ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ರಾಷ್ಟ್ರೀಕರಣ ಸುಲಭದ ಮಾತೇ?

Last Updated 8 ಜನವರಿ 2019, 20:07 IST
ಅಕ್ಷರ ಗಾತ್ರ

ಧಾರವಾಡದಲ್ಲಿ ನಡೆದ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾದ ನಿರ್ಣಯಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಆರಂಭಿಸಬಾರದು ಮತ್ತು ಪೂರ್ವ ಪ್ರಾಥಮಿಕ ಹಂತದಿಂದ ಏಳನೇ ತರಗತಿವರೆಗಿನ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂಬ ಎರಡು ನಿರ್ಣಯಗಳೂ ಇವೆ.

ಮೊದಲಿನದೇನೊ ಸರಿ. ಆದರೆ ಎರಡನೆಯದು, ವಾಸ್ತವಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೇ ಭಾವನಾತ್ಮಕ ಅಂಶಕ್ಕೆ ಒತ್ತು ಕೊಟ್ಟು ತೆಗೆದುಕೊಂಡ ನಿರ್ಣಯವಾಗಿ ಕಂಡುಬರುತ್ತದೆ. ರಾಷ್ಟ್ರೀಕರಣವೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರಿ ವ್ಯವಸ್ಥೆಯ ಅಡಿ ತರುವುದು. ಸಮಾನಾಂತರ ವ್ಯವಸ್ಥೆಯಾಗಿ ಬೆಳೆದಿರುವ ಮತ್ತು ಅಧಿಕಾರಸ್ಥರ ಕೃಪಾಪೋಷಿತ ಅಥವಾ ಮಾಲೀಕತ್ವದ ಇಂತಹ ಸಂಸ್ಥೆಗಳ ರಾಷ್ಟ್ರೀಕರಣವು ‌‌‌‌‌‌‌‌ಸುಲಭದ ಮಾತಲ್ಲ. ಇಂಥ ಶಾಲೆಗಳನ್ನು ನಿಯಂತ್ರಿಸಲು ಅನೇಕ ನಿಯಮಗಳು ಈಗಾಗಲೇ ಇದ್ದರೂ ಸರ್ಕಾರಕ್ಕೆ ಅವುಗಳನ್ನು ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ವಾಸ್ತವ.

ಪಾಲಕರು ಈ ಸಂಸ್ಥೆಗಳತ್ತ ಏಕೆ ಧಾವಿಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕು. ಸಮ್ಮೇಳನದಲ್ಲಿ ನಡೆದ ‘ಕನ್ನಡ ಶಾಲೆಗಳ ಅಳಿವು– ಉಳಿವು’ ವಿಷಯ ಕುರಿತ ಗೋಷ್ಠಿಯಲ್ಲಿ, ಗೋಷ್ಠಿಯ ಅಧ್ಯಕ್ಷರು ಮಂಡಿಸಿದ ಅಂಕಿ ಅಂಶಗಳ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ ಶೇ 25ರಷ್ಟು ಶಿಕ್ಷಕರು ಅನಧಿಕೃತವಾಗಿ ಗೈರುಹಾಜರಾಗಿರುತ್ತಾರೆ.ಶಾಲೆಗೆ ಬಂದ ಶಿಕ್ಷಕರಲ್ಲಿ ಶೇ 56ರಷ್ಟು ಶಿಕ್ಷಕರು ಪಾಠ ಮಾಡುವುದಿಲ್ಲ. ಸರ್ಕಾರಕ್ಕೆ ಈ ವ್ಯವಸ್ಥೆಯನ್ನು ಸರಿಪಡಿಸಲು ಆಗುತ್ತಿಲ್ಲ. ಅಂದಮೇಲೆ ರಾಷ್ಟ್ರೀಕರಣದ ಮೂಲಕ ಸಾಧಿಸುವುದಾದರೂ ಏನನ್ನು?

ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಬಲಪಡಿಸಲು ಸರ್ಕಾರದ ಅಧಿಕಾರ ವ್ಯಾಪ್ತಿಯೊಳಗೇ ಅವಕಾಶ ಇದೆ. ಅದಕ್ಕೆ ಒತ್ತು ಕೊಡಬೇಕು. ಸರ್ಕಾರಿ ಶಾಲೆಗಳು ಮರಳಿ ಪಾಲಕರ ವಿಶ್ವಾಸ ಗಳಿಸಲು ಅಲ್ಲಿ ಇಂಗ್ಲಿಷ್ ಸಹಿತವಾದ ಗುಣಮಟ್ಟದ ಬೋಧನೆ ಆಗಬೇಕು. ಶಾಲೆಗಳ ರಾಷ್ಟ್ರೀಕರಣದಿಂದ ಮತ್ತೊಂದು ಸುತ್ತಿನ ಕಾನೂನಿನ ತಾಕಲಾಟ ಆರಂಭವಾಗಬಹುದೇ ವಿನಾ ಬೇರೇನನ್ನೂ ಸಾಧಿಸಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT