ಭಾನುವಾರ, ಡಿಸೆಂಬರ್ 15, 2019
19 °C

ಬಹುತ್ವದ ಭಿನ್ನ ನೆಲೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರಧಾನಿ ನರೇಂದ್ರ ಮೋದಿಯವರು ಬಹುತ್ವ ಭಾರತದ ಮೇಲೆ ಏಕ ಸಂಸ್ಕೃತಿ ಹೇರುವ ಹುನ್ನಾರ ನಡೆಸಿದ್ದಾರೆ’ ಎಂದು ಸಿಪಿಐ ಯುವ ಮುಖಂಡ ಕನ್ಹಯ್ಯ ಕುಮಾರ್ ಅವರು ಕಲಬುರ್ಗಿಯ ಡಾ. ಬಿ.ಆರ್‌.ಅಂಬೇಡ್ಕರ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ (ಪ್ರ.ವಾ., ಅ. 16). ಕನ್ಹಯ್ಯ ಅವರು ದೇಶದಾದ್ಯಂತ ಬಹುತ್ವದ ಪ್ರತಿಪಾದಕರಂತೆ ಮಾತನಾಡುತ್ತಿದ್ದಾರೆ. ಬಹುತ್ವ ಎಂದರೆ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಬೇರೆ ಬೇರೆ ಸಂಸ್ಕೃತಿಗಳ ರಾಜ್ಯಗಳ ಒಕ್ಕೂಟ. ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಕನ್ನಡವನ್ನೂ ಒಳಗೊಂಡಂತೆ ಇಪ್ಪತ್ತೆರಡು ಭಾಷೆಗಳಿಗೆ ಮಾನ್ಯತೆ ದೊರೆತಿದೆ. ಆದರೆ ಈ ಮಾನ್ಯತೆಯು ನೋಟುಗಳ ಮೇಲೆ ಈ ಭಾಷೆಗಳನ್ನು ಪ್ರಿಂಟ್ ಹಾಕಿಸಲು ಮಾತ್ರ ಸೀಮಿತ ಆದಂತಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿವೆ. ಇಂದಿಗೂ ಹಿಂದಿಯೇತರ ಭಾರತೀಯ ಭಾಷೆಗಳು ಮಲತಾಯಿ ಧೋರಣೆಯಿಂದ ನಲುಗುತ್ತಿವೆ. ರಾಷ್ಟ್ರ ಮಟ್ಟದಲ್ಲಿ ಕೆಲವು ಪರೀಕ್ಷೆಗಳನ್ನು ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಈ ವಿಷಯದಲ್ಲಿ ದೇಶದ ನಿರುದ್ಯೋಗಿ ಯುವಜನರನ್ನು ಕತ್ತಲಲ್ಲಿ ಇಡಲಾಗಿದೆ.

ದುರಂತ ಎಂದರೆ, ಇವರಿಗೆ ಸ್ವತಃ ತಮಗೆ ಆಗುತ್ತಿರುವ ಅನ್ಯಾಯದ ಅರಿವಿಲ್ಲ. ಸಂಸತ್ತಿನಲ್ಲಿ ಸಂಸದರು ಇಂಗ್ಲಿಷ್, ಹಿಂದಿ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಬೇಕಾದರೆ ಪೂರ್ವಾನುಮತಿ ಪಡೆದುಕೊಳ್ಳಬೇಕು. ಹಿಂದಿಯೇತರ ಭಾಷಿಕರಿಗೆ ಪರಕೀಯ ಭಾವನೆ ಮೂಡಲು ಇನ್ನೇನು ಬೇಕು? ಹೋದಲ್ಲಿ ಬಂದಲ್ಲಿ ಬಹುತ್ವದ ಬಗ್ಗೆ ಮಾತನಾಡುವ ಕನ್ಹಯ್ಯ ಅವರು, ಬಹುತ್ವದ ತಾಯಿಬೇರುಗಳಂತಿರುವ ಇಂತಹ ಗಂಭೀರ ವಿಚಾರಗಳಿಗೂ ಧ್ವನಿಯಾಗಬೇಕು. ಇಲ್ಲದೇ ಹೋದರೆ ಅವರ ಮಾತುಗಳನ್ನು ಮತ್ತೊಂದು ಭಾವನಾತ್ಮಕ ಅತಿರೇಕವಾಗಿ ಮಾತ್ರ ನೋಡಬೇಕಾಗುತ್ತದೆ.

-ಗಿರೀಶ್ ಮತ್ತೇರ, ಯರಗಟ್ಟಿಹಳ್ಳಿ, ಚನ್ನಗಿರಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು