ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೋ ಮಾಡಿದ ತಪ್ಪಿಗೆ...

ಅಕ್ಷರ ಗಾತ್ರ

ದಾವಣಗೆರೆಯಲ್ಲಿ ಇತ್ತೀಚೆಗೆ ನಾನು ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಬಸ್ ನಿಲ್ದಾಣಕ್ಕೆ ತೆರಳಲು ಸಿಟಿ ಬಸ್‌ಗಾಗಿ ಕಾಯುತಿದ್ದೆ. ಪಕ್ಕದಲ್ಲಿ ಒಬ್ಬ ಸಮವಸ್ತ್ರಧಾರಿ ಪೊಲೀಸ್ ಕಾನ್‌ಸ್ಟೆಬಲ್ ಕೂಡ ಬಸ್‌ಗಾಗಿ ಕಾಯುತ್ತಿದ್ದರು. ಬಸ್ ಬರುವುದು ತಡವಾದ ಕಾರಣ ಅವರು ಆಟೊವೊಂದಕ್ಕೆ ಕೈ ಮಾಡಿ ಕರೆದರು. ಅದರಲ್ಲಿ ಬೇರೆ ಪ್ರಯಾಣಿಕರು ಇರಲಿಲ್ಲ, ಆದರೂ ಚಾಲಕ ಆಟೊವನ್ನು ನಿಲ್ಲಿಸಲಿಲ್ಲ. ಮತ್ತೆ ಒಂದು ಆಟೊ ಬಂತು. ಅದು ಕೂಡ ಇವರ ಕೈಸನ್ನೆಯನ್ನು ನಿರ್ಲಕ್ಷಿಸಿ ಹಾಗೇ ಹೊರಟು ಹೋಯಿತು!

ಕೊನೆಗೆ ಬಸ್ ಬಂತು. ಇಬ್ಬರೂ ಹತ್ತಿ ಅಕ್ಕಪಕ್ಕ ಕುಳಿತೆವು. ನಾನು ಆಟೊದವರ ನಡವಳಿಕೆಯನ್ನು ಅವರಲ್ಲಿ ಪ್ರಸ್ತಾಪಿಸಿದೆ. ‘ನಮ್ಮ ಇಲಾಖೆಯ ಕೆಲವು ಮೂರ್ಖರು ಮಾಡುವ ತಪ್ಪಿಗೆ ಎಲ್ಲರನ್ನೂ ಅನುಮಾನದಿಂದ ನೋಡುವಂತಾಗಿದೆ’ ಎಂದು ತುಂಬಾ ಬೇಸರದಿಂದ ಹೇಳಿದರು. ಹೌದು, ಕೆಲವು ಪೊಲೀಸರು ಆಟೊ ಹತ್ತುತ್ತಾರೆ, ದುಡ್ಡು ಕೊಡದೆ ಇಳಿದು ಹೋಗುತ್ತಾರೆ. ಯಾವುದೋ ಬಡಪಾಯಿ ಕಿರಾಣಿ ಅಂಗಡಿಯವನ ಹತ್ತಿರ ಗುಟ್ಕಾ, ಸಿಗರೇಟು ತೆಗೆದುಕೊಳ್ಳುತ್ತಾರೆ, ದುಡ್ಡು ಕೊಡದೆ ಹೋಗುತ್ತಾರೆ. ಹೋಟೆಲ್‌ನಲ್ಲಿ ಟೀ, ಕಾಫಿ ಕುಡಿಯುತ್ತಾರೆ, ದುಡ್ಡು ಕೊಡದೆ ಹೋಗುತ್ತಾರೆ. ಇದರಿಂದ ಪ್ರಾಮಾಣಿಕ ಪೊಲೀಸರನ್ನೂ ಜನ ಅನುಮಾನದಿಂದ ನೋಡುವಂತಾಗಿದೆ ಎಂದು ನಡು ವಯಸ್ಸಿನ ಆ ಪೊಲೀಸ್ ಕಾನ್‌ಸ್ಟೆಬಲ್‌ ಉದಾಹರಣೆಗಳನ್ನು ಕೊಟ್ಟರು. ‘ಅವಸರವಾಗಿ ಶಿವಮೊಗ್ಗಕ್ಕೆ ಹೋಗಬೇಕಾಗಿತ್ತು, ಆಟೊದವರ ಅವಾಂತರದಿಂದ ಲೇಟಾಯಿತು’ ಎಂದು ಗೊಣಗುತ್ತ ಬಸ್ ಇಳಿದರು.

ಇನ್ನಾದರೂ ಜನರ ಮನಸ್ಸಿನಲ್ಲಿರುವ ಈ ತರಹದ ಕಹಿ ಘಟನೆಗಳನ್ನು ತೊಲಗಿಸಿ, ಜನಸ್ನೇಹಿ ಆಗುವತ್ತ ಎಲ್ಲ ಪೊಲೀಸರೂ ಪ್ರಯತ್ನಿಸುವಂತಾಗಲಿ. ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ಎಲ್ಲ ಪೊಲೀಸರನ್ನೂ ಒಂದೇ ರೀತಿ ನೋಡುವ ಮನಃಸ್ಥಿತಿಯನ್ನು ಜನರೂ ಬಿಡಲಿ.

- ರಾಜು ಬಿ. ಲಕ್ಕಂಪುರ,ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT