ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಶನಿವಾರ, 25 ಮಾರ್ಚ್‌ 2023

Last Updated 24 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಇದು ಗ್ರಾಹಕರ ಹಕ್ಕಿನ ಉಲ್ಲಂಘನೆ

ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪನಿಗಳು ಮೊದಲೇ ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಗಳನ್ನು ತೆಗೆದುಹಾಕುವ ಆಯ್ಕೆಯನ್ನು ಕಡ್ಡಾಯ ಮಾಡಲು ಸರ್ಕಾರ ನಿರ್ಧರಿಸಿರುವುದು (ಪ್ರ.ವಾ., ಮಾರ್ಚ್‌ 15) ಸ್ವಾಗತಾರ್ಹ. ಈಗ ಫೋನ್‌ಗಳಲ್ಲಿ ದಿನಬೆಳಗಾಗುವಷ್ಟರಲ್ಲಿ ಹೊಸ ಹೊಸ ಆ್ಯಪ್‌ಗಳು ಸೇರಿಕೊಳ್ಳುತ್ತಿವೆ. ಬಹಳಷ್ಟು ವೇಳೆ ಈ ಆ್ಯಪ್‌ಗಳು ಪ್ರತ್ಯಕ್ಷವಾಗಿ ಇನ್‌ಸ್ಟಾಲ್ ಮಾಡಲು ಕೋರುತ್ತವೆ. ಪ್ರೆಸ್ ‘ಓಕೆ’ ಎಂದು ಬರುತ್ತದೆ. ಆದರೆ ಅದನ್ನು ಬೇಡ ಎನ್ನಲು ಆಯ್ಕೆಯೇ ಇರದೆ ಅನಿವಾರ್ಯವಾಗಿ ಇನ್‌ಸ್ಟಾಲ್ ಮಾಡಬೇಕಾದ ಪ್ರಮೇಯ ಬರುತ್ತದೆ (ಆಗ ಫೋನ್ ಅನ್ನು ಸ್ವಿಚ್ ಆಫ್ ಮಾಡಬೇಕಾಗುತ್ತದೆ). ನಮಗೆ ಈ ಆ್ಯಪ್‌ಗಳ ಅಗತ್ಯವೇ ಇರುವುದಿಲ್ಲ. ಅಲ್ಲದೆ ಇಂತಹ ಬಹಳಷ್ಟು ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಲು ಆಗುವುದೇ ಇಲ್ಲ. ಇದು ಹೆಚ್ಚಿನ ಗ್ರಾಹಕರಿಗೆ ತಲೆನೋವು ಕೂಡ.

ಇಷ್ಟೇ ಅಲ್ಲದೆ ಈ ಆ್ಯಪ್‌ಗಳು ಸ್ಟೋರೇಜ್ ಸ್ಪೇಸ್ ಅನ್ನು ಆಕ್ರಮಿಸಿಕೊಳ್ಳುತ್ತವೆ. ಅಲ್ಲದೆ ಇವುಗಳಿಂದಾಗಿ ಇಂಟರ್ನೆಟ್‌ ಡೇಟಾ ಕೂಡ ಅನವಶ್ಯಕವಾಗಿ ಪೋಲಾಗುತ್ತದೆ. ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರವು ಇವುಗಳನ್ನು ಅನ್‌ಇನ್‌ಸ್ಟಾಲ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಿರುವುದು ಸರಿಯಾದ ಕ್ರಮವಾಗಿದೆ. ತನಗೆ ಏನು ಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕು ಹಣ ಕೊಟ್ಟು ಖರೀದಿಸಿದ ಗ್ರಾಹಕನ ದಾಗಬೇಕೆ ವಿನಾ ಹಣ ಪಡೆದ ಕಂಪನಿಯದಾಗಬಾರದು. ಇದು ಗ್ರಾಹಕನ ಹಕ್ಕಿನ ಉಲ್ಲಂಘನೆ ಕೂಡ.

ಮುಳ್ಳೂರು ಪ್ರಕಾಶ್, ಮೈಸೂರು

***

ಅಕ್ರಮಗಳ ಆಗರವಾದ ಯೋಜನೆ

ಮನೆ ಮನೆಗೂ ನಲ್ಲಿಯ ಮೂಲಕ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಅಕ್ರಮಗಳ ಗೂಡಾಗಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆಯಡಿ ಮನೆ ಮನೆಗೂ ನಲ್ಲಿ ಅಳವಡಿಸಿ ನೀರು ಪೂರೈಸುವ ಈ ಯೋಜನೆಯಲ್ಲಿ ಅಧಿಕಾರಿಗಳ
ಭ್ರಷ್ಟಾಚಾರದಿಂದ ಭಾರಿ ಪ್ರಮಾಣದಲ್ಲಿ ಹಣ ಪೋಲಾಗುತ್ತಿದೆ.

ಪೈಪ್‌ಲೈನ್‌ ಅನ್ನು ಭೂಮಿಯಲ್ಲಿ ಮೂರು ಅಡಿಗಿಂತಲೂ ಮೇಲೆ ಹಾಕಿರುವುದು, ಓವರ್‌ಹೆಡ್ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುವಷ್ಟು ಕಳಪೆ ಗುಣಮಟ್ಟದ ಪೈಪ್ ಬಳಕೆ, ನಿರ್ಮಿಸಿದ ಪೈಪ್‌ಲೈನ್‌ ಉದ್ದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಪೈಪ್‌ಲೈನ್‌ ಲೆಕ್ಕವನ್ನು ಬಿಲ್ ಫಾರ್ಮ್‌ನಲ್ಲಿ ನಮೂದಿಸಿ ಸರ್ಕಾರದ ಹಣ ಲೂಟಿ ಮಾಡಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮವೊಂದರಲ್ಲಿ ಗುತ್ತಿಗೆದಾರರು ಮಾಡಿರುವ ಕಾಮಗಾರಿಯ ಬಿಲ್ ಫಾರ್ಮ್ ಹಿಡಿದು, ನಿರ್ಮಿಸಿರುವ ಪೈಪ್‌ಲೈನ್‌ ಕಾಮಗಾರಿಯನ್ನು ಅಳತೆ ಮಾಡಿದರೆ, ಕಿರಿಯ ಅಧಿಕಾರಿಯಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ತಲೆದಂಡವಾಗುವುದು ಖಚಿತ.

ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ

***

ಠೇವಣಿದಾರರ ಹಕ್ಕಿನ ನಿರಾಕರಣೆ

ಆಧಾರ್ ಕಾರ್ಡ್ ಹೊಂದುವುದು ಐಚ್ಛಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ಕಾರಿ ನೆರವು, ಸಹಾಯಧನ ಯೋಜನೆಗಳ ವಿನಾ ಅನ್ಯಸೇವೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಸಹ ತಿಳಿಸಿದೆ. ಹೀಗಿರುವಾಗ, ಆಧಾರ್ ಜೊತೆ ಜೋಡಿಸದಿದ್ದರೆ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗುವುದೆಂದು ಸರ್ಕಾರ ಆದೇಶ ಹೊರಡಿಸಿರುವುದು ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಅದಕ್ಕಾಗಿ ಶುಲ್ಕ ಅಥವಾ ದಂಡ ವಿಧಿಸುವ ಅಧಿಕಾರವೂ ಸರ್ಕಾರಕ್ಕಿಲ್ಲ. ಆಧಾರ್ ಕಾರ್ಡ್ ಹೊಂದುವುದು ಐಚ್ಛಿಕವಾಗಿರುವಾಗ, ಅದರ ಜೋಡಣೆ ಹೊಂದಿರದ ಪ್ಯಾನ್‌ ನಿಷ್ಕ್ರಿಯವಾಗುವ ಮೂಲಕ ಬ್ಯಾಂಕ್ ಠೇವಣಿ ವ್ಯವಹಾರಗಳಿಗೆ ತಡೆಯುಂಟಾದರೆ ಅದು ಠೇವಣಿದಾರರ ಹಕ್ಕಿನ ನಿರಾಕರಣೆ ಆಗುತ್ತದೆ. ಸರ್ಕಾರ ಈ ಸೂಕ್ಷ್ಮವನ್ನು ಗಮನಿಸಲಿ. ನಮ್ಮ ರಾಜ್ಯ ನಾಯಕರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡಲಿ.

ಎ.ಆರ್.ಸೋಮಯಾಜಿ, ಬೆಂಗಳೂರು

***

ವಿವಾಹ ಮಾಹಿತಿಗೆ ಸೃಷ್ಟಿಯಾಗಲಿ ವೆಬ್‌ಸೈಟ್‌

ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿರುವುದಕ್ಕೆ, ಮದುವೆಯ ಏಜೆಂಟರು ‘ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು’ ಎಂಬ ಒಂದೇ ಸಾಲಿನ ನೀತಿಗೆ ಅಂಟಿಕೊಂಡಿರುವುದೇ ಕಾರಣ. ಸಾಮಾನ್ಯ ಕೆಲಸ ನಿರ್ವಹಿಸುವ ಗಂಡುಗಳಿಗೆ ಹೆಣ್ಣು ಕೊಡಲು ಹೆಣ್ಣಿನ ತಂದೆ ತಾಯಿ ಸುತರಾಂ ಒಪ್ಪುತ್ತಿಲ್ಲ. ಹೆಣ್ಣುಮಕ್ಕಳೇ ಶಿಕ್ಷಣದಲ್ಲಿ ಗಂಡುಮಕ್ಕಳಿಗಿಂತ ಮುಂದಿದ್ದಾರೆ. ಕೆಲವು ಗಂಡುಮಕ್ಕಳು ದುಶ್ಚಟಗಳಿಗೆ ದಾಸರಾಗಿರುತ್ತಾರೆ. ಇಂತಹ ಕಾರಣಗಳಿಂದ ಗಂಡಿಗೆ ಹೆಣ್ಣು ಹೊಂದಿಸುವುದೇ ಸವಾಲಾಗಿದೆ. ಇಂತಹ ನ್ಯೂನತೆಗಳನ್ನು ಬಳಸಿಕೊಳ್ಳುವ ಬ್ರೋಕರ್‌ಗಳು ಸುಳ್ಳುಗಳನ್ನು ವೈಭವೀಕರಿಸಿ ಮದುವೆ ಮಾಡಿಸಿಬಿಡುತ್ತಾರೆ. ಅದಕ್ಕೆ ಪೂರಕವಾಗಿ ಜಾತಕ, ಗಣಕೂಟ, ಅಷ್ಟೇ ಏಕೆ ಹೆಸರನ್ನೇ ಬದಲಿಸಿ ಮನವೊಲಿಸುವ ಕೆಲವು ಪುರೋಹಿತರು ಏಜೆಂಟುಗಳ ಮರ್ಜಿಯಲ್ಲಿರುತ್ತಾರೆ. ಈ ರೀತಿ ದಂಪತಿಗಳಾದವರು ನಂತರ ಪರಸ್ಪರ ವಿರೋಧಾಭಾಸಗಳಿಂದ ಜಗಳವಾಡಿಕೊಂಡು ಬೇರೆಯಾಗುತ್ತಾರೆ. ಒಗ್ಗೂಡಿಸುವ ಕೌಟುಂಬಿಕ ಸಂಧಾನಗಳು ಯಶಸ್ವಿಯಾಗುತ್ತಿಲ್ಲ.

ಹಾಗಾಗಿ ಮದುವೆಗಳು ಎಷ್ಟು ವಿಜೃಂಭಣೆಯಿಂದಾದರೂ ನಡೆಯಲಿ ಅದಕ್ಕೂ ಮುನ್ನ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆಗಳಲ್ಲಿ ನೋಂದಣಿ ಮಾಡಿಸಲಿ. ಅದಕ್ಕಾಗಿ ಒಂದು ವೆಬ್‌ಸೈಟ್ ಸೃಷ್ಟಿಯಾಗಲಿ. ರಾಜ್ಯದಾದ್ಯಂತ ಅದು ಪರಿಶೀಲನೆಗೆ ಲಭ್ಯವಿರಲಿ. ಆಗಿರುವ ಮದುವೆಗಳು, ಮುಂದಿನ ಹದಿನೈದು ದಿನಗಳಲ್ಲಿ ಆಗಲಿರುವ ಮದುವೆಗಳು, ವಿಚ್ಛೇದಿತ ದಂಪತಿ, ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿರುವ ದಂಪತಿ ಎಲ್ಲದರ ಬಗ್ಗೆಯೂ ಆ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗಲಿ. ಇದರಿಂದ ಮದುವೆ ಆಗಿದ್ದರೂ ಮುಚ್ಚಿಟ್ಟು ಮತ್ತೊಂದು ಮದುವೆ ಆಗುವ ಪ್ರಕರಣಗಳಿಗೆ ಕಡಿವಾಣ ಬೀಳುತ್ತದೆ. ಬಾಲ್ಯವಿವಾಹಗಳಿಗೆ ಆಸ್ಪದವೇ ಇರುವುದಿಲ್ಲ. ನೋಂದಣಿ ಆಗದ ವಿವಾಹಗಳಿಗೆ ಕಾನೂನಿನ ಮಾನ್ಯತೆ ಬೇಡ. ನೋಂದಣಿ ಮಾಡಿಸಿಕೊಂಡು ಸರಳ ವಿವಾಹ ಮಾಡಿಕೊಳ್ಳುವವರಿಗೆ ಸರ್ಕಾರ ಪ್ರೋತ್ಸಾಹಧನ ನೀಡಲಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇತ್ತ ಗಮನಹರಿಸಲಿ ಅಥವಾ ವಿವಾಹಗಳಿಗೆ ಸಂಬಂಧಿಸಿದ ಸಚಿವಾಲಯ ಇದ್ದರೂ ಒಳ್ಳೆಯದೆ.

ಮಲ್ಲಿಕಾರ್ಜುನ, ಸುರಧೇನುಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT