ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

Published 23 ಮೇ 2023, 23:44 IST
Last Updated 23 ಮೇ 2023, 23:44 IST
ಅಕ್ಷರ ಗಾತ್ರ

ಫಲಿತಾಂಶ 

ಹೆಸರಲ್ಲೇ ‘ಪಾಸ್‌’

ಎಂದಿದ್ದರೂ

ವರುಣನ 
ಪರೀಕ್ಷೆಯಲ್ಲಿ 
ಫೇಲಾಯಿತು
ಬೆಂಗಳೂರಿನ 
ಅಂಡರ್‌ಪಾಸ್!

-ಮಹಾಂತೇಶ ಮಾಗನೂರ, ಬೆಂಗಳೂರು

ರೈಲು ಪ್ರಯಾಣಿಕರಿಗೆ ಬರಲಿ ‘ಅಚ್ಛೇ ದಿನ್’

ಗಂಟೆಗೆ 150 ಕಿ.ಮೀ. ವೇಗದಲ್ಲಿ ಚಲಿಸುವ ‘ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲುಗಳ ಬಗ್ಗೆ ಮಾತನಾಡುವ ಈ ಕಾಲದಲ್ಲಿ, ಡೀಸೆಲ್ ಎಂಜಿನ್‌ನಲ್ಲಿ ಓಡುವ ಕೆಲವು ಪ್ಯಾಸೆಂಜರ್ ರೈಲುಗಳ ವೇಗ ತೀರಾ ಕಳಪೆ ಮಟ್ಟದ್ದಾಗಿದೆ. ಕೆಲವೊಮ್ಮೆ ಸರಾಸರಿ ವೇಗ ಗಂಟೆಗೆ 30 ಕಿ.ಮೀ.ಗಿಂತಲೂ ಕಡಿಮೆ ಇರುತ್ತದೆ. ಉದಾಹರಣೆಗೆ, ಅರಸೀಕೆರೆ– ಬೆಂಗಳೂರು ಪ್ಯಾಸೆಂಜರ್ ರೈಲು. ಸಮ‌ಮಾರ್ಗದಲ್ಲಿ ಚಲಿಸುತ್ತಿದ್ದರೂ ಯಾವುದೋ ಬೆಟ್ಟ ಏರಿದಹಾಗೆ ಭಾಸವಾಗುತ್ತದೆ ಇದರ ಶಬ್ದ.

ವಿದ್ಯುದೀಕರಣಗೊಂಡಿರುವ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಲೋಕೊಮೋಟಿವ್, ಹೆಚ್ಚು ನಿಲ್ದಾಣಗಳನ್ನು ಹೊಂದಿರುವ ಮಾರ್ಗಗಳಲ್ಲಿ ಹೆಚ್ಚು ದಕ್ಷ ಎಂಜಿನ್‌ಗಳನ್ನು ಬಳಕೆ ಮಾಡಿದರೆ ರೈಲು ಪ್ರಯಾಣಿಕರಿಗೆ ‘ಅಚ್ಛೇ ದಿನ್’ ಬಂದೀತು.

ಕರಿಯಪ್ಪ ಆರ್., ಕಲ್ಲಹಳ್ಳಿ, ತುಮಕೂರು

ರಾಷ್ಟ್ರಪತಿಗೆ ಆಹ್ವಾನ ಇಲ್ಲವೇಕೆ?

ಭಾರತದ ಮೊದಲ ಪ್ರಜೆ ಹಾಗೂ ಶಾಸಕಾಂಗ, ಕಾರ್ಯಾಂಗದ ಮುಖ್ಯಸ್ಥರೂ ಆಗಿರುವ ರಾಷ್ಟ್ರಪತಿಯವರಿಗೆ ಸಂಸತ್‌ ಭವನದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡದಿರುವುದು ಪ್ರಜಾಪ್ರಭುತ್ವದ ಹಿನ್ನಡೆ. ಹಿಂದಿನ ಬಾರಿ ರಾಮಮಂದಿರ ನಿರ್ಮಾಣ, ಸಂಸತ್‌ ಭವನದ ಶಂಕುಸ್ಥಾಪನೆ ಸಂದರ್ಭದಲ್ಲೂ ಮೊದಲ ಪ್ರಜೆಗೆ ಆಹ್ವಾನ ನೀಡದಿರುವುದು, ಈಗಲೂ ಅದೇ ಧೋರಣೆ ಮುಂದುವರಿದಿರುವುದು ಸರಿಯಲ್ಲ.

ಇಂಥ ನಿರ್ಧಾರಗಳು ಸಮಾಜದಲ್ಲಿ ಸಮಾನತೆ ತತ್ವಕ್ಕೇ ಹಿನ್ನಡೆ ಉಂಟುಮಾಡುತ್ತವೆ ಅಂದರೆ ತಪ್ಪಾಗಲಾರದು. ಪ್ರಜೆಗಳು ಹಾಗೂ ಮಾಧ್ಯಮಗಳು ಇಂಥ ನಡೆಯ ವಿರುದ್ಧ ಧ್ವನಿ ಎತ್ತಿ ಸರ್ಕಾರಕ್ಕೆ ಚಾಟಿ ಬೀಸುವಂತಾಗಲಿ.

ಸಾಗರ್ ದ್ರಾವಿಡ್, ಹಿರಿಯೂರು

ಪ್ರತಿದಿನ ವಿಚಾರಣೆ ನಡೆಯುವಂತಾದರೆ...

ಒಬ್ಬ ಮಾಜಿ ಶಾಸಕರ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿದ್ದು, ಎಡಿಜಿಪಿ ಒಬ್ಬರು ಜೈಲು ಸೇರಿದ್ದು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಂತಹ ಪ್ರಕರಣಗಳನ್ನು ಉಲ್ಲೇಖಿಸಿರುವ ಸಚಿವ ಎಂ.ಬಿ.ಪಾಟೀಲ ಅವರು (ಕಿಡಿನುಡಿ, ಮೇ 23), ಬಿಜೆಪಿಯ ಭ್ರಷ್ಟಾಚಾರಕ್ಕೆ ಇವುಗಳಿಗಿಂತ ದೊಡ್ಡ ಸಾಕ್ಷ್ಯ ಬೇಕೇ ಎಂದು ಕೇಳಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ಆಗಿರುವ ಭ್ರಷ್ಟಾಚಾರ ಹಗರಣಗಳ ತನಿಖೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆಯೂ ಹೇಳಿದ್ದಾರೆ. ಈ ಮುಂಚೆ ಆಡಳಿತ ನಡೆಸಿದ ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳು ಇದ್ದೇ ಇವೆ. ಅಂದಂದಿನ ಸರ್ಕಾರ ಆ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಇದೆಯೇ?

ಇದುವರೆಗೂ ಎಷ್ಟು ಪ್ರಕರಣಗಳು ಯಾವುದೇ ಪಕ್ಷದ ನೇತೃತ್ವದ ಸರ್ಕಾರದ ವಿರುದ್ಧ, ರಾಜಕಾರಣಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾಗಿವೆ ಮತ್ತು ಇದುವರೆಗೂ ಆಗಿರುವ ಪ್ರಗತಿ ಏನು? ಎಲ್ಲಿದೆ ಮಾಹಿತಿ? ಹಿಂದಿನ ಎಲ್ಲ ಸರ್ಕಾರಗಳು ಮತ್ತು ರಾಜಕಾರಣಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿ, ಅವು ಶೀಘ್ರ ಇತ್ಯರ್ಥಗೊಳ್ಳಲು ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಯ ಅಗತ್ಯ ಇದೆ. ವಿಚಾರಣೆ ಪ್ರತಿದಿನ ಎಂಬಂತೆ ನಡೆಯುವಂತಾದರೆ ನ್ಯಾಯನಿರ್ಣಯವೂ ಬೇಗನೇ ಆದೀತು. ಪ್ರತಿಯೊಂದು ಪಕ್ಷದವರೂ ಮತ್ತೊಂದು ಪಕ್ಷದ ನೇತೃತ್ವದ ಸರ್ಕಾರದ ಬಗ್ಗೆ ಆಪಾದನೆ ಮಾಡುತ್ತಾರೆ, ಸೂಕ್ತ ಸಮಯದಲ್ಲಿ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೆ ನೀಡುತ್ತಾರೆ. ಆಪಾದನೆಗಳ ಪರಿಯನ್ನು ಗಮನಿಸಿದರೆ, ರಾಜಕಾರಣಿ ಹತ್ತಾರು ವರ್ಷ ಸೆರೆವಾಸದಲ್ಲಿ ಇರಬೇಕಾಗುತ್ತದೆ. ಬರೀ ಮಾತಿನಲ್ಲೇ ಎಲ್ಲ ಆದರೆ ಆಯಿತೇ? ಮಾತಿಗಿಂತ ಕೃತಿ ಲೇಸು.

ಸಾಮಗ ದತ್ತಾತ್ರಿ, ಬೆಂಗಳೂರು

ಪ್ರಜಾಪ್ರಭುತ್ವದ ಸ್ಫೂರ್ತಿಗೆ ಅಪಚಾರ

ವಿಧಾನಸಭೆ ಚುನಾವಣೆ ನಂತರ ಕರೆಯಲಾದ ಪ್ರಥಮ ವಿಧಾನಸಭಾ ಅಧಿವೇಶನದ ಮೊದಲ ದಿನವೇ ನಲವತ್ತೆರಡು ನೂತನ ಚುನಾಯಿತ ಸದಸ್ಯರು ಗೈರುಹಾಜರಾಗಿರುವುದು ಬೇಸರದ ಸಂಗತಿ. ಈ ಮೂಲಕ ಅವರು ತಮ್ಮ ಕ್ಷೇತ್ರದ ಮತದಾರರಿಗೆ ಮತ್ತು ಪ್ರಜಾಪ್ರಭುತ್ವದ ಸ್ಫೂರ್ತಿಗೆ ಅಪಚಾರ ಎಸಗಿದಂತಾಗಿದೆ. ಅಲ್ಲದೆ ಇದು ಶಾಸಕರ ಬೇಜವಾಬ್ದಾರಿತನದ ನಡೆ.

ಕಾನೂನು ಕಟ್ಟಲೆಗಳನ್ನು ಶ್ರದ್ಧೆ ಮತ್ತು ಆಸಕ್ತಿಯಿಂದ ರೂಪಿಸುವ ಜಾಣ್ಮೆ, ಕೌಶಲವನ್ನು ಜನಪ್ರತಿನಿಧಿಗಳು ರೂಢಿಸಿಕೊಳ್ಳಲಿ. ಅದಕ್ಕೆ ಬೇಕಾದ ಪೂರಕ ಓದು, ಸಂವಾದ ಮತ್ತು ಚರ್ಚೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಹತ್ವದ ಕೊಡುಗೆ ಕೊಡುವಲ್ಲಿ ಅವರು ಆಸಕ್ತಿ ವಹಿಸಲಿ. ಈ ದಿಸೆಯಲ್ಲಿ ನೂತನ ಶಾಸಕರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ಸಿಗುವಂತಾಗಲಿ.
ಡಾ. ಟಿ.ವಿ.ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT