ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| 50 ವರ್ಷಗಳಷ್ಟು ಹಿಂದಿನ ಮುನ್ನೋಟ!

Last Updated 16 ಫೆಬ್ರುವರಿ 2023, 15:21 IST
ಅಕ್ಷರ ಗಾತ್ರ

50 ವರ್ಷಗಳಷ್ಟು ಹಿಂದಿನ ಮುನ್ನೋಟ!

‘ರಾಜ್ಯದ ಮುಂಚೂಣಿ ಸಮಾಜಮುಖಿ ರಾಜಕೀಯ ಪಕ್ಷಗಳಿಗೆ ಆರ್‌ಎಸ್ಎಸ್ ಶೈಲಿಯ ಸಾಂಸ್ಥಿಕ ರಚನೆಯ ತಳಪಾಯ ಅಗತ್ಯ’ ಎಂದು ದೇವನೂರ ಮಹಾದೇವ ಹೇಳಿದ್ದಾರೆ (ಪ್ರ.ವಾ., ಫೆ. 15). ಈ ಚಿಂತನೆ 50 ವರ್ಷಗಳಷ್ಟು ಹಿಂದೆಯೇ ಅವರ ತಲೆಯಲ್ಲಿ ಸುಳಿದುಹೋಗಿತ್ತು. ಎಪ್ಪತ್ತರ ದಶಕದ ಎಲ್ಲ ರೀತಿಯ ತಲ್ಲಣ ಹಾಗೂ ರಾಜಕೀಯ ಅನಿಶ್ಚಯದ ನಡುವೆ ಯಾವುದಾದರೂ ಗಟ್ಟಿ ತಳ ಸಿಕ್ಕೀತೇನೋ ಎಂಬ ತಳಮಳದಲ್ಲಿ ಅವರಿಗೆ ಥಟ್ಟನೆ ಹೊಳೆದ ಉಪಾಯ ಇದಾಗಿತ್ತು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಾವಿಬ್ಬರೂ ವ್ಯಾಸಂಗ ಮಾಡುತ್ತಿದ್ದ ಆ ಕಾಲದಲ್ಲಿ ನನ್ನ ಕಿವಿಯಲ್ಲಿ ಮಹಾದೇವ ಹೇಳಿದ್ದ ಇದೇ ಮಾತು ಈಗ ಕೇಳಿಸಿದಂತೆ ನನ್ನ ಎದೆಯಲ್ಲಿ ಸ್ಥಿರವಾಗಿದೆ.

ಅಂದಿನ ಅವರ ಈ ಚಿಂತನೆಯು ಪ್ರಗತಿಪರ ಸಂಘಟನೆಗಳ, ನಿಷ್ಕ್ರಿಯ ರಾಜಕೀಯ ಪಕ್ಷಗಳ ಕಳಪೆ ನಿರ್ವಹಣೆಗೆ ಮದ್ದನ್ನು ಕಂಡುಕೊಳ್ಳುವ ವಿಧಿಯಂತೆ ನನಗೆ ಕಂಡಿತ್ತು. ದಿನಗಳೆದಂತೆ ಪ್ರಗತಿಪರ ಸಂಘಟನೆ, ರಾಜಕಾರಣ ಮತ್ತಷ್ಟು ಶಿಥಿಲಾವಸ್ಥೆ ತಲುಪುತ್ತಿರುವ ಈ ಹೊತ್ತಿನಲ್ಲಿ ಅವರ ಮಾತಿಗೆ ಎಲ್ಲಿಲ್ಲದ ಬೆಲೆಯಿದೆ. ಅವರ ಈ ಮುನ್ನೋಟದ ಮಾತನ್ನು ಸೆಕ್ಯುಲರ್ ರಾಜಕೀಯ ಪಕ್ಷ, ಸಂಘಟನೆಗಳು ತಮ್ಮ ಪಂಚೇಂದ್ರಿಯಗಳ ಎಚ್ಚರದಲ್ಲಿ ಸ್ವೀಕರಿಸಿ ಕ್ರಿಯಾಶೀಲವಾಗಬಲ್ಲವೆ? ದೇವನೂರ ಅವರ ಸಾಕ್ಷಿಪ್ರಜ್ಞೆಯ ಈ ನುಡಿ ಪಾಲನೆಯಾದಲ್ಲಿ ದೇಶದ ರಾಜಕೀಯ, ಸಾಂಸ್ಕೃತಿಕ ವಾತಾವರಣದಲ್ಲಿ ಹೊಸ ಭರವಸೆಯ ಗಾಳಿ ಹಿತವಾಗಿ ಬೀಸಬಹುದಲ್ಲವೆ?

ಚಂದ್ರಶೇಖರ ತಾಳ್ಯ, ಹೊಳಲ್ಕೆರೆ

ಜನಪರವಾಗಿರಲಿ ಚಿತ್ರರಂಗ

ಕನ್ನಡ ಚಿತ್ರರಂಗದ ಯಶ್, ರಿಷಭ್‌ ಶೆಟ್ಟಿ ಅವರು ಪ್ರಧಾನಿಯವರನ್ನು ಭೇಟಿಯಾಗಿ ಚಿತ್ರನಗರಿಯ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ ಮತ್ತು ಏಕಪರದೆಯ ಚಿತ್ರಮಂದಿರಗಳ ಅವನತಿಯ ಬಗ್ಗೆ ಮಾತನಾಡಿದ್ದಾರೆ. ಆದರೆ ಚಿತ್ರರಂಗವೇ ಜನಪರವಾಗಿ ಉಳಿದಿಲ್ಲ, ಕಾರಣ ಹಣ ಮಾಡುವ ಭರದಲ್ಲಿ, ಬಿಡುಗಡೆಯಾದ ಮೊದಲ ವಾರ ಟಿಕೆಟ್‌ಗಳ ದರ ದುಬಾರಿ ಆಗಿರುತ್ತದೆ. ‘ಕೋಟಿ ಕ್ಲಬ್‌’ ಸೇರುವ ಲೆಕ್ಕಾಚಾರದಲ್ಲಿ ಟಿಕೆಟ್ ದರ ನಿಗದಿ ಮಾಡುವುದು, ಅದಕ್ಕೆ ತಕ್ಕಂತೆ ಗಿಮಿಕ್ ಪ್ರಚಾರ ಮಾಡುವುದು ಪ್ರೇಕ್ಷಕರನ್ನು ಶೋಷಣೆ ಮಾಡಿದಂತೆ ಅಲ್ಲವೇ? ನಿರ್ಮಾಪಕರೇ ಟಿಕೆಟ್ ದರ ನಿಗದಿಪಡಿಸುವುದಾದರೆ ಸರ್ಕಾರದ ಜವಾಬ್ದಾರಿ ಏನು? ಸಿನಿಮಾ ಟಿಕೆಟ್‌ಗಳ ದರವನ್ನು ಜನಸಾಮಾನ್ಯರು ನೋಡುವ ಮಟ್ಟಕ್ಕೆ ಸರ್ಕಾರವೇ ನಿಗದಿ ಮಾಡಲಿ.

ಸಿನಿಮಾ ಮಂದಿರಗಳಲ್ಲಿ ಮಾರಾಟ ಮಾಡುವ ತಿಂಡಿ ತಿನಿಸು, ಪಾನೀಯಗಳೂ ದುಬಾರಿಯೆ. ಇದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಮನಹರಿಸಲಿ. ಒಳ್ಳೆಯ ಸಿನಿಮಾಗಳನ್ನು ಹೆಚ್ಚು ಜನ ನೋಡಿಯೇ ನೋಡು
ತ್ತಾರೆ. ಅಲ್ಲಿಗೆ ನಿರ್ಮಾಪಕರಿಗೆ ಲಾಭ ಆಗುತ್ತದೆ. ನಟರು ಜನಮಾನಸವನ್ನು ತಲುಪಬೇಕೆ ವಿನಾ ಕೋಟಿ ಕ್ಲಬ್ ತಲುಪುವು
ದಲ್ಲ. ಚೈತನ್ಯ ಇರುವ ನಟರು ಚಿತ್ರರಂಗದ ಬಗೆಗಿನ ಕಾಳಜಿಗಾದರೂ ಒಂದು ಚಿತ್ರಮಂದಿರ ನಿರ್ಮಿಸಿ ನಡೆಸಲಿ.

ಮಲ್ಲಿಕಾರ್ಜುನ, ಸುರಧೇನುಪುರ

ಚುನಾವಣೆ: ಬೇಕು ಹಲವು ಬದಲಾವಣೆ

‘ಚುನಾವಣೆ: ಸಾತ್ವಿಕ ಮಾರ್ಗಕ್ಕೆ ಸೂತ್ರ’ ಎಂಬ ಬರಹದಲ್ಲಿ (ಪ್ರ.ವಾ., ಫೆ. 15) ಡಾ. ಜ್ಯೋತಿ ಅವರು ‘ನೋಟಾ’ ಕುರಿತ ವಿಷಯದ ಬಗ್ಗೆಯೇ ಹೆಚ್ಚು ಹೇಳಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲಿ ರಾಜಕೀಯ ಪಕ್ಷಗಳಿಗೆ ಇದೊಂದು ಉತ್ತಮ ಪಾಠ ಎಂದಿದ್ದಾರೆ. ಆದರೆ, ಸದ್ಯ ಚುನಾವಣಾ ವಿಷಯದಲ್ಲಿ ಇನ್ನೂ ಹಲವು ಬದಲಾವಣೆಗಳು ಅವಶ್ಯ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸುವುದು ಕೂಡ ಇದರಲ್ಲಿ ಸೇರಿದೆ. ಇಲ್ಲಿ ಆ ಅಭ್ಯರ್ಥಿ ಎರಡೂ ಕಡೆ ಗೆದ್ದರೆ ಒಂದು ಸ್ಥಾನಕ್ಕೆ ರಾಜೀನಾಮೆ, ಅಲ್ಲಿ ಮರುಚುನಾವಣೆ. ಇದರ ವೆಚ್ಚ ಭರಿಸುವವರಾರು? ಅದೇ ರೀತಿ, ಅವರು ಆಗಲೇ ಒಂದು ಸ್ಥಾನ ಹೊಂದಿದ್ದರೆ ಅದು ಸಹ ಇದೇ ರೀತಿಯಾಗುತ್ತದೆ. ‌

ಇನ್ನು ಗೆದ್ದ ಮೇಲೆ ನಮ್ಮಲ್ಲಿ ನಡೆಯುವ ಪಕ್ಷಾಂತರಗಳು. ಇದಕ್ಕೆ ಕಳೆದ ಬಾರಿ ರಾಜ್ಯದಲ್ಲಿ ನಡೆದ ಸಾಮೂಹಿಕ ಪಕ್ಷಾಂತರವೇ ನಿದರ್ಶನ. ಇದಕ್ಕೆಲ್ಲ ಏನು ಪರಿಹಾರ? ಈ ರೀತಿ ಪಕ್ಷ ಬದಲಾಯಿಸುವವರು ಕನಿಷ್ಠ ಐದು ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರಬಾರದು ಮತ್ತು ಮರು ಚುನಾವಣಾ ವೆಚ್ಚಕ್ಕೆ ಅವರೇ ಜವಾಬ್ದಾರಿ ಆಗಬೇಕು.

ಕೆ.ಎಸ್.ಸೋಮೇಶ್ವರ, ಬೆಂಗಳೂರು

ತಕ್ಷಣವೇ ನಡೆಯಲಿ ಕಾರ್ಯಾಚರಣೆ

ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ತಾತ ಹಾಗೂ ಮೊಮ್ಮಗನ ಜೊತೆಗೆ ಐದಾರು ಜಾನುವಾರುಗಳನ್ನೂ ಬಲಿ ಪಡೆದ ಹುಲಿರಾಯನನ್ನು ಅರಣ್ಯ ಇಲಾಖೆ ಕೊನೆಗೂ ಸೆರೆಹಿಡಿದು ಅಲ್ಲಿಯ ಜನರನ್ನು ಸ್ವಲ್ಪಮಟ್ಟಿಗೆ ನಿರಾಳರನ್ನಾಗಿ ಮಾಡಿದೆ. ಹುಲಿಯು ಸ್ಥಳೀಯರಿಗೆ ಹಲವಾರು ದಿನಗಳ ಹಿಂದೆಯೇ ಕಾಣಿಸಿತ್ತಾದರೂ ಕಾರ್ಯಾಚರಣೆ ಮಾತ್ರ ಹಲವಾರು ಮುಗ್ಧ ಜೀವಗಳ ಬಲಿ ಪಡೆದ ನಂತರ ನಡೆಯಿತು. ಏಕೆ ಹೀಗೆ? ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದೂಡಿದ್ದರಿಂದ ಅದಕ್ಕೆ ತಗಲುವ ವೆಚ್ಚವೇನಾದರೂ ಕಡಿಮೆಯಾಯಿತೆ ಅಥವಾ ಹುಲಿ ಕಾಡಿಗೆ ಮರಳಬಹುದು ಎಂಬ ಕಾರಣದಿಂದ ಹೀಗೆ ವಿಳಂಬ ಮಾಡಲಾಯಿತೋ ತಿಳಿಯುತ್ತಿಲ್ಲ. ಕಾಡುಪ್ರಾಣಿಗಳು ನಾಡನ್ನು ಪ್ರವೇಶಿಸಿರುವುದು ತಿಳಿದ ಕೂಡಲೇ ಇಲಾಖೆ ಕಾರ್ಯಪ್ರವೃತ್ತವಾಗಿ ಬಡಪಾಯಿಗಳ ಪ್ರಾಣ ಉಳಿಸಲಿ.

ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT