ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

Published 26 ಮೇ 2023, 0:18 IST
Last Updated 26 ಮೇ 2023, 0:18 IST
ಅಕ್ಷರ ಗಾತ್ರ

ಮಾತೆ– ಮಾನವೀಯತೆ

ರಾಜಧಾನಿ ಬೆಂಗಳೂರಿನ 
ಅಂಡರ್‌ಪಾಸ್‌ ಒಂದರಲ್ಲಿ 
ಮಳೆಯ ನೀರಿನಲ್ಲಿ ಸಿಲುಕಿ,
ಪ್ರಾಣಾಪಾಯದಲ್ಲಿ ಇದ್ದವರನ್ನು
ರಕ್ಷಿಸಲು ಮಹಿಳೆಯೊಬ್ಬರು
ತಮ್ಮ ಸೀರೆಯನ್ನೇ ಬಿಚ್ಚಿಕೊಟ್ಟರಂತೆ!
ಇದೇನು ಸಾಮಾನ್ಯ ಮಾತೇ?
ಮಾತೆ ಮೆರೆದರು
ಅಪೂರ್ವ ಮಾನವೀಯತೆ!
ಮ.ಗು.ಬಸವಣ್ಣ, ನಂಜನಗೂಡು

ಈಡೇರಲಿ ನೌಕರರ ಒಕ್ಕೊರಲಿನ ಬೇಡಿಕೆ

ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಮತ್ತು ಸುಗಮ ಆಡಳಿತದಲ್ಲಿ ಸರ್ಕಾರಿ ನೌಕರರ ಪಾತ್ರ ಹಿರಿದಾದುದು. ಆದರೆ 2006ರಿಂದ ನೇಮಕಗೊಂಡ ಸರ್ಕಾರಿ ನೌಕರರಿಗೆ ಅನ್ವಯವಾಗುವ ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಮಾರಕವಾಗಿ ಪರಿಣಮಿಸಿದೆ. ಈ ವ್ಯವಸ್ಥೆಯನ್ನು ಹೋಗಲಾಡಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್‌) ಜಾರಿಗೆ ತರಬೇಕೆಂಬುದು ನೌಕರರ ಒಕ್ಕೊರಲಿನ ಬೇಡಿಕೆಯಾಗಿದೆ.

ನೂತನ ಸರ್ಕಾರವು ಸರ್ಕಾರಿ ನೌಕರರಿಗೆ ಇದರ ಹೊರತಾಗಿ ಉಚಿತವಾಗಿ ಕೊಡುವ ಮತ್ತ್ಯಾವುದೇ ಯೋಜನೆಗಳನ್ನು ಜಾರಿಗೆ ತರುವುದು ಬೇಡ. ಅಂತಹವುಗಳನ್ನು ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯ ಆಗಲಿ.

ಶ್ರೀನಿವಾಸ ಎನ್. ದೇಸಾಯಿ, ತಲ್ಲೂರ

ಸಂಪ್ರದಾಯ ಪಾಲನೆಯಾಗಲಿ
ನಮ್ಮಲ್ಲಿ ಪ್ರಧಾನಮಂತ್ರಿಯವರದು ಚುನಾಯಿತ ಹುದ್ದೆಯಾದರೆ, ರಾಷ್ಟ್ರಪತಿಯವರದು ಸಾಂವಿಧಾನಿಕ ಹುದ್ದೆ. ಇವರು ಲೋಕತಂತ್ರದ ಮೇಲ್ವಿಚಾರಕ, ಶಾಸಕಾಂಗ, ಕಾರ್ಯಾಂಗಗಳ ಪಾಲಕ, ಸಂರಕ್ಷಕ. ಪ್ರತಿವರ್ಷ ಅಧಿವೇಶನದ ಪ್ರಾರಂಭದಲ್ಲಿ ರಾಷ್ಟ್ರಪತಿಯವರ ಭಾಷಣ ಇರುತ್ತದೆ. ಸಂಸತ್ತಿನ ಯಾವುದೇ ಮಹತ್ವದ ಹೊಸ ಕಾರ್ಯವನ್ನು ರಾಷ್ಟ್ರಪತಿಯವರಿಂದಲೇ ಆರಂಭಿಸುವ ಸಾಂಪ್ರದಾಯ ಇದೆ. ಆದರೆ, ಇದೀಗ ಹೊಸ ಸಂಸತ್‌ ಭವನದ ಕಟ್ಟಡವನ್ನು ಪ್ರಧಾನಿಯವರೇ ಉದ್ಘಾಟಿಸುತ್ತಿರುವುದು ಆಭಾಸಕರ. ಇದೇ ಕಾರಣಕ್ಕೆ ಬಹುತೇಕ ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಲು ಮುಂದಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಲ್ಲದೇ ನಡೆಯುವ ಕಾರ್ಯಕ್ರಮಗಳು ಆಳುವ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತವೆ. 

ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

ಯಾರನ್ನೋ ಮೆಚ್ಚಿಸುವ ಖಯಾಲಿಯೇಕೆ?

ಸಚಿವ ಎಂ.ಬಿ‌.ಪಾಟೀಲ ಅವರು ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಹೇಳಿಕೆ ನೀಡಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಇತ್ತೀಚೆಗೆ ರಾಜಕಾರಣಿಗಳಿಗೆ ಒಂದು ಫ್ಯಾಷನ್ ಆಗಿಬಿಟ್ಟಿದೆ. ಹಿಂದಿನ ಸರ್ಕಾರದ ಅವಧಿಯಲ್ಲಂತೂ ಇದು ಮಾಮೂಲಿಯಾಗಿ ಬಿಟ್ಟಿತ್ತು. ಈಗಲೂ ಈ ಚಾಳಿ ಮುಂದುವರಿಯುವಂತೆ ಕಾಣುತ್ತಿದೆ. ಈಗ ತಾನೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅದರ ಮುಂದೆ ಸವಾಲುಗಳು ಬಹಳಷ್ಟಿವೆ. ಅವುಗಳತ್ತ ಗಮನಹರಿಸುವುದನ್ನು ಬಿಟ್ಟು, ಕಾಲ ನಿರ್ಧರಿಸಬೇಕಾದ ಇಂಥ ವಿಷಯಗಳ ಬಗ್ಗೆ ನಾಲಿಗೆ ಹರಿಯಬಿಟ್ಟು ಯಾರನ್ನೋ ಮೆಚ್ಚಿಸುವ ಖಯಾಲಿ ಪಾಟೀಲರಂಥ ಅನುಭವಿ ರಾಜಕಾರಣಿಗೆ ಶೋಭೆ ತರುವುದಿಲ್ಲ.

ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

ಡಿಜಿಟಲ್‌ ಪಾವತಿ: ಸಿಗಲಿ ಪ್ರೇರಣೆ

₹ 2000 ಮುಖಬೆಲೆಯ ನೋಟುಗಳನ್ನು ಬ್ಯಾಂಕಿನಲ್ಲಿ ಜಮಾ ಮತ್ತು ವಿನಿಮಯ ಮಾಡಲು ಜನ ಅಷ್ಟೇನೂ ಸರದಿ ಸಾಲಿನಲ್ಲಿ ನಿಂತು ಬ್ಯಾಂಕ್ ಕಿಕ್ಕಿರಿದು ತುಂಬುತ್ತಿಲ್ಲ. ಜನ ಗಾಬರಿಯೂ ಆಗಿಲ್ಲ. ಕಾರಣ, ಬಹುತೇಕ ಎರಡು ಸಾವಿರದ ನೋಟುಗಳು ಅದಾಗಲೇ ಕಣ್ಮರೆಯಾಗಿವೆ. ಅವು ಜನರ ಬಳಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಇದಕ್ಕೆ ಮುಖ್ಯವಾದ ಮತ್ತೊಂದು ಕಾರಣ ಎಂದರೆ ಡಿಜಿಟಲ್ ಪಾವತಿ ಅಥವಾ ಯುಪಿಐ ವ್ಯವಸ್ಥೆ.

ಡಿಜಿಟಲ್ ಪಾವತಿ ವ್ಯವಸ್ಥೆ ಗ್ರಾಮೀಣ ಭಾಗದಲ್ಲಿಯೂ ಹೆಚ್ಚಾಗಿದೆ ಎಂದು ಎಸ್‌ಬಿಐ ತನ್ನ ವರದಿಯಲ್ಲಿ ಹೇಳಿದೆ. ಆದರೆ ಕೆಲವು ಬ್ಯಾಂಕ್‌ಗಳಲ್ಲಿ ಹಣ ಜಮೆ ಮಾಡಿ ಅಥವಾ ಹಣ ಹಿಂತೆಗೆದುಕೊಂಡು ಪಾಸ್‌ಬುಕ್ ಪ್ರಿಂಟ್‌ಗೆ ಕೊಡುವಾಗ ಅಲ್ಲಿನ ಸಿಬ್ಬಂದಿ ‘ನೀವು ಸಿಕ್ಕ ಸಿಕ್ಕ ಹಾಗೆ ಫೋನ್ ಪೇ, ಗೂಗಲ್ ಪೇ ಬಳಸುತ್ತಿದ್ದೀರಿ. ಪಾಸ್‌ಬುಕ್ ಪ್ರಿಂಟ್ ಮಾಡಲು ಆಗುವುದಿಲ್ಲ’ ಎನ್ನುವ ಮೂಲಕ, ಗ್ರಾಹಕರು ಡಿಜಿಟಲ್ ಪಾವತಿ ವ್ಯವಸ್ಥೆಯ ಬಳಕೆ ಕಡಿಮೆ ಮಾಡುವ ನಿರ್ಣಯ ತೆಗೆದುಕೊಳ್ಳುವ ರೀತಿಯಲ್ಲಿ ವರ್ತಿಸುತ್ತಾರೆ. ಬ್ಯಾಂಕ್ ಸಿಬ್ಬಂದಿಯ ಇಂತಹ ವರ್ತನೆ ಮೊದಲು ನಿಲ್ಲಬೇಕು. ಡಿಜಿಟಲ್ ಪಾವತಿ ವ್ಯವಸ್ಥೆ ಬಳಸಲು ಪ್ರೇರಣೆ ನೀಡಬೇಕು.

ಬಸನಗೌಡ ಮಂಜುನಾಥಗೌಡ ಪಾಟೀಲ, ಯರಗುಪ್ಪಿ 

ಹೋಟೆಲ್ ಆಹಾರ: ಬೆಲೆ ನಿಯಂತ್ರಿಸಿ

ಮಂಡ್ಯದ ಹೋಟೆಲೊಂದಕ್ಕೆ ಇತ್ತೀಚೆಗೆ ಉಪಾಹಾರಕ್ಕೆಂದು ಹೋಗಿದ್ದೆ. ಎರಡು ಇಡ್ಲಿ ಸಾಂಬಾರ್, ಒಂದು ಸೆಟ್ ದೋಸೆ ಮಾತ್ರ ಸೇವಿಸಿದೆ. ಕಾಫಿ ಬೇಡ ಎಂದು ಹೇಳಿ ಬಿಲ್ ಕೇಳಿದೆ. ಬಿಲ್‌ ₹ 105 ಬಂದದ್ದು ನೋಡಿ ಆಶ್ಚರ್ಯವಾಯಿತು. ಬಡವರು, ರೈತರು, ವಿದ್ಯಾರ್ಥಿಗಳು ಹೋಟೆಲ್‌ಗಳಲ್ಲಿ ತಿಂಡಿ-ಊಟ ಸೇವಿಸಲು ಹೋಗುವ ಮುನ್ನ ಯೋಚಿಸಬೇಕಾದಂತಹ ಕಾಲ ಇದು.

ಈಗ ಹೊಸ ಸರ್ಕಾರ ‘ಇಂದಿರಾ ಕ್ಯಾಂಟೀನ್’ಗಳಿಗೆ ಮರುಜೀವ ಕೊಡುತ್ತಿರುವುದು ಸ್ವಾಗತಾರ್ಹ. ನಾನು ವಿದ್ಯಾರ್ಥಿಯಾಗಿದ್ದಾಗ ಅಂದಿನ ಕಾಲದಲ್ಲಿ ಶ್ರೀರಾಮುಲು ಎಂಬ ಸಚಿವರು ರಾಜ್ಯದ ಹೋಟೆಲ್‌ಗಳಲ್ಲಿ ಊಟ, ತಿಂಡಿಯ ಬೆಲೆ ನಿಯಂತ್ರಣ ಮಾಡಿದ್ದರು. ಹೋಟೆಲ್‌ಗಳನ್ನು ಎ, ಬಿ, ಸಿ, ಡಿ ಎಂದು ಗ್ರೇಡ್‌ಗಳಾಗಿ ವಿಂಗಡಿಸಿ, ತಿಂಡಿಗಳ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು, ಕಾಫಿ ಇಂತಿಷ್ಟು ಎಂ.ಎಲ್ ಇರಲೇಬೇಕೆಂದು ತಿಳಿಸಸಲಾಗಿತ್ತು. ಇಂದಿರಾ ಕ್ಯಾಂಟೀನ್‌ಗಳನ್ನು ಎಲ್ಲೆಡೆ ತೆರೆಯುವುದು ಕಷ್ಟಸಾಧ್ಯ. ಈಗಲೂ ಹಾಗೆಯೇ ಹೋಟೆಲ್‌ಗಳಿಗೆ ಗ್ರೇಡ್‌ಗಳನ್ನು ನಿಗದಿಪಡಿಸಿ, ಸಾಮಾನ್ಯ ಹೋಟೆಲ್‌ಗಳಲ್ಲಿ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ತಿನಿಸು ದೊರೆಯುವಂತೆ ಮಾಡಲು ಸರ್ಕಾರ ಮುಂದಾಗಬೇಕು.

ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT