ಶುಕ್ರವಾರ, ಆಗಸ್ಟ್ 6, 2021
21 °C

ಕೆಎಎಸ್‌ ಪರೀಕ್ಷೆ ಮಾರ್ಪಾಡು: ಉತ್ತಮ ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೆಜೆಟೆಡ್ ಪ್ರೊಬೇಷನರಿ (ಗ್ರೂಪ್ ಎ ಮತ್ತು ಬಿ) ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿ ನಡೆಸುವ ಮುಖ್ಯ ಪರೀಕ್ಷೆಯ ಒಟ್ಟು ಅಂಕಗಳನ್ನು 1750ರಿಂದ 1250ಕ್ಕೆ ಇಳಿಸಿರುವುದು ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 200ರಿಂದ 50ಕ್ಕೆ ಕಡಿತಗೊಳಿಸಿರುವುದು ಉತ್ತಮ ಬೆಳವಣಿಗೆ.

ಈ ಹುದ್ದೆಗಳ ನೇಮಕಾತಿಯಲ್ಲಿ ಹಲವಾರು ವರ್ಷಗಳಿಂದಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಿಐಡಿ ತನಿಖೆಯ ಮುಖಾಂತರವೂ ಅದು ಬಯಲಿಗೆ ಬಂದಿದೆ. ವ್ಯಕ್ತಿತ್ವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಇದ್ದುದೂ ಭ್ರಷ್ಟಾಚಾರಕ್ಕೆ ಹೆಚ್ಚು ಅವಕಾಶವಾಗಿ ಒದಗಿಬಂದಿತ್ತು. ಇದರಿಂದ, ಪ್ರಭಾವ ಇಲ್ಲದೆ ಬರೀ ಪ್ರತಿಭೆಯನ್ನೇ ನೆಚ್ಚಿಕೊಂಡವರು ಇಂತಹ ಹುದ್ದೆಗಳ ಆಸೆಯನ್ನೇ ಬಿಡಬೇಕಾದ ಸ್ಥಿತಿ ಇತ್ತು.

ನೇಮಕಾತಿ ಪ್ರಕ್ರಿಯೆಯು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳದೆ ನನೆಗುದಿಗೆ ಬೀಳುತ್ತಿತ್ತು. ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗೆ ಕನಿಷ್ಠ ಅಂಕ ಕೊಟ್ಟ ಉದಾಹರಣೆಗಳೂ ಇವೆ. ಆದರೆ ಕಡಿಮೆ ಅಂಕ ನೀಡಿದ್ದಕ್ಕೆ ಕಾರಣ ಮಾತ್ರ ಇರುತ್ತಿರಲಿಲ್ಲ. ಪ್ರಸ್ತುತ ಸರ್ಕಾರ ತಂದ ತಿದ್ದುಪಡಿಯಲ್ಲಿ, ಶೇ 80ಕ್ಕಿಂತ ಹೆಚ್ಚು ಮತ್ತು ಶೇ 40ಕ್ಕಿಂತ ಕಡಿಮೆ ಅಂಕ ನೀಡಿದರೆ ಸಂದರ್ಶನ ಮಂಡಳಿ ಸದಸ್ಯರು ಕಾರಣ ದಾಖಲಿಸಬೇಕು ಎಂದಿರುವುದು ಸಂತಸದಾಯಕ. ಕೆಪಿಎಸ್‌ಸಿಯು ಇನ್ನಾದರೂ ನೇಮಕಾತಿ ಪ್ರಕ್ರಿಯೆಯನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಆಗಮಾತ್ರ ಈ ಸಾಂವಿಧಾನಿಕ ಸಂಸ್ಥೆಯ ಬಗ್ಗೆ ಎಲ್ಲರಿಗೂ ವಿಶ್ವಾಸ ಮೂಡಲು ಸಾಧ್ಯ.

-ಚೆಲುವರಾಜು ಕೆ., ಧನಗೆರೆ, ಕೊಳ್ಳೇಗಾಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.