ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಗಾಗಿ ಕಾಯುತ್ತಿದ್ದಾರೆ ರೈತರು

Last Updated 14 ಜೂನ್ 2020, 19:30 IST
ಅಕ್ಷರ ಗಾತ್ರ

ಮೇ ತಿಂಗಳಲ್ಲಿ ಬಿದ್ದ ಮಳೆಗೆ ನಮ್ಮ ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಂಡವು. ಹೊಲಗಳನ್ನು ಟ್ರ್ಯಾಕ್ಟರ್‌ನ ನೇಗಿಲು, //ಬಲರಾಮ// ಬಳಸಿ ಹದ ಮಾಡುವಾಗ ಬೆಳ್ಳಕ್ಕಿ, ಮೈನಾ, ಮಡಿವಾಳ, ಕಾಜಾಣ ಇನ್ನೂ ಮುಂತಾದ ಪಕ್ಷಿಗಳು ಹಿಂಡು ಹಿಂಡಾಗಿ ಬಂದು, ಮಣ್ಣಿನಿಂದ ಮೇಲೆ ಬರುವ ಹುಳು ಹುಪ್ಪಟೆಗಳನ್ನು ಹಿಡಿದು ತಿನ್ನುತ್ತವೆ. ಪಕ್ಷಿಗಳು ಬರಲೆಂದೇ ರೈತರು ಮಂಡಕ್ಕಿ ಚೆಲ್ಲಿ ಅವುಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಆದರೆ, ಈ ಬಾರಿ ಟ್ರ್ಯಾಕ್ಟರ್‌ನ ನೇಗಿಲ ಹಿಂದೆ ಹುಳು ಹುಪ್ಪಟೆಗಳನ್ನು ಹಿಡಿದು ತಿನ್ನಲು ಪಕ್ಷಿಗಳೇ ಬರಲಿಲ್ಲ. ಮಳೆಗಾಲದ ಆರಂಭದಲ್ಲಿ ಹೀಗಾಗಿರಬಹುದೆಂದು ಅಲಕ್ಷಿಸಿದೆವು. ಕೆಲದಿನಗಳ ನಂತರ ಮತ್ತೆ ಮಳೆಯಾಗಿ, ಬೇರೆ ಬೇರೆ ಹೊಲಗಳನ್ನು ಉಳುಮೆ ಮಾಡುವಾಗಲೂ ನಿರೀಕ್ಷಿಸಿದಷ್ಟು ಪಕ್ಷಿಗಳು ಬರಲೇ ಇಲ್ಲ.

ನಮ್ಮೂರಿನ ಬಹುತೇಕ ರೈತರು ಪಕ್ಷಿಗಳು ಬಾರದ ಸುದ್ದಿಯನ್ನು ಚರ್ಚಿಸುತ್ತಿದ್ದರು. ಅಷ್ಟರಲ್ಲಿ ಮೆಕ್ಕೆಜೋಳ ಬಿತ್ತಿರುವ ರೈತರು ಹೇಳಿದ್ದು ಆತಂಕಕಾರಿಯಾಗಿತ್ತು. ಮೆಕ್ಕೆಜೋಳ ತೆನೆ ಬಿಡುವ ಸಂದರ್ಭದಲ್ಲಿ ಬೀಳುವ ಸೈನಿಕ ಹುಳು ಈಗ ಸಣ್ಣ ಸಸಿ ಇರುವಾಗಲೇ ಬಿದ್ದಿದೆ, ತೆರೆದ ಹೊಲಗಳಲ್ಲಿ ಅಡ್ಡಾಡಿ ಹುಳುಗಳನ್ನು ಹಿಡಿದು ಮೇಯುತ್ತಿದ್ದ ಪಕ್ಷಿಗಳು ಇಲ್ಲದೆ ಇಡೀ ಹೊಲವೇ ನಾಶವಾಗುತ್ತಿದೆ ಎಂದರು. ಸಾಮಾನ್ಯವಾಗಿ ಬಿತ್ತನೆ ಸಮಯದಲ್ಲಿ ಕ್ರಿಮಿ ಕೀಟಗಳ ಉಪಟಳ ಹೆಚ್ಚು, ಅದೇ ಸಮಯದಲ್ಲಿ ಬಹುತೇಕ ಪಕ್ಷಿಗಳಿಗೆ ಸಂತಾನೋತ್ಪತ್ತಿ ಸಮಯವಾದ್ದರಿಂದ ಲಕ್ಷಾಂತರ ಕೀಟಗಳನ್ನು ಭಕ್ಷಿಸಿ ರೈತರಿಗೆ ಸಹಾಯ ಮಾಡುತ್ತವೆ. ಆದರೆ ಅತಿಯಾದ ಕ್ರಿಮಿನಾಶಕಗಳ‌ ಬಳಕೆ, ಗಿಡಮರಗಳ ಮಿತಿ ಮೀರಿದ ಕಡಿಯುವಿಕೆ, ಕಳ್ಳಬೇಟೆ‌ ಮೊದಲಾದ ಕಾರಣಗಳಿಂದ ಪಕ್ಷಿಗಳ ಸಂತತಿ ಅಪಾಯದ ಅಂಚಿಗೆ ಬಂದಿದೆ. ಇದನ್ನು ತಡೆಯಲು ಸರ್ಕಾರದೊಂದಿಗೆ ರೈತರೂ ಕೈ ಜೋಡಿಸಬೇಕು. ಏಕೆಂದರೆ ಯಾವುದೇ ಕಾರಣದಿಂದ ಪರಿಸರದ ಸಮತೋಲನ ತಪ್ಪಿದರೂ ಅದರ ಮೊದಲ ದುಷ್ಪರಿಣಾಮ ಆಗುವುದು ರೈತರ ಮೇಲೆಯೇ. ಇದನ್ನರಿತು ಇನ್ನಾದರೂ ಪಕ್ಷಿಗಳ ಉಳಿವಿಗಾಗಿ ಪ್ರಯತ್ನಿಸೋಣ.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT