ಗುರುವಾರ , ಅಕ್ಟೋಬರ್ 21, 2021
22 °C

ವಾಚಕರ ವಾಣಿ: ವಾಸ್ತವದ ನೆಲೆಗಟ್ಟಿನ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿಧಾನಸಭೆ ಚುನಾವಣೆ ಗೆಲ್ಲಲು ಕೇವಲ ಮೋದಿ ಅಲೆಯೊಂದೇ ಸಾಲದು’ ಎಂಬ ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆ (ಪ್ರ.ವಾ., ಸೆ. 20), ಪಕ್ಷದ ಆಂತರಿಕ ವಿಚಾರವನ್ನು ಪರಿಗಣಿಸಿ ಹೇಳುವುದಾದರೆ ಅತ್ಯಂತ ಧೈರ್ಯದ ಮಾತು. ಅವರ ಅಭಿಪ್ರಾಯವು ಕಟುಸತ್ಯವನ್ನು ವಿವರಿಸುವ ಮೂಲಕ ಚರ್ಚೆಗೆ ಗ್ರಾಸ ಒದಗಿಸಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಕುರ್ಚಿಯಿಂದ ಇಳಿದ ನಂತರದ ಯಡಿಯೂರಪ್ಪ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ನೆಲೆಗಟ್ಟಿನ ಸಿದ್ಧಾಂತದಲ್ಲಿಯೇ ಯಾವುದೇ ರಾಜಕೀಯ ಪಕ್ಷ ಬೆಳೆಯುವುದಿಲ್ಲ ಎಂಬುದನ್ನು ಒಪ್ಪಲೇಬೇಕಾಗಿದೆ. ಘಟಾನುಘಟಿ ನಾಯಕರಿದ್ದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಟುಂಬದ ಪರಿಧಿಯನ್ನು ದಾಟಿ ಯೋಚಿಸುವ ಶಕ್ತಿ ಕುಂದಿಸಿಕೊಂಡಿರುವ ಕಾಂಗ್ರೆಸ್‌ಗೆ ಎರಡು ವರ್ಷಗಳಾದರೂ ಪೂರ್ಣಾವಧಿ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನರೇಂದ್ರ ಮೋದಿಯವರನ್ನೇ ಮುಂದಿಟ್ಟುಕೊಂಡು ಎಲ್ಲಿಯವರೆಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂಬ ವಿಚಾರದಲ್ಲಿ ಯಡಿಯೂರಪ್ಪ ಹೇಳಿದ್ದು ಸರಿಯಾಗಿಯೇ ಇದೆ. ವ್ಯಕ್ತಿ ಅಥವಾ ಕುಟುಂಬದ ಜನಪ್ರಿಯತೆ ಕೆಲ ವರ್ಷಗಳವರೆಗೆ ಅನುಕೂಲಕರವಾಗಬಹುದು. ಆದರೆ ಅದೇ ಪರಂಪರೆ ಮುಂದುವರಿಸುವುದು ಎಷ್ಟರಮಟ್ಟಿಗೆ ಸರಿ?

ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ದಿಸೆಯಲ್ಲಿ ಸದೃಢ ಆಡಳಿತ ಮತ್ತು ವಿರೋಧ ಪಕ್ಷಗಳ ಅಗತ್ಯವಿದೆ ಎನ್ನುವುದಾದರೆ, ಸಾಮೂಹಿಕ ನಾಯಕತ್ವದಲ್ಲಿ ರಾಜಕೀಯ ಪಕ್ಷಗಳು ಬೆಳೆಯಬೇಕು. ಇಂಥ ಸಂಗತಿಯಿಂದಲೇ ಹಿಂದೆ ರಾಜ್ಯದಲ್ಲಿ 80- 90ರ ದಶಕದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ರಾಜಕೀಯ ಪಕ್ಷಗಳಿಗೆ ವ್ಯಕ್ತಿ ಅಥವಾ ಕುಟುಂಬದ ಅವಲಂಬನೆ ಎಲ್ಲಿವರೆಗೆ? ಅವರು ಇಲ್ಲವೆಂದರೆ ಮುಂದೇನು ಎಂಬುದರತ್ತ ಆಲೋಚನೆ ಮಾಡುವ ಕಾಲ ಸನ್ನಿಹಿತವಾಗಿದೆ.
-ನಾರಾಯಣರಾವ ಕುಲಕರ್ಣಿ, ಹಿರೇಅರಳಿಹಳ್ಳಿ, ಯಲಬುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.