ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

Published 25 ಮೇ 2023, 1:02 IST
Last Updated 25 ಮೇ 2023, 1:02 IST
ಅಕ್ಷರ ಗಾತ್ರ

ಮಾತೆ– ಮಾನವೀಯತೆ

ರಾಜಧಾನಿ ಬೆಂಗಳೂರಿನ 
ಅಂಡರ್‌ಪಾಸ್‌ ಒಂದರಲ್ಲಿ 
ಮಳೆಯ ನೀರಿನಲ್ಲಿ ಸಿಲುಕಿ,

ಪ್ರಾಣಾಪಾಯದಲ್ಲಿ ಇದ್ದವರನ್ನು

ರಕ್ಷಿಸಲು ಮಹಿಳೆಯೊಬ್ಬರು

ತಮ್ಮ ಸೀರೆಯನ್ನೇ ಬಿಚ್ಚಿಕೊಟ್ಟರಂತೆ!
ಇದೇನು ಸಾಮಾನ್ಯ ಮಾತೇ?
ಮಾತೆ ಮೆರೆದರು

ಅಪೂರ್ವ ಮಾನವೀಯತೆ!

ಮ.ಗು.ಬಸವಣ್ಣ, ನಂಜನಗೂಡು

ಕೃಷಿ ಕಾಯ್ದೆಗಳ ರದ್ದತಿಗೆ ವಿಳಂಬ ಏಕೆ?

ಒಕ್ಕೂಟ ಸರ್ಕಾರದ ನಿರ್ದೇಶನದಲ್ಲಿ ಕರ್ನಾಟಕವು 2020ರಲ್ಲಿ ಜಾರಿಗೊಳಿಸಿದ ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಇತರ ಸಂಘಟನೆಗಳು ಚಳವಳಿ ಮಾಡುತ್ತಿದ್ದಾಗ, ಆಗ ವಿರೋಧ ಪಕ್ಷದ ಮುಖಂಡರಾಗಿದ್ದ ಸಿದ್ದರಾಮಯ್ಯ ಅವರೂ ಭಾಗವಹಿಸಿದ್ದರು. ಅಂತೆಯೇ ದೆಹಲಿಯ ಗಡಿಭಾಗದ ಪ್ರದೇಶಗಳಲ್ಲಿ ನಡೆದಿದ್ದ ಈ ರೈತರ ಹೋರಾಟಕ್ಕೂ ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲ ನೀಡಿತ್ತು. ರೈತರ ಪ್ರಚಂಡ ಹೋರಾಟಕ್ಕೆ ಮಣಿದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆ ಕಾಯ್ದೆಗಳನ್ನು ರದ್ದುಪಡಿಸಿತು. 

ಆದರೆ, ಕರ್ನಾಟಕದಲ್ಲಿ ಆಗಿನ ಬಿಜೆಪಿ ನೇತೃತ್ವದ ಸರ್ಕಾರವು ಕಾಯ್ದೆಗಳನ್ನು ರದ್ದುಪಡಿಸಲಿಲ್ಲ ಮತ್ತು ರದ್ದುಪಡಿಸುವುದೂ ಇಲ್ಲ ಎಂದು ವಿಧಾನಸಭೆಯಲ್ಲೇ ಘೋಷಿಸಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ರೈತಸಂಘದ ಬೆಂಬಲದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿ ಗೆಲ್ಲಿಸಿದೆ. ಆದರೆ, ಈ ಕಾಯ್ದೆಗಳನ್ನು ರದ್ದುಪಡಿಸುವುದರ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ. ಇದರಿಂದ ಮಾತಿಗೆ ತಪ್ಪಿದಂತೆ ಆಗುತ್ತದೆ. ಆದ್ದರಿಂದ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಳಂಬ ಮಾಡದೆ, ಸುಗ್ರೀವಾಜ್ಞೆ ಮೂಲಕವಾದರೂ ಸರಿ ಈ ಕರಾಳ ಕಾಯ್ದೆಗಳನ್ನು ತಕ್ಷಣವೇ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು.

ಟಿ.ಆರ್.ಚಂದ್ರಶೇಖರ, ಬೆಂಗಳೂರು

ಗ್ಯಾರಂಟಿಗಳ ಜೊತೆ ಇತ್ತಲೂ ಗಮನಹರಿಸಿ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ಐದು ಗ್ಯಾರಂಟಿಗಳು ಕಾಯಿಲೆಗೆ ಚಿಕಿತ್ಸೆ ನೀಡುವ ಕ್ರಮ ಮಾತ್ರವಾಗಿವೆ. ಕಾಯಿಲೆ ಬಾರದಂತೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಚಿಂತನೆ ಮಾಡಬೇಕಾಗಿದೆ. ಶೈಕ್ಷಣಿಕ ವರ್ಷ ಆರಂಭವಾಗಿರುವ ಈ ಸಮಯದಲ್ಲಿ ಖಾಸಗಿ ಶಾಲೆಗಳ ದುಬಾರಿ ಶುಲ್ಕ ಭರಿಸಲಾಗದೇ ಪೋಷಕರು ಹೈರಾಣಾಗಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟದ ಬಗೆಗಿನ ಅಪನಂಬಿಕೆಯೇ ಈ ಸ್ಥಿತಿಗೆ ಕಾರಣ. ಸರ್ಕಾರಿ ಶಾಲೆಗಳ ಬಗ್ಗೆ ವಿಶ್ವಾಸಾರ್ಹತೆ, ಅವುಗಳ ಗುಣಮಟ್ಟ ಹೆಚ್ಚಿಸುವ ಕೆಲಸ ಆದ್ಯತೆಯ ಮೇಲೆ ಆಗಬೇಕಿದೆ. ಜನರ ಸಂಕಷ್ಟಕ್ಕೆ ಮತ್ತೊಂದು ಕಾರಣ ಅಸಮರ್ಪಕ ಸರ್ಕಾರಿ ಆರೋಗ್ಯ ವ್ಯವಸ್ಥೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞವೈದ್ಯರು, ಸಿಬ್ಬಂದಿಯ ಕೊರತೆ ನೀಗಿಸುವುದರ ಜೊತೆಗೆ, ರಿಯಾಯಿತಿ ದರದಲ್ಲಿ ಸೇವೆ ಒದಗಿಸುವ ರೋಗನಿರ್ಣಯ ಪ್ರಯೋಗಾಲಯಗಳನ್ನು ಸ್ಥಾಪಿಸಿದರೆ ಅನುಕೂಲವಾಗುತ್ತದೆ. 

ಇನ್ನು ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರದಂತಹ ವಸ್ತುಗಳು ಕೈಗೆಟಕುವ ದರದಲ್ಲಿ ಸಿಗಬೇಕು. ಹೈನುಗಾರರಿಗೆ ಹಾಲಿನ ಪ್ರೋತ್ಸಾಹಧನ ಹೆಚ್ಚಳ ಹಾಗೂ ಪಶು ಆಹಾರ ದರದ ನಿಯಂತ್ರಣ ಮಾಡಬೇಕು. ಪಶು ಔಷಧಗಳ ಬೆಲೆ ಅತ್ಯಂತ ದುಬಾರಿ ಆಗಿರುವುದರಿಂದ ಮಿಶ್ರತಳಿ ಹಸುಗಳ ಮಾಲೀಕರು ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳಲ್ಲಿ ಪಶು ಔಷಧಿಗಳೂ ದೊರೆಯುವಂತೆ ಆಗಬೇಕು ಅಥವಾ ರಾಜ್ಯ ಸರ್ಕಾರದ ಪ್ರೋತ್ಸಾಹದಿಂದಲೇ ಇಂತಹ ಔಷಧಿ ಮಳಿಗೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಹೊಸ ಸರ್ಕಾರ ಈ ದಿಸೆಯಲ್ಲಿ ಆಲೋಚಿಸಿ ಕಾರ್ಯಕ್ರಮ ರೂಪಿಸಿದಲ್ಲಿ, ಆರ್ಥಿಕವಾಗಿ ಹಿಂದುಳಿದವರು ಉಚಿತ ಕೊಡುಗೆಗಳ ಮೇಲೆ ಅವಲಂಬಿತರಾಗುವುದು ಕಡಿಮೆಯಾಗುತ್ತದೆ.

ಡಾ. ಟಿ.ಜಯರಾಂ, ಕೋಲಾರ

ಮೌಢ್ಯಕ್ಕೆ ಬಲಿಯಾಗುವ ಆಮೆಗಳು

‘ಇದೋ ಬಂದಿದೆ ಆಮೆಗಳ ಹಬ್ಬ’ ಎಂಬ ಗುರುರಾಜ್ ಎಸ್. ದಾವಣಗೆರೆ ಅವರ ಲೇಖನ (ಸಂಗತ ಮೇ 23) ಸಕಾಲಿಕವಾಗಿದೆ. ಪರಿಸರ ಸಮತೋಲನದಲ್ಲಿ ಆಮೆಗಳ ಪಾತ್ರ ಪ್ರಮುಖವಾದುದು. ಆದರೆ ಹೆಚ್ಚುತ್ತಿರುವ ಪರಿಸರ ನಾಶದಿಂದ ಅವುಗಳ ಸಂತತಿ ಕ್ಷೀಣಿಸುತ್ತಿದೆ. ಜೊತೆಗೆ ಆಮೆಗಳ ಸಂತತಿ ನಾಶಕ್ಕೆ ಮತ್ತೊಂದು ಸಾಮಾಜಿಕ ಕಾರಣವೂ ಇದೆ, ಅದೇ ಮೂಢನಂಬಿಕೆ!

ಹೌದು, ಮನೆಯಲ್ಲಿ ಆಮೆಯನ್ನು ಸಾಕಿದರೆ ಒಳ್ಳೆಯದಾಗುತ್ತದೆ ಎಂದು ನಂಬಿ ಆಮೆಗಳನ್ನು ಅವುಗಳ ನೈಸರ್ಗಿಕ ಆವಾಸದಿಂದ ಬಲವಂತವಾಗಿ ಹಿಡಿದು ತಂದು ಸಾಕುವವರಿದ್ದಾರೆ. ತಮ್ಮ ಮನೆಯ ಸಂಪಿನ ನೀರಿನಲ್ಲಿ ಬೆಳೆದಿರುವ ಪಾಚಿಯನ್ನು ತಿಂದುಕೊಂಡಿರಲೆಂದು ಆಮೆಗಳನ್ನು ಅದರೊಳಗೆ ತಿಂಗಳಾನುಗಟ್ಟಲೆ ಬಿಡುವವರೂ ಇದ್ದಾರೆ. ಐದು ಉಗುರಿನ ಆಮೆ ಸಾಕಿದರೆ ಕುಬೇರರಾಗುತ್ತೇವೆ ಎಂದು ನಂಬಿ ಆಮೆ ಮರಿಗಳನ್ನು ತಂದು ಸಾಕುವವರೂ ಇದ್ದಾರೆ. ಇವೆಲ್ಲವೂ ಶುದ್ಧ ಮೌಢ್ಯಗಳೆಂಬುದು ಅಕ್ಷರಶಃ ಸತ್ಯ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ, ಆಮೆಗಳನ್ನು ಸಾಕುವುದು ಅಪರಾಧವೂ ಹೌದು. ಆದರೆ ಬಹುತೇಕರಿಗೆ ಈ ವಿಷಯವೇ ತಿಳಿದಿಲ್ಲ. ಏಕೆಂದರೆ, ನಮ್ಮಲ್ಲಿ ವಿಜ್ಞಾನಕ್ಕಿಂತ ಮೌಢ್ಯಗಳೇ ಹೆಚ್ಚು ಜನಪ್ರಿಯ. ಇನ್ನಾದರೂ ಜನರ ಮನಃಸ್ಥಿತಿ ಬದಲಾಗಿ, ಆಮೆಗಳನ್ನು ರಕ್ಷಿಸಲು ಮುಂದಾಗಬೇಕಿದೆ.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಅದೃಷ್ಟದ ಭವ್ಯಸೌಧ ವಿಧಾನಸೌಧ!

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನಸೌಧದಲ್ಲಿ, ಜ್ಯೋತಿಷಿಯವರ ಸಲಹೆಯಂತೆ ಅದೃಷ್ಟದ ಕೊಠಡಿಗಳನ್ನು ಹಂಚಿಕೆ ಮಾಡಿರುವ ಬಗ್ಗೆ ವರದಿಯಾಗಿದೆ (ಪ್ರ.ವಾ., ಮೇ 24). ವಿಧಾನಸೌಧದಲ್ಲಿ ಅದೃಷ್ಟದ ಕೊಠಡಿ, ದುರದೃಷ್ಟದ ಕೊಠಡಿ ಎಂದು ಎರಡು ಬಗೆಯ ಕೊಠಡಿಗಳು ಇಲ್ಲ. ವಿಧಾನಸೌಧದಲ್ಲಿರುವ ಎಲ್ಲ ಕೊಠಡಿಗಳೂ ಅದೃಷ್ಟ ತಂದುಕೊಡುವಂತಹವೇ ಆಗಿವೆ. ಹೇಗೆಂದರೆ, ವಿಧಾನಸೌಧದಂತಹ ಭವ್ಯ ಕಟ್ಟಡದಲ್ಲಿ ಕೆಲಸ ಮಾಡಲು ಅವಕಾಶ ದೊರೆಯುವುದು ಯಾರಿಗಾದರೂ ಪ್ರತಿಷ್ಠೆಯ ವಿಷಯ. ಅದೃಷ್ಟ ಇದ್ದವರಿಗೆ ಮಾತ್ರ ಆ ಭಾಗ್ಯ ಲಭಿಸುತ್ತದೆ.

ಹತ್ತಾರು ಎಕರೆ ನೀರಾವರಿ ಜಮೀನಿರುವ ಜಮೀನ್ದಾರನ ಮಗನಿಗೆ ಹೆಣ್ಣು ಕೊಡಲು ಕನ್ಯಾಪಿತೃಗಳು ಹಿಂದೆ ಮುಂದೆ ನೋಡುತ್ತಾರೆ. ಆದರೆ ವಿಧಾನಸೌಧದಲ್ಲಿ, ನಾಲ್ಕನೇ ದರ್ಜೆ ನೌಕರನಾಗಿ ಕೆಲಸ ಮಾಡುವ ವರನಿಗೆ ಮದುವೆಗೆ ಹೆಣ್ಣು ಸಿಗುವುದು ಕಷ್ಟವಾಗುವುದಿಲ್ಲ. ಇದು ವಿಧಾನಸೌಧದ ಮಹಿಮೆ. ಅವನು ಯಾವ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದರೂ ಅವನಿಗೆ ಅದೃಷ್ಟ ಖುಲಾಯಿಸುತ್ತದೆ. ವಿಧಾನಸೌಧದಲ್ಲಿ ಮಂತ್ರಿಗಳಿಗೆ ಕೊಠಡಿ ಹಂಚಿಕೆ ಮಾಡುವುದಕ್ಕೆ ನಿಯಮಗಳಿವೆ. ಆ ನಿಯಮಗಳಿಗೆ ಅನುಸಾರವಾಗಿಯೇ ಕೊಠಡಿಗಳನ್ನು ಹಂಚಿಕೆ ಮಾಡಲಾಗುತ್ತದೆ. ಮಂತ್ರಿಗಳು ಆ ನಿಯಮಗಳನ್ನು ಪಾಲಿಸಬೇಕೇ ವಿನಾ ಜ್ಯೋತಿಷಿಗಳ ಸಲಹೆಯನ್ನಲ್ಲ.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT