ಕಾಯಂ ಶಿಕ್ಷಕರಿಲ್ಲದೆ ಶಿಕ್ಷಣ ಪ್ರಗತಿ ಕುಂಠಿತ

ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ನೀಡಿದರೆ ಮಕ್ಕಳ ಪ್ರವೇಶಾತಿ ಅಥವಾ ಹಾಜರಾತಿ ಹೆಚ್ಚಳವಾಗುವುದಿಲ್ಲ. ಈ ಸೌಲಭ್ಯಗಳ ಜೊತೆಗೆ ಕಾಯಂ ಶಿಕ್ಷಕರನ್ನೂ ನೇಮಿಸಬೇಕಿದೆ. ಶಿಕ್ಷಕರಿಗೆ ನೀಡಿರುವ ಆಡಳಿತ ವಿಭಾಗದ ಹಲವು ಯೋಜನೆಗಳ ಕಾರ್ಯಭಾರ ಇಳಿಸಿದಾಗಷ್ಟೇ ಶಾಲೆಗಳ ಸಮಗ್ರ ಅಭಿವೃದ್ಧಿ ಸಾಧ್ಯ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಖಾಸಗಿ ಶಾಲೆಗಳೊಂದಿಗೆ ಹೋಲಿಸುವವರು– ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ಆಡಳಿತ ಮಂಡಳಿಯ ಕಾರ್ಯಭಾರದ ನಿರ್ವಹಣೆಯ ಹೊರೆ ಹೇರಿರುವ ನಿದರ್ಶನ ಇದೆಯೇ? ಶಿಕ್ಷಕರ ಕೊರತೆ ಎದುರಿಸುತ್ತಿರುವ ಅನುದಾನರಹಿತ ಖಾಸಗಿ ಶಾಲೆಗಳಿವೆಯೇ? ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.

-ಆರ್.ಪಿ. ಮಂಜುನಾಥ್, ಬಳ್ಳಾರಿ

ಹುಣಸೆ ಅಭಿವೃದ್ಧಿ: ಯೋಜನೆ ನನೆಗುದಿಗೆ

ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕೆಂಬ ಒತ್ತಾಯ ‘ವಾಚಕರ ವಾಣಿ’ಯಲ್ಲಿ ಪ್ರಕಟವಾಗಿದೆ (ಲೇ: ಮಂಜುನಾಥ್ ಅಮಲಗೊಂದಿ). ಹುಬ್ಬಳ್ಳಿಯಲ್ಲಿ ರಾಜ್ಯ ಸಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಹತ್ತು ವರ್ಷಗಳಾಗಿವೆ. ಸಂಬಾರ ಬೆಳೆಗಳಲ್ಲಿ ಹುಣಸೆಯೂ ಒಂದಾಗಿದೆ. 2016ರಲ್ಲಿ ನಾನು ಮಂಡಳಿಯ ಅಧಿಕಾರಿಯಾಗಿದ್ದೆ. ಆ ವೇಳೆ ಕೋಲಾರದ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಹುಣಸೆ ಬೆಳೆ ಕುರಿತಂತೆ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. 300ಕ್ಕಿಂತಲೂ ಹೆಚ್ಚು ರೈತರು ಭಾಗವಹಿಸಿದ್ದರು. ಬೆಳೆಗಾರರಿಗೆ ಮಂಡಳಿಯಿಂದ ಎಲ್ಲಾ ರೀತಿಯಲ್ಲಿ ಸಹಾಯ ಮಾಡುವ ಬಗ್ಗೆ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಅದು ಕಾರ್ಯಗತಗೊಳ್ಳಲಿಲ್ಲ. ಸಂಬಾರ ಬೆಳೆಗಳಿಗೆ ನಾಟಿಯಿಂದ ಹಿಡಿದು ಸಂಸ್ಕರಣೆ ಮಾಡುವ ವರೆಗೂ ತಾಂತ್ರಿಕ ಮಾಹಿತಿ, ಸಹಾಯಧನ ನೀಡುವುದು ಮಂಡಳಿಯ ಜವಾಬ್ದಾರಿ. ಹುಣಸೆ ಬೆಳೆಗಾರರು ಮಂಡಳಿಯನ್ನು ಸಂಪರ್ಕಿಸಬೇಕಿದೆ.

-ಸುರೇಶ ವಿ. ಕುಂಬಾರ, ಗದಗ

ಟಿ20 ವಿಶ್ವಕಪ್: ಸಾಂಘಿಕತೆಗೆ ಸಂದ ಜಯ

ಟಿ20 ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತೀಯ ತಂಡ ಸಾಧಿಸಿದ ಅಮೋಘ ವಿಜಯವು ದೇಶದ ಕ್ರೀಡಾ ಇತಿಹಾಸದಲ್ಲಿನ ಸುವರ್ಣ ಅಧ್ಯಾಯಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಆಟಗಾರನ ಸಮರ್ಪಣೆ, ಪರಿಶ್ರಮ ಮತ್ತು ದೃಢ ಸಂಕಲ್ಪದಿಂದಾಗಿ ಗೆಲುವು ಸಾಧ್ಯವಾಯಿತು. ತವರು ನೆಲದಲ್ಲಿ ಚುಟುಕು ಕ್ರಿಕೆಟ್ನ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು ದಾಖಲೆಯಾಗಿದೆ. ನಾಯಕತ್ವದ ದೂರದೃಷ್ಟಿ ಮತ್ತು ಆಟಗಾರರ ಒಗ್ಗಟ್ಟು ಇದಕ್ಕೆ ಕಾರಣ. ಶ್ರಮ, ಶಿಸ್ತು ಮತ್ತು ಸಾಂಘಿಕ ಮನೋಭಾವ ಇದ್ದರೆ ಯಾವ ಗುರಿಯನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭಾರತೀಯ ತಂಡದ ಯಶಸ್ಸು ಉದಾಹರಣೆಯಾಗಿದೆ.

-ಸುದರ್ಶನ ಎಚ್. ಯಡಹಳ್ಳಿ, ಧಾರವಾಡ

ಆರ್ಥಿಕ ಶಿಸ್ತು ಮತ್ತು ಸಾಲದ ಹೊಣೆಗಾರಿಕೆ

ಸಾರ್ವಜನಿಕ ಸಾಲ ಎನ್ನುವುದು ಮುಂಗಡಪತ್ರದ ಅವಿಭಾಜ್ಯ ಅಂಗ. ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಸಾಲ ಮಾಡುತ್ತವೆ. ಸಾಲವಿಲ್ಲದ ಮುಂಗಡಪತ್ರವನ್ನು ಯಾರೂ ಮಂಡಿಸಿಲ್ಲ. ರಾಜ್ಯಗಳಿಗೆ ಅವುಗಳ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಜಿಎಸ್ಡಿಪಿಯ ಶೇ 3ರಷ್ಟು ಸಾಲ ಪಡೆಯಲು ಅವಕಾಶವಿದೆ. ಹೀಗಿರುವಾಗ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಸಾಲ ಪಡೆಯುವ ಪ್ರಮಾಣ ಹೆಚ್ಚುತ್ತಿದೆಯೆಂದು ಅಪಪ್ರಚಾರ ಮಾಡುವುದು ಸರಿಯಲ್ಲ. ಸರ್ಕಾರದ ಸಾಲ ಆರ್ಥಿಕ ಶಿಸ್ತಿನ ಮಿತಿಯಲ್ಲಿದೆ. ಕೇಂದ್ರವು ನಿಗದಿತ ಮಿತಿಗಿಂತಲೂ ಹೆಚ್ಚು ಸಾಲ ಪಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವವರು ಯಾರು?

-ದೇವಿದಾಸ ಪ್ರಭು, ಭಟ್ಕಳ

ಧರ್ಮದಿಂದ ಸಂಸ್ಕೃತಿ ಉಳಿಯುವುದೆ?

‘ಧರ್ಮ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ’ ಎಂದು ಬಿಜೆಪಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಈ ಮಾತು ಕೇಳಿ ಆಶ್ಚರ್ಯವಾಯಿತು. ಈಗ ರಾಜರು ಇಲ್ಲ; ಅವರೇ ಸಂಸದರಾಗಿದ್ದಾರೆ. ಅವರು ಇಂಗ್ಲಿಷ್ ಬಲ್ಲವರು. ಜಗತ್ತಿನಲ್ಲಿ ಸಂಸ್ಕೃತಿ ಹಾಗೂ ಧರ್ಮ ಎಂಬ ಪದಗಳನ್ನು ಹೇಗೆ ಪರಿಭಾವಿಸಲಾಗಿದೆ ಎಂಬುದು ಅವರಿಗೆ ತಿಳಿದಿದೆ. ಭಾರತದ ಸಂದರ್ಭದಲ್ಲಿ ಸಂಸ್ಕೃತಿ ಹಾಗೂ ಧರ್ಮವನ್ನು ಸಂವಾದಿ ಪದಗಳಾಗಿ ಬಳಸುವುದಾದರೆ ಧರ್ಮಕ್ಕಿಂತ ಸಂಸ್ಕೃತಿ ವ್ಯಾಪಕ ಅರ್ಥವುಳ್ಳ ಪದ. ನಂಬಿಕೆ, ಸಂಪ್ರದಾಯ, ಪದ್ಧತಿ, ಆಚಾರ ಇವುಗಳನ್ನು ಒಳಗೊಂಡ ಧರ್ಮವು ಸಂಸ್ಕೃತಿಯ ಒಂದು ಭಾಗವಷ್ಟೇ. ಜೀವನಮಾರ್ಗ ಎಂಬರ್ಥದಲ್ಲಿ ಸಂಸ್ಕೃತಿ ಚಲನಶೀಲವಾದುದು. ಆದರೆ, ಧರ್ಮವು ಸಿದ್ಧಾಂತಗಳು ಹಾಗೂ ಆಧ್ಯಾತ್ಮಿಕ ಸತ್ಯಗಳನ್ನೊಳಗೊಂಡು ಒಂದು ರೀತಿಯಲ್ಲಿ ‘ಸ್ಥಿರ’. ಧರ್ಮವನ್ನು ಗೌರವಿಸುವುದು ಸರಿ; ಆದರೆ, ಸಮಾಜ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ಅದರ ಪಾತ್ರ ಸೀಮಿತ.

-ಎಚ್.ಎಸ್. ಮಂಜುನಾಥ, ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.