ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಇಂಗ್ಲಿಷ್ ಯಾರಿಗೆ ಪೆಡಂಭೂತ?

Last Updated 15 ಫೆಬ್ರುವರಿ 2023, 19:15 IST
ಅಕ್ಷರ ಗಾತ್ರ

ಇಂಗ್ಲಿಷ್ ಯಾರಿಗೆ ಪೆಡಂಭೂತ?

ಮಾತೃಭಾಷೆ ಬದಲು ರಾಜ್ಯಭಾಷೆಯೆನ್ನಿ ಎಂದಿರುವ ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‍ಕುಮಾರ್‌ ಅವರ ಅಭಿಪ್ರಾಯ ಸರಿಯಾಗಿದೆ. ಆದರೆ ಅವರು ಇಂಗ್ಲಿಷ್ ಅನ್ನು ಪೆಡಂಭೂತ ಎಂದಿರುವುದು ಮಾತ್ರ ಸರಿಯಲ್ಲ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವ ಕೆಲವರು ಇಂಗ್ಲಿಷ್‌ನಲ್ಲಿಯೇ ಮಿಂದೆದ್ದು, ಒಂದೇ ಕುಟುಂಬದಲ್ಲಿ ಇಬ್ಬರು– ಮೂವರು ಐಎಎಸ್‌ನಂತಹ ಉನ್ನತ ಉದ್ದೆಗಳನ್ನು ಪಡೆದುಕೊಂಡ ಉದಾಹರಣೆಗಳಿವೆ. ಇನ್ನು ಕೆಲವೆಡೆ ವೈದ್ಯ, ಎಂಜಿನಿಯರಿಂಗ್‌ನಂತಹ ವೃತ್ತಿಯಲ್ಲಿಯೇ ಕುಟುಂಬದ ಎಲ್ಲ ಸದಸ್ಯರು ಮುಂದುವರಿಯುತ್ತಿದ್ದಾರೆ. ಹೀಗಿರುವಾಗ, ಅಂತಹವರಿಗೆ ಇಂಗ್ಲಿಷ್ ಹೇಗೆ ಪೆಡಂಭೂತವಾಗುತ್ತದೆ? ಹಣ ಖರ್ಚು ಮಾಡಿ ಇಂಗ್ಲಿಷ್ ಕಲಿಯಲು ಆಗಲಾರದ ಬಡವರಿಗೆ ಮಾತ್ರ ಇಂಗ್ಲಿಷ್ ಪೆಡಂಭೂತವಾಗಬಹುದು. ಇದು ಸಮಾಜದ ಪಕ್ಷಪಾತ ವ್ಯವಸ್ಥೆಯೆಂದರೆ ತಪ್ಪಾಗಲಾರದು.

ಹನಮಂತಪ್ಪ ಬಿ. ದಾಸರ, ತರಲಕಟ್ಟಿ, ಕೊಪ್ಪಳ

ಬಯಲಾಟ ಪ್ರಾತಿನಿಧಿಕ ಕಲೆಯಾಗಲಿ

ಬಯಲಾಟವು ಕನ್ನಡ ಜನಪದ ರಂಗಭೂಮಿ ಸಾಹಿತ್ಯದ ಒಂದು ಪ್ರಕಾರ. ಮೂಡಲಪಾಯದ ಈ ಕಲೆ ಉತ್ತರ ಮತ್ತು ಮಧ್ಯ ಕರ್ನಾಟಕ ಪ್ರದೇಶದಲ್ಲಿ ವ್ಯಾಪಕವಾಗಿದೆ. ಉಡುಪಿ ಭಾಗದಲ್ಲಿ ಹೆಚ್ಚಾಗಿರುವ ಯಕ್ಷಗಾನವು ‘ಪ್ರಾತಿನಿಧಿಕ ಕಲೆಯಾಗಬೇಕು’ ಎಂದು ಇತ್ತೀಚೆಗೆ ನಡೆದ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ (ಪ್ರ.ವಾ., ಫೆ. 12). ಯಕ್ಷಗಾನವು ಜನಪದ ರಂಗಕಲೆಯ ಒಂದು ಭಾಗವಾಗಿರುವಂತೆ, ಬಹುವ್ಯಾಪಕವಾಗಿರುವ ‘ಬಯಲಾಟ’ ಕಲೆಯು ನಾಡಿನ ಪ್ರಾತಿನಿಧಿಕ ಕಲೆಯಾಗಲು ಯೋಗ್ಯವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಬಯಲಾಟದ ಕಲೆಗೆ ತಾರತಮ್ಯ ತೋರದೆ ಹೆಚ್ಚಿನ ಪ್ರೋತ್ಸಾಹ ನೀಡಲಿ.
ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

‘ನೋಟಾ’: ಆಯೋಗದ ನಿಸ್ಸಹಾಯಕತೆಯ ಅಭಿವ್ಯಕ್ತಿ!

‘ಚುನಾವಣೆ: ಸಾತ್ವಿಕ ಮಾರ್ಗಕ್ಕೆ ಸೂತ್ರ’ ಎಂಬ ಲೇಖನದಲ್ಲಿನ ಡಾ. ಜ್ಯೋತಿ ಅವರ ವಿಶ್ಲೇಷಣೆ (ಪ್ರ.ವಾ., ಫೆ. 15) ಕಳಕಳಿಯಿಂದ ಕೂಡಿದೆ. ಆದರೆ ಅಲ್ಲಿ ಪ್ರತಿಪಾದಿಸಿರುವಂತೆ, ಮತದಾನದಲ್ಲಿ ‘ನನ್‌ ಆಫ್‌ ದ ಎಬೌವ್‌’ (ನೋಟಾ) ಅವಕಾಶ, ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಯಾವುದೇ ಸತ್ವವನ್ನೂ ಹೊಂದಿಲ್ಲ. ಲೇಖನದಲ್ಲಿ ಹೇಳಿರುವಂತೆ, ಇದು ಕೇವಲ ಸಾಂಕೇತಿಕ ಪ್ರತಿಭಟನೆಯೂ ಅಲ್ಲ. ನೋಟಾ ಒಂದರ್ಥದಲ್ಲಿ, ಚುನಾವಣಾ ಆಯೋಗದ ನಿಸ್ಸಹಾಯಕತೆಯ ಅಭಿವ್ಯಕ್ತಿ ಅಷ್ಟೆ!

ಇವರ್‍ಯಾರೂ ಬೇಡ ಎಂದು ಹೇಳುವ ಅವಕಾಶವನ್ನು ಪ್ರಾಮಾಣಿಕ ಮತದಾರರಿಗೆ ನೀಡುವುದನ್ನೇ ದೊಡ್ಡ ಔದಾರ್ಯ ಎಂದು ಭಾವಿಸಲಾಗದು. ಒಂದು ವೇಳೆ, ಅಂತಹ ಪರಿಣಾಮಕಾರಿ ಅಧಿಕಾರವು ಆಯೋಗಕ್ಕೆ ಇರುವುದೇ ಆದರೆ, ಅಯೋಗ್ಯ ಅಭ್ಯರ್ಥಿ ಚುನಾವಣೆಗೆ ನಿಲ್ಲದಂತೆಯೇ ತಡೆಯುವ ಅವಕಾಶವೂ ಏಕಿಲ್ಲ? ಚುನಾವಣಾ ವ್ಯವಸ್ಥೆಯನ್ನು ಮೂರ್ಖತನಮುಕ್ತಗೊಳಿಸುವ ನೈತಿಕ ಸಾಮರ್ಥ್ಯ ನಮ್ಮ ರಾಜಕೀಯ ವ್ಯವಸ್ಥೆಗೂ, ಅದು ನಿರ್ಮಿಸುವ ಸರ್ಕಾರಕ್ಕೂ ಇಲ್ಲವೆಂಬುದು ಸರಳ ಸತ್ಯ! ಆದರೂ ಇರುವ ಕಾಯ್ದೆ ಮತ್ತು ವ್ಯಾವಸ್ಥಿಕ ಚೌಕಟ್ಟಿನಲ್ಲೇ ಸುಧಾರಣೆಯ ಸಾಧ್ಯತೆಯನ್ನು ಕಂಡಿರಿಸುವ ಪ್ರಯತ್ನವನ್ನಾದರೂ ಮಾಡಬಹುದು. ನೌಕರಶಾಹಿಯು ಚುನಾವಣೆ ಸಂದರ್ಭದಲ್ಲಿ ಆಯೋಗವನ್ನು ಪ್ರತಿನಿಧಿಸುತ್ತದೆ. ತಮ್ಮ ಪಕ್ಷ ಪ್ರಣಾಳಿಕೆ, ವೈಯಕ್ತಿಕ ಆಶ್ವಾಸನೆಗಳು, ಆಯವ್ಯಯ, ತೆರಿಗೆ ಸಂದಾಯದಂತಹವುಗಳನ್ನು ಅಭ್ಯರ್ಥಿಯು ಸಕ್ಷಮ ಅಧಿಕಾರಿಯ ಸಮಕ್ಷಮದಲ್ಲಿ ಪ್ರತಿಜ್ಞಾಬದ್ಧವಾಗಿ ದಾಖಲಿಸಿ ಸಹಿ ಹಾಕಿಕೊಟ್ಟಿರುತ್ತಾರೆ. ಗೆದ್ದು ಹೋದಮೇಲೆ, ಆ ದಾಖಲಾತಿಗೆ ಕಸದಬುಟ್ಟಿಯ ಕಿಮ್ಮತ್ತೂ ಇಲ್ಲದಿದ್ದರೆ, ಆ ಜವಾಬ್ದಾರಿಯುತ ಅಧಿಕಾರಿಯ ‘ಸಕ್ಷಮತೆ’ಯ ಅರ್ಥವಾದರೂ ಏನು? ಗೆದ್ದ ಅಭ್ಯರ್ಥಿ ಈ ಮೂಲ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ, ಗೆಲುವಿನ ದೃಢೀಕರಣ ಪತ್ರವನ್ನು ಹಿಂಪಡೆಯುವ ಅಧಿಕಾರವು ಸಂಬಂಧಿತ ಚುನಾವಣಾ ಅಧಿಕಾರಿಗೆ (ಆರ್‌ಒ) ಯಾವತ್ತಿಗೂ ಇರುವಂತೆ ಆಗಬೇಕು. ಬಹುಶಃ ಈ ಸಾಮಾನ್ಯಜ್ಞಾನಕ್ಕೆ ಕಾಯ್ದೆಯ ದೊಡ್ಡ ತಿದ್ದುಪಡಿಯೂ ಬೇಕಾಗಲಾರದೇನೊ?!

ಆರ್.ಕೆ.ದಿವಾಕರ, ಬೆಂಗಳೂರು

‘ಸೀಮಿತ’ರಿಗೆ ರಾಜಕೀಯ ಪ್ರಜ್ಞೆಯ ಸಲಹೆ

ರಾಜ್ಯದ ಮುಂಚೂಣಿ ಸಮಾಜಮುಖಿ ರಾಜಕೀಯ ಪಕ್ಷಗಳಿಗೆ ಆರ್‌ಎಸ್‌ಎಸ್‌ ಶೈಲಿಯ ಸಾಂಸ್ಥಿಕ ರಚನೆಯ ತಳಪಾಯ ಹಾಗೂ ರಾಜಕೀಯ ಪ್ರಜ್ಞೆಯ ಅಗತ್ಯವನ್ನು ದೇವನೂರ ಮಹಾದೇವ ಅವರು ಪ್ರತಿಪಾದಿಸಿದ್ದಾರೆ (ಪ್ರ.ವಾ., ಫೆ. 15). ಸಾಂಸ್ಥಿಕ ರಚನೆ ಈಗಲೂ ಕಮ್ಯುನಿಸ್ಟ್ ಪಕ್ಷಗಳಲ್ಲಿ ಇದೆ. ಆದರೆ ಜನರ ಜತೆಗಿನ ಸಂಪರ್ಕವು ಕೆಲವೇ ಸ್ಥಳಗಳಲ್ಲಿ ಟ್ರೇಡ್ ಯೂನಿಯನ್ ಮಾದರಿಯ ಚಟುವಟಿಕೆಗಳ ಮೂಲಕ ಮಾತ್ರ ಇದೆ. ‘ಡೈನಮಿಕ್ ಆಗದೆ ಭವಿಷ್ಯವಿಲ್ಲ’ ಎಂದು ಸಿಪಿಎಂ ನಾಯಕ ಸೀತಾರಾಂ ಯಚೂರಿ ಅವರು ಹೇಳಿ ದೀರ್ಘಕಾಲ ಆಗಿದೆ.

ವರದಿಯಲ್ಲಿ ಪ್ರಸ್ತಾಪಿಸಲ್ಪಟ್ಟ ಅಧ್ಯಯನವನ್ನು ಕೈಗೊಂಡವರು ಅಕಡೆಮಿಕ್ ಬುದ್ಧಿಜೀವಿಗಳು. ಕಮಿಟೆಡ್ ಅಲ್ಲದವರು ನಿಗೂಢ ಮತದಾರರು ಎನ್ನುವುದು ಒಂದು ಸರಳೀಕರಣ. ನೂರನಲವತ್ತು ಕೋಟಿ ಜನರ ರಕ್ಷಾಕವಚ ಇದೆ ಎಂದು ಹೇಳಿಕೊಳ್ಳುವವರಿಗೂ ಗೊತ್ತಿದೆ ಅದು ಉತ್ಪ್ರೇಕ್ಷೆ ಎಂದು. ಹೊಸ ಪಕ್ಷಗಳ ಬಗೆಗಿನ ಒಲವು ಕಾಣಿಸಿರುವುದು ಅಪರೂಪಕ್ಕೆ. ಆರ್‌ಎಸ್‌ಎಸ್‌ನ ಯಶಸ್ಸಿಗೆ ಬಿಜೆಪಿಯ ಗೆಲುವೊಂದೇ ಕಾರಣವಲ್ಲ. ದಶಕಗಳ ಕಾಲ ಅದರಲ್ಲಿರುವ ಕಾರ್ಯಕರ್ತರು ಧನ ಅಲ್ಲದಿದ್ದರೂ ತನು, ಮನ ನೀಡಿದ್ದಾರೆ. ಈಚಿನ‌ ವರ್ಷಗಳಲ್ಲಿ ಅದರಲ್ಲಿ ಮರುಚಿಂತನೆ, ಕೆಲವು ಸಮುದಾಯಗಳನ್ನು ಸೇರ್ಪಡಿಸಿಕೊಳ್ಳುವ, ಒಟ್ಟುಗೂಡಿಸುವ ಪ್ರಯತ್ನಗಳು ನಡೆದಿರುವುದೂ ಗಮನಾರ್ಹ. ‘ಸೆಕ್ಯುಲರ್’ ಸರ್ಕಾರಗಳಿದ್ದಾಗ ಕೆಲವು ಪದವಿಗಳನ್ನು ಪಡೆದು ‘ಬದಲಾವಣೆಗಳನ್ನು ತಂದೆವು’ ಎಂದು ಹೇಳಿಕೊಂಡವರು ಈಗ ಡಯಾಗ್ನೊಸಿಸ್ ಮಾಡುತ್ತಿದ್ದಾರೆ- ಸ್ವಂತ ಉಳಿವಿನ ಪ್ರಶ್ನೆ ಇರಬಹುದು! ಕೆಲವು ಆನ್‌ಲೈನ್ ಸರ್ವೆಗಳಂತೆ ಇದೂ ನೈಜ ಮತದಾರರ ನಾಡಿಮಿಡಿತ ಹಿಡಿದಿಟ್ಟಿರಲಾರದು. ದೇವನೂರ ಅವರು ಏನು ಹೇಳಿದರೂ ಸುದ್ದಿಯಾಗುತ್ತದೆ, ಹಾಗೆಂದು ಅವರು ಮಧು ದಂಡವತೆಯವರ ನೆನಪಿನಲ್ಲಿ ‘ಸೀಮಿತ’ ವ್ಯಕ್ತಿಗಳಿಗೆ ರಾಜಕೀಯ ಪ್ರಜ್ಞೆಯ ಸಲಹೆ ನೀಡಿರುವುದು ವ್ಯರ್ಥ.

ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT