ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠುವಾ ಅತ್ಯಾಚಾರ ಪ್ರಕರಣ: ವಿಚಾರಣೆಯನ್ನು ಪಠಾಣ್‌ಕೋಟ್‌ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

Last Updated 7 ಮೇ 2018, 11:19 IST
ಅಕ್ಷರ ಗಾತ್ರ

ನವದೆಹಲಿ: ಕಠುವಾದ 8 ವರ್ಷ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆಯನ್ನು ಪಠಾಣ್‌ಕೋಟ್‌ ನ್ಯಾಯಾಲಯಕ್ಕೆ  ಸುಪ್ರೀಂ ಕೋರ್ಟ್ ವರ್ಗಾವಣೆ ಮಾಡಿದ್ದು ಸಿಬಿಐ ವಿಚಾರಣೆಯನ್ನು ತಳ್ಳಿಹಾಕಿದೆ.

ಈ ಪ್ರಕರಣದ ವಿಚಾರಣೆಯನ್ನು ಮುಂದೂಡದೇ ಪ್ರತಿ ದಿನ ನಡೆಸುವುದು ಹಾಗೂ ವಿಚಾರಣೆಯನ್ನು ಕ್ಯಾಮೆರಾ ಎದುರು ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಮತ್ತು ಇಂದೂ ಮಲ್ಹೋತ್ರ ಅವರಿದ್ದ ನ್ಯಾಯಾಪೀಠ ಸೂಚಿಸಿದೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸ್ಥಳೀಯ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಲು ಒಪ್ಪಿದ್ದು ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಲು ವಿರೋಧ ವ್ಯಕ್ತಪಡಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯ ಮೇ 7ರ ವರೆಗೆ ವಿಚಾರಣೆಗೆ ತಡೆ ನೀಡಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದು ಮತ್ತು ವಿಚಾರಣೆಯನ್ನು ಜಮ್ಮುವಿನಿಂದ ಚಂಡೀಗಢಕ್ಕೆ ವರ್ಗಾಯಿಸುವ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್‌ ಪಠಾಣ್‌ಕೋಟ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಿದೆ.

ಪ್ರಕರಣದ ವಿಚಾರಣೆಯನ್ನು ಕಠುವಾದಿಂದ ಚಂಡೀಗಢಕ್ಕೆ ವರ್ಗಾಯಿಸಬೇಕು ಎಂದು ಅತ್ಯಾಚಾರ ಸಂತ್ರಸ್ತೆಯ ತಂದೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು ಹಾಗೂ ಈ ಪ್ರಕರಣದ ಪ್ರಮುಖ ಆರೋಪಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸುಪ್ರೀಂ ಮೊರೆ ಹೋಗಿದ್ದ.

ನ್ಯಾಯಾಂಗದ ಮೇಲೆ ನಂಬಿಕೆ ಇದೆ: ಪೊಲೀಸರ ವಿಚಾರಣೆ ನನಗೆ ತೃಪ್ತಿ ತಂದಿದೆ, ನ್ಯಾಯಾಂಗದ ಮೇಲೆ ನಂಬಿಕೆ ಇದ್ದು, ನ್ಯಾಯ ಸಿಗುವವರೆಗೂ ಹೋರಾಟ ಮಾಡುವೆ ಎಂದು ಅತ್ಯಾಚಾರ ಸಂತ್ರಸ್ತೆಯ ತಂದೆ ಹೇಳಿದ್ದಾರೆ. ಕ್ರೂರವಾಗಿ ನಡೆದುಕೊಂಡಿರುವ  ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವಂತಹ ಶಿಕ್ಷೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಗಲ್ಲಿಗೆ ಹಾಕಬೇಕು: ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಥವಾ ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಅತ್ಯಾಚಾರ ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ನಾವು ಆಸ್ತಿ, ಮಗಳು, ಮನೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ, ನಾವೀಗ ಇರುವುದು ಕೇವಲ ನಾಲ್ಕು ಜನ ಮಾತ್ರ, ಒಂದು ವೇಳೆ ನ್ಯಾಯ ಸಿಗದಿದ್ದರೆ ನಮ್ಮನ್ನು ಕೊಂದು ಬಿಡಿ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT