ಗುರುವಾರ , ಅಕ್ಟೋಬರ್ 29, 2020
28 °C

ಯೋಜನಾ ಮಂಡಳಿಗೆ ಬೇಕು ಸಹಕಾರ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಕುರಿತು ಡಾ. ಜಿ.ವಿ.ಜೋಶಿಯವರು ಬರೆದಿರುವ ಲೇಖನದಲ್ಲಿ (ಪ್ರ.ವಾ., ಅ. 7) ಕೇರಳ ರಾಜ್ಯ ಯೋಜನಾ ಮಂಡಳಿಯ ಕಾರ್ಯನಿರ್ವಹಣೆ ಹಾಗೂ ಅಲ್ಲಿನ ಸರ್ಕಾರವು ಆ ಮಂಡಳಿಗೆ ನೀಡುತ್ತಿರುವ ಮಾನ್ಯತೆ ಕುರಿತು ನೀಡಿರುವ ವಿವರಗಳನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಪ್ರತೀ ವರ್ಷ ರಾಜ್ಯದ ಆರ್ಥಿಕ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ ಸಮಗ್ರ ವರದಿಯನ್ನು ನೀಡುವ ಜವಾಬ್ದಾರಿ ಮಂಡಳಿಯ ಮೇಲೆ ಇರುತ್ತದೆ ಎಂಬುದನ್ನು ಅವರು ಪ್ರಸ್ತಾಪಿಸಿದ್ದಾರೆ. ನಿಜವಾಗಿಯೂ ಕೇರಳ, ತಮಿಳುನಾಡು ಮತ್ತು ಗುಜರಾತ್‌ನಲ್ಲಿನ ಮಾದರಿಯಂತೆ ಕಾರ್ಯನಿರ್ವಹಿಸಲು, ಕರ್ನಾಟಕ ರಾಜ್ಯ ಯೋಜನಾ ಮಂಡಳಿಗೆ ಜೋಶಿಯವರು ಮಾಡಿರುವ ವಿಶ್ಲೇಷಣೆಯ ರೀತಿ ಸರ್ಕಾರದ ಸಹಕಾರ ಬೇಕಾಗುತ್ತದೆ. ಈ ದಿಸೆಯಲ್ಲಿ, ಮಂಡಳಿಯ ಉಪಾಧ್ಯಕ್ಷನಾದ ಮೇಲೆ ನಾನು ಅಧಿಕಾರಿಗಳ ಜೊತೆ ಗುಜರಾತ್‌ಗೆ ಭೇಟಿ ನೀಡಿ, ಅಲ್ಲಿನ ಮಂಡಳಿಯ ಕಾರ್ಯಕ್ಷಮತೆಯ ಪರಿಚಯ ಮಾಡಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇನೆ.

ಕೇರಳ ಮತ್ತು ತಮಿಳುನಾಡಿಗೆ ಭೇಟಿ ನೀಡಲು ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ, ಕೊರೊನಾ ಕಾರಣದಿಂದ ಹೋಗಲಾಗದೆ, ಅಲ್ಲಿನ ಮಂಡಳಿಗಳ ಕಾರ್ಯಕ್ಷಮತೆಯ ಬಗ್ಗೆ ವರದಿ ತರಿಸಿಕೊಳ್ಳಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯೋಜನಾ ವ್ಯವಸ್ಥೆಗೆ ಪೂರಕವಾದ ತರಬೇತಿ, ಬೆಂಗಳೂರಿನ ಆಸುಪಾಸಿನಲ್ಲಿ ಟೌನ್‌ಶಿಪ್‌ಗಳ ಅಭಿವೃದ್ಧಿ, ಅಭಿವೃದ್ಧಿ ಯೋಜನೆಗಳ ಕುರಿತು ಅಧ್ಯಯನ ಸೇರಿದಂತೆ ಮಂಡಳಿ ವತಿಯಿಂದ ಕೈಗೊಳ್ಳಬೇಕಾದ ಹಲವು ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಕೋವಿಡ್-19ರಿಂದ ಜನರ ಆರೋಗ್ಯದ ಜೊತೆಗೆ ಕರ್ನಾಟಕದ ಅರ್ಥವ್ಯವಸ್ಥೆಯ ಮೇಲೆ ಆದ ಪರಿಣಾಮ ಹಾಗೂ ಅರ್ಥವ್ಯವಸ್ಥೆಯ ಪುನರುಜ್ಜೀವನಕ್ಕಾಗಿ ಸೂಕ್ತ ಪರ್ಯಾಯ ಕಂಡುಹಿಡಿಯುವ ಕುರಿತು ವೆಬಿನಾರ್ ಆಯೋಜಿಸಲಾಗಿದೆ.

ಕೇಂದ್ರ ನೀತಿ ಆಯೋಗದ ಮಾದರಿಯಲ್ಲಿ ಕಾರ್ಯನಿರ್ವಹಣೆಗೆ ಕ್ರಮ ತೆಗೆದುಕೊಳ್ಳುವ ಹಾಗೂ ಮಂಡಳಿಯನ್ನು ಕರ್ನಾಟಕ ರಾಜ್ಯ ಯೋಜನಾ ಹಾಗೂ ನೀತಿ ಆಯೋಗ ಎಂದು ಪುನರ್‌ರಚಿಸುವ ಕುರಿತು ಚರ್ಚಿಸಲಾಗಿದೆ.

- ಬಿ.ಜೆ.ಪುಟ್ಟಸ್ವಾಮಿ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಯೋಜನಾ ಮಂಡಳಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.