ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲಿಸುತ್ತಿರಲಿ ಸಾಹಿತ್ಯದ ದೀಪ!

ಈಗಲ್ ಬಳಗದಲ್ಲೊಂದು ಯುವಕವಿಗಳ ಕಲರವ
Last Updated 6 ಮೇ 2018, 9:29 IST
ಅಕ್ಷರ ಗಾತ್ರ

ಮಲೆನಾಡಿನಲ್ಲೀಗ ಚುನಾವಣೆಯ ಕಾವು ಬೇಸಿಗೆಯ ಬಿಸಿಲಿಗೆ ಕಾದ ಬಂಡೆಗಲ್ಲಿಗಿಂತಲೂ ಹೆಚ್ಚಳವಾಗಿದೆ. ಬೆಳಗಾದರೆ ಸಾಕು ನಾನಾ ಬಣ್ಣದ, ನಾನಾ ಚಿಹ್ನೆಯ ಟೋಪಿ ತೊಟ್ಟು ಮನೆ ಬಾಗಿಲಿಗೆ ಬಂದಿಳಿಯುವ ರಾಜ
ಕೀಯ ಕಾರ್ಯಕರ್ತರು ಪಕ್ಷದ ಹೆಸರು ಗೊತ್ತಿಲ್ಲದಿದ್ದರೂ ಅಭ್ಯರ್ಥಿಗೆ ಮತ ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಅಷ್ಟೊಂದು ಬ್ಯುಸಿಯಾಗಿರುವ ಪಟ್ಟಣದಲ್ಲಿ ಕಳೆದ ಶುಕ್ರವಾರ ಯುವ ಕವಿಗಳೆಲ್ಲಾ ತಣ್ಣಗೆ ಕುಳಿತು ತಮ್ಮ ಕವನಗಳನ್ನು ಮೊದಲ ಮಳೆ ಭೂಮಿಗಿಳಿಯುವಂತೆ ಪಟಪಟನೆ ಸಿಡಿಸುತ್ತಿದ್ದರೆ ಕೇಳುಗರ ಕೈ ಆದೇಶವಿಲ್ಲದೇ ಕರತಾಡನ ಮಾಡುತ್ತಿತ್ತು.

ಬಹಳ ದಿನಗಳ ನಂತರ ಪಟ್ಟಣದಲ್ಲಿ ನಡೆದ ಕವಿಗೋಷ್ಠಿ ಸಹೃದಯರ ಮನಸೂರೆಗೊಂಡಿತು. ಅದು ಈಗಲ್‌ ಎಡಿಟೋರಿಯಲ್‌ ಪುಸ್ತಕ ಬಿಡುಗಡೆ ಸಂಭ್ರಮದಲ್ಲಿ. ಹಳೇಕೋಟೆ ಗ್ರಾಮದ ಜಾರಪ್ಪ ಪೂಜಾರಿ ಮತ್ತು ಲಕ್ಷ್ಮಮ್ಮ ದಂಪತಿಯ ಮಗನಾದ ಸುಂದರ್‌ ಬಂಗೇರಾ ಅವರು ಬಂಟ್ವಾಳ ತಾಲ್ಲೂಕಿನ ಗುತ್ತು ಕಲ್ಕೇರುಬೆಟ್ಟದ ನಿವಾಸಿ.
16 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಹದಿನಾರು ವರ್ಷಗಳ ಪತ್ರಿಕಾರಂಗದ ಏಳು ಬೀಳುಗಳನ್ನು ‘ಈಗಲ್‌ ಎಡಿಟೋರಿಯಲ್‌’ ಪುಸ್ತಕದಲ್ಲಿ ಹೊರ ತಂದಿದ್ದು, ಕಳೆದ ಶುಕ್ರವಾರ ಪಟ್ಟಣದ ಬಂಟರಯಾನೆ ನಾಡವರ ಸಂಘದ ಸಮುದಾಯ ಭವನದಲ್ಲಿ ಈಗಲ್‌ ಎಡಿಟೋರಿಯಲ್‌ ಪುಸ್ತಕ ಲೋಕಾರ್ಪಣೆ
ಗೊಂಡಿತು. ಅದರ ಬಿಡುಗಡೆ ಸಮಾರಂಭಕ್ಕಾಗಿ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಸಾಹಿತಿ ರಾಜೇಶ್ವರಿ ತೇಜಸ್ವಿ, ಜಾನಪದ ಅಕಾಡೆಮಿ ಸದಸ್ಯ ಡಾ. ಬಿ.ಎಸ್‌.ತಲ್ವಾಡಿ, ಶಿಕ್ಷಣ ತಜ್ಞ
ಡಾ. ಎಚ್‌.ಎಂ.ಮಹೇಶ್‌, ಹಿರಿಯ ವಕೀಲ ಬಿ.ಎಂ.ಲಕ್ಷ್ಮಣಗೌಡ, ಹಳಸೆಶಿವಣ್ಣ, ಕೆಸವಳಲು ರಾಘವೇಂದ್ರ, ಕಸಾಪ ಅಧ್ಯಕ್ಷ ಕುಂದೂರು ಅಶೋಕ್‌ ಸೇರಿದಂತೆ ಹಲವು ಮಂದಿ ಸಾಹಿತ್ಯಾಸಕ್ತರು ಸಮಾರಂಭಕ್ಕೆ ಸಾಕ್ಷಿಯಾದರು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ 40ಕ್ಕೂ ಅಧಿಕ ಕವಿಗಳು ಒಂದೆಡೆ ಕಲೆತು, ತಮ್ಮ ಹೃದಯದಲ್ಲಿ ಮೂಡಿಬಂದ ಭಾವನೆಗಳಿಗೆ ಅಕ್ಷರರೂಪ ಕೊಟ್ಟು, ಅದನ್ನು ಪ್ರೇಕ್ಷಕರ ಮುಂದೆ ವಾಚಿಸಿ ಸಹೃದಯರ ಮನಸ್ಸನ್ನು ಅರಳಿಸಿದರು.

ಸಮಾರಂಭವನ್ನು ಸಾಹಿತಿ ರಾಜೇಶ್ವರಿ ತೇಜಸ್ವಿ ಉದ್ಘಾಟಿಸಿ, ತಮ್ಮ ನುಡಿ ಸಿಂಚನಗಳ ಮೂಲಕ ಮಲೆನಾಡಿನಲ್ಲಿ ಸಾಹಿತ್ಯಕ್ಕಿರುವ ಸದಾವಕಾಶಗಳ ಚಿತ್ರಣವನ್ನು ಬಿಚ್ಚಿಟ್ಟರು. ಪುಸ್ತಕ ಬಿಡುಗಡೆಯಾಗತ್ತಿದ್ದಂತೆ ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಯುವ ಕವಿ ನಂದೀಶ್‌ ಬಂಕೇನಹಳ್ಳಿ ಬರೆದ ‘ಹೂವು ತುಂಬಿಕೊಂಡ ಮರವ ಕೇಳಿದೆ ಕವಿತೆಯೆಂದರೆನು? ಮಾಮರವು ಹೇಳಿತು ಮಣ್ಣ ಸಾರವ ಹೀರಿ, ಹಣ್ಣ ನೀಡುವುದೆಂದು’ಎಂಬ ‘ಕವಿತೆಯೆಂದರೇನು?’ ಎಂಬ ಕವನ ಸಮಾಜದಿಂದ ನಾವು ಏನನ್ನೇ ಪಡೆದುಕೊಂಡರೂ, ಸಮಾಜಕ್ಕೆ ಸಿಹಿಯನ್ನೇ ನೀಡಬೇಕು ಎಂಬ ಸಂದೇಶವನ್ನು ಸಾರಿ, ಸಹೃದಯರಿಂದ ಚಪ್ಪಾಳೆ ಗಿಟ್ಟಿಸಿತು. ಮಲ್ಲಿಕಾ ಮತ್ತಿಕಟ್ಟೆ ಅವರು ವಾಚಿಸಿದ ‘ಬೆಳದಿಂಗಳ ರಾತ್ರಿ’ ಎಂಬ ಕವನವು ಜೀವನವು ನೋವಿನಲ್ಲೂ ಸುಖವನ್ನು ಕಾಣುವ ಬೆಳದಿಂಗಳ ಬದುಕಾಗಬೇಕು ಎಂದು ಸಾರಿತು. ಎಂ.ಎಸ್‌. ನಾಗರಾಜ್‌ ಅವರ ‘ ಓ ಕಾಣಿಯಣ್ಣ’, ಸನ್ಮತಿ ಅವರ ‘ಕವಿಶೈಲ’, ಅಲ್ತಾಫ್‌ ಬಿಳಗುಳ ಅವರ ‘ನಿಮ್ಮ ಸಂಗಾತಿ’ ಮೋಹನ್‌ ರಾಜಣ್ಣ ಅವರ ‘ಅಮ್ಮ’ ಕವನಗಳು ಸಹೃದಯರಿಗೆ ಸಾಹಿತ್ಯದ ಸವಿಯನ್ನು ಉಣಬಡಿಸಿದವು.

ಮಲೆನಾಡಿನಲ್ಲಿ ಸಾಹಿತ್ಯ ಪರವಾದ ಚಟುವಟಿಕೆಗಳು ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ಜಿಲ್ಲೆಯ ಯುವ ಕವಿಗಳನ್ನು ಒಂದೆಡೆ ಬೆಸೆಯಲು ಈಗಲ್‌ ಬಳಗವು ಯಶಸ್ವಿಯಾಯಿತು. ಮೂಡಿಗೆರೆ ತಾಲ್ಲೂಕು ಒಂದರಲ್ಲಿಯೇ ಸುಮಾರು 20ಕ್ಕೂ ಅಧಿಕ ಯುವ ಸಾಹಿತಿಗಳಿದ್ದು, ಅವರ ಬರವಣಿಗೆಯ ದೀಪ ಆರದಂತಾಗಲು ಇನ್ನಷ್ಟು ಸಾಹಿತ್ಯ ಚಟುವಟಿಕೆಗೆ ವೇದಿಕೆ ಸಿಗಬೇಕು ಎಂಬುದು ಸಹೃದಯರ ಮನದಾಳದ ಮಾತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT