ರಾಜಕೀಯ?! (ಕವನ)
ಬಲ್ಲವರು ಹೇಳುತ್ತಾರೆ
ರಾಜಕೀಯ ಎಂಬುದು
ಚದುರಂಗದಾಟ, ಶರದ್ ಪವಾರ್ ನುಡಿಯುತ್ತಾರೆ
ಅದೊಂದು ಥರ ಕ್ರಿಕೆಟ್ ಕೂಟ, ಅಲ್ಲಿಯೂ ಇಲ್ಲಿಯೂ ಎರಡರಲ್ಲೂ
ಉಂಟು ಬೌನ್ಸರ್, ಬೌಂಡರಿ, ಸಿಕ್ಸರ್
ಗೂಗ್ಲಿ, ಜಂಗ್ಲಿ ಹೂಟ.
-ಕೆ.ಬಸವನಗೌಡ, ಹಗರಿಬೊಮ್ಮನಹಳ್ಳಿ
ಪ್ರಕೃತಿಯ ಪಾಠಶಾಲೆಗೂ ಮಕ್ಕಳನ್ನು ಕರೆದೊಯ್ಯೋಣ
ಬೆಂಗಳೂರಿನ 8 ವರ್ಷದ ಬಾಲಕಿ ಆದ್ಯಾ ಬೆಣ್ಣೂರ್, ಆಫ್ರಿಕಾದ ಅತ್ಯಂತ ಎತ್ತರದ ಶಿಖರ ಕಿಲಿಮಂಜಾರೊವನ್ನು ಏರಿದ ಸುದ್ದಿಯನ್ನು (ಪ್ರ.ವಾ., ಜುಲೈ 8) ಓದಿ ರೋಮಾಂಚಿತಳಾಗಿ, ಮಗು ಆದ್ಯಾಳನ್ನು, ಅವಳ ತಂದೆ ಹರ್ಷ ಬೆಣ್ಣೂರ್ ಅವರನ್ನು ಅಭಿನಂದಿಸ ಬಯಸಿದೆ. ಪ್ರಕೃತಿಯ ಪಾಠಶಾಲೆಗೂ ನಮ್ಮ ಮಕ್ಕಳನ್ನು ಕರೆದೊಯ್ದು ಪಡೆಯುವ ಅನುಭವಗಳ ಮೂಲಕ ಅದರ ಭವ್ಯತೆಯನ್ನು, ಅದರ ದಿವ್ಯ ಸೌಂದರ್ಯ ದರ್ಶನವನ್ನು ಮಾಡಿಸುವಂಥ ಪಾಲಕರು ನಮ್ಮ ಸಮಾಜದಲ್ಲಿ ಇದ್ದರೆ ಅವರ ಬಗೆಗೆ ನನಗೆ ಅಪಾರ ಮೆಚ್ಚುಗೆ ಇದೆ. ಹೆಚ್ಚೆಚ್ಚು ಅಂಕಗಳನ್ನು ಪಡೆಯಬೇಕೆಂಬ ಆಸೆಯ ಹುಚ್ಚು ಕುದುರೆಯನ್ನೇರಿ, ಮುಚ್ಚಿದ ಕೋಣೆಗಳಲ್ಲಿ ಮಕ್ಕಳನ್ನು ಬಂಧಿಸಿಟ್ಟು, ಅವರು ಮುಂದೆ ಡಾಕ್ಟರೋ ಎಂಜಿನಿಯರೋ ಚಾರ್ಟರ್ಡ್ ಅಕೌಂಟೆಂಟೋ ಆಗಿ ರಾಶಿ ರಾಶಿ ದುಡ್ಡು ತರುವ ಉದ್ಯೋಗಿಗಳಾಗಬೇಕೆಂಬ ಆಶಯಕ್ಕಾಗಿ ತಮ್ಮ ತನು-ಮನ-ಧನ ಅರ್ಪಿಸುತ್ತ ಹೋರಾಡುವ ಮಾತಾಪಿತರಿಂದ ತುಂಬಿದೆ ನಮ್ಮ ಈ ಸಮಾಜ. ಇಂತಲ್ಲಿ ಪರ್ವತಾರೋಹಿಗಳು, ಈಜುಪಟುಗಳು, ಚಿತ್ರಕಲಾವಿದರು, ಸಾಹಿತ್ಯ, ಸಂಗೀತ, ಕಲಾನಿಪುಣರನ್ನು ರೂಪಿಸುವ ಪಾಲಕರು, ಗುರುಗಳನ್ನು ಕಾಣುವ ಕುತೂಹಲ ನನಗಿದೆ.
ಪುಸ್ತಕೀಯ ಜ್ಞಾನಕ್ಕಿಂತ ಹೊರ ಜಗತ್ತಿನಲ್ಲಿ ನಡೆದು ಪಡೆದ ಸ್ವಾನುಭವದ ಜ್ಞಾನ ಹೆಚ್ಚು ಆಪ್ತವಾಗುತ್ತದೆ ಮತ್ತು ಗಾಢವಾದ ಆನಂದವನ್ನು ನೀಡುತ್ತದೆ. ಈ ಸತ್ಯವನ್ನು ನಮ್ಮ ಪಾಲಕರು ಅರಿಯಬೇಕಾಗಿದೆ. ನಮ್ಮ ಶಿಕ್ಷಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಭವಿಷ್ಯದ ದಿನಗಳಲ್ಲಿ ನಮ್ಮ ತರುಣ ಜನಾಂಗವು ಸಾಹಸಿಗಳದ್ದಾಗಬೇಕಿದ್ದರೆ, ಆತ್ಮವಿಶ್ವಾಸ ಉಳ್ಳವರಾಗಬೇಕಿದ್ದರೆ, ಆತ್ಮನಿರ್ಭರರಾಗಬೇಕಿದ್ದರೆ ಪುಸ್ತಕೀಯ ಜ್ಞಾನದಾಚೆಗೆ ಇರುವ ನಿಸರ್ಗದಲ್ಲಿ ತುಂಬಿಕೊಂಡಿರುವ ಅಗಾಧ ಜ್ಞಾನ, ಸೌಂದರ್ಯ ಮತ್ತು ಆನಂದಾನುಭೂತಿಯತ್ತ ನಡೆಯುವ ಪ್ರಯತ್ನಗಳು ಆಗಲಿ.
-ಮಾಲತಿ ಪಟ್ಟಣಶೆಟ್ಟಿ, ಧಾರವಾಡ
ನೀರಾಗೆ ಸಿಗಲಿ ಅವಕಾಶ
ಕೊಬ್ಬರಿಯ ಬೆಲೆ ಕುಸಿತದ ಕಾರಣದಿಂದ ಸರ್ಕಾರವು ‘ನೀರಾ’ವನ್ನು ಉತ್ಪಾದಿಸಲು ಅವಕಾಶ ಕೊಟ್ಟು ರೈತರಿಗೆ ಸಹಕರಿಸಬೇಕು. ನೀರಾ ಉತ್ಪಾದಿಸಲು ಇರುವ ನಿಯಮಾವಳಿ ಬದಲಾಯಿಸಿ, ಉತ್ಪಾದನೆಯನ್ನು ಉತ್ತೇಜಿಸುವುದರ ಜೊತೆಗೆ ಶೀತಲೀಕರಣ, ಸಂಗ್ರಹ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ ನೀರಾಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕು.
-ಕರಿಯಪ್ಪ ಆರ್., ಕಲ್ಲಹಳ್ಳಿ, ತುಮಕೂರು
ಶಿಕ್ಷಕರೇಕೆ ದಾನಿಗಳ ಬಳಿ ಹೋಗಬೇಕು?
‘ದಾನಿಗಳ ಕೊರತೆ ಇಲ್ಲ, ಆದರೆ...’ ಎನ್ನುವ ಪತ್ರದಲ್ಲಿ (ವಾ.ವಾ., ಜುಲೈ 12), ‘ಶಿಕ್ಷಕರು ಗಾಣದೆತ್ತಿನ ಹಾಗೆ ಇರಬಾರದು, ಸಂಕೋಚ ಬಿಟ್ಟು, ದಾನಿಗಳನ್ನು ವಿನಂತಿಸಿಕೊಳ್ಳಬೇಕು, ಆಗ ಶಾಲೆಗೆ ಸೌಲಭ್ಯಗಳು ಸಿಗುತ್ತವೆ’ ಎಂದು ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ ಅವರು ಬರೆದಿದ್ದಾರೆ. ಶಿಕ್ಷಕರು ಯಾಕೆ ಸೌಲಭ್ಯ ಕೇಳಬೇಕು, ವಿನಂತಿಸಿಕೊಳ್ಳಬೇಕು? ಒಂದು ವೇಳೆ ಶಿಕ್ಷಕರೇ ಖುದ್ದಾಗಿ ದಾನಿಗಳ ಹತ್ತಿರ ಹೋಗಿ ವಿನಂತಿಸಿಕೊಂಡರು ಎಂದುಕೊಳ್ಳೋಣ. ದೇಣಿಗೆ ನೀಡಿದ ದಾನಿಗಳು ಅವರ ತಂದೆ, ತಾಯಿ, ಅಥವಾ ಸಂಬಂಧಿಗಳ ಫೋಟೊವನ್ನು ಶಾಲೆಯಲ್ಲಿ ಹಾಕಲು ಅಥವಾ ಹೆಸರನ್ನು ಇಡಲು ಹೇಳುತ್ತಾರೆ. ಇಂತಹ ಫೋಟೊಗಳು, ಹೆಸರುಗಳು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಇದರ ಬದಲಿಗೆ ಶಿಕ್ಷಕರು ಶಾಲೆಗೆ ಬೇಕಾಗಿರುವ ಸೌಲಭ್ಯಗಳ ಬಗ್ಗೆ ಎಸ್‌ಡಿಎಂಸಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಹೆಚ್ಚಾಗಿ ಶಾಲೆಗೆ ಹಳೆ ವಿದ್ಯಾರ್ಥಿಗಳು, ದಾನಿಗಳು ದೇಣಿಗೆ ನೀಡಲು ಸರ್ಕಾರ ‘ನನ್ನ ಶಾಲೆ ನನ್ನ ಕೊಡುಗೆ ಪೋರ್ಟಲ್’ ಆರಂಭಿಸಿದೆ. ಎಲ್ಲರೂ ಇಲ್ಲಿಯೂ ದೇಣಿಗೆ ನೀಡಬಹುದು.
-ಬಸನಗೌಡ ಮಂಜುನಾಥಗೌಡ ಪಾಟೀಲ, ಯರಗುಪ್ಪಿ
ದೃಶ್ಯಾವಳಿ ಅದೇ, ಪಾತ್ರ ಅದಲು ಬದಲು
ರಾಜಕೀಯ ಪಕ್ಷಗಳಲ್ಲಿ ಒಂದು ಸಾಮ್ಯ ಇದೆ. ವಿರೋಧ ಪಕ್ಷದಲ್ಲಿ ಇದ್ದಾಗ ಯಾವುದೇ ಅಹಿತಕರ ಹಿಂಸಾತ್ಮಕ ಪ್ರಕರಣಗಳು ನಡೆದರೆ ತಕ್ಷಣ ಸಿಬಿಐ ತನಿಖೆಗೆ ಒತ್ತಾಯಿಸುತ್ತವೆ. ಅಡಳಿತ ಪಕ್ಷದಲ್ಲಿ ಇದ್ದಾಗ ‘ನಮ್ಮ ಪೊಲೀಸರು ಸಮರ್ಥರಾಗಿದ್ದು, ಸಿಬಿಐ ತನಿಖೆಯ ಅವಶ್ಯಕತೆ ಇಲ್ಲ’ ಎಂದು ಹೇಳುತ್ತವೆ. ಸದನದಲ್ಲಿ ಸಿಬಿಐ ತನಿಖೆಗಾಗಿ ಒತ್ತಾಯಿಸಲಾದ ಯಾವುದೇ ಚರ್ಚೆಯಲ್ಲಿ ಇದು ಎದ್ದು ಕಾಣುತ್ತದೆ.
ಜೈನ ಮುನಿಗಳ ಹತ್ಯೆ ಪ್ರಕರಣದಲ್ಲಿ ವಿರೋಧ ಪಕ್ಷಗಳು ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದು ಮತ್ತು ಸರ್ಕಾರ ಅದನ್ನು ನಿರಾಕರಿಸುತ್ತಾ, ‘ನಮ್ಮ ಪೊಲೀಸರೇ ತನಿಖೆ ನಡೆಸುತ್ತಾರೆ’ ಎಂದು ಹೇಳುತ್ತಿರುವುದು ಈ ಟ್ರೆಂಡ್‌ಗೆ ಇನ್ನೊಂದು ಉದಾಹರಣೆ. ಸಿಬಿಐ ತನಿಖೆ ಕೋರಿಕೆಯ ದಿಸೆಯಲ್ಲಿ ದೃಶ್ಯಾವಳಿ ಅದೇ ಇರುತ್ತದೆ, ಪಾತ್ರಗಳು ಮಾತ್ರ ಅದಲು ಬದಲು ಅಗುತ್ತವೆ.
-ರಮಾನಂದ ಶರ್ಮಾ, ಬೆಂಗಳೂರು
ವಿಶೇಷ ಸ್ಥಾನಮಾನ ರದ್ದತಿ: ವಿಚಾರಣೆ ಸ್ವಾಗತಾರ್ಹ
ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ಕೊನೆಗೂ ನಿರಂತರ ವಿಚಾರಣೆ ನಡೆಸಲು ತೀರ್ಮಾನಿಸಿರುವುದು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವವರಿಗೆಲ್ಲ ಒಂದು ಆಶಾದಾಯಕ ಬೆಳವಣಿಗೆ. ಇದಕ್ಕೆ ತುಸು ಮುನ್ನ ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ 2018- 23ರ ಅವಧಿಯ ‘ಪ್ರಗತಿ’ ಪ್ರಮಾಣಪತ್ರ ಕುರಿತು ‘ಅದು ಮೊಕದ್ದಮೆಯ ಮೇಲೆ ಪರಿಣಾಮ ಬೀರದು, ಅದನ್ನು ಅವಲಂಬಿಸಲಾಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ನಿಲುವು ತಳೆದಿರುವುದೂ ಸೂಕ್ತವಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್‌ನಲ್ಲಿ ತೆಗೆದುಹಾಕಿದಾಗ ಅಲ್ಲಿ ಚುನಾಯಿತ ಸರ್ಕಾರ ಇರಲಿಲ್ಲ, 2018ರ ಡಿಸೆಂಬರ್‌ನಲ್ಲೇ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿತ್ತು. ಒಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶ ಮಾಡಿದ್ದು ಗಾಯದ ಮೇಲೆ ಬರೆ ಎಳೆದಂತಾಯಿತು. ಲಡಾಕ್‌ಗೂ ವಿಶೇಷ ಅನುಕೂಲ ಆಗಲಿಲ್ಲ. ಇದಕ್ಕೆ ಈಗ ಹೇಳಿರುವ ಕಾರಣಗಳನ್ನು ‘ನಂತರದ ಚಿಂತನೆ’ ಎನ್ನಬಹುದಷ್ಟೆ. ಇದರ ಜತೆಗೆ ಪೋಸ್ಟ್ ಟ್ರೂಥ್ ಪಾಲಿಟಿಕ್ಸ್ ಕೂಡ ಇದೆ. ‘ನ್ಯಾಯದಾನದಲ್ಲಿ ತಡ ಆದರೆ ನ್ಯಾಯವನ್ನು ನಿರಾಕರಿಸಿದಂತೆ’ ಎಂಬ ಮಾತಿದೆ. ಈ ವಿಷಯದಲ್ಲಿ ತಡವಂತೂ ಆಗಿಬಿಟ್ಟಿದೆ, ಪರಿಣಾಮ- ಅಲ್ಲಿ ರಾಜ್ಯ ಮಟ್ಟದ ಚುನಾವಣೆಗಳೇ ನಡೆದಿಲ್ಲ, ಗೃಹ ಸಚಿವರು ಹಾಗೂ ಲೆಫ್ಟಿನೆಂಟ್ ಗವರ್ನರ್‌ಗಳೇ ಕಾರುಬಾರು ನಡೆಸಿದ್ದಾರೆ. ಈಗ ಈ ವಿಚಾರಣೆ ಮುಗಿಯುವವರೆಗಾದರೂ ಬಿಜೆಪಿ ಮತ್ತು ಅದರ ನೇತೃತ್ವದ ಸರ್ಕಾರದಲ್ಲಿ ಇರುವವರು ‘ವಿಧಿ 370, 35A ರದ್ದು ಮಾಡಿ ದೇಶವನ್ನು ಒಂದುಗೂಡಿಸಿದೆವು’ ಎಂದು ಎಲ್ಲೆಡೆ ಹೇಳಿಕೊಳ್ಳಬಾರದು (ನಡ್ಡಾ ಅವರು ಇದನ್ನು ಒಂದು ಸಾಧನೆ ಎಂದು ಹಲವೆಡೆ ಬಣ್ಣಿಸಿದ್ದಾರೆ). ಈಗ ವ್ಯಾಜ್ಯದಲ್ಲಿ ಹೊಸಬರು ಸೇರುವಂತಿಲ್ಲ. ಜಮ್ಮು ಕಾಶ್ಮೀರದ ಆಗಿನ ಸ್ಥಿತಿ ಹಾಗೂ ತಮ್ಮ ಅಜೆಂಡಾ ಹೇರಲು ಅನುಸರಿಸಿದ ತಂತ್ರ, ಕ್ರಮಗಳ ಬಗೆಗೆ ವಾಸ್ತವ ಮಾಹಿತಿ ಇರುವವರು ದಾವೆದಾರರಿಗೆ ದಗಿಸಬಹುದಾಗಿದೆ.
-ಎಚ್.ಎಸ್.ಮಂಜುನಾಥ, ಗೌರಿಬಿದನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.