ಗುರುವಾರ , ನವೆಂಬರ್ 21, 2019
26 °C

ನಾಯಕರಾದವರು ಕೆಲಸ ಮಾಡಿಸಬೇಕು

Published:
Updated:

ಪ್ರಧಾನಿ ನರೇಂದ್ರ ಮೋದಿ ಅವರು ಮಾಮಲ್ಲಪುರಂ ಕಡಲ ಕಿನಾರೆಯಲ್ಲಿ ಸುಮಾರು 30 ನಿಮಿಷ ಪ್ಲಾಗಿಂಗ್‌ ನಡೆಸಿದ್ದಾರೆ (ಪ್ರ.ವಾ., ಅ. 13). ಪ್ರಧಾನಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ಕಸ ಹೆಕ್ಕುವ, ಕಸ ಗುಡಿಸುವ ಕೆಲಸ ಮಾಡಿರುವುದನ್ನು ಹಿಂದೆ ಕೇಳಿರಲಿಲ್ಲ, ಮುಂದೆ ಕೇಳುತ್ತೇವೋ ಇಲ್ಲವೋ ಗೊತ್ತಿಲ್ಲ. ‘ಸ್ವಚ್ಛ ಭಾರತ್‌’ ಅಭಿಯಾನದಡಿ ಮೋದಿ ಅವರು ಮಾಡುತ್ತಿರುವ ಇಂತಹ ಕೆಲಸಗಳು ಪ್ರಶಂಸನೀಯ. ಆದರೆ, ಒಬ್ಬ ನಾಯಕ ಕೆಲಸ ಮಾಡಿಸಬೇಕೇ ವಿನಾ ತಾನೇ ಅದನ್ನು ಮಾಡಬಾರದು. ಕಸ ಗುಡಿಸುವ ಕೆಲಸವನ್ನು ಯಾರು ಬೇಕಾದರೂ ಮಾಡಿಯಾರು. ಆದರೆ ಪ್ರಧಾನಿ ಕೆಲಸವನ್ನು ಮೋದಿಯವರೇ ಮಾಡಬೇಕಾಗಿರುತ್ತದೆ.

ಪ್ರಧಾನಿಗೆ ಒಂದೊಂದು ನಿಮಿಷವೂ ಅತ್ಯಮೂಲ್ಯ. ಇಂದು ಮೋದಿಯವರು ಸ್ವಚ್ಛ ಮಾಡಿರುವ ಜಾಗವನ್ನು ಎರಡು ದಿನಗಳ ನಂತರ ನೋಡಿದರೆ ಅಲ್ಲಿ ಕಸ ತುಂಬಿ ತುಳುಕುತ್ತಿರುತ್ತದೆ. ಮಾಧ್ಯಮಗಳಿಂದ, ತಮ್ಮ ಅದ್ಭುತ ಭಾಷಣಗಳಿಂದ, ಶಾಲಾ ಪಠ್ಯದಲ್ಲಿ ಅಳವಡಿಸುವುದರಿಂದ ಜನರಲ್ಲಿ ನಾಗರಿಕ ಪ್ರಜ್ಞೆ ಮೂಡಿಸಬೇಕು, ಅಗತ್ಯಇರುವಷ್ಟು ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಆಗ ಮಾತ್ರ ಸ್ವಚ್ಛ ಭಾರತ ಕನಸು ನನಸಾಗುವುದೇ ಹೊರತು ತಾವೇ ಪೊರಕೆ ಕೈಗೆತ್ತಿಕೊಳ್ಳುವುದರಿಂದ ಅಲ್ಲ.
-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರತಿಕ್ರಿಯಿಸಿ (+)