ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಮರೆತ ಅಪ್ಪನಿಗೊಂದು ಪತ್ರ!

Last Updated 18 ಏಪ್ರಿಲ್ 2019, 19:50 IST
ಅಕ್ಷರ ಗಾತ್ರ

ಪ್ರೀತಿಯ ಅಪ್ಪ...

ಮತ್ತೊಮ್ಮೆ ನಮ್ಮ ಹಬ್ಬ ಬಂದಿದೆ. ಇದು ನಮ್ಮ ಮನೆಯ ಹಬ್ಬವಲ್ಲ, ದೇಶದ ಹಬ್ಬ. ವರ್ಷಕ್ಕೊಮ್ಮೆ ಬರುವ ಆಚರಣೆಗಳಿಗಿಂತ ಹೆಚ್ಚಾಗಿ ಐದು ವರ್ಷಕ್ಕೊಮ್ಮೆ ಬರುವ ಈ ಹಬ್ಬ ನಮಗೆ ತುಂಬಾ ಮುಖ್ಯ. ಏಕೆಂದರೆ ಅದು ನಮ್ಮ ಹಕ್ಕು. ಚುನಾವಣೆ ಸಮೀಪಿಸಿದರೆ ಸಾಕು, ರಜೆ ಬಂತೆಂದು ನೀನು ನಮ್ಮನ್ನೆಲ್ಲಾ ಪ್ರವಾಸಕ್ಕೋ, ಸಂಬಂಧಿಕರ ಊರಿಗೋ ಕರೆದುಕೊಂಡು ಹೋಗಿಬಿಡುತ್ತೀಯ. ಮತದಾನದ ಹಕ್ಕನ್ನು ಕೈಚೆಲ್ಲುತ್ತೀಯ.

‘ನಮ್ಮ ಒಂದೆರಡು ಮತಗಳಿಂದ ದೇಶವೇನೂ ಉದ್ಧಾರವಾಗೋಲ್ಲ’ ಅನ್ನೋ ಉಡಾಫೆ ಮಾತು ಯಾಕಪ್ಪಾ? ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ತೆರಿಗೆ, ಸಾಲ ಕಟ್ಟದ ದೊಡ್ಡ ದೊಡ್ಡ ಉದ್ಯಮಿಗಳು ದೇಶ ಬಿಟ್ಟು ಓಡಿಹೋಗುತ್ತಿದ್ದಾರೆ.

ಬಡತನ ತಾಂಡವವಾಡುತ್ತಿದೆ. ಮೂಲ ಸೌಕರ್ಯವಿಲ್ಲದೆ ಜನ ಪರದಾಡುತ್ತಿದ್ದಾರೆ. ಈ ಕಾರಣಕ್ಕಾದರೂ ನೀನು ಮತ ಚಲಾಯಿಸಬೇಕಪ್ಪ. ನನ್ನ ಶಾಲೆಯಲ್ಲಿ ಮತದಾನದ ಹಕ್ಕಿನ ಬಗ್ಗೆ ಪಾಠ ಹೇಳಿದರು. ಒಂದೊಂದು ಮತವೂ ಎಷ್ಟು ಅಮೂಲ್ಯ ಎನ್ನುವುದು ನನ್ನ ಅರಿವಿಗೆ ಬಂತು. ನನಗೇನಾದರೂ ಹದಿನೆಂಟು ವಯಸ್ಸಾಗಿ ವೋಟು ಹಾಕುವ ಹಕ್ಕು ಪಡೆದಿದ್ದರೆ, ನಿನ್ನಂತೆ ಮತದಾನದ ಹಕ್ಕನ್ನು ಚಲಾಯಿಸದೆ ಊರು ಬಿಟ್ಟು ಹೋಗುತ್ತಿರಲಿಲ್ಲ.

ಅದ್ಯಾವುದೋ ಕೆಟ್ಟ ಗಳಿಗೆಯಿಂದ ಈ ರಾಜಕೀಯ, ಅಧಿಕಾರ, ಚುನಾವಣೆಯೆಂದರೆ ನೀನು ರೋಸಿ ಹೋಗಿದ್ದೀಯೆಂದು ನನಗೆ ಗೊತ್ತು. ಈ ವ್ಯವಸ್ಥೆಯ ಮೇಲೆ ನಿನಗೆ ಕೋಪವಿದೆ ಎಂಬುದು ಗೊತ್ತು ಅಪ್ಪ.

ಆದರೂ, ನಮ್ಮ ಊರಿಗೆ ಬೇಕಾದ ವ್ಯಕ್ತಿಯಾಗಿ, ಎಲೆಕ್ಷನ್‌ನಲ್ಲಿ ಸೂಕ್ತ ವ್ಯಕ್ತಿಗೆ ಮತ ನೀಡುವಂತೆ ಮಾಡಿ ಪ್ರಜೆಗಳ ಹಕ್ಕು ಕಾಪಾಡಬೇಕಾದ ನೀನೇ ಮತದಾನ ಬಹಿಷ್ಕರಿಸಿ ಊರು ಬಿಡುವುದು ತಪ್ಪಲ್ಲವೇ? ಅಪ್ಪ, ನಿನ್ನದೊಂದು ವೋಟು ಸಹ ಈ ವ್ಯವಸ್ಥೆಯನ್ನು ಸರಿಪಡಿಸಲು ನೆರವಾಗಬಲ್ಲದು. ದಯವಿಟ್ಟು ಮತಗಟ್ಟೆಗೆ ಹೋಗಿ ನಿನ್ನ ಹಕ್ಕು ಚಲಾಯಿಸಪ್ಪ. ನಂತರ ನೀನು ಮತಹಾಕಿ ಬಂದ ನೀಲಿಶಾಯಿಯ ಎಡಗೈ ಬೆರಳನ್ನು ಸೆಲ್ಫಿ ತೆಗೆದು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಶೇರ್ ಮಾಡೋಣ. ಈ ಮೂಲಕ ಮತದಾನ ಮಾಡುವುದಕ್ಕೆ ಎಲ್ಲರನ್ನೂ ಉತ್ತೇಜಿಸೋಣ.

ಇಂತಿ ನಿನ್ನ ಮುದ್ದಿನ ಮಗಳು
ಅಂಜು
-ಅಂಬಿ ಎಸ್. ಹೈಯ್ಯಾಳ್,ಮುದನೂರ ಕೆ., ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT