ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೈರಪ್ಪನವರು ಯೋಚಿಸಬೇಕು

Last Updated 12 ಜನವರಿ 2020, 17:30 IST
ಅಕ್ಷರ ಗಾತ್ರ

ಹಿರಿಯ ಲೇಖಕರಾದ ಎಸ್.ಎಲ್. ಭೈರಪ್ಪನವರು, ಬ್ರಿಟಿಷರು ಮತ್ತು ಕಾಂಗ್ರೆಸ್ಸಿನವರಂತೆಯೇ ಬಿಜೆಪಿಯವರೂ ಮುಸ್ಲಿಮರನ್ನು ಓಲೈಸತೊಡಗಿದ್ದಾರೆಂದು ವಿಷಾದಿಸಿದ್ದಾರೆ (ಪ್ರ.ವಾ., ಜ. 11). ಬಹುಶಃ ಅವರಿಗೆ, ಭಾರತದಪ್ರಜೆಗಳಾಗಿರುವ ಮುಸ್ಲಿಮರಿಗೆ ಪೌರತ್ವ (ತಿದ್ದುಪಡಿ) ಕಾಯ್ದೆಯಿಂದಾಗಿ ಏನೂ ತೊಂದರೆಯಾಗದು ಎಂದು ಬಿಜೆಪಿ ಸ್ಪಷ್ಟಪಡಿಸುತ್ತಿರುವುದೇ ಓಲೈಕೆಯಾಗಿ ಕಂಡಿದೆ. ಸರ್ಕಾರವೊಂದು ಗೊಂದಲದ ಸಂದರ್ಭದಲ್ಲಿ ತನ್ನ ಒಂದು ಪ್ರಜಾವರ್ಗಕ್ಕೆ ಸ್ಪಷ್ಟನೆ ನೀಡುವುದೂ ಭೈರಪ್ಪನವರ ಪ್ರಕಾರ ಓಲೈಕೆ! ಇದು, ಪ್ರಜಾಪ್ರಭುತ್ವದ ವಿಧಾನಗಳಲ್ಲಿ ಇವರಿಗೆ ಇರುವ ಬದ್ಧತೆ. ಮುಂದುವರಿದ ಅವರು, ತಾವು ಭಾರತ ಬಿಟ್ಟು ಹೋದರೆ ಹಿಂದೂಗಳು ಮುಸ್ಲಿಮರನ್ನು ತುಳಿಯುವರು ಎಂದು ಬ್ರಿಟಿಷರು ಹೇಳುತ್ತಿದ್ದರೆಂದೂ, ಅದಕ್ಕೆ ತಕ್ಕಂತೆ ಮುಸ್ಲಿಮರೂ ಬ್ರಿಟಿಷರನ್ನು ಭಾರತ ಬಿಟ್ಟು ಹೋಗದಂತೆ ಬೇಡಿಕೊಂಡರೆಂದೂ ಹೇಳಿದ್ದಾರೆ. ಈ ಮಾತುಗಳನ್ನು ಭೈರಪ್ಪನವರು ಯಾವ ಚರಿತ್ರೆಯ ಪುಸ್ತಕದಿಂದ ಹೆಕ್ಕಿ ಹೇಳುತ್ತಿದ್ದಾರೋ ತಿಳಿಯದಾಗಿದೆ.

ಹಾಗೆ ನೋಡಿದರೆ, ಸ್ವಾತಂತ್ರ್ಯ ಹೋರಾಟವನ್ನು ನೇರವಾಗಿ ವಿರೋಧಿಸಿದವರೆಂದರೆ ಹಿಂದೂ ಮಹಾಸಭಾದವರು. ‘ಭಾರತ ಬಿಟ್ಟು ತೊಲಗಿ’ ಚಳವಳಿಗೆ ಬೆಂಬಲ ನೀಡಬಾರದೆಂದೂ ಬದಲಿಗೆ ಬ್ರಿಟಿಷ್
ಪ್ರಭುತ್ವದೊಂದಿಗೆ ಸಹಕರಿಸಬೇಕೆಂದೂ ‘ಹಿಂದೂ’ಗಳಿಗೆ ಕರೆ ಕೊಟ್ಟವರು ಅದರ ಅಧ್ಯಕ್ಷರಾಗಿದ್ದ ಸಾವರ್ಕರ್ ಅವರು. ಇದು, ಅವರು ಸೆರೆಮನೆಯಿಂದ ಬಿಡುಗಡೆಗೊಳ್ಳಲು ಬ್ರಿಟಿಷ್ ಪ್ರಭುತ್ವಕ್ಕೆ ಬರೆದುಕೊಟ್ಟಿದ್ದ ಕ್ಷಮಾಪಣಾ ಪತ್ರದ ಪಾಲನೆಯೇ ಆಗಿತ್ತು. ಇದಷ್ಟೇ ಅಲ್ಲ, ಎರಡನೇ ಮಹಾಯುದ್ಧದ ಸಂಬಂಧವಾಗಿ ಬ್ರಿಟಿಷ್ಪ್ರಭುತ್ವದೊಂದಿಗೆ ಭಿನ್ನಮತ ತಾಳಿ, ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದ ಎಲ್ಲ ಪ್ರಾಂತೀಯ ಸರ್ಕಾರಗಳಿಗೆ ರಾಜೀನಾಮೆ ನೀಡಿದಾಗ ಹಿಂದೂ ಮಹಾಸಭಾ ಮೂರು ಪ್ರಾಂತ್ಯಗಳಲ್ಲಿ ಮುಸ್ಲಿಂ ಲೀಗ್ ಜೊತೆ ಸೇರಿ ಬದಲಿ ಸರ್ಕಾರಗಳನ್ನು ರಚಿಸಿತಲ್ಲದೆ, ಸಿಂಧ್ ವಿಧಾನಸಭೆಯು ಸ್ವತಂತ್ರ ಪಾಕಿಸ್ತಾನಕ್ಕೆ ಆಗ್ರಹಿಸಿ ನಿರ್ಣಯ ಅನುಮೋದಿಸಿದ ನಂತರವೂ ಅದರ ಸಚಿವರು ಆ ಸರ್ಕಾರದಿಂದ ಹೊರಬರಲಿಲ್ಲ.

ಇನ್ನು ಭೈರಪ್ಪನವರು ಜೆಎನ್‍ಯು ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಮಾತನಾಡುತ್ತಾ, ವಿದ್ಯಾರ್ಥಿಗಳು
ಪ್ರಯೋಗಾಲಯದಲ್ಲಿ ಉಪಕರಣಗಳಿಲ್ಲ, ಗ್ರಂಥಾಲಯದಲ್ಲಿ ಪುಸ್ತಕಗಳಿಲ್ಲ ಎಂದು ಪ್ರತಿಭಟಿಸಬೇಕೇ ಹೊರತು ರಾಜಕೀಯ ವಿಷಯಗಳತ್ತ ಗಮನ ಹರಿಸಬಾರದೆಂಬ ಅರ್ಥದ ಮಾತುಗಳನ್ನಾಡಿದ್ದಾರೆ. ಜೆಎನ್‍ಯು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವುದು ವಿವಿಧ ಶುಲ್ಕಗಳ ಏರಿಕೆಗೆ ಸಂಬಂಧಿಸಿದಂತಹ ಶೈಕ್ಷಣಿಕ ವಿಷಯಗಳ ಬಗ್ಗೆಯೇ ಎಂದು ತಿಳಿಸುತ್ತಾ, ಲೇಖಕರಾದ ಭೈರಪ್ಪನವರು ಬರೆಯಲು ಹಾಳೆಯಿಲ್ಲ, ಲೇಖನಿಗಳು ದೊರಕುತ್ತಿಲ್ಲ ಎಂದು ದೂರಬಹುದೇ ಹೊರತು ರಾಜಕಾರಣದ ಬಗ್ಗೆ ಮಾತಾಡಬಾರದು ಎಂದು ಯಾರಾದರೂ ಹೇಳಿದರೆ ಹೇಗೆ? ಅವರು ಯೋಚಿಸಬೇಕು.

ಡಿ.ಎಸ್.ನಾಗಭೂಷಣ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT