ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬಿಗ್ ಬಾಸ್; ಅಸಹಜ ಟಾಸ್ಕ್‌ ತರವೇ?

Last Updated 28 ಜೂನ್ 2021, 19:34 IST
ಅಕ್ಷರ ಗಾತ್ರ

ಎರಡನೆಯ ಇನಿಂಗ್ಸ್ ಎಂಬ ಹೆಸರಿನಲ್ಲಿ ಟಿ.ವಿ ಚಾನೆಲ್‌ವೊಂದರಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮವು ಮತ್ತೆ ಪ್ರಾರಂಭವಾಗಿದೆ. ನಾಲ್ಕೈದು ದಿನಗಳ ಕಾರ್ಯಕ್ರಮವನ್ನು ನೋಡಿದ ನಂತರ, ಎರಡನೆಯ ಇನಿಂಗ್ಸ್ ಬೇಡವಾಗಿತ್ತೇನೋ ಎನಿಸುತ್ತದೆ. ಅಗಾಧ ಇಚ್ಛಾಶಕ್ತಿಯಿದ್ದರೆ, ಅಸಾಧ್ಯವೆಂದು ತೋರುವ ಕಾರ್ಯಗಳೂ ಸಾಧ್ಯ ಎಂಬುದನ್ನು ಒಂದು ‘ಕುರ್ಚಿ’ ಟಾಸ್ಕ್ ತೋರಿಸಿತು. ಮಲ-ಜಲ ಬಾಧೆಗಳನ್ನು ಸಹಿಸುತ್ತಾ ಅನ್ನಾಹಾರ-ನಿದ್ರೆಯೂ ಇಲ್ಲದೆ, ಕೊನೆಗೆ ನೀರನ್ನೂ ಕುಡಿಯದೆ, ವ್ಯಕ್ತಿಯೊಬ್ಬ 38 ಗಂಟೆಗಳ ಕಾಲ ಏಳದೆ, ಕುರ್ಚಿಯ ಮೇಲೆ ಕುಳಿತದ್ದು ಆಶ್ಚರ್ಯ ಹಾಗೂ ವಿಷಾದವನ್ನುಂಟುಮಾಡಿತು. ಇಂತಹ ಟಾಸ್ಕ್‌ಗಳನ್ನು ಸ್ಪರ್ಧಿಗಳಿಗೆ ನೀಡುವುದು ಎಷ್ಟು ಸರಿ? ಆಮರಣಾಂತ ಉಪವಾಸ ಮಾಡುವವರೂ ನೀರು ಕುಡಿಯುತ್ತಾರೆ, ಮಲ-ಜಲಬಾಧೆಗಳನ್ನು ಪರಿಹರಿಸಿಕೊಳ್ಳುತ್ತಾರೆ; ಆದರೆ, ಇಲ್ಲಿ? ಇಂತಹ ಕಾರ್ಯಗಳು ಬಹುಕಾಲಿಕ ಆರೋಗ್ಯ ಸಮಸ್ಯೆಗಳನ್ನು ತರುವುದಿಲ್ಲವೇ? ಇದೇ ಆವೃತ್ತಿಯ ಮೊದಲ ಭಾಗದಲ್ಲಿ, 18 ಗಂಟೆಗಳ ಕಾಲ ನೀರಿನ ಮಧ್ಯೆ ನಿಂತಿದ್ದ ತರುಣಿಯರ ಬಗ್ಗೆ ಆತಂಕವಾಗಿ,ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಶಂಕರ್ ನೀರಿಗೆ ಧುಮುಕಿ ಆ ಪಂದ್ಯವನ್ನು ಅರ್ಧಕ್ಕೇ ನಿಲ್ಲಿಸಿದ್ದರು.

ವಿದ್ವತ್ತಿಗೂ ಸಂಸ್ಕೃತಿಗೂ ಏನೂ ಸಂಬಂಧವಿಲ್ಲವೆಂದು ಕಾಣುತ್ತದೆ. ಭಾನುವಾರದ ‘ಪಂಚಾಯಿತಿ’ಯಲ್ಲಿ ಮಹಾನ್ ವಿದ್ವಾಂಸರೊಬ್ಬರು, ಸುಮಾರು ಹತ್ತು ನಿಮಿಷಗಳ ಕಾಲ ಉಸಿರುಬಿಡದೆ, ಮತ್ತೊಬ್ಬ ಸ್ಪರ್ಧಿಯಚಾರಿತ್ರ್ಯಹನನವನ್ನು ಅತ್ಯಂತ ಅಸಹ್ಯವಾಗಿ ನೆರವೇರಿಸಿದರು. ಕಾರಣ: ‘ಬಲಿ’ಯಾದ ಹಳ್ಳಿಮುಕ್ಕನಿಗೆ ಯಾವ ವಿಶ್ವವಿದ್ಯಾಲಯದ ಪದವಿಯೂ ಇಲ್ಲ, ಇಂಗ್ಲಿಷ್ ಬರುವುದಿಲ್ಲ ಮತ್ತು ಕನ್ನಡದ ಆರೇಳು ಭಾಷಾಪ್ರಭೇದಗಳ ಹಾಗೂ ಅವುಗಳಲ್ಲಿ ಬರುವ ಪದಗಳ ವಿಶಿಷ್ಟ ಧ್ವನಿ ಅವರಿಗೆ ಗೊತ್ತಿಲ್ಲ (ನನಗೂ ಗೊತ್ತಿಲ್ಲ). ಇಷ್ಟು ಕಾರಣಗಳು ಸಾಕಲ್ಲವೆ? ಅವರನ್ನು ಕಾರ್ಯಕ್ರಮದ ನಿರೂಪಕ ಸುದೀಪ್ ತಡೆಯಲಿಲ್ಲ; ಅನುಚಿತವಾದರೂ ಅವರು ಮಧ್ಯಪ್ರವೇಶಿಸಿ, ‘ಇದು ನ್ಯಾಯಾಲಯವಲ್ಲ’ ಎಂದು ಹೇಳಬಹುದಿತ್ತಲ್ಲವೆ? ಹೇಳಬೇಕಿತ್ತಲ್ಲವೆ? ಇಂತಹ ಕಾರ್ಯಕ್ರಮಗಳಿಗೂ ಸೆನ್ಸಾರ್ ಬೋರ್ಡ್ ಇರಬೇಕೆ?
-ಸಿ.ಎನ್.ರಾಮಚಂದ್ರನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT