ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಮಾರ್ಕ್ಸ್‌ ವಿರುದ್ಧ ದುರುದ್ದೇಶಪೂರಿತ ಹೇಳಿಕೆ

Last Updated 27 ನವೆಂಬರ್ 2019, 5:07 IST
ಅಕ್ಷರ ಗಾತ್ರ

ಆರ್ಥಿಕ ತಜ್ಞ ಎಸ್. ಗುರುಮೂರ್ತಿಯವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ಎಲ್ಲ ಮಹಿಳೆಯರು ಎಲ್ಲರಿಗೂ ದೊರೆಯುವಂತಾಗಬೇಕು ಮತ್ತು ಅವರೆಲ್ಲರೂ ವೇಶ್ಯೆಯರಾಗಬೇಕು ಎಂದು ಕಾರ್ಲ್‌ಮಾರ್ಕ್ಸ್‌ ಪ್ರತಿಪಾದಿ ಸಿದ್ದರು’ ಎಂಬ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಇದು, ಒಂದೋ ಅವರ ಅಜ್ಞಾನದ ಪ್ರದರ್ಶನ ಅಥವಾ ದುರುದ್ದೇಶ ಪೂರಿತ ಬಡಬಡಿಕೆ. ಏಕೆಂದರೆ ಮಾರ್ಕ್ಸ್‌ ಅವರ ನಿಲುವು ಇದಕ್ಕೆ ತದ್ವಿರುದ್ಧವಾದದ್ದು. ತಮ್ಮ ‘ಎಕನಾಮಿಕ್ ಅಂಡ್ ಫಿಲಾಸಫಿಕ್‌ ಮ್ಯಾನ್ಯುಸ್ಕ್ರಿಪ್ಟ್ಸ್ ಆಫ್‌ 1844’ ಪುಸ್ತಕದಲ್ಲಿ ಮಾರ್ಕ್ಸ್‌ ‘ವೇಶ್ಯಾವೃತ್ತಿ ಎಂತಹ ಸಂಬಂಧ ಎಂದರೆ, ಅಲ್ಲಿ ಅಧಃಪತನಕ್ಕೊಳಗಾಗುವುದು ವೇಶ್ಯೆ ಮಾತ್ರವಲ್ಲ, ಅದರಲ್ಲಿ ತೊಡಗುವ ಗಂಡಸಿನ ಮರ್ಯಾದೆಗೇಡಿತನ ಇನ್ನೂ ಹೀನಾಯವಾದದ್ದು’ ಎನ್ನುತ್ತಾರೆ. ಒಂದು ಸಮಾಜ ಎಷ್ಟು ಪ್ರಗತಿ ಹೊಂದಿದೆ ಎನ್ನುವುದಕ್ಕೆ ಆ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಎಷ್ಟು ಮುಂದುವರಿದಿದೆ ಎನ್ನುವುದು ಅಳತೆಗೋಲು ಎಂದು ಮಾರ್ಕ್ಸ್‌ ಪ್ರತಿಪಾದಿಸಿ ದ್ದಾರೆ. ಹೀಗಿರುವಾಗ ಮಹಿಳೆಯರ ಸ್ಥಾನಮಾನವನ್ನು ಹಾಳುಗೆಡಹುವಂಥ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಲು ಹೇಗೆ ಸಾಧ್ಯ?

ಮಾರ್ಕ್ಸ್‌ವಾದಿ ಸಿದ್ಧಾಂತದ ಆಧಾರದ ಮೇಲೆ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಿದ ದೇಶಗಳಲ್ಲಿ ವೇಶ್ಯಾವೃತ್ತಿ ಸಮಸ್ಯೆಯನ್ನು ಹೇಗೆ ಪರಿಹರಿಸಲಾಯಿತು ಎಂಬುದು ಮುಖ್ಯವಾಗುತ್ತದೆ. ಸೋವಿಯತ್ ರಷ್ಯಾ ಹಾಗೂ ಚೀನಾ ಸಮಾಜವಾದಿ ಹಾದಿಯಲ್ಲಿದ್ದಾಗ ಹಾಗೂ ಕ್ಯೂಬಾ ಈಗ ವೇಶ್ಯಾವೃತ್ತಿಯನ್ನು ಕೊನೆಗಾಣಿ ಸಿರುವುದನ್ನು ಅಲ್ಲಿಗೆ ಭೇಟಿ ಕೊಟ್ಟ ಅನೇಕ ಪತ್ರಕರ್ತರು, ವೈದ್ಯರು, ಸಾಹಿತಿಗಳು ದೃಢಪಡಿಸಿದ್ದಾರೆ. ವೇಶ್ಯಾವೃತ್ತಿಯನ್ನು ಕೊನೆಗಾಣಿಸಲು ಸೋವಿಯತ್ ರಷ್ಯಾ ಕೈಗೊಂಡ ಕ್ರಮಗಳನ್ನು ಕೆನಡಾದ ಪತ್ರಕರ್ತ ಡೈಸನ್ ಕಾರ್ಟರ್ ತಮ್ಮ ಪುಸ್ತಕ ‘ಸಿನ್ ಅಂಡ್ ಸೈನ್ಸ್’ನಲ್ಲಿ ಮಂಡಿಸಿದ್ದಾರೆ.

ಗುರುಮೂರ್ತಿಯವರು ಈ ವಿಷಯಗಳನ್ನು ಈಗಲಾದರೂ ಪೂರ್ವಗ್ರಹವಿಲ್ಲದೆ ಅಭ್ಯಾಸ ಮಾಡ ಬೇಕು. ವಸ್ತುನಿಷ್ಠವಾಗಿ ವಿಷಯವನ್ನು ಮಂಡಿಸುವುದು, ಎದುರಾಳಿಗಳ ಅಭಿಪ್ರಾಯವನ್ನು ಸರಿಯಾಗಿ ಪ್ರತಿಪಾದಿಸುವುದು ಆರೋಗ್ಯಕರ ಚರ್ಚೆಯ ಕನಿಷ್ಠ ಅವಶ್ಯಕತೆ.

ಡಾ. ಎಚ್.ಜಿ. ಜಯಲಕ್ಷ್ಮಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT