ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಯಾರನ್ನು ದಡ್ಡರನ್ನಾಗಿ ಮಾಡುತ್ತಿದ್ದಾರೆ?

Published 28 ಮೇ 2023, 22:45 IST
Last Updated 28 ಮೇ 2023, 22:45 IST
ಅಕ್ಷರ ಗಾತ್ರ

ಯಾರನ್ನು ದಡ್ಡರನ್ನಾಗಿ ಮಾಡುತ್ತಿದ್ದಾರೆ?

ಬಿಜೆಪಿ ಮುಖಂಡ ಆಗಿದ್ದ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನಕುಮಾರಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಪುಂಖಾನುಪುಂಖವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಿಜೆಪಿಗೆ ಪ್ರವೀಣ್ ಮೇಲೆ ಸಹಾನುಭೂತಿ, ನೈಜ ಕಾಳಜಿ ಇದ್ದಿದ್ದರೆ, ಅವರ ಪತ್ನಿಗೆ ‘ತಾತ್ಕಾಲಿಕ ಹುದ್ದೆ’ಯಲ್ಲಿ ಕೆಲಸ ಕಲ್ಪಿಸಿದ್ದು ಏಕೆ? ಇಂತಹ ತಾತ್ಕಾಲಿಕ ನೇಮಕಾತಿಗಳು ಹೊಸ ಪಕ್ಷ ಅಧಿಕಾರಕ್ಕೆ ಬಂದಾಗ ಸಹಜವಾಗಿ ರದ್ದುಗೊಳ್ಳುತ್ತವೆ. ಹೀಗೆ ಪ್ರತಿ ವಿಷಯಕ್ಕೂ ಜಾತಿ-ಧರ್ಮದ ಲೇಪನ ಮಾಡಿದ್ದರಿಂದ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ನಾಯಕರು, ಹೇಳಿಕೆ ನೀಡುವಾಗ ಕನಿಷ್ಠ ಸಾಮಾನ್ಯ ಜ್ಞಾನ ಬಳಸಬೇಕು. ಕರುನಾಡಿನ ಜನ ಅಷ್ಟು ದಡ್ಡರಲ್ಲ. ಮುಂದಿನ ದಿನಗಳಲ್ಲಾದರೂ ಬಿಜೆಪಿ ಒಂದು ಜವಾಬ್ದಾರಿಯುತ, ಜನಸಾಮಾನ್ಯರ ಬಗ್ಗೆ ಕಾಳಜಿಯುಳ್ಳ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿ.

– ಚನ್ನು ಹಿರೇಮಠ, ರಾಣೆಬೆನ್ನೂರು

ಕುತೂಹಲ ಮತ್ತು ಸಮಾಧಾನ

‘24 ಸಚಿವರ ಪೂರ್ವಾಪರ’ (ಪ್ರ.ವಾ., ಮೇ 28) ನೋಡಿದಾಗ ಗಮನ ಸೆಳೆದದ್ದು ಭಟ್ಕಳದಿಂದ ಎರಡನೇ ಬಾರಿ ಆಯ್ಕೆಯಾಗಿ ಬಂದು, ಸದ್ದುಗದ್ದಲವಿಲ್ಲದೆ ಈ ಬಾರಿ ಸಚಿವ ಸಂಪುಟ ಸೇರಿರುವ ಮಂಕಾಳ ವೈದ್ಯ. ಅವರ ಹೆಸರಿನಷ್ಟೇ ಕುತೂಹಲ ಹುಟ್ಟಿಸಿದ್ದು ಎಂಟನೇ ತರಗತಿವರೆಗಿನ ಓದು. ಅವರಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲದಿರುವುದು. ಸಚಿವ ಸಂಪುಟ ಸೇರಲು ನಾನಾ ಬಗೆಯ ಗದ್ದಲ ಎಬ್ಬಿಸುತ್ತಿರುವವರ ನಡುವೆಯೂ ಇಂಥವರಿದ್ದಾರಲ್ಲ ಎನ್ನುವುದೇ ಸಮಾಧಾನದ ಸಂಗತಿ. 1982ರಲ್ಲಿ ಮಡಿಕೇರಿ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಅಧ್ಯಕ್ಷ ಶಂಬಾ ಜೋಶಿ ಅವರನ್ನು ಸಂದರ್ಶಿಸಿದಾಗ- ‘ಮುಂದೆ ಈ ದೇಶಕ್ಕೆ ಕಲಿತವರೇ ದೊಡ್ಡ ಕುತ್ತು’ ಎಂದು ನುಡಿದಿದ್ದರು. ಅದೆಂಥ ಭವಿಷ್ಯವಾಣಿ!

ಈರಪ್ಪ ಎಂ. ಕಂಬಳಿ, ಬೆಂಗಳೂರು

ಸಮಂಜಸ ನಡೆ ಅಲ್ಲ

ನೀತಿ ಆಯೋಗದ ಸಭೆಗೆ ಹನ್ನೊಂದು ದೊಡ್ಡ ರಾಜ್ಯಗಳ ಮುಖ್ಯಮಂತ್ರಿಗಳ ಗೈರು ಒಂದೆಡೆ, ಪ್ರಜಾಪ್ರಭುತ್ವದ ದೇವಾಲಯವೆಂದು ಹೇಳಲಾಗುವ ನೂತನ ಸಂಸತ್ ಭವನದ ಉದ್ಘಾಟನೆಗೆ ಸುಮಾರು 20 ವಿರೋಧ ಪಕ್ಷಗಳ ಬಹಿಷ್ಕಾರ ಇನ್ನೊಂದೆಡೆ (ಪ್ರ ವಾ. ಮೇ 28). ಈ ಬೆಳವಣಿಗೆಗಳು, ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದ ಭಾಗವಾಗದಿರುವುದು ಯಾವುದೇ ದೃಷ್ಟಿಯಿಂದಲೂ ಸಮಂಜಸವಲ್ಲ.

ರಾಷ್ಟ್ರದ ಹಿತಾಸಕ್ತಿ, ಸದಾಚಾರ, ಸನ್ನಡತೆಗಳಿಗಿಂತ ಸ್ವಪ್ರತಿಷ್ಠೆ, ರಾಜಕೀಯ ದ್ವೇಷಾಸೂಯೆಗಳು ಮೇಲುಗೈ ಪಡೆದರೆ ಆಗುವುದು ಹೀಗೆಯೇ. ಕೆಲವು ದಶಕಗಳಿಂದ ನಮ್ಮ ರಾಜಕೀಯ ರಂಗದಲ್ಲಿ ಮುತ್ಸದ್ದಿತನ, ರಾಜಕೀಯ ಹೃದಯ ವೈಶಾಲ್ಯ, ಉದಾರವಾದಿ ಧೋರಣೆ ಅಪರೂಪವಾಗಿದೆ. ನಮ್ಮಂತಹ ಬೃಹತ್ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಅನ್ನುವುದೇ ಹೊಂದಾಣಿಕೆ ಬಯಸುವ ವ್ಯವಸ್ಥೆ. ಸರ್ಕಾರ ನಡೆಸುವವರು ಸೌಹಾರ್ದದ ಕಾರ್ಯವಿಧಾನವನ್ನು ರೂಢಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ತೇರನ್ನು ಎಳೆಯಬೇಕಾಗುತ್ತದೆ. ವಿರೋಧ ಪಕ್ಷಗಳೂ ಅದಕ್ಕೆ ಸಹಕಾರ ನೀಡಬೇಕಾಗುತ್ತದೆ. ರಾಜಕೀಯ ಮೇಲಾಟವೇ ಮೇಲುಗೈ ಪಡೆಯುತ್ತಾ ಹೋದರೆ ಸಂಸತ್ ಭವನ ಎಷ್ಟು ಭವ್ಯ, ದಿವ್ಯವಾದರೇನು, ಪ್ರಜಾಪ್ರಭುತ್ವದ ಅಡಿಪಾಯ ಶಿಥಿಲಗೊಳ್ಳುತ್ತಾ ಹೋಗುತ್ತದೆ. ಇದನ್ನು ಎಲ್ಲರೂ ಅರಿತು ನಡೆದಾಗಲೇ ರಾಷ್ಟ್ರಕ್ಕೆ ಕ್ಷೇಮ.

– ವೆಂಕಟೇಶ ಮಾಚಕನೂರ, ಧಾರವಾಡ

ಮುಖ್ಯಮಂತ್ರಿಯ ವಿವೇಚನೆಯ ಅರ್ಥವೇನು?

ಮುಖ್ಯಮಂತ್ರಿ ಆಯ್ಕೆಯು ಬಹುಮತ ಹೊಂದಿರುವ ಪಕ್ಷದ ಅಥವಾ ಪಕ್ಷಗಳ ಮೈತ್ರಿಕೂಟದ ಶಾಸಕರ ವಿವೇಚನೆಗೆ ಬಿಟ್ಟದ್ದು, ಮಂತ್ರಿಗಳ ನಿಯೋಜನೆ ಮತ್ತು ಖಾತೆ ಹಂಚುವಿಕೆ ಮುಖ್ಯಮಂತ್ರಿಯ ವಿವೇಚನೆ ಮತ್ತು ಪರಮಾಧಿಕಾರ ಎಂದು ಹೇಳಲಾಗುತ್ತದೆ. ಅದರೆ, ವಾಸ್ತವದಲ್ಲಿ ಇದು ಸಂಬಂಧಪಟ್ಟ ರಾಜಕೀಯ ಪಕ್ಷದ ಹೈಕಮಾಂಡ್‌ ವಿವೇಚನೆಗೆ ಬಿಟ್ಟ ವಿಷಯ ಎಂದು ಇನ್ನೊಮ್ಮೆ ಸಾಬೀತಾಗಿದೆ. ಈ ದಿಸೆಯಲ್ಲಿ ಜನ ತಮ್ಮ ತಿಳಿವಳಿಕೆಯನ್ನು ತಿದ್ದಿಕೊಳ್ಳುವ ಕಾಲ ಬಂದಿದೆ. ಮಂತ್ರಿಗೆ ಯಾವ ಕಚೇರಿ ಕೊಡಬೇಕು, ಎಲ್ಲಿ ಬಂಗಲೆ ನೀಡಬೇಕು, ಯಾವ ಸಿಬ್ಬಂದಿ ನೀಡಬೇಕು ಮತ್ತು ಯಾವ ಕಾರನ್ನು ನೀಡಬೇಕು ಎನ್ನುವುದೂ ಹೈಕಮಾಂಡ್‌ ಹೆಗಲಿಗೆ ವರ್ಗಾವಣೆಯಾದರೆ ಆಶ್ಚರ್ಯವಿಲ್ಲ. ‘ಸರ್ವಂ ಹೈಕಮಾಂಡ್‌ ಮಯಂ’ ಎಂದು ಧಾರಾಳವಾಗಿ ಹೇಳಬಹುದು.

– ರಮಾನಂದ ಶರ್ಮಾ, ಬೆಂಗಳೂರು

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

‘ಯಾವುದೇ ವ್ಯಕ್ತಿ ಅಥವಾ ಸಂಘಟನೆ ಕರ್ನಾಟಕದ ವರ್ಚಸ್ಸಿಗೆ ಧಕ್ಕೆ ತಂದರೆ, ಸಮಾಜದಲ್ಲಿ ಕೋಮುವಿಷ ಬಿತ್ತಿ ಶಾಂತಿ ಕದಡಲು ಪ್ರಯತ್ನಿಸಿದರೆ ಅಂಥವರಿಗೆ ಕಾನೂನು ಹಾಗೂ ಸಂವಿಧಾನದ ಚೌಕಟ್ಟಿನಲ್ಲಿ ಕಡಿವಾಣ ಹಾಕುತ್ತೇವೆ... ಬಜರಂಗದಳ, ಪಿಎಫ್‍ಐ ಅಥವಾ ಯಾವುದೇ ಕೋಮು ಸಂಘಟನೆಗಳು ಮತ್ತು ಜಾತಿ ಸಂಘಟನೆಗಳು ಶಾಂತಿ ಕದಡುವ ಕೆಲಸಕ್ಕೆ ಕೈಹಾಕಿದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ; ನಿಯಮ ಮುರಿದರೆ ಅಂಥ ಸಂಘಟನೆಗಳನ್ನು ನಿಷೇಧಿಸಲೂ ಹಿಂಜರಿಯುವುದಿಲ್ಲ- ಅದು ಆರ್‌ಎಸ್‌ಎಸ್‌ ಆದರೂ ಅಷ್ಟೇ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಈಚೆಗೆ ಹೇಳಿದ್ದಾರೆ. ‘ಶಾಂತಿ ಕದಡಲು ಯತ್ನಿಸಿದರೆ, ಸಮಾಜದ ಸಾಮರಸ್ಯ ಹಾಳುಗೆಡವಿದರೆ... ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಕ್ರಮ...’ ಎಂದು ಹೇಳಿದ್ದರಲ್ಲಿ ತಪ್ಪೇನಿದೆ? ಅವರೇನು, ಏಕಾಏಕಿ ಯಾವುದೇ ಸಂಘಟನೆ ನಿಷೇಧಿಸುವುದಾಗಿ ಹೇಳಿಲ್ಲ.

ಆದರೆ, ಈ ಮಾತು ಬಂದಕೂಡಲೇ ಬಿಜೆಪಿ ಧುರೀಣರಾದ ಸಿ.ಟಿ. ರವಿ, ಆರ್. ಅಶೋಕ, ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ‘ಧೈರ್ಯವಿದ್ದರೆ ಆರ್‌ಎಸ್‌ಎಸ್‌ ನಿಷೇಧಿಸಿ, ನೆಹರೂ ಮತ್ತು ಇಂದಿರಾ ಗಾಂಧಿ ಕೈಯಲ್ಲೇ ಏನೂ ಮಾಡಲಾಗಲಿಲ್ಲ... ಇದರಿಂದ ಕಾಂಗ್ರೆಸ್ ಭಸ್ಮವಾಗಿಬಿಡುತ್ತೆ...’ ಇಂಥ ಬೆದರಿಕೆ ಮಾತುಗಳನ್ನೂ ಕೆಲವರು ಆಡುತ್ತಿದ್ದಾರೆ.

ಏನು ಇವರ ಮಾತಿನ ಅರ್ಥ? ಕಾನೂನು ಮತ್ತು ಸಂವಿಧಾನಕ್ಕೆ ಅತೀತವಾದ ಸಂಘಟನೆಯೇ ಆರ್‌ಎಸ್‌ಎಸ್‌? ಅಥವಾ ಕೋಮುವಿಷ ಬಿತ್ತುವುದು, ಶಾಂತಿ ಸಾಮರಸ್ಯ ಕದಡುವುದು ಇವರ ಆಜನ್ಮಸಿದ್ಧ ಹಕ್ಕು ಎಂದೇ? ಇವರಿಗೆ ನಿಜಕ್ಕೂ ಲಜ್ಜೆ ಇದ್ದಿದ್ದರೆ ‘ನಾವು ಕೂಡ ಈ ದೇಶದ ಪ್ರಜೆಗಳು; ಎಂದಿಗೂ ಸಮಾಜದ ಶಾಂತಿ ಕದಡುವ ಕೆಲಸ ಮಾಡುವುದಿಲ್ಲ. ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ’ ಅನ್ನಬೇಕಿತ್ತು. ಈಗ ಈ ನೆಲದಲ್ಲಿ ಕಾನೂನು ಮತ್ತು ಸಂವಿಧಾನಕ್ಕೆ ಬೆಲೆ ಹೆಚ್ಚೋ ಅಥವಾ ಇಂಥ ರಾಜಾರೋಷಾದ ಗೂಂಡಾಗಿರಿಗೋ ಎಂಬುದನ್ನು ತೋರಿಸುವ ಹೊಣೆ ಸರ್ಕಾರದ್ದು.

– ಎನ್.ಎಸ್. ಶಂಕರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT