ಭಾನುವಾರ, ಮೇ 22, 2022
22 °C

ಪ್ರಜ್ಞಾವಂತ ವಲಯ ಧ್ವನಿ ಎತ್ತಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ನಾಡು, ನುಡಿಯ ಅಧ್ಯಯನಕ್ಕಾಗಿ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಇಂದು ಭ್ರಷ್ಟತೆಯ ಕೂಪವಾಗಿದೆ. ಅಲ್ಲಿನ ವಿದ್ಯಾರ್ಥಿಯಾಗಿಯೇ ನಾನು ಈ ಸಂಗತಿ ಒಪ್ಪಿಕೊಳ್ಳುವುದು ಸಂಕಟದ ಸಂಗತಿ. ಸ್ವಜನಪಕ್ಷಪಾತ, ಭ್ರಷ್ಟಾಚಾರದಿಂದ‌ ಕೂಡಿದ ಆಡಳಿತ ನಿರ್ಲಜ್ಜ ಸ್ಥಿತಿಗೆ ತಲುಪಿದೆ. ಸಂಶೋಧನೆಗಾಗಿಯೇ ಹುಟ್ಟಿಕೊಂಡ ವಿಶ್ವವಿದ್ಯಾಲಯವೊಂದರಲ್ಲಿ ಸಂಶೋಧನಾ ಕೋರ್ಸ್ ಪಿಎಚ್.ಡಿಗಾಗಿ ನಾಲ್ಕು ವರ್ಷಗಳಿಂದ ಅರ್ಜಿಯನ್ನೇ ಕರೆದಿಲ್ಲ! ರಾಷ್ಟ್ರೀಯ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳಿಂದ ಹಣ ಪಡೆಯುವ ಪ್ರಾಧ್ಯಾಪಕರಿದ್ದಾರೆ‌.‌ ಇಂತಹವರಿಗೆ ಕುಲಪತಿಗಳ ಕೃಪಾಕಟಾಕ್ಷವಿದೆ ಎಂಬ ಆರೋಪವಿದೆ.

ಬೇರೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ಜ್ಞಾನಾಭಿವೃದ್ಧಿಗಾಗಿ ವಿಚಾರಸಂಕಿರಣ, ಕಮ್ಮಟಗಳನ್ನು ಆಯೋಜಿಸಿದರೆ ಇಲ್ಲಿ ಹಣ ಕೊಳ್ಳೆಹೊಡೆಯಲು ಆಯೋಜಿಸಲಾಗುತ್ತದೆ ಎಂಬ ದೂರುಗಳಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಕೊಳ್ಳೆ ಹೊಡೆಯಲಾಗಿದೆ. ಇಂತಹ ಭ್ರಷ್ಟತೆಯ ವಿರುದ್ಧ ಆಡಳಿತವನ್ನು ಪ್ರಶ್ನಿಸಿದವರ ಧ್ವನಿ ಅಡಗಿಸಲು ಕಾನೂನು ಘಟಕದ ವತಿಯಿಂದ ಬೆದರಿಕೆಯ ತಂತ್ರ ಅನುಸರಿಸಲಾಗುತ್ತಿದೆ. ವಿಶ್ವವಿದ್ಯಾಲಯದ ಭ್ರಷ್ಟಾಚಾರದ ಆರೋಪಗಳನ್ನು ನ್ಯಾಯಾಂಗ ವಿಚಾರಣೆಗೆ ಒಪ್ಪಿಸಲಿ. ನಾಡಿನ ಪ್ರಜ್ಞಾವಂತ ವಲಯ ಈ ಕುರಿತು ಮತ್ತಷ್ಟು ಧ್ವನಿ ಎತ್ತಲಿ. ತಕ್ಷಣ ರಾಜ್ಯಪಾಲರು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಜರುಗಿಸಲಿ.    

-ವಿವೇಕರಾವ್ ಪಾಟೀಲ, ಹಂಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.