ಸೋಮವಾರ, ನವೆಂಬರ್ 18, 2019
24 °C

‘ಮೈತ್ರಿ ಬದಲಾವಣೆ’ಗೂ ಕಠಿಣ ಕಾನೂನು ಬರಲಿ

Published:
Updated:

ರಾಜಕೀಯ ಪಕ್ಷವೊಂದರ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಆಯ್ಕೆಯಾದ ಬಳಿಕ ಪಕ್ಷಾಂತರ ಮಾಡುವ ಪ್ರವೃತ್ತಿಯು ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಇದನ್ನು ಮನಗಂಡು, ಹಲವು ವರ್ಷಗಳ ಹಿಂದೆಯೇ ಪಕ್ಷಾಂತರ ನಿಷೇಧ ಕಾಯ್ದೆಯನ್ನು ನಮ್ಮಲ್ಲಿ ಜಾರಿ ಮಾಡಲಾಗಿದೆ. ಇದರಿಂದ ಶಾಸಕರ ಪಕ್ಷಾಂತರ ಪ್ರವೃತ್ತಿಗೆ ದೊಡ್ಡ ಮಟ್ಟಿಗೆ ಕಡಿವಾಣ ಬಿದ್ದಿದೆ ಎಂಬುದು ನಿಜ.

ಆದರೆ, ಇತ್ತೀಚಿನ ದಿನಗಳಲ್ಲಿ ದೇಶದ ರಾಜಕೀಯ ಚಿತ್ರಣವೇ ಬದಲಾಗಿದೆ. ಒಂದೇ ರಾಜಕೀಯ ಪಕ್ಷವು ಬಹುಮತ ಪಡೆದು ಸರ್ಕಾರ ರಚಿಸುವುದು ಕಷ್ಟ ಎನ್ನುವಂತಾಗಿದೆ. ಪರಿಣಾಮ, ದೇಶದಲ್ಲಿ ‘ಮೈತ್ರಿ ಸರ್ಕಾರ’ಗಳ ಪರ್ವ ಆರಂಭವಾಗಿದೆ. ಚುನಾವಣೆಗೂ ಮುನ್ನ ಹಾವು– ಮುಂಗುಸಿಯಂತೆ ಜಗಳವಾಡಿದವರು, ಫಲಿತಾಂಶದ ಬಳಿಕ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುವ ಸ್ಥಿತಿ ಇದೆ. ಇದು ಒಂದು ರೀತಿಯಲ್ಲಿ ‘ಲಿವಿಂಗ್‌ ಟುಗೆದರ್‌’ನಂಥ ವ್ಯವಸ್ಥೆ. ಯಾವುದೇ ರಾಜ್ಯದ ಅಭಿವೃದ್ಧಿಗೆ ಇಂಥ ಮೈತ್ರಿಯು ಎಷ್ಟು ಮಾರಕವಾಗಬಲ್ಲದು ಎಂಬುದಕ್ಕೆ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.

ಫಲಿತಾಂಶದ ನಂತರ ಏರ್ಪಡುವ ಮೈತ್ರಿಗಳು ‘ಅಪವಿತ್ರ ಮೈತ್ರಿ’ ಎಂಬ ಟೀಕೆಗೆ ಒಳಗಾಗುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದಲ್ಲಿ ಚುನಾವಣಾ ಪೂರ್ವದಲ್ಲಿ ಮಾಡಿಕೊಂಡ ಮೈತ್ರಿಯೊಳಗೂ ಒಡಕು ಮೂಡಿರುವುದು ಸಹ ಅಪಾಯಕಾರಿ ಬೆಳವಣಿಗೆಯೇ.

ಪ್ರಜಾಪ್ರಭುತ್ವದ ಉಳಿವಿಗಾಗಿ, ರಾಜಕೀಯ ಪಕ್ಷಗಳ ಈ ‘ಪಕ್ಷಾಂತರ’ಕ್ಕೂ ಕಡಿವಾಣ ಹಾಕಬೇಕಾಗಿದೆ. ಶಾಸಕರಿಗೆ ಪಕ್ಷಾಂತರ ತಡೆ ಕಾನೂನು ರೂಪಿಸಿದಂತೆ, ರಾಜಕೀಯ ಪಕ್ಷಗಳ ‘ಮೈತ್ರಿ ಬದಲಾವಣೆ’ಗೂ ಕಠಿಣವಾದ ಕಾನೂನು ರೂಪಿಸಬೇಕು. ಇಲ್ಲದಿದ್ದರೆ ಮತದಾರರ ತೀರ್ಪಿಗೆ ಏನು ಬೆಲೆ?
–ಸತ್ಯಬೋಧ, ಬೆಂಗಳೂರು

 

ಪ್ರತಿಕ್ರಿಯಿಸಿ (+)