ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಸ್ವಾಸ್ಥ್ಯ ಉಳಿಸುವ ಸಾಕ್ಷಿಪ್ರಜ್ಞೆ

Last Updated 8 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯ ಏ. 8ರ ಸಂಚಿಕೆಯು ಸುದ್ದಿಪತ್ರಿಕೆಯೊಂದರ ಆದರ್ಶ ಮಾದರಿಯಂತೆ ಮೂಡಿಬಂದಿದೆ. ಮೊದಲ ಪುಟದಲ್ಲಿ ‘ಹಸಿದವರಿಗಾಗಿ ಸೈಟು ಮಾರಾಟ’ ಎಂಬ ಶೀರ್ಷಿಕೆಯಡಿ ಬಂದಿರುವ ಮುಸ್ಲಿಂ ಸೋದರರ ಸೇವೆಯ ಸುದ್ದಿ ಇಂದಿಗೆ ಬೇಕಾಗಿತ್ತು. ಈ ಸುದ್ದಿಯ ಪಕ್ಕದಲ್ಲೇ, ಮುಸ್ಲಿಮರು ಸೋಂಕು ಹಬ್ಬಿಸುವರೆಂಬ ‘ಭಯ’ದಿಂದ ಅವರ ‘ಗ್ರಾಮ ಪ್ರವೇಶಕ್ಕೆ ವಿರೋಧ’ ಮಾಡಿದ ಮಾಹಿತಿಯು ಇಂದಿನ ವಿಷಮಸ್ಥಿತಿಯನ್ನು ತಿಳಿಸುತ್ತದೆ. ನನ್ನ ಅಭಿಪ್ರಾಯದಲ್ಲಿ, ಎರಡು–ಮೂರು ದಿನ ತಡವಾಗಿದ್ದರೂ ‘ಸಾಂಕೇತಿಕ ಆಚರಣೆಸಾಕು, ಕ್ರಿಯಾಯೋಜನೆ ಬೇಕು’ ಎಂಬ ಅರ್ಥಪೂರ್ಣಸಂಪಾದಕೀಯವು ಒಂದು ದಿಕ್ಸೂಚಿಯಾಗಿದೆ. ಕೆಲವೊಮ್ಮೆ ಮಾತ್ರಸಂಕೇತಗಳಿಗೆ ಒಂದಿಷ್ಟು ಅರ್ಥವಿರುತ್ತದೆ. ಆದರೆ ಸಂಕೇತಗಳು ನಿಜದ ನೆಲೆಗಳಿಂದ ಮನಸ್ಸನ್ನು ಬೇರೆಡೆ ಸೆಳೆಯುವ ಸಾಧನಗಳಾಗಬಾರದು. ಸಂಕೇತಗಳನ್ನು ಮೀರಿದ ಪ್ರತೀಕಾತ್ಮಕ ಕ್ರಿಯಾರೂಪಗಳು ಹೆಚ್ಚು ಅರ್ಥಪೂರ್ಣವೂ ಉಪಯುಕ್ತವೂ ಆಗುತ್ತವೆ. ಅದೇನೇ ಇರಲಿ, ಸಂಕೇತಗಳ ಮಿತಿಯನ್ನು ಮೀರಿದ ಕ್ರಿಯಾಯೋಜನೆಗೆ ಒತ್ತಾಯಿಸಿದ್ದು ಸರಿಯಾಗಿದೆ.

ಇನ್ನು 5ನೇ ಪುಟದಲ್ಲಿ ಬಂದಿರುವ ‘ಸುಳ್ಳು ಸುದ್ದಿಗಳ ಸಂತೆಯಲ್ಲಿ’ ಎಂಬ ವಿಸ್ತೃತ ವರದಿಯು ತೀರಾ ಅಗತ್ಯವಾಗಿತ್ತು. ‘ಪ್ರತ್ಯಕ್ಷವಾದರೂ ಪರೀಕ್ಷಿಸಿ ನೋಡು’ ಎಂಬ ವಿವೇಕವನ್ನು ಈ ವರದಿ ಸ್ಪಷ್ಟಪಡಿಸುತ್ತದೆ. ಇಷ್ಟೆಲ್ಲ ಹೇಳಿದ ಮೇಲೆ 6ನೇ ಪುಟದಲ್ಲಿ ‘ಆಶಾ ಕಾರ್ಯಕರ್ತೆ
ಯರ ಮೇಲೆ ಹಲ್ಲೆ’ ಎಂಬ ವರದಿಯ ಮೂಲಕ ತಾನು ಏಕಪಕ್ಷೀಯವಲ್ಲ ಎಂದು ಪತ್ರಿಕೆಯು ಸಾದರಪಡಿಸುತ್ತಿದೆ. ಕಡೆಯದಾಗಿ ಒಂದು ಮಾತು: ಯಾರನ್ನೂ ಓಲೈಸದೆ ಸಮಾಜದ ಸ್ವಾಸ್ಥ್ಯವನ್ನು ಉಳಿಸುವ ಸಂಕಲ್ಪದ ಸುದ್ದಿಗಳಿಂದ ಮತ್ತು ಸಾಕ್ಷಿಪ್ರಜ್ಞೆಯಿಂದ ಮಾತ್ರ ‘ಪ್ರಜಾವಾಣಿ’ಯ ವಿಶ್ವಾಸಾರ್ಹತೆ ಉಳಿಯುತ್ತದೆ, ಬೆಳೆಯುತ್ತದೆ.

- ಬರಗೂರು ರಾಮಚಂದ್ರಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT