ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳೆತ್ತುವ ಕಾರ್ಯ ಸುಸ್ಥಿರಗೊಳಿಸುವುದು ಹೇಗೆ?

Last Updated 27 ಮೇ 2019, 20:00 IST
ಅಕ್ಷರ ಗಾತ್ರ

ಕೆರೆಗಳ ಹೂಳಿನ ಕುರಿತು ಅಣೆಕಟ್ಟೆ ವಿಶ್ವನಾಥ ಅವರು ವ್ಯಕ್ತಪಡಿಸಿರುವ ಕಾಳಜಿ (ವಾ.ವಾ., ಮೇ 21) ಸಕಾಲಿಕವಾದದ್ದು. ಸರ್ಕಾರಿ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳು ಕೈಗೆತ್ತಿಕೊಳ್ಳುವ ಕೆರೆ ಹೂಳೆತ್ತುವ ಯೋಜನೆಗಳಲ್ಲಿ ಹಲವೆಡೆ ಗಂಭೀರ ನ್ಯೂನತೆಗಳಿರುವುದು ಕಂಡುಬರುತ್ತಿದೆ.

ಕೆರೆಯೊಂದರ ಹೂಳಿನ ಪ್ರಮಾಣ ಅಂದಾಜಿಸುವುದು, ಹೂಳೆತ್ತುವ ಕಾಮಗಾರಿಯ ಅಂದಾಜುಪಟ್ಟಿ ತಯಾರಿಸುವುದು, ಯೋಜನೆಯ ಅನುಷ್ಠಾನ- ಈ ಎಲ್ಲ ಹಂತಗಳಲ್ಲಿ ನೈಜ ಅಂಕಿ-ಅಂಶಗಳನ್ನು ಮರೆಮಾಚಿ, ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡುವುದು ವ್ಯಾಪಕವಾಗಿದೆ. ‘ಸಾಮಾಜಿಕ ಜವಾಬ್ದಾರಿ’ ತತ್ವದಡಿ ಖಾಸಗಿ ಕಂಪನಿಗಳು ನೀಡುವ ಅನುದಾನವನ್ನು ಬಳಸುವ ಸ್ವಯಂಸೇವಾ ಸಂಸ್ಥೆಗಳ ಯೋಜನೆಗಳಿಗೂ ಈ ಕಳಂಕ ತಟ್ಟಿದೆ. ಸ್ಥಳೀಯ ಸಮುದಾಯಗಳ ಸಕಾರಾತ್ಮಕ ಮತ್ತು ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಮಾತ್ರ ಇದನ್ನು ನಿಯಂತ್ರಿಸಬಹುದೇನೊ. ‘ನರೇಗಾ’ ಯೋಜನೆಯಡಿ ಹಮ್ಮಿಕೊಳ್ಳುತ್ತಿರುವ ಬಹುಪಾಲು ಕಾಮಗಾರಿಗಳಲ್ಲಿ, ವಾಸ್ತವದಲ್ಲಿ ಯಂತ್ರಗಳೇ ಹೂಳನ್ನು ಎತ್ತಿ ಸಾಗಿಸುತ್ತಿವೆ. ಗ್ರಾಮೀಣ ಬಡವರಿಗೆ ಉದ್ಯೋಗ ದೊರಕಿಸುವ ಆಶಯದ ಈ ಮಹತ್ವದ ಯೋಜನೆಯು ಮಧ್ಯವರ್ತಿಗಳ ಜೇಬು ತುಂಬಿಸುವಲ್ಲಿ ಕೊನೆಗೊಳ್ಳುತ್ತಿದೆ! ಫಲವತ್ತಾದ ಈ ಹೂಳುಮಣ್ಣು ಬಹಳೆಡೆ ಖಾಸಗಿ ಇಟ್ಟಿಗೆ ಭಟ್ಟಿಗಳ ಹೊಟ್ಟೆ ಸೇರುತ್ತಿದೆ. ಕೃಷಿ ಜಮೀನಿಗೆ ಒಯ್ಯುತ್ತಿರುವವರಲ್ಲೂ, ಸ್ವಂತ ಟ್ರ್ಯಾಕ್ಟರಿರುವ ರೈತರು ಅಥವಾ ಶ್ರೀಮಂತರೇ ಹೆಚ್ಚು. ಕೆರೆಯೊಂದರ ಹೂಳು ಆ ಜಲಾನಯನ ಮತ್ತು ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಹೊಲಗಳನ್ನೂ ಫಲವತ್ತಾಗಿಸಬೇಕಾದದ್ದು ಅಪೇಕ್ಷಣೀಯವಲ್ಲವೇ?

ಕೆರೆಯಂಗಳದಲ್ಲಿ ಸಂಗ್ರಹವಾದ ಮೆಕ್ಕಲುಮಣ್ಣನ್ನು ಮಾತ್ರ ತೆಗೆಯುವುದರ ಬದಲು, ಕೆರೆಯನ್ನು ಆಳವಾಗಿ ಅಗೆಯುವ ಪ್ರವೃತ್ತಿ ವ್ಯಾಪಕವಾಗಿದೆ. ಇದು ಆ ಜಲಾನಯನ ಪ್ರದೇಶದ ಮೇಲ್ಮಣ್ಣಿನ ತೇವಾಂಶ ತಗ್ಗಿಸಲು ಕಾರಣವಾಗುತ್ತದೆ. ಎರೆಮಣ್ಣು, ಜೇಡಿಮಣ್ಣು, ಮರಳು ಹದವಾಗಿ ಬೆರೆತಿರುವ ಮತ್ತು ಜೈವಿಕ ತ್ಯಾಜ್ಯ ರಹಿತ ಹೂಳನ್ನು ಬಳಸಿ ಕೆರೆಯ ಬದುವನ್ನು ಎಲ್ಲೆಡೆ ಗಟ್ಟಿಗೊಳಿಸುವ ಕಾರ್ಯವೂ ಸಮರ್ಪಕವಾಗಿ ಆಗುತ್ತಿಲ್ಲ. ಕೆರೆಯ ಸುತ್ತಲೂ ಗಿಡಮರ ಬೆಳೆಸುವ ಮೂಲಕ ಬಫರ್ ವಲಯ ರೂಪಿಸಿ, ಮಣ್ಣುಸವೆತ ತಡೆಗಟ್ಟುವ ಕ್ರಮಗಳಂತೂ ಅಪರೂಪವಾಗುತ್ತಿವೆ. ಹೂಳಿನಲ್ಲಿ ಪೋಷಕಾಂಶಗಳ ಜೊತೆಗೆ ಅಪಾರ ಪ್ರಮಾಣದಲ್ಲಿ ರಾಸಾಯನಿಕ ಕ್ರಿಮಿನಾಶಕಗಳ ಅಂಶವೂ ಇರುತ್ತದೆ.

ಅಂಟುಮಣ್ಣಿನ ಹೂಳಲ್ಲಿ ತೇವಾಂಶ ಹಿಡಿದಿಡುವ ಸಾಮರ್ಥ್ಯವೂ ಕಡಿಮೆ. ಇಂಥ ಮೆಕ್ಕಲನ್ನು ಇತರ ಜೈವಿಕ ಗೊಬ್ಬರಗಳ ಜೊತೆಗೆ, ಸೂಕ್ತವಾಗಿ ಬಳಸುವ ಕೌಶಲವನ್ನು ರೈತರ ಗಮನಕ್ಕೆ ತರಬೇಕಾದ ಪ್ರಯತ್ನವಂತೂ ಆಗುತ್ತಲೇ ಇಲ್ಲ. ಜಲಾನಯನ ಕ್ಷೇತ್ರವೊಂದರ ಸುಸ್ಥಿರ ನಿರ್ವಹಣೆಗೆ ಕೆರೆ ಹೂಳೆತ್ತುವ ಕಾರ್ಯವು ದಾರಿಯಾಗಬೇಕೆಂದರೆ, ಈ ಎಲ್ಲ ಅಂಶಗಳ ಕುರಿತು ಸಮಗ್ರ ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ ರೂಪಿಸಬೇಕಿದೆ. ಪಂಚಾಯತ್‌ ವ್ಯವಸ್ಥೆಯ ಮೂಲಕ ಅವು ಸೂಕ್ತವಾಗಿ ಅನುಷ್ಠಾನವಾಗುವಂತೆ ಸ್ಥಳೀಯ ಸಮುದಾಯಗಳು ನೋಡಿಕೊಳ್ಳಬೇಕಿದೆ.
-ಡಾ. ಕೇಶವ ಎಚ್. ಕೊರ್ಸೆ,ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT