನು ಕಳೆದ 32 ವರ್ಷಗಳಿಂದ ಪ್ರತಿದಿನ ಪ್ರಜಾವಾಣಿ ಪತ್ರಿಕೆ ಓದುತ್ತೇನೆ. ಗುಣಮಟ್ಟದ, ವಿಶ್ವಾಸಾರ್ಹ ವರದಿ. ಉತ್ತಮ ಲೇಖನಗಳು. ಎಲ್ಲ ವರ್ಗಕ್ಕೆ ಸಲ್ಲುವ ವಿಷಯಗಳು ಇರುತ್ತವೆ. ಧನ್ಯವಾದಗಳು.
–ಬಸವರಾಜು ಎಂ.ಎನ್., ಮೊತ್ತಹಳಿ, ಮಂಡ್ಯ ತಾ.

*

ಅಭಿನಂದನೆಗಳು...
ಪ್ರಜಾವಾಣಿಗೆ ಹೃದಯಪೂರ್ವಕ ಅಭಿನಂದನೆಗಳು. ಅಂದೂ, ಇಂದೂ ತತ್ವ ಸಿದ್ಧಾಂತದ ಜೊತೆ ರಾಜಿ ಮಾಡಿಕೊಳ್ಳದೇ ಮುಂದುವರಿದಿದೆ. ಪತ್ರಿಕೆಗೆ ಯಶಸ್ಸು ಇನ್ನೂ ಹೆಚ್ಚಿನದಾಗಿ ಸಿಗಲಿ ಎಂದು ಹಾರೈಸುತ್ತೇನೆ.
–ತುಪ್ಪಪ್ಪ ಎಂ., ಅತಿಥಿ ಉಪನ್ಯಾಸಕ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT