ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಬಡಬಡಿಸಲು ಇದೆಯೇ ಪರವಾನಗಿ?

ಅಕ್ಷರ ಗಾತ್ರ

‘ಗೋಷಾ ಮತ್ತು ಪರದಾ ಪದ್ಧತಿ ಅನುಸರಿಸದಿರುವುದೇ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಹೆಚ್ಚಳಕ್ಕೆ ಕಾರಣ’ ಎನ್ನುವರು ಜನಪ್ರತಿನಿಧಿಯೊಬ್ಬರು. ಎಂತಹ ಅಪ್ರಬುದ್ಧ ಹೇಳಿಕೆ! ತಾವು ತಪ್ಪೇನೂ ಹೇಳಿಲ್ಲವೆಂದೇ ವಾದಿಸುತ್ತಿದ್ದ ಅವರು, ಹೈಕಮಾಂಡಿನ ತಪರಾಕಿಯಿಂದಾಗಿ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕಾಗಿ ಬಂತು. ಕೆಂಪುಕೋಟೆಯಲ್ಲಿ ಕೇಸರಿ ಧ್ವಜವನ್ನು ಹಾರಿಸುತ್ತೇವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹೇಳಿದ್ದಾರೆನ್ನಲಾದ ವಿಷಯ ಕುರಿತ ನಿಲುವಳಿ ಸೂಚನೆಯ ಬಗ್ಗೆ ಸದನದಲ್ಲಿ ಕಾವೇರಿದ ಚರ್ಚೆ ನಡೆಯುವ ಸಂದರ್ಭದಲ್ಲಿ, ಕೆಪಿಸಿಸಿ ಅಧ್ಯಕ್ಷರನ್ನುದ್ದೇಶಿಸಿ ಸಚಿವರು, ‘ನಿಮ್ಮಪ್ಪ ದೇಶದ್ರೋಹಿ’ ಎಂದದ್ದು, ಅವರಿಬ್ಬರನ್ನೂ ಕೈ ಕೈ ಮಿಲಾಯಿಸುವ ಹಂತಕ್ಕೇ ಕೊಂಡೊಯ್ಯುತ್ತದೆ! ಕೆಪಿಸಿಸಿ ಅಧ್ಯಕ್ಷರ ತಂದೆಯ ಬಗ್ಗೆ ತಮಗೆ ಗೌರವವಿರುವುದಾಗಿಯೂ, ‘ನಿಮ್ಮಪ್ಪ ದೇಶದ್ರೋಹಿ’ ಎಂದು ಆಡುಭಾಷೆಯಲ್ಲಿ ನುಡಿದದ್ದಾಗಿಯೂ ಸಚಿವರು ಸಮಜಾಯಿಷಿ ನೀಡಲು ಮರೆಯುವುದಿಲ್ಲ! ಆಡುಭಾಷೆಯಲ್ಲಾದರೂ, ಆಡಬಾರದ ಮಾತನ್ನು ಆಡಬಹುದೇ?

ಜನರಿಂದ ಆಯ್ಕೆಯಾಗಿರುವುದರಿಂದ, ಬಾಯಿಗೆ ಬಂದದ್ದನ್ನೆಲ್ಲಾ ಬಡಬಡಿಸಲು ತಮಗೆ ಪರವಾನಗಿ ಇದೆಯೆಂಬ ಭಾವನೆ ನಮ್ಮ ನಾಯಕರಲ್ಲಿ ಮನೆ ಮಾಡಿದಂತಿದೆ. 2012ರಿಂದ 2021ರ ಅವಧಿಯಲ್ಲಿ, ವಾರ್ಷಿಕ ಸರಾಸರಿ ಅಧಿವೇಶನ ನಡೆದಿರುವುದೇ 38.4 ದಿನಗಳು ಮಾತ್ರ. ಅಷ್ಟು ದಿನಗಳನ್ನಾದರೂ ರಾಜ್ಯದ ಅಭಿವೃದ್ಧಿ ಮತ್ತು ಜನರ ಕುಂದುಕೊರತೆ ನಿವಾರಿಸುವ ಕುರಿತ ಗುಣಮಟ್ಟದ ಚರ್ಚೆಗೆ ಬಳಸಿಕೊಳ್ಳದಿದ್ದರೆ ಹೇಗೆ? ಬರಬರುತ್ತಾ, ಸದನ ನಡೆಸುವುದೇ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗಾಗಿ, ಧರಣಿ ಮತ್ತು ಸಭಾತ್ಯಾಗ ನಡೆಸುವುದಕ್ಕಾಗಿ ಎಂಬಂತಾಗಿಬಿಟ್ಟಿದೆ. ‘ಮತಿಗೆಟ್ಟವರಂತಾಡುವ ನಮ್ಮನ್ನಾಳುವವರಿಗೆ ಸನ್ಮತಿ ನೀಡು, ದೇವಾ’ ಎಂದು ಮತದಾರರಾದ ನಾವು ಭಗವಂತನಲ್ಲಿ ಮೊರೆಯಿಡೋಣ.

-ತಿಪ್ಪೂರು ಪುಟ್ಟೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT