ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕಗಳಿಗೆ ‘ಸಮಾಧಿ’ ಬೇಡ!

Last Updated 24 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಪುರಾತತ್ವ ಇಲಾಖೆಯವರು ಹಂಪಿಯ ಸ್ಮಾರಕಗಳ ಸುತ್ತ ಕಾಂಕ್ರೀಟ್ ಕಾಂಪೌಂಡುಗಳನ್ನು ಎಬ್ಬಿಸುತ್ತಿರುವುದು ನೋಡಿ ನನಗೆ ಗಾಬರಿಯಾಗಿದೆ. ಅವು ರಕ್ಷಣಾ ಗೋಡೆಗಳಲ್ಲ, ಸ್ಮಾರಕಗಳಿಗೆ ಕಟ್ಟುತ್ತಿರುವ ಸಮಾಧಿಗಳು! ಅಷ್ಟೇ ಅಲ್ಲ, ಕೃಷ್ಣ ದೇವಾಲಯದ ಹಿಂಭಾಗದಲ್ಲಿ ಹಾಗೂ ಬ್ಯಾಟರಿಚಾಲಿತ ವಾಹನ ನಿಲ್ದಾಣದ ಬಳಿಯಲ್ಲಿಯೂ ಆಧುನಿಕ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲಿ ಯಾವ ಉದ್ದೇಶವಿದೆಯೋ ಕಾಣೆ. ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ‘ಘನ ಉದ್ದೇಶ’ ಇರಬಹುದು! ಕೋಟೆಯ ಗೋಡೆಗಳಿಗಿಂತ ದಪ್ಪವಾಗಿರುವ ಕಾಂಕ್ರೀಟ್ ಕಾಂಪೌಂಡ್‌ಗಳನ್ನು, ಕಟ್ಟಡಗಳನ್ನು ಕಟ್ಟಿಸುತ್ತಿರುವುದು ಅತ್ಯಂತ ಅವೈಜ್ಞಾನಿಕ ಎಂಬುದು ಜನಸಾಮಾನ್ಯರಿಗೂ ತಿಳಿಯುತ್ತದೆ. ಇಲಾಖೆಗೆ ತಿಳಿಯುತ್ತಿಲ್ಲವೇ?

ಇದರಿಂದಾಗಿ ಸ್ಥಳದ ಐತಿಹಾಸಿಕತೆಗೆ, ಐತಿಹಾಸಿಕ ನೋಟಕ್ಕೆ ಧಕ್ಕೆಯಾಗುತ್ತಿದೆ. ಅಲ್ಲಿ, ಯಾವುದೇ ಆಧುನಿಕ ನಿರ್ಮಾಣಕ್ಕೆ ಅವಕಾಶ ಸರ್ವಥಾ ಕೂಡದು. ಬ್ಯಾರಿಕೇಡ್‌ಗಳನ್ನು ನಿರ್ಮಿಸುವುದಾದಲ್ಲಿ ಅವು ತಾತ್ಕಾಲಿಕವಷ್ಟೇ ಆಗಿರಬೇಕು. ಸಾಧ್ಯವಾದಷ್ಟು ಪಾರದರ್ಶಕವಾಗಿರುವ ಗಾಜಿನ ಗೋಡೆಗಳನ್ನು ನಿಲ್ಲಿಸಬಹುದು. ‘ಬ್ಯಾರಿಕೇಡ್ + ಕಾವಲುಗಾರರು’ ಇದ್ದಲ್ಲಿ, ಅವನ್ನು ದಾಟಿ ಪ್ರವಾಸಿಗರು ಅತಿಕ್ರಮಿಸಲಾರರು. ಪ್ರವಾಸಿಗರು ಅಂದರೆ ಉಗ್ರಗಾಮಿಗಳು ಎಂದು ಇಲಾಖೆ ಭಾವಿಸುತ್ತಿದೆಯೇ?

ಹಂಪಿಯಲ್ಲಿ ನಡೆಯುತ್ತಿರುವ ಇಂತಹ ಹೊಸ ಬಗೆಯ ಕಾಮಗಾರಿಗಳನ್ನು ಗಮನಿಸಿದಲ್ಲಿ, ಹಂಪಿಯ ಉಸ್ತುವಾರಿಯನ್ನು ಪುರಾತತ್ವ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆಯೇ ಎಂಬ ಅನುಮಾನ ಬರುತ್ತಿದೆ. ಹಂಪಿಯನ್ನು ಪುರಾತತ್ವ ಇಲಾಖೆಯಿಂದ ಸಂರಕ್ಷಿಸಬೇಕಾದ ಕಾಲ ಬಂದಿದೆ. ಸ್ಮಾರಕಗಳ ರಕ್ಷಣೆಗೆ ಸುಧಾರಿತ, ಸುಸ್ಥಿರ ಕ್ರಮಗಳ ಬಗ್ಗೆ ಇಲಾಖೆ ಹಾಗೂ ತಜ್ಞರು ಯೋಚಿಸಿ ಕ್ರಮ ಕೈಗೊಳ್ಳಲಿ.

-ಡಾ. ಎಸ್.ಎಂ.ಶಶಿಧರ್,ಹೊಸಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT