ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರೈತಪರ ಸ್ವಾತಂತ್ರ್ಯದ ಪ್ರಶ್ನೆ

Last Updated 23 ಅಕ್ಟೋಬರ್ 2020, 18:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಪರ್ಯಾಯವಾಗಿ ಪಂಜಾಬ್ ಸರ್ಕಾರವು ತನ್ನದೇ ಕೃಷಿ ಕಾಯ್ದೆಗಳನ್ನು ರೂಪಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಪಂಜಾಬ್ ಸರ್ಕಾರದ ಹಾದಿಯನ್ನೇ ಬಿಜೆಪಿಯೇತರ ರಾಜ್ಯ ಸರ್ಕಾರಗಳು ಹಿಡಿಯುವ ಸಂಭವವಿದೆ. ಈ ವಿದ್ಯಮಾನವನ್ನು ಒಕ್ಕೂಟ ವ್ಯವಸ್ಥೆಯ ಸ್ಪಷ್ಟ ವ್ಯಾಖ್ಯಾನಕ್ಕೆ ಬಳಸಿಕೊಳ್ಳಬೇಕಾಗಿದೆ. ಸಂವಿಧಾನದ ‘ಸಮವರ್ತಿ’ ಪಟ್ಟಿಯಲ್ಲಿರುವ ಕೃಷಿ ಮತ್ತು ಶಿಕ್ಷಣವೇ ಮುಂತಾದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವು ನೀತಿ ನಿರೂಪಕ ಕಾಯ್ದೆಗಳನ್ನು ಮಾಡುವಾಗ ರಾಜ್ಯಗಳ ಶಾಸನ ಸಭೆಗಳಲ್ಲೂ ಚರ್ಚೆಯಾಗುವುದನ್ನು ಕಡ್ಡಾಯ ಮಾಡಿದರೆ ಸಮವರ್ತಿ ಪಟ್ಟಿ ಸಾರ್ಥಕವಾಗುತ್ತದೆ. ಇಂತಹ ಸೈದ್ಧಾಂತಿಕ, ತಾರ್ಕಿಕ ಅಂತ್ಯಕ್ಕೆ ಹಾದಿಯಾಗುವ ಬದಲು ಈಗ ಪರ-ವಿರೋಧದ ವಾಗ್ವಾದವೇ ಮುಖ್ಯವಾಗಿಬಿಟ್ಟಿದೆ. ಬಿಜೆಪಿ ಪರವಾದ ರೈತ ಸಂಘಟನೆಯನ್ನೂ ಒಳಗೊಂಡಂತೆ ಎಲ್ಲ ರೈತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದರೆ, ಪ್ರಧಾನಿಯವರಾದಿಯಾಗಿ ಬಿಜೆಪಿ ನೇತಾರರು, ಇವು ರೈತರಿಗೆ ಸ್ವಾತಂತ್ರ್ಯ ನೀಡುವ ಚಾರಿತ್ರಿಕ ಕಾಯ್ದೆಗಳೆಂದು ಪ್ರತಿಪಾದಿಸುತ್ತಿದ್ದಾರೆ. ಹಾಗಾದರೆ ತಮಗೆ ‘ಸ್ವಾತಂತ್ರ್ಯ’ ನೀಡುವುದನ್ನೇ ರೈತ ಸಂಘಟನೆಗಳು ವಿರೋಧಿಸುತ್ತಿರುವುದು ಯಾಕೆ?

ಸ್ವಾತಂತ್ರ್ಯದ ಪ್ರತಿಪಾದನೆಯು ಯಾವ ನೆಲೆಯಿಂದ ಬರುತ್ತಿದೆಯೆಂಬ ಅಂಶ ಇಲ್ಲಿ ಮುಖ್ಯವಾಗುತ್ತದೆ. ಈಗ ರೈತರ ಸ್ವಾತಂತ್ರ್ಯದ ಮಾತನ್ನು ಆಡುತ್ತಿರುವುದು ಮುಕ್ತ ಆರ್ಥಿಕ ನೀತಿಯನ್ನು ಆಕ್ರಮಣಶೀಲವಾಗಿ ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಸರ್ಕಾರ. ಈ ನೀತಿಯ ಜನಕರು ಕಾಂಗ್ರೆಸ್ಸಿನವರೇ ಆಗಿದ್ದು ಅವರಲ್ಲಿ ಇಷ್ಟೊಂದು ಆಕ್ರಮಣಶೀಲತೆ ಇರಲಿಲ್ಲ. ಅಮೆರಿಕದ ಪ್ರಸಿದ್ಧ ಚಿಂತಕ ಹರ್ಬರ್ಟ್ ಅಪ್ತೇಕರ್ ಅವರು ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯ ಸ್ವರೂಪ ಕುರಿತು ಹೇಳಿರುವ ಮಾತುಗಳು ಇಲ್ಲಿ ಪ್ರಸ್ತುತವಾಗುತ್ತವೆ. ಮುಕ್ತ ಮಾರುಕಟ್ಟೆಯದು ಬೂರ್ಜ್ವಾ ಸ್ವಾತಂತ್ರ್ಯವೇ ಹೊರತು ಜನಪರ ಸ್ವಾತಂತ್ರ್ಯವಲ್ಲವೆಂಬುದು ಅವರ ಅಭಿಪ್ರಾಯ.

ಗುಲಾಮಗಿರಿ ವಿರುದ್ಧ ಹೋರಾಟ ಹೂಡಿದ ಅಬ್ರಹಾಂ ಲಿಂಕನ್ ಅವರು ಸ್ವಾತಂತ್ರ್ಯ ಕುರಿತು ಹೇಳಿದ ಒಂದು ಪ್ರಸಂಗವು ಇಲ್ಲಿ ಪ್ರಸ್ತುತವಾಗುತ್ತದೆ. ‘ಒಬ್ಬಾತ ಕುರಿಮಂದೆಯನ್ನು ಕಾಯುತ್ತಿರುತ್ತಾನೆ. ಒಂದು ತೋಳ ಬಂದು ಕುರಿಯೊಂದನ್ನು ಕಚ್ಚಿಕೊಂಡು ಓಡುತ್ತದೆ. ಕುರಿಗಾಹಿಯು ತೋಳವನ್ನು ಅಟ್ಟಿಸಿಕೊಂಡು ಹೋಗಿ ಹೋರಾಡಿ ಕುರಿಯನ್ನು ರಕ್ಷಿಸುತ್ತಾನೆ. ಆಗ ಕುರಿಯು ‘ನೀನು ನನ್ನ ಬದುಕುವ ಸ್ವಾತಂತ್ರ್ಯವನ್ನು ರಕ್ಷಿಸಿದೆ, ನಿನಗೆ ನಮಸ್ಕಾರ’ ಎನ್ನುತ್ತದೆ. ಆದರೆ ತೋಳವು ‘ನೀನು ನನ್ನ ತಿನ್ನುವ ಸ್ವಾತಂತ್ರ್ಯವನ್ನು ಕಸಿದುಕೊಂಡೆ, ನಿನಗೆ ಧಿಕ್ಕಾರ ಎನ್ನುತ್ತದೆ’. ಈ ಪ್ರಸಂಗವನ್ನು ಹೇಳಿದ ಅಬ್ರಹಾಂ ಲಿಂಕನ್ ‘ಈಗ ಹೇಳಿ ನಿಮಗೆ ತೋಳದ ತಿನ್ನುವ ಸ್ವಾತಂತ್ರ್ಯ ಬೇಕೊ, ಕುರಿಯ ಬದುಕುವ ಸ್ವಾತಂತ್ರ್ಯ ಬೇಕೊ?’ ಎಂದು ಜನರಲ್ಲಿ ಪ್ರಶ್ನಿಸುತ್ತಾರೆ.

ಇದು ರೈತರನ್ನು ಕಾಡಿಸುತ್ತಿರುವ ಸ್ವಾತಂತ್ರ್ಯದ ಪ್ರಶ್ನೆಯೂ ಆಗಿದೆ. ಉತ್ತರ ಸ್ಪಷ್ಟವಾಗಿದೆ.

-ಬರಗೂರು ರಾಮಚಂದ್ರಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT