ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಯಾದ ಹುಮ್ಮಸ್ಸಿಗೆ ಬೆಲೆ ತೆರುವವರು...

Last Updated 15 ಏಪ್ರಿಲ್ 2022, 15:04 IST
ಅಕ್ಷರ ಗಾತ್ರ

ಯುವ ಹುಮ್ಮಸ್ಸೇ ಅಂತಹುದು. ಗೊತ್ತಿದ್ದೂ ಹಾಳು ಬಾವಿಗೆ ಹಾರುವ ಧಾವಂತ. ತನ್ನ ಎದುರಿಗೆ ನಿಂತ ನಾಯಕ ಹೇಳಿದ್ದೆಲ್ಲವನ್ನೂ ವೇದವಾಕ್ಯ ಎಂದು ತಿಳಿದು, ಆತನಿಗೆ ತನ್ನ ಭಕ್ತಿ, ಗೌರವ ತೋರುವ ಭರದಲ್ಲಿ, ಸರ್ಕಾರಿ ನಿಯಮಗಳು ಏನು ಹೇಳುತ್ತವೆ, ಏನು ಮಾಡಿದರೆ ತಾನು ಮಾಡುವ ಕೆಲಸಕ್ಕೆ ಮಾನ್ಯತೆ ಸಿಗುತ್ತದೆ ಎಂದೇ ಯೋಚಿಸದ ಮನಸ್ಸು. ಹೀಗಾಗಿ ತಾನು ಖರ್ಚು ಮಾಡುವ ಹಣಕ್ಕೆ ಖಾತರಿಯ ಭದ್ರತೆ ಎಷ್ಟರಮಟ್ಟಿಗೆ ಇರುತ್ತದೆ ಎಂಬುದರ ಕಡೆ ಗಮನವನ್ನೇ ಕೊಡದೆ ಮುನ್ನುಗ್ಗುತ್ತದೆ ಆ ಯುವ ಮನಸ್ಸು. ಅಂತಹ ಉದಾಹರಣೆ ನಮ್ಮ ಸಂತೋಷ ಪಾಟೀಲ. ತನ್ನೂರ ದೇವಿ ಜಾತ್ರೆಯೇ ಮುಳುವಾಗಬೇಕೆ ಆತನಿಗೆ? ಜಾತ್ರೆಯಲ್ಲಿ ತನ್ನೂರು ಸುಂದರವಾಗಿ ಕಾಣಬೇಕು, ತಾನು ಆರಾಧಿಸುವ ನಾಯಕಮಣಿಗಳು ತನ್ನೂರಿಗೆ ಆಗಮಿಸಬೇಕು, ತಾನು ನಿಸ್ಪೃಹವಾಗಿ ದುಡಿದದ್ದನ್ನ ತನ್ನ ಜನರ ಮುಂದೆ ಹೊಗಳಬೇಕು... ಇಂತಹ ಕನಸುಗಳ ಕಾರಣಕ್ಕಾಗಿಯೇ ರಸ್ತೆ ಮುಂತಾದ ಕಾಮಗಾರಿಗಳಿಗೆ ಆತ ಎದೆಯೊಡ್ಡಿ ನಿಂತ. ಸಾಲ ಮಾಡಿ ಕೋಟ್ಯಂತರ ರೂಪಾಯಿಗಳನ್ನು ತೊಡಗಿಸಿದ. ಊರು ಸುಂದರವಾಯಿತಾದರೂ ತನ್ನ ಸಂಸಾರವನ್ನು ತೀವ್ರ ಸಂಕಷ್ಟಕ್ಕೆ ಈಡುಮಾಡಿ ಜೀವ ಚೆಲ್ಲಿದ.

ವರ್ಕ್‌ ಆರ್ಡರ್ ಅನ್ನುವ ದಾಖಲೆ ನಿಮ್ಮ ಬಳಿ ಇಲ್ಲದಿದ್ದರೆ ದಯವಿಟ್ಟು ಯಾವ ಕೆಲಸಗಳನ್ನೂ ಮಾಡಬಾರದು. ವರ್ಕ್‌ ಆರ್ಡರ್ ಇಲ್ಲದೆಯೇ ಒಂದೆರಡು ಸಾಂಸ್ಕೃತಿಕ ಕೆಲಸಗಳನ್ನು ಮಾಡಿದ ನಂತರ ಕೈಸುಟ್ಟುಕೊಂಡ ನಾನು ಸ್ವ ಅನುಭವದಿಂದ ನಾಡಿನ ಯುವ ಮನಸ್ಸುಗಳಿಗೆ ತಿಳಿ ಹೇಳುತ್ತಿದ್ದೇನೆ. ಕಷ್ಟ ಬಂದಾಗ ವ್ಯವಸ್ಥೆಯಲ್ಲಿನ ಯಾರು ಕೂಡ ನಿಮ್ಮ ಜೊತೆ ಬರುವುದಿಲ್ಲ. ವ್ಯವಸ್ಥೆಯ ನೇತಾರರು, ಅಧಿಕಾರಿಗಳು ಸಹ ಈ ತರನ ಕೆಲಸಗಳಿಗೆ ಕುಮ್ಮಕ್ಕು ಕೊಡಬಾರದು. ಮುಖ್ಯಮಂತ್ರಿ ಈ ಕುರಿತು ಒಂದು ಸುತ್ತೋಲೆ ಹೊರಡಿಸುವುದು ಒಳಿತು.

–ಕಾಂತೇಶ ಕದರಮಂಡಲಗಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT