ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಜನರಿಗೆ ಆತಂಕ ಸೃಷ್ಟಿಸಿದ ಘನತ್ಯಾಜ್ಯ

ಸಂತೆ ಮಾರುಕಟ್ಟೆಯಲ್ಲಿ ಕಸದ ತೊಟ್ಟಿಯಾದ ಚರಂಡಿ, ನಗರಸಭೆ, ಆರೋಗ್ಯ ಇಲಾಖೆ ಅಧಿಕಾರಿಗಳ ಜಾಣ ಕುರುಡು ಪ್ರದರ್ಶನಕ್ಕೆ ಸ್ಥಳೀಯರ ಅಸಮಾಧಾನ
Last Updated 7 ಮೇ 2018, 8:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಸರ್‌.ಎಂ. ವಿಶ್ವೇಶ್ವರಯ್ಯ ವೃತ್ತದಿಂದ ಚಾಮರಾಜಪೇಟೆ ಕಡೆಗೂ ಹೋಗುವ ರಸ್ತೆ ಪಕ್ಕದ ಚರಂಡಿ ತೆರೆದ ತ್ಯಾಜ್ಯದ ತೊಟ್ಟಿಯಂತಾಗಿದೆ. ಚರಂಡಿಯಲ್ಲಿ ನೀರು ಹರಿಯದೆ ಮಡುಗಟ್ಟಿ ನಿಂತಿದೆ. ಕೊಳಚೆ ನೀರಿನಲ್ಲಿ ಘನತ್ಯಾಜ್ಯ ಸೇರಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ.

ಚರಂಡಿ ಎದುರು ಶಾದಿ ಮಹಲ್‌ ಇದೆ. ಅಲ್ಲಿಯ ಎಲ್ಲ ಕಾರ್ಯಕ್ರಮಗಳ ನಂತರ ಉಳಿದ ತ್ಯಾಜ್ಯ ಇದೇ ಚರಂಡಿ ಸೇರುತ್ತಿದೆ. ನಿತ್ಯ ತರಕಾರಿ ಮಾರುವ ವ್ಯಾಪಾರಿಗಳು, ಮಾಂಸದಂಗಡಿಯವರು, ಸುತ್ತಲಿನ ಬಡಾವಣೆಯ ಜನರು ರಾತ್ರಿ ವೇಳೆಯಲ್ಲಿ ಅಳಿದುಳಿದ ತ್ಯಾಜ್ಯ ಸುರಿಯುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ಚರಂಡಿ ತುಂಬಿ ಕೊಚ್ಚೆ ನೀರು ರಸ್ತೆಗೆ ಹರಿಯುತ್ತಿದೆ. ಕೊಳಚೆ ನೀರು ನಿಂತು ರೋಗಕಾರಕ ಜೀವಾಳುಗಳಿಗೆ ಆಶ್ರಯವಾಗಿದೆ. ಹಂದಿ, ನಾಯಿಗಳ ವಾಸಸ್ಥಾನವಾಗಿದೆ ಎಂಬುದು ಸ್ಥಳೀಯ ನಿವಾಸಿಗಳ ದೂರು.

ನಗರಸಭೆಯವರು ಚರಂಡಿ ಪಕ್ಕದಲ್ಲೇ ಬೋರ್‌ವೆಲ್‌ ಕೊರೆಯಿಸಿ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸಿದ್ದಾರೆ. ಸುತ್ತಲಿನ ನಿವಾಸಿಗಳು, ಅಂಗಡಿ ಮಾಲೀಕರು ನಿತ್ಯ ಕುಡಿಯಲು, ಮನೆ ಬಳಕೆಗೆ ಇದೇ ನೀರನ್ನು ಬಳಸುವರು. ಆದರೆ ತ್ಯಾಜ್ಯ ಮಡುಗಟ್ಟಿ ನಿಂತ ಚರಂಡಿಯಿಂದ ಹೊರ ಹೊಮ್ಮುವ ದುರ್ವಾಸನೆಗೆ ಬೇಸ್ತು ಬೀಳುವರು. ಗಬ್ಬು ವಾಸನೆಗೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಇಲ್ಲಿಯ ನಿವಾಸಿ ಮೂರ್ತಿ.

‘ಚರಂಡಿ ಮತ್ತು ನಿಂತ ನೀರಿನಿಂದಾಗಿ ಸೊಳ್ಳೆ ಕಾಟ ವಿಪರೀತವಾಗಿದೆ. ಮಾಂಸದಂಗಡಿ ತ್ಯಾಜ್ಯ ಅರಸಿ ಬರುವ ಬೀದಿನಾಯಿಗಳ ಹಿಂಡು ಚರಂಡಿ ಬಳಿ ಠಿಕಾಣಿ ಹೂಡುತ್ತವೆ. ಸಂಜೆಯಾಗುತ್ತಿದ್ದಂತೆ ಗುಂಪುಗಟ್ಟಿ ನಿಲ್ಲುವ ನಾಯಿಗಳ ಎದುರು ಹಾದು ಹೋಗಲು ಜನರು ಹೆದರುವರು. ಒಮ್ಮೊಮ್ಮೆ ಬೆನ್ನು ಬೀಳುತ್ತವೆ. ಅವುಗಳ ಭಯಕ್ಕೆ ಚಾಲಕರು ದ್ವಿಚಕ್ರ ವಾಹನ ಜೋರಾಗಿ ಓಡಿಸಿ, ಅಪಾಯಕ್ಕೂ ಗುರಿಯಾದ ಉದಾಹರಣೆಗಳಿವೆ. ಇದೆಲ್ಲವನ್ನೂ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೆ ಅವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದೂ ಅವರು ಆರೋಪಿಸಿದರು.

‘ಚುನಾವಣಾ ಪ್ರಚಾರಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೋಟಿಗಟ್ಟಲೇ ಖರ್ಚು ಮಾಡಿದ್ದೇವೆ ಎಂದು ಶಾಸಕರು ಹೇಳಿಕೊಳ್ಳುತ್ತಿದ್ದಾರೆ. ಒಮ್ಮೆ ಈ ಭಾಗಕ್ಕೆ ಬಂದು ಕಣ್ಣಾಡಿಸಲಿ. ಅವರ ಬಣ್ಣ ಬಯಲಾಗುತ್ತದೆ... ಇದೊಂದೇ ಅಲ್ಲ, ನಗರದ ಎಲ್ಲ ಚರಂಡಿಗಳು ಹೂಳು ತುಂಬಿಕೊಂಡಿವೆ. ನಗರಸಭೆ ಸ್ವಚ್ಛಗೊಳಿಸುವ ಗೋಜಿಗೆ ಹೋಗಿಲ್ಲ. ಎಲ್ಲೆಲ್ಲೂ ಕಸ. ಯಾವ ಪುರುಷಾರ್ಥಕ್ಕೆ ನಗರಸಭೆ ಅಸ್ತಿತ್ವ ಇರಬೇಕು ಹೇಳಿ..’ ಎಂದು ಮೂರ್ತಿ ಖಾರವಾಗಿ ಪ್ರಶ್ನಿಸುವರು.

‘ಮಳೆಗಾಲದಲ್ಲಿ ಜೋರಾಗಿ ಮಳೆ ಬಂದು ನೀರು ರಭಸದಿಂದ ಹರಿದರೆ ಚರಂಡಿ ಸ್ವಚ್ಛವಾಗುತ್ತವೆ. ಉಳಿದಂತೆ ಯಥಾಸ್ಥಿತಿ ಮುಂದುವರಿಯುವುದು. ವರ್ಷಪೂರ್ತಿ ವರ್ಷಪೂರ್ತಿ ತ್ಯಾಜ್ಯ ತುಂಬಿಕೊಂಡಿರುತ್ತದೆ. ಪೌರಕಾರ್ಮಿಕರು ವಾರಕ್ಕೆ ನಾಲ್ಕು ಬಾರಿ ಕಸ ವಿಲೇವಾರಿ ಮಾಡಲು ಬರುವರು. ಸ್ವಲ್ಪ ಕಸ ಎತ್ತಿ ಹಾಕಿ ಮಾಯವಾಗುತ್ತಾರೆ. ಕಸ ಹಾಗೆಯೇ ಉಳಿದಿರುತ್ತದೆ. ಇದು ನಮ್ಮ ವ್ಯವಸ್ಥೆ. ಸುಧಾರಣೆಗೆ ಇನ್ನೂ ಎಷ್ಟು ಕಾಲ ಬೇಕೋ ಎಂದು ಆಕ್ರೋಶ ವ್ಯಕ್ತಪಡಿಸುವರು.

ಸ್ಪಂದಿಸುವ ಕನಿಷ್ಠ ಸೌಜನ್ಯವೂ ಇಲ್ಲ

‘ಅಧಿಕಾರಿಗಳಿಗೆ ಭಯ ಇಲ್ಲ. ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ. ಜನರ ಸಮಸ್ಯೆಗೆ ಸ್ಪಂದಿಸುವ ಕನಿಷ್ಠ ಸೌಜನ್ಯವನ್ನೂ ಅವರು ತೋರುವುದಿಲ್ಲ' ಎಂದು ನಗರದ ನಿವಾಸಿ ಸಂಜೀವಪ್ಪ ಆರೋಪಿಸಿದರು.

‘ನಗರಸಭೆ ಅಷ್ಟೇ ಅಲ್ಲ, ಆರೋಗ್ಯ ಇಲಾಖೆ ಅಧಿಕಾರಿಗಳು ಈ ವಾತಾವರಣ ಗಮನಿಸಿ, ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿಲ್ಲ. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ತಮ್ಮ ಮನೆ ಸುತ್ತ ಸ್ವಚ್ಛವಾಗಿದ್ದರೆ ಸಾಕು. ಬಡವರು ಹೇಗಿದ್ದರೂ ಕೇಳುವವರು ಇಲ್ಲ. ಇದು ಬಡವರ ದೌರ್ಭಾಗ್ಯ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

**
ಸ್ಥಳೀಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಗಬ್ಬು ವಾಸನೆಗೆ ಊಟ ಸೇರುವುದಿಲ್ಲ
– ಆನಂದ್‌, ಆಟೊ ಚಾಲಕ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT