ಕ್ಷೌರ ಮಾಡಲು ಸ್ನೇಹಿತರಿಲ್ಲ!

7

ಕ್ಷೌರ ಮಾಡಲು ಸ್ನೇಹಿತರಿಲ್ಲ!

Published:
Updated:

‘ಅಸ್ಪೃಶ್ಯತೆಯ ಬೇರು ಜೀವಂತ’ ( ಪ್ರ.ವಾ., ಜ. 20) ವರದಿ ಓದಿದಾಗ ನೈಜ ಘಟನೆಯೊಂದು ನೆನಪಿಗೆ ಬರುತ್ತದೆ. ಸುಮಾರು 80 ವರ್ಷದ ಅಜ್ಜ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಉದ್ದುದ್ದ ಬೆಳೆದ ತಲೆಗೂದಲು. ಜೊತೆಗೆ ಹೊಟ್ಟೆತನಕ ಗಡ್ಡದ ಕೂದಲು ಹರಡಿತ್ತು. ನಾನು ಅಜ್ಜನಿಗೆ ‘ಇಷ್ಟು ಉದ್ದ ಕೂದಲು ಆರೋಗ್ಯಕ್ಕೆ ಒಳ್ಳೆಯದಲ್ಲ. ಕ್ಷೌರ ಮಾಡಿಸಿಕೊಂಡು ಸ್ವಚ್ಛವಾಗಿರಿ’ ಎಂದೆ.

‘ಈ ಮೊದಲು ಪ್ರತಿ ತಿಂಗಳಾನು ಕಷ್ಟ (ಕ್ಷೌರ) ಮಾಡಿಸಿಕೊಳ್ಳುತ್ತಿದ್ದೆ. ಈಗ ನಾಲ್ಕು ತಿಂಗಳಿಂದ ಮಾಡಿಸಿಕೊಂಡಿಲ್ಲ. ಸತ್ತಮ್ಯಾಲೆ ಒಮ್ಮೆ ಮಾಡಿಕೊಂಡರಾಯ್ತು’ ಎಂದರು ಅಜ್ಜ. ‘ಯಾಕೆ ಈಗ ಮಾಡಿಕೊಳ್ತಾ ಇಲ್ಲ. ಸಾವಿನ ಬಗ್ಗೆ ಯಾಕೆ ಚಿಂತೆ ಮಾಡ್ತಾ ಇದ್ದೀರಿ’ ಎಂದು ಒಂದೆರಡು ಬಾರಿ ಕೇಳಿದರೂ ಉತ್ತರಿಸದೇ ಮೌನವಾಗಿದ್ದರು.

ಆ ಅಜ್ಜನನ್ನು ಆಸ್ಪತ್ರೆಗೆ ಕರೆತಂದ ವ್ಯಕ್ತಿ ನನಗೆ ಹೇಳಿದ್ದಿಷ್ಟು– ಅಜ್ಜನಿಗೆ ಮೂವರು ಸ್ನೇಹಿತರಿದ್ದರು. ಎಲ್ಲ ನಾಲ್ಕು ಮಂದಿಯೂ ದಲಿತರು. ಇವರೆಲ್ಲಾ ಹುಡುಗರಾಗಿದ್ದಾಗ, ದಲಿತರೆಂಬ ಕಾರಣಕ್ಕೆ ಕ್ಷೌರದ ಅಂಗಡಿಗೆ ಪ್ರವೇಶ ಇರಲಿಲ್ಲ. ಹಾಗಾಗಿ ಈ ನಾಲ್ಕು ಜನ ತಮ್ಮ ಕ್ಷೌರವನ್ನು ಪರಸ್ಪರ ತಾವೇ ಮಾಡಿಕೊಳ್ಳುತ್ತಿದ್ದರು. ಈಗ ಅಜ್ಜನ ಆ ಸ್ನೇಹಿತರೆಲ್ಲರೂ ತೀರಿಕೊಂಡಿದ್ದಾರೆ. ಆತನಿಗೆ ಕ್ಷೌರ ಮಾಡಲು ಈಗ ಯಾರೂ ಇಲ್ಲದ್ದರಿಂದ ಕೂದಲು ಬೆಳೆಯುತ್ತಾ ಇದೆ. ಈಗ ಅಂಗಡಿಯೊಳಗೆ ಪ್ರವೇಶವಿದ್ದರೂ, ಒಳಹೋಗಲು ಅಜ್ಜನಿಗೆ ಮನಸ್ಸಿಲ್ಲ. ಹಲವಾರು ವರ್ಷಗಳಿಂದ ದಲಿತನೆಂಬ ಕಾರಣಕ್ಕಾಗಿ ಆದ ಅವಮಾನದಿಂದ ಮನಸ್ಸು ನೊಂದಿದೆ. ನಿರ್ಲಿಪ್ತರಾಗಿದ್ದಾರೆ.

ಅಜ್ಜನನ್ನು ಮಾತನಾಡಿಸಿದ್ದು ಸುಮಾರು 20 ವರ್ಷಗಳ ಹಿಂದೆ. ಇಂತಹ ತಾರತಮ್ಯ ಇನ್ನೂ ನಡೆಯುತ್ತಲೇ ಇದೆ ಎಂದು ಓದಿ, ಮಾನವೀಯ ಸಂಬಂಧಗಳ ಅವನತಿಗೆ ಕೊನೆ ಇಲ್ಲ ಎಂದೆನಿಸಿತು. ಶೋಷಿತ ವ್ಯಕ್ತಿ ಹಾಗೂ ಸಮಾಜ ಜೊತೆಗೂಡಿ ಹೋರಾಡಿದರೆ ಮಾತ್ರ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಸಾಧ್ಯ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !