ಸೌಜನ್ಯದ ಪಾಠ ಕಲಿಯಲಿ

ಮಂಗಳವಾರ, ಏಪ್ರಿಲ್ 23, 2019
27 °C

ಸೌಜನ್ಯದ ಪಾಠ ಕಲಿಯಲಿ

Published:
Updated:

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಚುನಾವಣಾ ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ವಾಹನ ತಪಾಸಣೆಯೂ ಒಂದು.

ಕಳೆದ ವಾರ ನಾನು ಶಿವಮೊಗ್ಗದಿಂದ ಊಟಿಗೆ ಹೋಗಿದ್ದೆ. ಮುಂಜಾನೆ 5 ಗಂಟೆಗೆ ಶಿವಮೊಗ್ಗ ಬಿಟ್ಟ ನಂತರ ಮಧ್ಯಾಹ್ನ 2 ಗಂಟೆಗೆ ಊಟಿ ತಲುಪುವವರೆಗೂ ಕರ್ನಾಟಕದ ಯಾವೊಬ್ಬ ಪೊಲೀಸೂ ನಮ್ಮ ವಾಹನವನ್ನು ತಡೆಯಲಿಲ್ಲ, ತಪಾಸಣೆ ನಡೆಸಲಿಲ್ಲ. ಆದರೆ ತಮಿಳುನಾಡಿನ ಗಡಿಯ ಮುದುಮಲೈಯಲ್ಲಿ ಮಾತ್ರ ಆ ರಾಜ್ಯದ ಪೊಲೀಸರು, ಕಾರಿನ ಸೀಟಿನ ಅಡಿಭಾಗದಿಂದ ಹಿಡಿದು, ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರು.

ವಾಪಸ್‌ ಬರುವಾಗ ನಾವು ಊಟಿಯಲ್ಲಿ ಚಾಕೊಲೇಟ್‍ಗಳು, ಕಲ್ಲಂಗಡಿ ಹಣ್ಣುಗಳು, ಕ್ಯಾರೆಟ್‍ಗಳನ್ನು ಉತ್ತಮ ಗುಣಮಟ್ಟದವು ಎಂಬ ಕಾರಣಕ್ಕೆ ಕೊಂಡು ತಂದಿದ್ದೆವು. ಮರುಪ್ರಯಾಣದಲ್ಲಿ ಕೂಡ ಎಲ್ಲಿಯೂ ನಮ್ಮ ವಾಹನವನ್ನು ಪೊಲೀಸರು ತಡೆಯಲಿಲ್ಲ! ಆದರೆ ಅರಸೀಕೆರೆಯ ಹೊರವಲಯದಲ್ಲಿ ಮಾತ್ರ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ನಮ್ಮ ವಾಹನ ತಪಾಸಣೆಯ ನೆಪದಲ್ಲಿ, ಕಲ್ಲಂಗಡಿ, ಚಾಕೊಲೇಟ್‌ ಇಷ್ಟೊಂದು ಏಕೆ? ಯಾರಿಗಾಗಿ ಕೊಂಡೊಯ್ಯುತ್ತಿದ್ದೀರಿ? ಸೂಟ್‍ಕೇಸ್‍ನಲ್ಲಿ ಏನಿದೆ ಎಂಬಂತಹ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾ, ಅಂತೂ ಇಂತೂ ಸಮಗ್ರವಾಗಿ ವಾಹನ ತಪಾಸಣೆ ಕಾರ್ಯವನ್ನು ಪೂರೈಸಿದರು!

ಅಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರು ತಮ್ಮ ಹಕ್ಕೆಂಬಂತೆ ಒಂದು ಚಾಕೊಲೇಟ್ ಪೊಟ್ಟಣವನ್ನು ತೆಗೆದುಕೊಂಡರು. ಆತ ಅದನ್ನು ತೆಗೆದುಕೊಂಡಿದ್ದಕ್ಕೆ ನನಗೆ ಬೇಸರ, ಸಿಟ್ಟು ಬರಲಿಲ್ಲ. ಆತನೂ ಮನುಷ್ಯನೇ, ನಿಸರ್ಗಸಹಜ ಆಸೆ, ಇರಲಿ ಬಿಡು ಎಂಬ ಭಾವ ನನ್ನದಾಗಿತ್ತು. ಆದರೆ ಸೌಜನ್ಯಕ್ಕೂ ಕೇಳಬೇಕೆಂಬ ಪ್ರಜ್ಞೆ ಆ ವ್ಯಕ್ತಿಗಿರಲಿಲ್ಲವಲ್ಲ ಎಂಬ ವಿಷಾದ ಕಾಡಿದ್ದಂತೂ ಸತ್ಯ. ಪೊಲೀಸರಿಗೆ ಕೈತುಂಬ ಸಂಬಳ, ಭತ್ಯೆಗಳು ಬರುತ್ತಿದ್ದರೂ ಪಾದಚಾರಿ ಮಾರ್ಗದ ವ್ಯಾಪಾರಿಗಳಿಂದ, ಸಣ್ಣಪುಟ್ಟ ಸಂಚಾರ ನಿಯಮ ಉಲ್ಲಂಘಿಸುವವರಿಂದ ಹಣ ವಸೂಲಿ ಮಾಡುವ, ಪ್ರಯಾಣಿಕರಿಂದ ಹೀಗೆ ಲಪಟಾಯಿಸುವ ಪ್ರವೃತ್ತಿ ಏಕೆ ದೂರವಾಗುತ್ತಿಲ್ಲ? ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು.

-ಚನ್ನು ಅ. ಹಿರೇಮಠ, ರಾಣೆಬೆನ್ನೂರು

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !