ಟೂತ್ ಬ್ರಷ್‌ ವಿನ್ಯಾಸ ಬದಲಾಗಲಿ; ಪರಿಸರ ಉಳಿಯಲಿ

ಸೋಮವಾರ, ಮಾರ್ಚ್ 18, 2019
31 °C

ಟೂತ್ ಬ್ರಷ್‌ ವಿನ್ಯಾಸ ಬದಲಾಗಲಿ; ಪರಿಸರ ಉಳಿಯಲಿ

Published:
Updated:

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಹಲ್ಲುಜ್ಜಲು ಇದ್ದಿಲು, ಬೇವಿನಕಡ್ಡಿ, ಹರಳುಪ್ಪು ಬಳಸುತ್ತಿದ್ದರು. ಆದಾಗ್ಯೂ ಬಹುತೇಕರ ಹಲ್ಲುಗಳು ಮುಪ್ಪಿನ ಕಾಲದಲ್ಲೂ ಚೆನ್ನಾಗಿ ಇರುತ್ತಿದ್ದವು! ಹಲ್ಲು ನೋವಿಗೂ ಮನೆಮದ್ದಿನ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದರು! ಬದಲಾದ ಕಾಲಘಟ್ಟದಲ್ಲಿ ಹಲ್ಲಿನ ಪುಡಿ ಬಳಕೆಗೆ ಬಂದರೂ ಆಗ ಅದನ್ನು ಕೈ ಬೆರಳಿಗೆ ಹಚ್ಚಿಕೊಂಡು ಹಲ್ಲುಜ್ಜುತ್ತಿದ್ದರು.

ಆದರೆ ಇಂದು ಟೂತ್‌ ಪೇಸ್ಟ್, ಟೂತ್ ಬ್ರಷ್ ಬಳಕೆಯೇ ಹೆಚ್ಚಾಗಿ ಕಾಣುತ್ತಿದೆ. ದಂತ ವೈದ್ಯರ ಪ್ರಕಾರ, ಒಂದು ಬ್ರಷ್ ಅನ್ನು ಮೂರರಿಂದ ನಾಲ್ಕು ತಿಂಗಳು ಮಾತ್ರ ಬಳಸಬೇಕು. ಒಂದು ಬ್ರಷ್ ಸರಿಸುಮಾರು 15ರಿಂದ 20 ಗ್ರಾಂ ತೂಕವಿರುತ್ತದೆ. ದೇಶದ ಜನಸಂಖ್ಯೆಯ ಮುಕ್ಕಾಲು ಮಂದಿ ಈ ರೀತಿಯ ಪ್ಲಾಸ್ಟಿಕ್ ಬ್ರಷ್ ಬಳಸುತ್ತಾರೆಂದು ಭಾವಿಸಿದರೆ, ಬ್ರಷ್‌ಗಳ ತೂಕವೇ ಲಕ್ಷಗಟ್ಟಲೆ ಕೆ.ಜಿ. ಆಗುತ್ತದೆ.

ಒಂದೊಮ್ಮೆ ವೈದ್ಯರ ಸಲಹೆಯಂತೆಯೋ, ಕಳೆದುಕೊಂಡೋ, ಕೊಳ್ಳುಬಾಕತನದಿಂದಲೋ ಪದೇ ಪದೇ ಬ್ರಷ್ ಬದಲಿಸುತ್ತಾ ಹೋದರೆ, ಅಷ್ಟೂ ತೂಕದ ಪ್ಲಾಸ್ಟಿಕ್ ಕಸವು ಪರಿಸರಕ್ಕೆ ಸೇರುತ್ತಾ ಹೋಗುತ್ತದೆ. ಇವನ್ನು ಸಂಗ್ರಹಿಸಿ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಮಾಡುವ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸುಮ್ಮನೆ ಕಸದ ರಾಶಿಗೆ ಎಸೆಯುತ್ತಾರೆ.

ಆದ್ದರಿಂದ, ಟೂತ್ ಬ್ರಷ್ ತಯಾರಿಕಾ ಕಂಪನಿಯವರು ಬ್ರಷ್‌ನ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕು. ಹೇಗೆಂದರೆ, ಬ್ರಷ್‌ನ ಹಲ್ಲುಜ್ಜುವ ಭಾಗಕ್ಕೂ ಹಿಂಬದಿಯ ಹಿಡಿಕೆಗೂ ಸಿಕ್ಕಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ಆಗ ಬ್ರಷ್‍ ಬದಲಾಯಿಸಬೇಕೆಂದರೆ, ಕೇವಲ ಹಲ್ಲುಜ್ಜುವ ಭಾಗವನ್ನು ಬದಲಾಯಿಸಿದರೆ ಸಾಕು ಅಥವಾ ಕೇವಲ ಬ್ರಷ್‌ನ ಹಲ್ಲುಜ್ಜುವ ಭಾಗವನ್ನು ಬೆರಳಿಗೆ ಸಿಕ್ಕಿಸಿಕೊಂಡು ಬ್ರಷ್ ಮಾಡುವ ವ್ಯವಸ್ಥೆ ಮಾಡಿದರೂ ಸಾಕು.ಇದರಿಂದ ಹಿಂಬದಿಯ ಹಿಡಿಕೆಯ ಭಾಗದ ಅವಶ್ಯಕತೆಯೇ ಇರುವುದಿಲ್ಲ! ನಮ್ಮ ಹಲ್ಲು ಸ್ವಚ್ಛವಾಗಬೇಕು ನಿಜ; ಹಾಗೆಂದು ಪರಿಸರ ಹಾಳಾಗಬಾರದು.

ಬರಹ ಇಷ್ಟವಾಯಿತೆ?

 • 29

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !