ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕವಾಗಿ ಸಮರ್ಥನೀಯವಲ್ಲದ ನಡೆ

ಅಕ್ಷರ ಗಾತ್ರ

ರಾಜ್ಯದ ಇಬ್ಬರು ಸಚಿವರಿಗೆ ಸಂಬಂಧಪಟ್ಟ ಈಗಿನ ಬೆಳವಣಿಗೆಗಳು ವಿಭಿನ್ನ ರೀತಿಯವಾದರೂ, ಇವುಗಳಿಗೆ ಅವರು ಪ್ರತಿಕ್ರಿಯಿಸಿರುವ ರೀತಿ ಮತ್ತು ಅವರ ಧೋರಣೆಗಳು ನೈತಿಕತೆಯ ನೆಲೆಯಿಂದ ಸಮರ್ಥನೀಯ
ವಲ್ಲ. ಒಬ್ಬರು, ಲೈಂಗಿಕ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಮತ್ತೊಬ್ಬರು, ಕೋವಿಡ್ ಲಸಿಕೆ ಪಡೆಯಲು ತಮ್ಮ ಸ್ಥಾನಬಲ ದುರ್ಬಳಕೆ ಮಾಡಿಕೊಂಡರೆಂಬ ಟೀಕೆಗಳು ಕೇಳಿಬಂದಿವೆ. ಕೆಲಸದ ಆಮಿಷವೊಡ್ಡಿ ಒಬ್ಬ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಹೊತ್ತ ರಮೇಶ‌ ಜಾರಕಿಹೊಳಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಯಾಗಿರುವುದು ಅವರನ್ನು ಮತ್ತಷ್ಟು ಪೇಚಿಗೆ ಸಿಲುಕಿಸಿದೆ. ವಿಡಿಯೊದಲ್ಲಿ ಎಡಿಟ್‌ ಮಾಡಿ ಅನ್ಯರ ಮುಖಕ್ಕೆ ತಮ್ಮ ಮುಖವನ್ನು ಸೇರಿಸಲಾಗಿದೆ, ಇದು ತಮಗೆ ಕಳಂಕ ಹಚ್ಚುವ ಕಿಡಿಗೇಡಿತನ ಎಂದು ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅವರು ವಾದಿಸಿದ್ದಾರೆ.

ಮಂತ್ರಿಯಾಗಿ ತಾವು ಗಣ್ಯಾತಿಗಣ್ಯರು ಎಂದು ಭಾವಿಸಿರುವ ಬಿ.ಸಿ.ಪಾಟೀಲ ಅವರು, ಸರ್ಕಾರಿ ವೈದ್ಯಕೀಯ ಸಿಬ್ಬಂದಿಯನ್ನೇ ತಮ್ಮ ಮನೆಗೆ ಕರೆಸಿಕೊಂಡು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆಯನ್ನು ಹಾಕಿಸಿಕೊಳ್ಳಲು ಅಪೇಕ್ಷಿಸುವವರು ಮೊದಲು ಕ್ರಮಪ್ರಕಾರ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ನಂತರ ಗೊತ್ತುಮಾಡಿದ ಸ್ಥಳಕ್ಕೆ ಹೋಗಿಯೇ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು ಎಂಬುದು ಮಾರ್ಗಸೂಚಿಯಲ್ಲಿನ ನಿರ್ದೇಶನ. ಆದರೆ ನಮ್ಮ ಮಂತ್ರಿಮಹಾಶಯರು ಈ ಕ್ರಮವನ್ನು ಅನುಸರಿಸದೆ, ಮಾರ್ಗಸೂಚಿ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಕೋವಿಡ್ ಪಿಡುಗಿನ ಅವಾಂತರ, ಲಸಿಕೆ ಸಿದ್ಧವಾಗಿದ್ದು, ಮೊದಲ ಹಂತದ ಲಸಿಕೆ ನೀಡುವಿಕೆ, ಎರಡನೇ ಹಂತದ ಲಸಿಕೆ ನೀಡಿಕೆ ಪ್ರಾರಂಭ, ಅಲ್ಲಿ ಅನುಸರಿಸಬೇಕಾದ ಕ್ರಮ ಎಲ್ಲವೂ ಸಾಮಾನ್ಯರಿಗೂ ತಿಳಿದಿರುವಾಗ ಸಚಿವರಿಗೆ ಮಾತ್ರ ಈ ಯಾವುದೂ ತಿಳಿಯದು! ಎಂಥಾ ಮುಗ್ಧತೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಸರ್ಕಾರಿ ಸೇವೆಯಲ್ಲಿರುವ ವೈದ್ಯರು ತಮಗೆ ಕರೆ ಬಂದಾಗ, ಮಾರ್ಗಸೂಚಿ ಇರುವುದನ್ನು ಸಚಿವರ ಗಮನಕ್ಕೆ ತರದೆ, ಅದನ್ನು ಕಡೆಗಣಿಸಿ ಅವರ ನಿವಾಸಕ್ಕೆ ಹೋಗಿದ್ದು ತಪ್ಪು. ಮೇಲಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಬೇಕು.

ನೈತಿಕತೆಯ ನೆಲೆಯಲ್ಲಿ ಈ ಇಬ್ಬರು ಮುಖಂಡರ ಧೋರಣೆ ಸರ್ವಥಾ ಮಾನ್ಯವಲ್ಲ. ಉತ್ತರದಾಯಿತ್ವದ ಸ್ಥಾನದಲ್ಲಿರುವವರು ನೈತಿಕತೆಗೆ ಹೊರತಾಗಿ ನಡೆದುಕೊಳ್ಳುವುದರಿಂದ ತಮಗೂ ತಾವು ಪ್ರತಿನಿಧಿಸುವ ಸರ್ಕಾರಕ್ಕೂ ಶೋಭೆ ತರುವುದಿಲ್ಲ ಎನ್ನುವುದನ್ನು ಅರಿಯದಷ್ಟು ಮುಗ್ಧರಾಗಿರಬಲ್ಲರೆಂದು ಊಹಿಸುವುದೂ ಸಾಧ್ಯವಿಲ್ಲ!

- ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT