ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಶ್ರೀಲಂಕಾದಲ್ಲಿ ಕಮ್ಯುನಿಸಂ ತಲೆ ಎತ್ತಿದೆ

Published : 25 ಸೆಪ್ಟೆಂಬರ್ 2024, 19:00 IST
Last Updated : 25 ಸೆಪ್ಟೆಂಬರ್ 2024, 19:00 IST
ಫಾಲೋ ಮಾಡಿ
Comments

ಸತ್ಯಾಸತ್ಯತೆ ತೆರೆದಿಡಲು ಅವಕಾಶ

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿರುವುದು ಸ್ವಾಗತಾರ್ಹ. ಪ್ರಕರಣದ ಬಗೆಗಿನ ಸತ್ಯಾಸತ್ಯತೆಯನ್ನು ಪಾರದರ್ಶಕವಾಗಿ ಜನರ ಮುಂದೆ ತೆರೆದಿಡಲು ಅನುವಾಗುವ ತನಿಖೆಗೆ ಈ ತೀರ್ಪು ಅವಕಾಶ ಮಾಡಿಕೊಟ್ಟಿದೆ.

-ಕೆ.ಎನ್.ರಂಗಸ್ವಾಮಿ, ಉಜಿರೆ

ತಿನ್ನುವ ರೊಟ್ಟಿಯೇ ಪ್ರಸಾದ...

‘ಏನಾದರೂ ಆಗು ಮೊದಲು ಮಾನವನಾಗು’ ಎಂಬ ಪದ್ಯ ಬರೆದ ಸಿದ್ಧಯ್ಯ ಪುರಾಣಿಕ ಅವರು ತಮ್ಮ ಇನ್ನೊಂದು ಕವಿತೆಯಲ್ಲಿ ‘...ತಿನ್ನುವ ರೊಟ್ಟಿಯೇ ಪ್ರಸಾದ, ಕುಡಿಯುವ ನೀರೇ ತೀರ್ಥ...’ ಎಂದೂ ಬರೆದಿದ್ದಾರೆ. ಬಸವಾದಿ ಶರಣರ, ಎಲ್ಲ ಮಹಾತ್ಮರ ಸಂದೇಶವೂ ಇದೇ ಆಗಿದೆ. ಅಂದರೆ ಯಾವುದೋ ದೇವಸ್ಥಾನದಲ್ಲಿ ಪಡೆಯುವ ಪ್ರಸಾದವಷ್ಟೇ ಪ್ರಸಾದವಲ್ಲ, ನಾವು ಪ್ರತಿನಿತ್ಯ ಸೇವಿಸುವ ಆಹಾರವೂ ನಾವು ನಂಬಿದ ದೇವರ ‘ಪ್ರಸಾದ’ವೇ ಆಗಿರುತ್ತದೆ. ಇದನ್ನರಿತು ನಡೆದರೆ ನಿಜವಾದ ಭಕ್ತರಿಗೆ ಯಾವ ಸಮಸ್ಯೆಯೂ ಇರುವುದಿಲ್ಲ. ತಿರುಪತಿಯ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬೆರೆತಿದೆ ಎಂಬ ಆರೋಪವು ವಿವಾದ ಸೃಷ್ಟಿಸಿರುವುದನ್ನು ಕಂಡಾಗ ಇವೆಲ್ಲ ನೆನಪಾದವು.

-ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ಕುಲಕಸುಬಿನಿಂದ ಹೊಟ್ಟೆ ತುಂಬದು

ತೆಲಂಗಾಣದ ಮೆದಕ್ ಜಿಲ್ಲೆಯ ಗ್ರಾಮವೊಂದರಲ್ಲಿ, ಅಂತ್ಯಸಂಸ್ಕಾರದಲ್ಲಿ ತಮಟೆ ಬಾರಿಸಲಿಲ್ಲ ಎನ್ನುವ ಕಾರಣಕ್ಕೆ ಮಾದಿಗ ಸಮುದಾಯವನ್ನು ಬಹಿಷ್ಕರಿಸಿರುವ ಬಗ್ಗೆ ವರದಿಯಾಗಿದೆ (ಪ್ರ.ವಾ., ಸೆ. 25). ಈ ಬಹಿಷ್ಕಾರ ಅತ್ಯಂತ ಅಮಾನವೀಯವೂ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದೂ ಆಗಿದೆ. ಬಹಿಷ್ಕರಿಸಿದವರಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಬೇಕಿದೆ.

ಕುಲಕಸುಬುಗಳು ಪಲ್ಲಟಗೊಂಡು ಬಹಳ ಕಾಲವಾಯಿತು. ಇಂದು ನೇಕಾರನ ಮಗ ನೇಕಾರನಾಗಿ, ಕುಂಬಾರನ ಮಗ ಕುಂಬಾರನಾಗಿ ಉಳಿದಿಲ್ಲ. ಹೀಗೆಯೇ ಎಲ್ಲ ಕುಲಕಸುಬುಗಳ ಹಣೆಬರಹವೂ. ಕುಲಕಸುಬುಗಳನ್ನು ನೆಚ್ಚಿಕೊಂಡರೆ ಹೊಟ್ಟೆ ತುಂಬುವುದಿಲ್ಲ. ನೇಕಾರಿಕೆ ಕಸುಬಿಗೂ ನನಗೂ ಹೊಕ್ಕುಳಬಳ್ಳಿ ಸಂಬಂಧವಿದೆ. ಆ ಕಸುಬಿನ ಪ್ರಗತಿ ಮತ್ತು ಅವನತಿ ಎರಡನ್ನೂ ಅನುಭವಿಸಿ ಬಂದಿದ್ದೇನೆ. ನೇಕಾರಿಕೆ ಕಸುಬಿನಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ನಮ್ಮ ಜನ ಎಚ್ಚೆತ್ತುಕೊಂಡು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾದರು. ಇದರ ಫಲವಾಗಿ ಇಂದು ಅವರು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಅಪ್ಪ ಹಾಕಿದ ಆಲದ ಮರ ಎಂದು ಆ ಕಸುಬುಗಳನ್ನೇ ನಂಬಿಕೊಂಡಿದ್ದರೆ ಎಷ್ಟೋ ಜನ ಶಂಖ, ಜಾಗಟೆ, ಬವನಾಸಿಗಳನ್ನು ಭುಜಕ್ಕೆ ನೇತುಹಾಕಿಕೊಂಡು, ‘ಶ್ರೀಮದ್ ರಮಾರಮಣ ಗೋವಿಂದಾ ಗೋವಿಂದ’ ಎಂದು ಹೇಳುತ್ತಾ ಮನೆ ಮನೆಗೆ ಧಾರ್ಮಿಕ ಭಿಕ್ಷೆಗೆ ಹೋಗಬೇಕಿತ್ತು. ಹಾಗಾಗಿ, ಯಾವುದೇ ಕುಲಕಸುಬಿನ ಮುಂದುವರಿಕೆಗೆ ಒತ್ತಡ ಹಾಕುವುದು ಅಮಾನವೀಯ ನಡೆಯಾಗುತ್ತದೆ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ನೆಲದ ಕಾನೂನಿಗೆ ತೋರಿದ ಗೌರವ

‘ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಒತ್ತಾಯ ಮಾಡುವುದಿಲ್ಲ. ಕಾನೂನಿನ ರಕ್ಷಣೆ ಪಡೆಯಲು ಅವಕಾಶ ಇದೆ. ಕಾನೂನುಬಾಹಿರ ಚಟುವಟಿಕೆ ಮಾಡಿದ್ದರೆ, ಕೋರ್ಟ್ ತೀರ್ಪು ಕೊಡುತ್ತದೆ’ ಎಂದಿದ್ದಾರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (ಪ್ರ.ವಾ., ಸೆ. 25). ಅವರ ಈ ನಿಲುವು ಓದಿ ಆಶ್ಚರ್ಯವಾಯಿತು. ಏಕೆಂದರೆ, ಅವರ ದೋಸ್ತಿ ಪಕ್ಷವಾದ ಬಿಜೆಪಿಯ ನಾಯಕರು ಈ ಬಗೆಯ ತಾಳ್ಮೆ ಪ್ರದರ್ಶಿಸದೆ, ಸಿದ್ದರಾಮಯ್ಯ ಅವರ ರಾಜೀನಾಮೆಗಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಕಾನೂನಿನ ರಕ್ಷಣೆ ಪಡೆಯಲು ಸಿದ್ದರಾಮಯ್ಯ ಅವರಿಗೆ ಅವಕಾಶ ಇರುವುದನ್ನು ಗುರುತಿಸಿ, ನ್ಯಾಯಾಲಯದ ತೀರ್ಪಿಗಾಗಿ ಕಾಯಬೇಕೆಂದಿದ್ದಾರೆ. ಇದು ಸರಿ. ಅವರ ಈ ನಿಲುವು ಮಾಗುತ್ತಿರುವ ಅವರ ರಾಜಕೀಯ ವ್ಯಕ್ತಿತ್ವದ ಸಂಕೇತವಾಗಿರಬಹುದು. ನಿಜ, ರಾಜಕೀಯ ಜಿದ್ದಾಜಿದ್ದಿ ಬಿಟ್ಟು ಈ ರೀತಿ ನೆಲದ ಕಾಯ್ದೆ ಕಾನೂನನ್ನು ಅನುಲಕ್ಷಿಸಿ ರಾಜಕಾರಣಿಗಳು ವರ್ತಿಸಬೇಕು. ಅದು ನಾವು ನೆಲದ ಕಾನೂನಿಗೆ ತೋರಿಸುವ ಗೌರವ.

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಶ್ರೀಲಂಕಾದಲ್ಲಿ ಕಮ್ಯುನಿಸಂ ತಲೆ ಎತ್ತಿದೆ

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಲ್ಲಿ ಕಮ್ಯುನಿಸಂ ಅವಸಾನಗೊಳ್ಳುತ್ತಿದೆ, ಭಾರತದಲ್ಲಂತೂ ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅವಸಾನಗೊಂಡು, ಕೇರಳದಲ್ಲಿ ಮಾತ್ರ ಜೀವ ಹಿಡಿದುಕೊಂಡು ಉಳಿದುಕೊಂಡಿದೆ ಎನ್ನುವ ಮಾತು ಕೇಳಿಬರುತ್ತಿರುವಾಗ, ಆಶ್ಚರ್ಯಕರ ರೀತಿಯಲ್ಲಿ ಶ್ರೀಲಂಕಾದಲ್ಲಿ ಕಮ್ಯುನಿಸಂ ತಲೆ ಎತ್ತಿದೆ. ಇದು, ವಿಶ್ವದಾದ್ಯಂತ ರಾಜಕೀಯ ವಿಶ್ಲೇಷಕರನ್ನು ಚಿಂತಿಸುವಂತೆ ಮಾಡಿದೆ.

ಕಮ್ಯುನಿಸಂ ತತ್ವ, ಆದರ್ಶಗಳು ನೆಲೆ ಕಳೆದುಕೊಳ್ಳುತ್ತಿದ್ದು, ಇಂದಿನ ಯುವಪೀಳಿಗೆಯನ್ನು ಆಕರ್ಷಿಸಲು ವಿಫಲವಾಗಿವೆ ಎನ್ನುವ ಚರ್ಚೆ ನಡೆಯುತ್ತಿರುವಾಗ, ಶ್ರೀಲಂಕಾದ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಎಡಪಂಥೀಯ ಚಿಂತನೆಯನ್ನು ಆಮೂಲಾಗ್ರವಾಗಿ ವಿರೋಧಿಸುವ ಬಲಪಂಥೀಯರಿಗೆ ಇದು ನುಂಗಲಾರದ ತುತ್ತಾಗಿದೆ.

-ರಮಾನಂದ ಶರ್ಮಾ, ಬೆಂಗಳೂರು

ಯಾರು ನತದೃಷ್ಟ? 

ಚುನಾವಣಾ ರಾಜಕೀಯದಲ್ಲಿ 
ಹರಿಶ್ಚಂದ್ರರಿರಲು ಸಾಧ್ಯವಿಲ್ಲ–
ಕಂದಾಯ ಸಚಿವರ ಈ

ಹೇಳಿಕೆ ದುರದೃಷ್ಟಕರ, 
ಈಗ ಉಳಿದಿರುವ

ಪ್ರಶ್ನೆಯೆಂದರೆ 
ಯಾರು ಭ್ರಷ್ಟ,

ಯಾರು ಕಡುಭ್ರಷ್ಟ,
ಒಟ್ಟಿನಲ್ಲಿ ಮತದಾರ

ಮಾತ್ರ ನತದೃಷ್ಟ. 

-ಮಲ್ಲಿಕಾರ್ಜುನ, ಸುರಧೇನುಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT